ಬೆಂಗಳೂರು, ಆ. 7 – ಚಿಕ್ಕಬಳ್ಳಾಪುರದ ಮುನಿಸ್ವಾಮಿರಾಜು (17) ಎಂಬ ಇನ್ನೊಬ್ಬ ಯುವಕನು ಸ್ಥಳೀಯ ಆಸ್ಪತ್ರೆಯಲ್ಲಿ ಬೆಳಗಿನ ಜಾವ ಮೃತನಾದುದರಿಂದ, ಚಿಕ್ಕಬಳ್ಳಾಪುರದ ಗೋಲಿಬಾರ್ ಪ್ರಕರಣದಲ್ಲಿ ಮೃತರಾದವರ ಸಂಖ್ಯೆ ಎರಡಕ್ಕೆ ಏರಿತು.
ನಿನ್ನೆ ಅಲ್ಲಿ ನಡೆದ ಗೋಲಿಬಾರ್‌ನಲ್ಲಿ ಗಾಯಗೊಂಡವರಲ್ಲಿ ತೀವ್ರವಾಗಿರುವ ಇನ್ನಿಬ್ಬರನ್ನು ನಗರದ ಆಸ್ಪತ್ರೆಗೆ ಇಂದು ಸೇರಿಸಲಾಯಿತು.
ರಾಗಿ ಹಿಟ್ಟಿನಲ್ಲಿ ತೌಡು ಬೆರೆಸಿ ಮಾರುತ್ತಿದ್ದಾರೆಂಬುದನ್ನು ಪ್ರತಿಭಟಿಸಿ ನಿನ್ನೆ ಅಲ್ಲಿ ನಡೆದ ಪ್ರಕರಣ ಇನ್ನೊಂದು ಜವಳಿ ಅಂಗಡಿಯ ಲೂಟಿಯಲ್ಲಿ ಪರ‍್ಯವಸಾನಗೊಂಡು ಲಾಠಿ ಪ್ರಯೋಗ, ಗೋಲಿಬಾರನ್ನು ಕಂಡಿತು.
ಆಕಾಶದ ಬಣ್ಣ ಕಪ್ಪು!
ನವದೆಹಲಿ, ಆ. 7 – ‘ಕಾಶ್ಮೀರವು ರಷ್ಯಾಕ್ಕೆ ಸೇರಿದ ಒಂದು ಭಾಗ; ಆಕಾಶದ ಬಣ್ಣ ಕಪ್ಪು’
–ಇವು ಸರ್ಕಾರಿ ರಂಗದಲ್ಲಿ ಪ್ರಕಟ ವಾಗಿರುವ ಪಠ್ಯಪುಸ್ತಕಗಳಲ್ಲಿ ಮುದ್ರಿತ ವಾಗಿರುವ ಕೆಲವು ದೋಷಗಳು.
ರಾಜ್ಯಸಭೆಯಲ್ಲಿ ಇಂದು ಪಠ್ಯಪುಸ್ತಕಗಳ ಬೆಲೆ ಏರಿಕೆ ಬಗ್ಗೆ ಗಮನ ಸೆಳೆವ ಸೂಚನೆಯ ಮೇಲೆ ಚರ್ಚೆಯಲ್ಲಿ ಭಾಗವಹಿಸಿದ್ದ ಸ್ವತಂತ್ರ ಪಕ್ಷದ ಸದಸ್ಯ ಲೋಕನಾಥ ಮಿಶ್ರಾ ಇದನ್ನು ತಿಳಿಸಿ, ಈ ದೋಷಗಳಿರುವ ಪಠ್ಯಪುಸ್ತಕ ಮಧ್ಯಪ್ರದೇಶದಲ್ಲಿ ಪ್ರಕಟವಾಗಿದೆ ಎಂದು ವಿವರಿಸಿದರು.