ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ| ಶುಕ್ರವಾರ 17–9–1971

Last Updated 17 ಸೆಪ್ಟೆಂಬರ್ 2021, 1:21 IST
ಅಕ್ಷರ ಗಾತ್ರ

ಅಭ್ಯರ್ಥಿಗಳ ಆಯ್ಕೆಗೆ 6 ಆಧಾರ– ಅರ್ಹತೆಗಳು

ಬೆಂಗಳೂರು, ಸೆ.16– ಇಂದು ಇಲ್ಲಿ ನಡೆದ ಆಡಳಿತ ಕಾಂಗ್ರೆಸ್ಸಿನ ಪ್ರದೇಶ ಅಡ್‌ಹಾಕ್‌ ಸಮಿತಿಯ ಪ್ರಥಮ ಸಭೆ ‘ಸಮಾಜವಾದಿ ಕಾರ್ಯಕ್ರಮ’ವನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತರುವ ಉದ್ದೇಶದಿಂದ ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಆರಿಸಲು ಆರು ಆಧಾರ– ಅರ್ಹತೆಗಳನ್ನು ಪಾಲಿಸಬೇಕೆಂದು ಏಐಸಿಸಿಗೆ ಸರ್ವಾನುಮತದಿಂದ ಪ್ರಾರ್ಥಿಸಿತು.

ನಿರ್ಣಯದಲ್ಲಿದ್ದ ಆಧಾರ– ಅರ್ಹತೆಗಳ ಬಗ್ಗೆ ಯಾವ ಭಿನ್ನಾಭಿಪ್ರಾಯವಿಲ್ಲದಿದ್ದರೂ ಇವನ್ನು ಪಾಲಿಸಬೇಕು ಎಂದು ಎಂಪಿಸಿಸಿ ನಿರ್ಣಯ ಮಾಡಬೇಕೋ ಅಥವಾ ಏಐಸಿಸಿಗೆ ಶಿಫಾರಸು ಮಾಡಬೇಕೋ ಎಂಬ ಬಗ್ಗೆ ಜಿಜ್ಞಾಸೆ ಉಂಟಾಗಿ ಚರ್ಚೆಯ ಕೊನೆಯಲ್ಲಿ ‘ಅಭ್ಯರ್ಥಿಗಳ ಆಯ್ಕೆಯಲ್ಲಿ ಇವನ್ನು ಪಾಲಿಸಬೇಕೆಂದು ಏಐಸಿಸಿಯನ್ನು ಪ್ರಾರ್ಥಿಸುತ್ತದೆ’ ಎಂಬ ವಾಕ್ಯವನ್ನು ಸೇರಿಸುವುದರ ಮೂಲಕ ಪರಿಹಾರವಾಯಿತು.

ಮೈಸೂರು ಜಿಲ್ಲೆಯ ಪ್ರದೇಶ ಸಮಿತಿ ಸದಸ್ಯರು ಕಳುಹಿಸಿದ್ದ ಈ ನಿರ್ಣಯದ ಬಗ್ಗೆ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಲೆಂಬ ಉದ್ದೇಶದಿಂದ ಹಾಗೇ ಮಂಡಿಸಲು ಅವಕಾಶ ಕೊಡಲಾಯಿತೆಂದು ಪ್ರದೇಶ ಸಮಿತಿ ಅಧ್ಯಕ್ಷ ಡಿ. ದೇವರಾಜ ಅರಸು ಅವರು ಚರ್ಚೆಯ ಕಾಲದಲ್ಲಿ ತಿಳಿಸಿದರು.

ಕೃಷಿಗೆ ಸುಲಭ ಬ್ಯಾಂಕ್‌ ಸಾಲಕ್ಕಾಗಿ ಮಾದರಿ ಮಸೂದೆ ರಿಸರ್ವ್‌ ಬ್ಯಾಂಕ್‌ ಶಿಫಾರಸು

ಬೆಂಗಳೂರು, ಸೆ.16– ಕೃಷಿ ಅಭಿವೃದ್ಧಿಗೆ ಹಣಕಾಸು ನೆರವು ಒದಗಿಸುವುದರಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಎದುರಿಸಬೇಕಾಗಿರುವ ತೊಂದರೆಗಳನ್ನು ಶೀಘ್ರವೇ ನಿವಾರಿಸಬೇಕಾಗಿರುವ ಅವಶ್ಯಕತೆಯನ್ನು ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಎಸ್‌.ಜಗನ್ನಾಥನ್‌ ಅವರು ಒತ್ತಾಯ ಪೂರ್ವಕವಾಗಿ ರಾಜ್ಯ ಸರ್ಕಾರಗಳ ಗಮನಕ್ಕೆ ತಂದಿದ್ದಾರೆ.

ಬ್ಯಾಂಕುಗಳಿಂದ ಕೃಷಿ ಸಾಲ ನೀಡಿಕೆ ಕುರಿತು ವಿವಿಧ ರಾಜ್ಯಗಳಲ್ಲಿರುವ ವಿಧಿ, ನಿಮಯಗಳ ಅಧ್ಯಯನ ಹಾಗೂ ಸುಸೂತ್ರ ಕಾರ್ಯ ನಿರ್ವಹಣೆಗೆ ಅಗತ್ಯವಾಗುವ ಮಾರ್ಪಾಡುಗಳನ್ನು ಸೂಚಿಸುವುದಕ್ಕಾಗಿ ರಿಸರ್ವ್‌ ಬ್ಯಾಂಕ್‌ ನೇಮಿಸಿದ್ದ ತಜ್ಞ ಸಮಿತಿಯ ಶಿಫಾರಸುಗಳನ್ನು ರಾಜ್ಯ ಸರ್ಕಾರಗಳಿಗೆ ಕಳುಹಿಸಿದೆ.

ಪಾಕ್‌ ಬಾಂಬಿನಿಂದ ಚಲಿಸುತ್ತಿದ್ದ ರೈಲಿಗೆ ಹಾನಿ: ಒಂದು ಸಾವು

ಷಿಲ್ಲಾಂಗ್‌, ಸೆ.16– ಅಸ್ಸಾಂನ ಕಾಚಾರ್‌ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಚಲಿಸುತ್ತಿದ್ದ ಪ್ರಯಾಣಿಕರ ರೈಲೊಂದರ ಅಡಿಯಲ್ಲಿ ಭಾರಿ ಸ್ಫೋಟಕ ಶಕ್ತಿಯ ಬಾಂಬೊಂದು ಸಿಡಿದು ಒಬ್ಬ ಸೈನಿಕ ಸತ್ತು, ಕನಿಷ್ಠ ಹದಿನೈದು ಮಂದಿ ಗಾಯಗೊಂಡರು.

ಗಾಯಗೊಂಡವರಲ್ಲಿ ಬಹುತೇಕ ಮಂದಿ ಸೈನ್ಯಕ್ಕೆ ಸೇರಿದವರೆಂದು ತಿಳಿದುಬಂದಿದೆಯಲ್ಲದೆ ಪಾಕಿಸ್ತಾನಿ ವಿಧ್ವಂಸಕರು ಬಾಂಬನ್ನು ರೈಲಿನ ಹಳಿಯ ಮೇಲಿಟ್ಟದ್ದರೆಂದು ಶಂಕಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT