ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಭಾನುವಾರ 2-6-1996

Last Updated 1 ಜೂನ್ 2021, 19:30 IST
ಅಕ್ಷರ ಗಾತ್ರ

ದೇವೇಗೌಡರು ಈಗ ಪ್ರಧಾನಿ

ನವದೆಹಲಿ, ಜೂನ್ 1– ಕನ್ನಡ ನಾಡಿನ ಮಣ್ಣಿನ ಮಗ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ ಅವರು ಇಂದು ಹನ್ನೆರಡನೇ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಕನ್ನಡಿಗರೊಬ್ಬರು ದೇಶದ ಆಡಳಿತದ ಸೂತ್ರಧಾರರಾದರು.

ದೇವೇಗೌಡ ಅವರ ಸಂಪುಟದ ಸಚಿವರ ಖಾತೆಗಳನ್ನು ಇಂದು ಮಧ್ಯರಾತ್ರಿ ಪ್ರಕಟಿಸಲಾಗಿದ್ದು, ಮಹತ್ವದ ಗೃಹ ಖಾತೆ, ಕೃಷಿ, ಸಿಬ್ಬಂದಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಅಣುಶಕ್ತಿ ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಮುಲಾಯಂ ಸಿಂಗ್ ಯಾದವ್ ಅವರು ನೂತನ ರಕ್ಷಣಾ ಸಚಿವರಾಗಿದ್ದಾರೆ. ಕಾಂಗ್ರೆಸ್‌ನಿಂದ ಹೊರಬಂದು ತಮಿಳು ಮಾನಿಲ ಕಾಂಗ್ರೆಸ್ ಪಕ್ಷ ರಚನೆಯಲ್ಲಿ ಪಾತ್ರ ವಹಿಸಿದವರಲ್ಲಿ ಒಬ್ಬರಾಗಿದ್ದ ಪಿ. ಚಿದಂಬರಂ ಅವರಿಗೆ ಹಣಕಾಸು ಖಾತೆಯ ಜೊತೆಗೆ ಕಾನೂನು, ನ್ಯಾಯಾಂಗ ಮತ್ತು ಕಂಪನಿ ವ್ಯವಹಾರ ಖಾತೆ ವಹಿಸಲಾಗಿದೆ.

ರಾಷ್ಟ್ರಪತಿ ಭವನದಲ್ಲಿ ಪಸರಿಸಿದ ಕನ್ನಡದ ಕಂಪು

ನವದೆಹಲಿ, ಜೂನ್ 1–ರಾಷ್ಟ್ರಪತಿ ಭವನದ ಅಶೋಕ ಹಾಲ್‌ನಲ್ಲಿ ಇಂದು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹನ್ನೊಂದು ಗಂಟೆಯಿಂದಲೇ ಗಣ್ಯರು ಮತ್ತು ಪತ್ರಕರ್ತರು ಜಮಾಯಿಸಿದರು. ಕರ್ನಾಟಕದ ‘ಮಣ್ಣಿನ ಮಗ’ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವವರಿದ್ದರಿಂದ ಹೆಚ್ಚು ಕಡಿಮೆ ಕನ್ನಡದ ವಾತಾವರಣ ಇತ್ತು.

ದೇವೇಗೌಡ ಅವರ ಆಯ್ಕೆ ವಿಧಾನದ ಬಗೆಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಜನತಾದಳದ ಅಗ್ರಗಣ್ಯ ನಾಯಕರಲ್ಲೊಬ್ಬರಾದ ರಾಜ್ಯಸಭೆ ಸದಸ್ಯ ರಾಮಕೃಷ್ಣ ಹೆಗಡೆ ಮತ್ತು ಬಿಜು ಪಟ್ನಾಯಕ್ ಗೈರುಹಾಜರಾಗಿದ್ದದ್ದು ಅನೇಕರ ಗಮನ ಸೆಳೆಯಿತು. ಅವರಿಗಾಗಿ ಪತ್ರಕರ್ತರ ಕಣ್ಣು ಕೊನೆಯವರೆಗೂ ಸುತ್ತ ಮುತ್ತ ಹೊರಳಿತಾದರೂ ಅವರು ಕಾಣಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT