ಬೆಂಗಳೂರು, ಆಗಸ್ಟ್ 27– ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದಿರುವ ಇಬ್ಬರು ರಾಜ್ಯ ಸಚಿವರು ರಾಜೀನಾಮೆ ಕೊಡಬೇಕೆಂದು ಮತ್ತು ಶಾಸಕರಾಗಿ ಸಾರ್ವಜನಿಕ ಹುದ್ದೆಗಳನ್ನು ಹೊಂದಿರುವ 11 ಮಂದಿ ಆ ಹುದ್ದೆಗಳನ್ನು ತೆರವು ಮಾಡಬೇಕೆಂದು ಹೈಕೋರ್ಟ್ ಇಂದು ಆದೇಶಿಸಿತು.
ಇಬ್ಬರು ರಾಜ್ಯ ಸಚಿವರು 3 ದಿನಗಳಲ್ಲಿ ರಾಜೀನಾಮೆ ನೀಡದಿದ್ದಲ್ಲಿ ಕ್ರಮ ತೆಗೆದುಕೊಳ್ಳುವ ಅಧಿಕಾರ ಹೊಂದಿರುವವರು ಅವರನ್ನು ಅಧಿಕಾರದಿಂದ ತೆಗೆದುಹಾಕಬೇಕು. ಉಳಿದಂತೆ ಅಧಿಕಾರ ಹೊಂದಿರುವ ಶಾಸಕರ ಸ್ಥಾನಗಳು ತೆರವಾಗಿವೆ ಎಂದು ತಿಳಿಯಬೇಕು. ಅವರ್‍ಯಾರಿಗೂ ಅಧಿಕಾರ ನಿರ್ವಹಿಸಲು ಅವಕಾಶ ಕೊಡಬಾರದು ಎಂದು ಸ್ಪಷ್ಟಗೊಳಿಸಿತು. ರಾಜ್ಯ ಸಚಿವರಾದ ಅಶ್ವತ್ಥ ನಾರಾಯಣ ರೆಡ್ಡಿ ಮತ್ತು ನಾಗಪ್ಪ ಸಾಲೋನಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಸತ್ತವರ ಸಂಖ್ಯೆ 41; ಎಲ್ಲ ಶವ ಪತ್ತೆ
ಹರಪನಹಳ್ಳಿ, ಆಗಸ್ಟ್ 27– ತಾಲ್ಲೂಕಿನ ಉಚ್ಚಂಗಿದುರ್ಗದಲ್ಲಿ ಗುರುವಾರ ಮಧ್ಯಾಹ್ನ ಅರಿಸಿನ ಬಾವಿಗೆ (ಹೊಂಡ) ಮಹದೇವ ಬಸ್ಸು ಬಿದ್ದು ಸಂಭವಿಸಿದ ದಾರುಣ ದುರಂತದಲ್ಲಿ ಜಲಸಮಾಧಿಯಾದವರ ಒಟ್ಟು ಸಂಖ್ಯೆ 41.
ನಾಲ್ಕು ಕ್ರೇನ್‌ಗಳ ನೆರವಿನೊಂದಿಗೆ ಬಸ್ಸನ್ನು ಬಾವಿಯಿಂದ ಹೊರತೆಗೆಯಲಾಯಿತು. ಈ ಭೀಕರ ಅಪಘಾತದಲ್ಲಿ ಬಸ್ಸಿನ ಚಾಲಕ ಚಂದ್ರಪ್ಪನೂ ಮೃತಪಟ್ಟಿದ್ದಾನೆ.