ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ: ‘ವೈದ್ಯಕೀಯ ಸಮಸ್ಯೆಗಳ ಪರಿಶೀಲನೆಗೆ ಉನ್ನತ ಮಟ್ಟದ ಮಂಡಲಿ ರಚನೆ’

Published 28 ಜನವರಿ 2024, 23:30 IST
Last Updated 28 ಜನವರಿ 2024, 23:30 IST
ಅಕ್ಷರ ಗಾತ್ರ

ನವದೆಹಲಿ, ಜ. 28– ವೈದ್ಯಕೀಯ ರಂಗದ ಎಲ್ಲ ಸಮಸ್ಯೆಗಳನ್ನೂ ರಾಷ್ಟ್ರೀಯ ಆಧಾರದ ಮೇಲೆ ಪರಿಶೀಲಿಸಲು ಉನ್ನತಾಧಿಕಾರದ ವೈದ್ಯಕೀಯ ಶಿಕ್ಷಣ ಮಂಡಲಿಯೊಂದನ್ನು ರಚಿಸುವ ಬಗ್ಗೆ ಸರ್ಕಾರವು ತೀವ್ರವಾಗಿ ಪರಿಶೀಲಿಸುತ್ತಿದೆ.

ಈ ಮಂಡಲಿಯು ವೈದ್ಯಕೀಯ ಶಿಕ್ಷಣವನ್ನು ಪ್ರಿ–ಮೆಡಿಕಲ್ ಹಂತದಿಂದ ಸ್ನಾತಕೋತ್ತರ ಪದವಿಯವರೆಗೆ ಪುನರ್‌ರೂಪಿಸುವ ವಿವಿಧ ಅಂಶಗಳನ್ನು ಅಧ್ಯಯನ ಮಾಡಲಿದೆ.

ಅಹಮದಾಬಾದ್‌ನಲ್ಲಿ ಶಾಂತಿ, ಕಾನೂನು ಪಾಲನೆ ಕಾರ್ಯ ಸೇನೆಯಿಂದ ಆರಂಭ

ಅಹಮದಾಬಾದ್, ಜ. 28– ಬೆಲೆ ಏರಿಕೆ ವಿರುದ್ಧ ನಡೆದ ಚಳವಳಿಯಲ್ಲಿ ಹಿಂಸಾ ಕೃತ್ಯಗಳಿಗೆ ತುತ್ತಾದ ಇಡೀ ಅಹಮದಾಬಾದ್‌ ನಗರದಲ್ಲಿ ಕಾನೂನು, ಶಾಂತಿ ಪಾಲನೆಯ ವ್ಯವಸ್ಥೆಯನ್ನು ಇಂದು ಮಧ್ಯಾಹ್ನ ಸೇನೆ ವಹಿಸಿಕೊಂಡಿತು. 

ಪುರಸಭೆ ವ್ಯಾಪ್ತಿಗೆ ಸೇರಿದ ಇಡೀ ಪ್ರದೇಶದಲ್ಲಿ ಅನಿರ್ದಿಷ್ಟ ಕಾಲದ ಕರ್ಫ್ಯೂ ಜಾರಿಗೆ ತರಲಾಗಿದೆ.

ಶ್ರೀಗಂಧದ ಮರ ಕಳ್ಳಸಾಗಾಣಿಕೆ: ಕೈಗಾರಿಕೆಗೆ ಬಿಕ್ಕಟ್ಟು

ಬೆಂಗಳೂರು, ಜ. 28– ಕೇರಳ ರಾಜ್ಯಕ್ಕೆ ವ್ಯವಸ್ಥಿತವಾಗಿ ಶ್ರೀಗಂಧದ ಮರಗಳನ್ನು ಕದ್ದು ಸಾಗಿಸುತ್ತಿರುವ ಪರಿಣಾಮವಾಗಿ, ಕರ್ನಾಟಕ ಸರ್ಕಾರಿ ಗಂಧದ ಎಣ್ಣೆ ಕಾರ್ಖಾನೆಗಳು ತೀವ್ರ ಮುಗ್ಗಟ್ಟನ್ನು ಎದುರಿಸಬೇಕಾಗಿ ಬಂದಿದೆಯಲ್ಲದೆ, ಸರ್ಕಾರ ತನ್ನ ಒಂದು ಘಟಕವನ್ನು ಮುಚ್ಚುವ ಪರಿಸ್ಥಿತಿ ಬರಬಹುದು ಎಂದು ಆತಂಕಪಡಲಾಗಿದೆ. 

ಕಳೆದ ವರ್ಷ ಗಂಧದ ಮರದ ಅಭಾವದಿಂದ, ಪ್ರತಿ ತಿಂಗಳು ಉತ್ಪಾದನೆಯಾಗುತ್ತಿದ್ದ ಗಂಧದ ಎಣ್ಣೆ ಪ್ರಮಾಣ ಹತ್ತು ಸಾವಿರ ಕಿಲೊ ಗ್ರಾಂನಿಂದ ಏಳು ಸಾವಿರ ಕಿಲೊ ಗ್ರಾಂಗಳಿಗೆ ಇಳಿಯಿತು. ಮೈಸೂರು ಮತ್ತು ಶಿವಮೊಗ್ಗದಲ್ಲಿರುವ ಕಾರ್ಖಾನೆಗಳಿಗೆ 2900 ಟನ್ ಮರ ಬೇಕಾಗಿದ್ದರೆ, ದೊರೆತದ್ದು ಕೇವಲ 2000 ಟನ್. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗಂಧದೆಣ್ಣೆಗೆ ಬೇಡಿಕೆ ಹಾಗೂ ಬೆಲೆ ಹೆಚ್ಚಿದೆಯಾದರೂ, ಉತ್ಪಾದನೆ ಇಳಿಮುಖ ಆಗಿರುವುದರಿಂದ ರಾಜ್ಯಕ್ಕೆ ಹೆಚ್ಚಿನ ಲಾಭ ದೊರಕದಂತಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT