ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗ: ಪ್ರಾತಿನಿಧ್ಯದ ಕೊರತೆ

ಮಹಿಳೆಯರನ್ನು ಹೆಚ್ಚು ಪ್ರಮಾಣದಲ್ಲಿ ಒಳಗೊಳ್ಳುವುದರಿಂದನ್ಯಾಯಾಂಗದಲ್ಲಿ ವೈವಿಧ್ಯ ಕಾಯ್ದುಕೊಳ್ಳಲು ಸಾಧ್ಯ
ಅಕ್ಷರ ಗಾತ್ರ

ಉತ್ತರಪ್ರದೇಶದ ವಕೀಲರ ಪರಿಷತ್ತಿನ ಪ್ರಥಮ ಮಹಿಳಾ ಅಧ್ಯಕ್ಷರನ್ನು ಇತ್ತೀಚೆಗೆ ಹತ್ಯೆ ಮಾಡಲಾಗಿದೆ. ಈ ಘಟನೆಯು ನ್ಯಾಯಾಲಯಗಳ ಸುರಕ್ಷತೆ ಮಾತ್ರವಲ್ಲದೆ, ಹಲವಾರು ಸಾಂದರ್ಭಿಕ ಮತ್ತು ತಾತ್ವಿಕ ಪ್ರಶ್ನೆಗಳತ್ತ ನಮ್ಮ ಗಮನ ಸೆಳೆದಿದೆ. ಸ್ವಾತಂತ್ರ್ಯ ಸಾಧಿಸಿದ ಏಳು ದಶಕಗಳ ನಂತರವೂ ಮಹಿಳೆಯು ಇನ್ನೂ ಪ್ರಥಮಗಳ ಉತ್ಸಾಹದಲ್ಲೇ ಇರುವುದು ಅಷ್ಟು ಹೆಮ್ಮೆಯ ಸಂಗತಿಯಲ್ಲ. ನ್ಯಾಯಾಂಗದಲ್ಲಿ ಮಹಿಳೆಯರ ಪ್ರಾತಿನಿಧ್ಯದ ಕೊರತೆ ಹಿಂದಿನಿಂದಲೂ ವ್ಯಾಪಕವಾಗಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಕೆಲಸ ನಿರ್ವಹಿಸಿದ, ನಿರ್ವಹಿಸುತ್ತಿರುವ ಮಹಿಳಾ ನ್ಯಾಯಮೂರ್ತಿಗಳ ಒಟ್ಟು ಸಂಖ್ಯೆ ಇಂದಿಗೂ ಎಂಟು ಮಾತ್ರ. 2018ರ ಮಾರ್ಚ್‌ 23ರವರೆಗಿನ ಮಾಹಿತಿ ಪ್ರಕಾರ, ಹೈಕೋರ್ಟ್‌ಗಳಲ್ಲಿ ಸೇವೆಯಲ್ಲಿರುವ 670 ನ್ಯಾಯಮೂರ್ತಿಗಳ ಪೈಕಿ ಮಹಿಳೆಯರು ಬರೀ 73 ಮಂದಿ. ಜಿಲ್ಲಾ ಹಾಗೂ ತಾಲ್ಲೂಕು ನ್ಯಾಯಾಲಯಗಳ ಸ್ಥಿತಿಯಲ್ಲಿ ಹೆಚ್ಚಿನ ಸುಧಾರಣೆಯೇನೂ ಇಲ್ಲ. ಜಾಗತಿಕ ಮಟ್ಟದಲ್ಲೂ ನ್ಯಾಯಾಂಗದಲ್ಲಿ ಮಹಿಳೆಯರ ಪ್ರಾತಿನಿಧ್ಯದ ಅಭಾವ ಗಣನಾರ್ಹ ಮಟ್ಟದಲ್ಲಿಯೇ ಇದೆ. ಯುರೋಪ್ ಒಕ್ಕೂಟದಲ್ಲಿ ಮಹಿಳಾ ನ್ಯಾಯಾಧೀಶರು ಶೇ 29ರಷ್ಟಿದ್ದರೆ, ಅಮೆರಿಕ ಒಕ್ಕೂಟದಲ್ಲಿರುವ ನ್ಯಾಯಾಧೀಶರಲ್ಲಿ ಶೇ 33ರಷ್ಟು ಮಾತ್ರ ಮಹಿಳೆಯರು.

ನ್ಯಾಯಾಲಯಗಳ ನೇಮಕಾತಿಯಲ್ಲಿ ವೈವಿಧ್ಯ ಕಾಯ್ದುಕೊಳ್ಳಬೇಕಾದುದು ಅನಿವಾರ್ಯ ಎಂಬ ವಾದಕ್ಕೆ ಹಲವು ಆಯಾಮಗಳಿವೆ. ಅವುಗಳಲ್ಲಿ ಪ್ರಮುಖವಾದದ್ದು, ಮಹಿಳಾ ನ್ಯಾಯಾಧೀಶರು ಅಥವಾ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ನ್ಯಾಯಾಧೀಶರು ತಮ್ಮದೇ ಹಿನ್ನೆಲೆಯುಳ್ಳ ಕಕ್ಷಿದಾರರ ಸಮಸ್ಯೆಗಳಿಗೆ ದಕ್ಷವಾಗಿ ಸ್ಪಂದಿಸುತ್ತಾರೆ ಎಂಬ ನಿರೀಕ್ಷೆ. ಮಹಿಳಾ ನ್ಯಾಯಾಧೀಶರು ಇಲ್ಲದಿದ್ದಲ್ಲಿ, ಲೈಂಗಿಕ ಅಪರಾಧಗಳ ವಿಚಾರಣೆಯಲ್ಲಿ ಸಂತ್ರಸ್ತೆಯನ್ನೇ ದೂರುವ ಸಾಧ್ಯತೆ ಹೆಚ್ಚು ಎಂಬುದು ಕಾನೂನು ತಜ್ಞರ ಅಭಿಮತ.

ಆದರೆ, ಮಹಿಳೆಯರ ಹಕ್ಕು ಹಾಗೂ ಸಮಸ್ಯೆಗಳನ್ನು ಒಳಗೊಂಡ ಪ್ರಕರಣಗಳ ದೃಷ್ಟಿಯಿಂದ ಮಾತ್ರ ಮಹಿಳಾ ಪ್ರಾತಿನಿಧ್ಯವನ್ನು ಬೆಂಬಲಿಸುವುದು ಸರಿಯಲ್ಲ. ಇದು, ಮಹಿಳಾ ಸಬಲೀಕರಣದ ಆಶಯಗಳ ವಿರುದ್ಧದ ನಿಲುವಾಗಬಹುದು. ಕಾನೂನು ಶಿಕ್ಷಣ ಪಡೆದ ವಕೀಲೆ ಅಥವಾ ನ್ಯಾಯಾಧೀಶೆಯು ಮತ್ತೊಬ್ಬ ಪುರುಷ ವಕೀಲ ಅಥವಾ ನ್ಯಾಯಾಧೀಶರಂತೆಯೇ ಕಾರ್ಯನಿರ್ವಹಿಸಲು ಎಲ್ಲಾ ರೀತಿಯಲ್ಲೂ ಅರ್ಹಳು. ಒಬ್ಬ ಪ್ರಜೆಯಾಗಿ, ವಕೀಲೆಯಾಗಿ, ನ್ಯಾಯಾಧೀಶೆಯಾಗಿ ಆಕೆ ಮಹಿಳೆಯರ ಸಮಸ್ಯೆ-ಹಕ್ಕುಗಳ ಪ್ರಕರಣಗಳಲ್ಲಷ್ಟೇ ಅಲ್ಲ, ಎಲ್ಲ ಸ್ತರಗಳ ನ್ಯಾಯ ನಿರ್ಣಯದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಹಕ್ಕುದಾರಳಾಗಿರುತ್ತಾಳೆ.

ಅಂತರರಾಷ್ಟ್ರೀಯ ಮಹಿಳಾ ನ್ಯಾಯಾಧೀಶರ ಸಂಘದ ಅಧ್ಯಕ್ಷೆ ವೆನೆಸ್ಸಾ ರೂಯಿಸ್‌ ಅವರ ಪ್ರಕಾರ, ಮಹಿಳಾ ಪ್ರಾತಿನಿಧ್ಯದ ಕೊರತೆಯು ನ್ಯಾಯಾಂಗದ ಗುಣಮಟ್ಟ, ಸಮತ್ವ ಹಾಗೂ ನ್ಯಾಯಸಮ್ಮತತೆಯನ್ನು ಪ್ರಶ್ನಿಸುತ್ತದೆ. ‘ನ್ಯಾಯಾಂಗದಲ್ಲಿ ವಿವಿಧ ವೈಚಾರಿಕ, ಆರ್ಥಿಕ ಹಾಗೂ ಸಾಮಾಜಿಕ ಹಿನ್ನೆಲೆಗಳಿಂದ ಕೂಡಿದ ಹಾಗೂ ಬೇರೆ ಬೇರೆ ಬಗೆಯ ಮೌಲ್ಯಗಳನ್ನು ಪ್ರತಿನಿಧಿಸುವ ಮಂದಿ ಕಾರ್ಯನಿರ್ವಹಿಸುವಾಗ ಸಮತೋಲನ ಸೃಷ್ಟಿಯಾಗುತ್ತದೆ. ಅದು ನ್ಯಾಯ ನಿರ್ಣಯ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಅಮೆರಿಕದ ನ್ಯಾಯಶಾಸ್ತ್ರಜ್ಞ ಬೆಂಜಮಿನ್ ಕಾರ್ಡೋಝೋ ವಾದಿಸುತ್ತಾರೆ. ಮಾನವಸಹಜ ‘ಸ್ವಜನ ಪಕ್ಷಪಾತ’ವು ನ್ಯಾಯಾಧೀಶರ ತೀರ್ಪುಗಳನ್ನು ಸುಪ್ತವಾಗಿ ಪ್ರಭಾವಿಸುವ ಸಾಧ್ಯತೆಯನ್ನು ಕಡೆಗಣಿಸಲಾಗದು. ಆದರೆ, ವಿಭಿನ್ನ ಹಿನ್ನೆಲೆಯ ವ್ಯಕ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯ ನಿರ್ಣಯದಲ್ಲಿ ಭಾಗವಹಿಸಿದಾಗ, ಇಂತಹ ನಡವಳಿಕೆಗಳು ಸ್ವಯಂ ನಿಯಂತ್ರಣದಲ್ಲಿ ಇರುತ್ತವೆ. ಈ ಮೂಲಕ ನ್ಯಾಯಾಂಗದ ಸ್ವಾತಂತ್ರ್ಯವನ್ನೂ ಕಾಯ್ದುಕೊಳ್ಳಬಹುದು.

ಹಾಗೆಂದು ಕೇವಲ ಪ್ರಾತಿನಿಧ್ಯದ ಕೊರತೆ ತುಂಬಲಷ್ಟೇ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಾಧೀಶರಾಗಿ ನೇಮಿಸಿದರೆ ಉದ್ದೇಶ ಸಫಲವಾಗದು. ಅಮರ್ತ್ಯ ಸೆನ್ ಅವರು ‘ಐಡೆಂಟಿಟಿ ಅಂಡ್‌ ವಯೊಲೆನ್ಸ್‌’ ಪುಸ್ತಕದಲ್ಲಿ ಹೇಳಿರುವಂತೆ, ಪ್ರತಿ ವ್ಯಕ್ತಿಗೂ ಹಲವಾರು ಆಯಾಮಗಳುಳ್ಳ ಅಸ್ಮಿತೆ ಇರುತ್ತದೆ. ಒಬ್ಬಾಕೆ ಒಂದೇ ಸಮಯದಲ್ಲಿ ಮಹಿಳೆಯೂ ಸಮತಾವಾದಿಯೂ ಬರಹಗಾರ್ತಿಯೂ ಶ್ರೀಮಂತಳೂ ಆಗಿರಬಹುದು. ಮಹಿಳೆ ಎಂಬ ಒಂದೇ ಕಾರಣಕ್ಕೆ ಎಲ್ಲ ಮಹಿಳೆಯರೂ ಎಲ್ಲ ಸನ್ನಿವೇಶಗಳಲ್ಲಿಯೂ ಒಂದೇ ರೀತಿ ಪ್ರತಿಕ್ರಿಯಿಸುವುದಿಲ್ಲ.

ಈ ದೃಷ್ಟಿಕೋನದಲ್ಲಿ ಗಹನವಾಗಿ ಚಿಂತಿಸಿದರೆ, ನ್ಯಾಯಾಂಗಕ್ಕೆ ಅಗತ್ಯವಾಗಿರುವುದು ವೈವಿಧ್ಯಮಯವಾದ ಮೌಲ್ಯಗಳೇ ಹೊರತು ಕೇವಲ ವ್ಯಕ್ತಿಗಳಲ್ಲ ಎಂಬುದು ಮನವರಿಕೆಯಾಗುತ್ತದೆ. ಆದರೆ, ವ್ಯವಸ್ಥೆಯು ವಿಭಿನ್ನವಾದ ವ್ಯಕ್ತಿಗಳನ್ನು ಒಳಗೊಂಡಾಗ ಮಾತ್ರ ಅಂತಹ ಸಂಭವನೀಯತೆಗೆ ಅವಕಾಶ ಹೆಚ್ಚು. ಹಾಗಾಗಿ, ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಒಳಗೊಂಡ ಮಾತ್ರಕ್ಕೇ ನ್ಯಾಯಾಂಗ ಸುಧಾರಣೆ ಆಗದಿದ್ದರೂ, ನ್ಯಾಯಾಂಗದ ಒಟ್ಟೂ ಮಾನ್ಯತೆಯ ದೃಷ್ಟಿಯಲ್ಲಿ ಮಹಿಳೆಯರ ಸಮ-ಪ್ರಾತಿನಿಧ್ಯ ಅನಿವಾರ್ಯವಾದ ಮೊದಲ ಹೆಜ್ಜೆ ಎಂದು ಹೇಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT