ಶುಕ್ರವಾರ, ಮಾರ್ಚ್ 31, 2023
22 °C

ಪ್ರಜಾವಾಣಿ 25 ವರ್ಷಗಳ ಹಿಂದೆ| ಮಂಗಳವಾರ, 27–1–1998

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಶಾನ್ಯ ರಾಜ್ಯಗಳಲ್ಲಿ ಬಹಿಷ್ಕಾರ ಹಿಂಸೆ ಮಧ್ಯೆ ಗಣರಾಜ್ಯೋತ್ಸವ

ಗುವಾಹಟಿ, ಜ. 26 (ಪಿಟಿಐ)– ಹಿಂಸಾಚಾರ, ಬಹಿಷ್ಕಾರ ಹಾಗೂ ಬಂದ್‌ಗಳ ನಡುವೆಯೇ ಇಂದು ದೇಶದಾದ್ಯಂತ 49ನೇ ಗಣರಾಜ್ಯೋತ್ಸವ ಆಚರಿಸಲಾಯಿತು.

ಅಸ್ಸಾಂನಲ್ಲಿ ಉಲ್ಫಾ ಹಾಗೂ ಎನ್‌ಡಿಎಫ್‌ಬಿ ಗಣರಾಜ್ಯೋತ್ಸವ ಬಹಿಷ್ಕರಿಸಲು ಕರೆ ನೀಡಿದ್ದ 12 ಗಂಟೆಗಳ ಬಂದ್‌ ವೇಳೆಯಲ್ಲಿ ಸುರಭೋಗ್‌ ರೈಲ್ವೆ ನಿಲ್ದಾಣಕ್ಕೆ ಬೆಂಕಿ ಹಚ್ಚಲಾಯಿತು.

ಬಾರ್ಪೇಟೆ ಜಿಲ್ಲೆಯ ನಿಲ್ದಾಣಕ್ಕೆ ಬೆಂಕಿ ಹಚ್ಚಿದ ಉಗ್ರಗಾಮಿಗಳು ಹಲವು ದಾಖಲೆಗಳನ್ನು ನಾಶಪಡಿಸಿದರಲ್ಲದೆ, ದೂರವಾಣಿ ತಂತಿಗಳನ್ನು ಕತ್ತರಿಸಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಉಗ್ರಗಾಮಿಗಳಿಂದ 23 ಕಾಶ್ಮೀರಿ ಪಂಡಿತರ ಹತ್ಯೆ

ಶ್ರೀನಗರ, ಜ. 26 (ಯುಎನ್‌ಐ, ಪಿಟಿಐ)– ಶ್ರೀನಗರದ ಹೊರವಲಯದಲ್ಲಿ ಬಂದೂಕುಗಳಿಂದ ಸಜ್ಜಿತರಾದ ಉಗ್ರಗಾಮಿಗಳು ಭಾನುವಾರ ರಾತ್ರಿ ಮನಸ್ವೇಚ್ಛೆ ಗುಂಡು ಹಾರಿಸಿ ಕನಿಷ್ಠ 23 ಮಂದಿ ಕಾಶ್ಮೀರಿ ಪಂಡಿತರನ್ನು ಕಗ್ಗೊಲೆ ಮಾಡಿರುವ ದಾರುಣ ಘಟನೆ ವರದಿಯಾಗಿದೆ.

ತಮ್ಮ ಜನಾಂಗದವರ ಕಗ್ಗೊಲೆಯನ್ನು ಪ್ರತಿಭಟಿಸಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಕಾಶ್ಮೀರ ಪಂಡಿತರು ಹೇಳಿದ್ದಾರೆ.

ಅಧಿಕೃತ ಮೂಲಗಳ ಪ್ರಕಾರ, ಉಗ್ರಗಾಮಿಗಳು ಶ್ರೀನಗರದಿಂದ 26 ಕಿ.ಮೀ. ದೂರದಲ್ಲಿರುವ ವಂಧಾಮ ಗ್ರಾಮದಲ್ಲಿ ಗುಂಡಿನ ಸುರಿಮಳೆಗೈದಿದ್ದರು. ದಾಳಿಯಲ್ಲಿ ಸತ್ತವರ ಪೈಕಿ ಒಂಬತ್ತು ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದ್ದಾರೆ.

‘ಭಾರತ ಸಮ್ಮಾನ’ ಪ್ರಶಸ್ತಿ

ನವದೆಹಲಿ, ಜ. 26 (ಪಿಟಿಐ)– ಭಾರತದ ಕುರಿತಾಗಿ ವಿದೇಶಗಳಲ್ಲಿ ಉತ್ತಮ ತಿಳಿವಳಿಕೆ ನೀಡಲು ಶ್ರಮಿಸುವವರಿಗೆ ಕೊಡಲು ‘ಭಾರತ ಸಮ್ಮಾನ’ ಪ್ರಶಸ್ತಿಯನ್ನು ಸರ್ಕಾರ ಸ್ಥಾಪಿಸಿದೆ.

ದೇಶದ ಸುವರ್ಣ ಸ್ವಾತಂತ್ರ್ಯದ ಸಂದರ್ಭದಲ್ಲಿ ಆರಂಭಿಸಲಾಗಿರುವ ಈ ಪ್ರಶಸ್ತಿಗೆ ವಿದೇಶಿಯರಲ್ಲದೆ, ವಿದೇಶಗಳಲ್ಲಿ ನೆಲೆಸಿರುವ ಭಾರತೀಯರೂ ಭಾರತೀಯ ಸಂಜಾತರೂ ಅರ್ಹರಾಗಿರುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು