25 ವರ್ಷಗಳ ಹಿಂದೆ: ಗುರುವಾರ, 15 ಫೆ.1996

ಹವಾಲ: ಸಿಬಿಐ ಆರೋಪ ಪರಿಗಣಿಸದಿರಲು ನ್ಯಾಯಾಲಯಕ್ಕೆ ಅಡ್ವಾಣಿ ಮನವಿ
ನವದೆಹಲಿ, ಫೆ. 14 (ಯುಎನ್ಐ)– ಹವಾಲ ಹಗರಣದಲ್ಲಿ ತಮ್ಮ ವಿರುದ್ಧ ಸಿಬಿಐ ಸಲ್ಲಿಸಿರುವ ಆರೋಪಪಟ್ಟಿ ‘ಸತ್ಯಕ್ಕೆ ದೂರ ಮತ್ತು ರಾಜಕೀಯಪ್ರೇರಿತ’ ಎಂದು ಪ್ರತಿಪಾದಿಸಿರುವ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಎಲ್.ಕೆ.ಅಡ್ವಾಣಿ ಅವರು, ಅದನ್ನು ಪರಿಗಣಿಸಬಾರದೆಂದು ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.
ತಮ್ಮ ವಿರುದ್ಧ ಸುಮಾರು ಒಂದು ತಿಂಗಳ ಹಿಂದೆ ಸಲ್ಲಿಸಲಾದ ಆರೋಪಪಟ್ಟಿ ದುರುದ್ದೇಶಪೂರಿತ ಮತ್ತು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಮ್ಮ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಎಂದು ಅಡ್ವಾಣಿ ಅರ್ಜಿಯಲ್ಲಿ ಹೇಳಿದ್ದಾರೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕಾರ ಯಾವುದೇ ಅಕ್ರಮ ನಡೆಸಿರುವುದನ್ನು ಆರೋಪ ಪಟ್ಟಿ ದೃಢಪಡಿಸಿಲ್ಲವೆಂದು ಅವರು ಹೇಳಿದ್ದಾರೆ.
ಅಣ್ವಸ್ತ್ರ ನಿಷೇಧ: ಒತ್ತಡಕ್ಕೆ ಭಾರತ ಮಣಿಯದು– ಚವಾಣ್ ಸ್ಪಷ್ಟನೆ
ಬೆಂಗಳೂರು, ಫೆ. 14– ಅಮೆರಿಕವು ಭಾರತಕ್ಕೊಂದು ಪಾಕ್ಗೊಂದು ‘ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದ ನೀತಿ’ಯನ್ನು ಅನುಸರಿಸುತ್ತಿದೆ. ಅಮೆರಿಕದ ಒತ್ತಡಕ್ಕೆ ಮಣಿದು ಖಾಲಿ ಹಾಳೆಯ ಮೇಲೆ ಅಣ್ವಸ್ತ್ರ ನಿಷೇಧ ನೀತಿಗೆ ಸಹಿ ಮಾಡಲು ಭಾರತ ಸಿದ್ಧವಿಲ್ಲ ಎಂದು ಕೇಂದ್ರ ಗೃಹ ಖಾತೆ ಸಚಿವ ಎಸ್.ಬಿ.ಚವಾಣ್ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.
ಸದ್ಯದಲ್ಲಿಯೇ ಬರಲಿರುವ ಲೋಕಸಭಾ ಚುನಾವಣೆಗಾಗಿ ಕಾರ್ಯಕರ್ತರನ್ನು ಸಜ್ಜುಗೊಳಿಸಲು ನಗರದಲ್ಲಿ ನಡೆದ ರಾಜ್ಯ ಮಟ್ಟದ ಕಾಂಗೈ ಕಾರ್ಯಕರ್ತರ ತರಬೇತಿ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಅಮೆರಿಕದ ಭಾರತ ವಿರೋಧಿ ಧೋರಣೆಯನ್ನು ತರಾಟೆಗೆ ತೆಗೆದುಕೊಂಡರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.