ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Editorial ಚುನಾವಣಾ ಆಯೋಗಕ್ಕೆ ನೇಮಕ: ಸುಪ್ರೀಂ ಕೋರ್ಟ್‌ ತೀರ್ಪು ಶ್ಲಾಘನೀಯ

Last Updated 3 ಮಾರ್ಚ್ 2023, 23:00 IST
ಅಕ್ಷರ ಗಾತ್ರ

ಮುಖ್ಯ ಚುನಾವಣಾ ಆಯುಕ್ತ ಸೇರಿದಂತೆ ಚುನಾವಣಾ ಆಯೋಗದ ಸದಸ್ಯರ ನೇಮಕಕ್ಕೆ ಹೊಸ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್‌ ನಿಗದಿ ಮಾಡಿದೆ. ಚುನಾವಣೆಗಳು ಪರಿಶುದ್ಧವಾಗಿ ಮತ್ತುವಿಶ್ವಾಸಾರ್ಹವಾಗಿ ನಡೆಯಬೇಕಾದ ಅಗತ್ಯ ಇದೆ ಎಂಬುದಕ್ಕೆ ಈ ಮೂಲಕ ಒತ್ತು ನೀಡಿದೆ. ಚುನಾವಣಾ ಆಯೋಗವು ಇತ್ತೀಚಿನ ದಿನಗಳಲ್ಲಿ ನಡೆದುಕೊಂಡ ರೀತಿಯ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು. ಆ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಸುಪ್ರೀಂ ಕೋರ್ಟ್ ಮಾಡಿದೆ. ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಅಥವಾ ಅತಿದೊಡ್ಡ ಪಕ್ಷದ ನಾಯಕ ಮತ್ತು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರನ್ನು ಒಳಗೊಂಡ ಸಮಿತಿಯು ಚುನಾವಣಾ ಆಯೋಗದ ಸದಸ್ಯರನ್ನು ನೇಮಿಸಬೇಕು ಎಂದು ನ್ಯಾಯಮೂರ್ತಿ ಕೆ.ಎಂ. ಜೋಸೆಫ್‌ ನೇತೃತ್ವದ ಸಂವಿಧಾನ ಪೀಠವು ತೀರ್ಪು ಕೊಟ್ಟಿದೆ. ನೇಮಕದಲ್ಲಿ ಸರ್ಕಾರಕ್ಕೆ ಇದ್ದ ಅಧಿಕಾರವನ್ನು ಮೊಟಕು ಮಾಡಿದೆ. ಸಂವಿಧಾನದ 324(2) ವಿಧಿಯಲ್ಲಿ ಸೂಚಿಸಿರುವಂತೆ ಸಂಸತ್ತು ಕಾಯ್ದೆ ರೂಪಿಸುವವರೆಗೆ ಈ ಆದೇಶವು ಊರ್ಜಿತದಲ್ಲಿ ಇರಲಿದೆ.

‘ಚುನಾವಣಾ ಆಯೋಗವು ದುರ್ಬಲವಾಗಿದ್ದರೆ ಅತ್ಯಂತ ಕಪಟ ಸನ್ನಿವೇಶ ಸೃಷ್ಟಿಯಾಗುತ್ತದೆ’ ಎಂದು ಪೀಠವು ಅಭಿಪ್ರಾಯಪಟ್ಟಿರುವುದು
ಸಮಂಜಸವಾಗಿಯೇ ಇದೆ. ಜನರ ಇಚ್ಛೆಯು ಪ್ರತಿಫಲನವಾಗುವ ರೀತಿಯಲ್ಲಿ ಚುನಾವಣಾ ಪ್ರಕ್ರಿಯೆಯು ಪರಿಶುದ್ಧವಾಗಿ ಇರುವಂತೆ ನೋಡಿಕೊಳ್ಳಲು ಸಂಬಂಧಪಟ್ಟ ಎಲ್ಲರೂ ಕೆಲಸ ಮಾಡಬೇಕು. ಹಾಗಿದ್ದರೆ ಮಾತ್ರ ಪ್ರಜಾಸತ್ತೆಯು ಯಶಸ್ವಿಯಾಗಲು ಸಾಧ್ಯ ಎಂಬ ಅಭಿಪ್ರಾಯ ಕೂಡ ಸರಿಯಾಗಿಯೇ ಇದೆ. ‘ಸರ್ಕಾರದ ಮುಲಾಜಿನಲ್ಲಿರುವ ವ್ಯಕ್ತಿಯು ಸ್ವತಂತ್ರವಾಗಿ ಚಿಂತಿಸುವುದು ಸಾಧ್ಯವಿಲ್ಲ’ ಎಂದು ಕೂಡ ನ್ಯಾಯಾಲಯ ಹೇಳಿದೆ. ಹಾಗಾಗಿಯೇ ನೇಮಕಾತಿಯಲ್ಲಿ ಸರ್ಕಾರವನ್ನು ಮೀರಿದ ನಿಲುವು ಪ್ರತಿಫಲನಗೊಳ್ಳಬೇಕು. ಚುನಾವಣಾ ಪ್ರಕ್ರಿಯೆಯು ಸರ್ಕಾರಕ್ಕೆ ಮಾತ್ರ ಸಂಬಂಧಿಸಿದ್ದು ಅಲ್ಲ, ವಿರೋಧ ಪಕ್ಷಕ್ಕೂ ಅದರಲ್ಲಿ ಅಷ್ಟೇ ಪಾಲು ಇದೆ. ಹಾಗಾಗಿಯೇ ಚುನಾವಣಾ ಆಯುಕ್ತರ ಆಯ್ಕೆಯಲ್ಲಿ ವಿರೋಧ ಪಕ್ಷಕ್ಕೂ ಸಮಾನ ಪಾತ್ರ ಇರಲೇಬೇಕು. ಮುಖ್ಯ ನ್ಯಾಯಮೂರ್ತಿಯು ಈ ಇಡೀ ಪ್ರಕ್ರಿಯೆಗೆ ನಿಷ್ಪಕ್ಷಪಾತದ ಆಯಾಮವನ್ನು ತಂದುಕೊಡಬಹುದು. ಚುನಾವಣಾ ಆಯೋಗವು ಒಂದು ಕಾಲದಲ್ಲಿ ಜನರ ವಿಶ್ವಾಸವನ್ನು ಅಪಾರ ಪ್ರಮಾಣದಲ್ಲಿ ಗಳಿಸಿಕೊಂಡಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಆಯೋಗದ ನಡವಳಿಕೆ ಮತ್ತು ನಿರ್ಧಾರಗಳು ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಪಕ್ಷದ ಪರವಾಗಿ ಇರುವಂತೆ ಕಾಣಿಸಿವೆ ಮತ್ತು ಆ ಕುರಿತು ವ್ಯಾಪಕ ಟೀಕೆಯೂ ವ್ಯಕ್ತವಾಗಿದೆ. ವಿರೋಧ ಪಕ್ಷಗಳು ಮಾತ್ರವಲ್ಲ ಮಾಧ್ಯಮ ಮತ್ತು ಸ್ವತಂತ್ರ ವಿಶ್ಲೇಷಕರು ಕೂಡ ಇದನ್ನು ಗುರುತಿಸಿದ್ದಾರೆ. ಚುನಾವಣಾ ಆಯೋಗವು ನ್ಯಾಯಸಮ್ಮತವಾಗಿ ಮತ್ತು ಸ್ವತಂತ್ರವಾಗಿ ಇರಬೇಕು ಮತ್ತು ಅದು ಹಾಗೆ ಇದೆ ಎಂಬುದು ಎಲ್ಲರಿಗೂ ಮನವರಿಕೆ ಕೂಡ ಆಗುವಂತಿರಬೇಕು. ಚುನಾವಣಾ ಆಯೋಗದ ಸದಸ್ಯರ ನೇಮಕದ ಹೊಸ ಪ್ರಕ್ರಿಯೆಯನ್ನು ಈ ಹಿನ್ನೆಲೆಯಲ್ಲಿ ನೋಡಬೇಕು.

