ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ: ಹೆಚ್ಚು ಪ್ರಮಾಣದ ಬಳಕೆದಾರರಿಗೆ ಶೇ 60ರಷ್ಟು ವಿದ್ಯುತ್ ಖೋತಾ 

Published 21 ಜೂನ್ 2024, 23:30 IST
Last Updated 21 ಜೂನ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು, ಜೂನ್ 21– ಶರಾವತಿ ವಿದ್ಯುತ್ ಕೇಂದ್ರಕ್ಕೆ ನೀರು ಒದಗಿಸುವ ಲಿಂಗನಮಕ್ಕಿ ಜಲಾಶಯ ಪ್ರದೇಶದಲ್ಲಿ ಇನ್ನೂ ಮುಂಗಾರು ಮಳೆ ಆರಂಭವಾಗಿಲ್ಲದ ಕಾರಣ, ಹೆಚ್ಚು ಪ್ರಮಾಣದ ವಿದ್ಯುತ್ ಬಳಕೆದಾರರ ಮೇಲೆ ವಿಧಿಸಲಾಗಿರುವ ಶೇಕಡಾ 20ರಷ್ಟು ಖೋತಾವನ್ನು ಜೂನ್ 24ರಂದು ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಶೇಕಡಾ 60ರಷ್ಟಕ್ಕೇರಿಸಲು ರಾಜ್ಯ ಸರ್ಕಾರ ಅತ್ಯಂತ ವಿಷಾದದಿಂದ ನಿರ್ಧರಿಸಿದೆ. 

ಮುಂಗಾರು ಮಳೆ ಆರಂಭವಾಗಿಲ್ಲದಿರುವುದೇ ಅಲ್ಲದೆ, ಸದ್ಯದಲ್ಲೇ ಅದು ಬರುವ ಸೂಚನೆಯೂ ಇಲ್ಲ ‘ತೀವ್ರ ಪರಿಸ್ಥಿತಿ’ ಕುರಿತು ವಿದ್ಯುತ್ ಮಂಡಳಿ ಅಧಿಕಾರಿಗಳೊಡನೆ ಸಮಾಲೋಚನೆ ನಡೆಸಿದ ವಿದ್ಯುತ್ ಸಚಿವ ಎಚ್.ಎಂ. ಚನ್ನಬಸಪ್ಪ ಅವರು ಸಂಜೆ ಅವಸರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ‘ಅನಿವಾರ್ಯವಾದ’ ನಿರ್ಧಾರವನ್ನು ಪ್ರಕಟಿಸಿದರು. 

ಜಾತಿ ಆಧಾರಿತ ನಾಮಫಲಕಗಳ ವಿರುದ್ಧ ರಾಜ್ಯ ಸರ್ಕಾರದ ಕ್ರಮ

ಬೆಂಗಳೂರು, ಜೂನ್ 21– ಹೋಟೆಲ್, ರೆಸ್ಟಾರೆಂಟ್‌ಗಳು ಮತ್ತಿತ್ತರ ಸಾರ್ವಜನಿಕ ಉಪಾಹಾರ ಗೃಹಗಳಿಗೆ ಜಾತಿ, ಕೋಮು ಆಧಾರಿತ ನಾಮಫಲಕಗಳನ್ನು ಹಾಕುವುದನ್ನು ನಿಲ್ಲಿಸುವ ಹಾಗೂ ಈಗ ಇರುವ ಅಂಥ ನಾಮಫಲಕಗಳನ್ನು ತೆಗೆಯುವ ಕ್ರಮಕ್ಕೆ ಸರ್ಕಾರ ಮುಂದಾಗಿದೆ. 

ರಾಜ್ಯದ ಎಲ್ಲ ಪಂಚಾಯಿತಿಗಳು ತಮ್ಮ ಕಾರ್ಯಕ್ಷೇತ್ರದಲ್ಲಿರುವ ಅಂಥ ಹೋಟೆಲುಗಳ ಜಾತಿ ಆಧಾರಿತ ನಾಮಫಲಕಗಳನ್ನು ತೆಗೆದು ಹಾಕುವಂತೆ, ಆ ಹೋಟೆಲುಗಳ ಮಾಲೀಕರ ಮನ ಒಲಿಸಲು ಪಂಚಾಯಿತಿಗಳಿಗೆ ತಿಳಿಸಬೇಕೆಂದು ಸರ್ಕಾರ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದೆ. 

ಅಸ್ತಿತ್ವದಲ್ಲೇ ಇಲ್ಲದಿದ್ದರೂ ಸಹಾಯಧನ ಪಡೆಯುತ್ತಿರುವ ಹರಿಜನ ವಿದ್ಯಾರ್ಥಿ ಹಾಸ್ಟೆಲುಗಳು

ಬೆಂಗಳೂರು, ಜೂನ್ 21– ಬೆಂಗಳೂರು ಡಿವಿಜನ್‌ನಲ್ಲಿರುವ 71 ಹರಿಜನ ಗಿರಿಜನ ಮತ್ತು ದುರ್ಬಲ ವರ್ಗದ ವಿದ್ಯಾರ್ಥಿಗಳ ಹಾಸ್ಟೆಲ್‌ಗಳ ಪೈಕಿ ಐದು ಹಾಸ್ಟೆಲ್‌ಗಳು ಅಸ್ತಿತ್ವದಲ್ಲಿಯೇ ಇಲ್ಲ ಹಾಗೂ 25 ಹಾಸ್ಟೆಲ್‌ಗಳು ರಿಜಿಸ್ಟರ್ ಆಗಿಲ್ಲ ಎಂದು ಸರ್ಕಾರ ನಡೆಸಿದ ತನಿಖೆಯಿಂದ ವ್ಯಕ್ತವಾಗಿದೆ. ಕಲ್ಬುರ್ಗಿ ಡಿವಿಜನ್‌ನಲ್ಲಿ ಸಮರ್ಪಕ ರೀತಿಯಲ್ಲಿರುವ ಎರಡು ಹಾಸ್ಟೆಲ್‌ಗಳನ್ನು ಬಿಟ್ಟು, ಮೈಸೂರು ಮತ್ತು ಬೆಳಗಾವಿ ಡಿವಿಜನ್‌ಗಳಲ್ಲಿರುವ ಒಟ್ಟು 56 ಹಾಸ್ಟೆಲ್‌ಗಳ ನಿರ್ವಹಣೆ ಕುರಿತ ತನಿಖೆ ಇನ್ನೂ ಅಪೂರ್ಣ ಸ್ಥಿತಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT