25 ವರ್ಷಗಳ ಹಿಂದೆ | ಮಂಗಳವಾರ, ನವೆಂಬರ್ 18, 1997

ಕಾರ್ಯಾಚರಣೆ ಪಡೆ ವಾಪಸಿಗೆ ಪಟೇಲ್ ನಕಾರ
ಬೆಂಗಳೂರು, ನ. 17– ನರಹಂತಕ, ಕಾಡುಗಳ್ಳ ವೀರಪ್ಪನ್ ಶರಣಾಗದ ಹೊರತು ಅವನ ಸೆರೆಗೆ ಶ್ರಮಿಸುತ್ತಿರುವ ವಿಶೇಷ ಕಾರ್ಯಾಚರಣೆ ಪಡೆಯನ್ನು ಹಿಂತೆಗೆದುಕೊಳ್ಳಲು ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಪಟೇಲ್ ಅವರು ಇಂದು ಇಲ್ಲಿ ತಿಳಿಸಿದರು.
ಆದರೆ, ‘ವೀರಪ್ಪನ್ ಶರಣಾಗುತ್ತಾನೆಂದು ನಾನು ಭಾವಿಸಿದ್ದೇನೆ’ ಎಂದು ಮುಖ್ಯಮಂತ್ರಿ ಅವರು ತಮ್ಮನ್ನು ಭೇಟಿ ಮಾಡಿದ ಪತ್ರಕರ್ತ ಬಳಿ ವಿಶ್ವಾಸವನ್ನು ವ್ಯಕ್ತಪಡಿಸಿದರು.
ವೀರಪ್ಪನ್ ವಿಚಾರದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರಿಗೆ ನನ್ನ ಸಮ್ಮತಿಯನ್ನು ನೀಡಿದ್ದೇನೆ. ವೀರಪ್ಪನ್ ಶರಣಾಗತಿ ಬಗ್ಗೆ ಕರುಣಾನಿಧಿ ಕಡೆಯಿಂದ ಸಂದೇಶ ಬಂದಿದೆ ಎಂದರು.
ಡಿಎಂಕೆ, ವಿ.ಪಿ. ಸಿಂಗ್ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಒತ್ತಾಯ
ನವದೆಹಲಿ, ನ.17– ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈನ್ ಆಯೋಗ ತನ್ನ ಮಧ್ಯಂತರ ವರದಿಯಲ್ಲಿ ದೋಷಾರೋಪಣೆ ಹೊರಿಸಿರುವುದರಿಂದ, ಡಿಎಂಕೆ ಮತ್ತು ಮಾಜಿ ಪ್ರಧಾನಿ ವಿ.ಪಿ. ಸಿಂಗ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಇಂದು ಒತ್ತಾಯಿಸಿದೆ.
ಇಂದು ಇಲ್ಲಿ ಸಭೆ ಸೇರಿ ಚರ್ಚಿಸಿದ ಕಾಂಗ್ರೆಸ್ ಸಂಸದೀಯ ಸಮಿತಿ ಈ ವಿಷಯದಲ್ಲಿ ಯಾವುದೇ ರೀತಿಯ ಹೊಂದಾಣಿಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.