ಚುನಾವಣಾ ಆಯೋಗದ ಸದಸ್ಯರ ನೇಮಕಕ್ಕೆ ಅಗತ್ಯವಾದ ಮಸೂದೆಯನ್ನು ಸಂಸತ್ತು ಅಂಗೀಕರಿಸಬೇಕು ಎಂದು ಸುಪ್ರೀಂ ಕೋರ್ಟ್ ಈ ಹಿಂದೆಯೂ ಹೇಳಿತ್ತು. ಸಂಸತ್ತು ಈ ಕೆಲಸ ಮಾಡದೇ ಇದ್ದರೆ ನ್ಯಾಯಾಂಗವು ತನಗಿರುವ ಅಧಿಕಾರವನ್ನು ಚಲಾಯಿಸಬೇಕಾಗುತ್ತದೆ ಎಂದೂ ಕೋರ್ಟ್‌ ಹೇಳಿತ್ತು. ಈ ಅವಕಾಶವನ್ನು ನ್ಯಾಯಾಲಯವು ಈಗ ಬಳಸಿಕೊಂಡಿದೆ. ಕಾನೂನು ಆಯೋಗವು ಕೆಲವು ವರ್ಷಗಳ ಹಿಂದೆ ಇರಿಸಿದ್ದ ಪ್ರಸ್ತಾವವನ್ನು ನ್ಯಾಯಾಲಯ ಈಗ ಅಂಗೀಕರಿಸಿದೆ. ಸಿಬಿಐ ನಿರ್ದೇಶಕ, ಕೇಂದ್ರ ಜಾಗೃತ ಆಯೋಗದ ಆಯುಕ್ತ ಮತ್ತು ಕೇಂದ್ರ ಮಾಹಿತಿ ಆಯುಕ್ತರ ನೇಮಕದ ರೀತಿಯಲ್ಲಿಯೇ ಚುನಾವಣಾ ಆಯುಕ್ತರ ನೇಮಕವೂ ನಡೆಯಲಿದೆ. ಹೊಸ ಆಯ್ಕೆ ಪ್ರಕ್ರಿಯೆ ಕೂಡ ಲೋಪರಹಿತವೇನೂ ಅಲ್ಲ. ಆದರೆ, ಕೋರ್ಟ್‌ ರೂಪಿಸಿರುವ ವಿಧಾನವು ಹೆಚ್ಚು ಪಾರದರ್ಶಕವಾಗಿದೆ. ಸ್ವೇಚ್ಛೆಗೆ ಅವಕಾಶ ಕಡಿಮೆ ಇದೆ ಮತ್ತು ಪ್ರಜಾಪ್ರಭುತ್ವಕ್ಕೆ ತಕ್ಕುದಾಗಿದೆ. ಈಗ ಚುನಾವಣಾ ಆಯೋಗದ ಆಯುಕ್ತರಾಗಿ ಇರುವವರು ತಮ್ಮ ಹುದ್ದೆಯಲ್ಲಿ ಮುಂದುವರಿಯಬಾರದು ಎಂದು ಸುಪ್ರೀಂ ಕೋರ್ಟ್‌ ಹೇಳಿಲ್ಲ. ಆದರೆ, ಸುಪ್ರೀಂ ಕೋರ್ಟ್‌ನ ತೀರ್ಪು ಮತ್ತು ಅಭಿಪ್ರಾಯಗಳಿಂದಾಗಿ ಅವರು ಈ ಹುದ್ದೆಯಲ್ಲಿ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT