ಭಾನುವಾರ, ಜೂನ್ 13, 2021
25 °C

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಸೋಮವಾರ, 20-5-1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಧಿಕಾರಕ್ಕಾಗಿ ತತ್ವ ಮರೆತ ರಾಜಕೀಯ: ವಾಜಪೇಯಿ ತರಾಟೆ

ನವದೆಹಲಿ, ಮೇ 19 (ಪಿಟಿಐ)– ಜನತೆಯ ಆಶೀರ್ವಾದ ಪಡೆದಿರುವ ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸುವ ಏಕೈಕ ಉದ್ದೇಶದಿಂದ ಕೆಲವು ರಾಜಕೀಯ ಪಕ್ಷಗಳು ನಡೆಸಿರುವ ಯತ್ನವನ್ನು ‘ಯಾವುದೇ ಮಾರ್ಗದಿಂದ ಅಧಿಕಾರ ಹಿಡಿಯಲು ನಡೆಸಿರುವ ತತ್ವರಹಿತ ರಾಜಕೀಯ’ ಎಂದು ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಇಂದು ನೇರ ಆರೋಪ ಮಾಡಿದ್ದಾರೆ.

ದೇಶದ 11ನೇ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಇಂದು ದೂರದರ್ಶನ ಮತ್ತು ಆಕಾಶವಾಣಿಗಳ ಮೂಲಕ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಈ ಉದ್ದೇಶ ಈಡೇರಿಕೆಗಾಗಿ ನಮಗೆ ಕಳಂಕ ತರುವ ಯತ್ನ ನಡೆಸಿವೆ’ ಎಂದು ದೂರಿದರು.

‘ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರಿಂದ ರಾಷ್ಟ್ರಪತಿ ಅವರು ನಮ್ಮನ್ನು ಸರ್ಕಾರ ರಚಿಸಲು ಆಹ್ವಾನಿಸಿದರು. ಇದು ಪ್ರಜಾಪ್ರಭುತ್ವ ನೀತಿಗೆ ಅನುಸಾರವಾಗಿಯೇ ಇದೆ. ಮಾನವೀಯ ಕಾರಣಗಳಿಗಾಗಿ ನಾನು ಈ ಜವಾಬ್ದಾರಿಯನ್ನು ಒಪ್ಪಿಕೊಂಡಿದ್ದೇನೆ ಹಾಗೂ 1996ರ ಚುನಾವಣೆಯ ಜನಾಭಿಪ್ರಾಯದ ಪ್ರಕಾರ ಇದು ಜನರ ಬಯಕೆಯಾಗಿತ್ತೆಂದು ನಂಬಿದ್ದೇನೆ’ ಎಂದರು.

ಸಮ್ಮಿಶ್ರ ಸರ್ಕಾರಕ್ಕೆ ಜನರ ಮತ: ವಿ.ಪಿ.ಸಿಂಗ್‌ ವಾದ

ನವದೆಹಲಿ, ಮೇ 19 (ಪಿಟಿಐ)– ಕಾಂಗ್ರೆಸ್‌ ನೆರವಿನೊಂದಿಗೆ ಕೇಂದ್ರದಲ್ಲಿ ತೃತೀಯ ರಂಗ ಸರ್ಕಾರ ರಚಿಸುವುದು ಖಚಿತ ಎಂದು ಮಾಜಿ ಪ್ರಧಾನಿ ವಿ.ಪಿ.ಸಿಂಗ್‌ ಇಂದು ಇಲ್ಲಿ ದೃಢ ವಿಶ್ವಾಸ ವ್ಯಕ್ತಪಡಿಸಿದರು.

ತೃತೀಯ ರಂಗ ಮತ್ತು ಮಿತ್ರ ಪಕ್ಷಗಳ ಒಗ್ಗಟ್ಟು ಹಾಗೂ ಸರ್ಕಾರದ ವಿರುದ್ಧ ಮತ ಚಲಾಯಿಸುವುದಾಗಿ ಕಾಂಗ್ರೆಸ್‌ ಪಕ್ಷ ನೀಡಿರುವ
ಹೇಳಿಕೆಯಿಂದ ಬಿಜೆಪಿ ನೇತೃತ್ವದ ಸರ್ಕಾರ ಉಳಿಯುವ ಸಾಧ್ಯತೆಯೇ ಇಲ್ಲ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ
ಅಭಿಪ್ರಾಯಪಟ್ಟರು.

ರಾಷ್ಟ್ರದಲ್ಲಿ ಸಮ್ಮಿಶ್ರ ಹಾಗೂ ಸರ್ವಸಮ್ಮತ ರಾಜಕೀಯ ಅಸ್ತಿತ್ವಕ್ಕೆ ಬಂದಿದೆ. ಕಾಂಗ್ರೆಸ್‌ ಮತ್ತು ತೃತೀಯ ರಂಗದ ಗುಂಪುಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ತೊರೆದು ಸಾಮಾನ್ಯ ಕಾರ್ಯಕ್ರಮಗಳನ್ನು ರೂಪಿಸುವ ಸಂಬಂಧ ಒಪ್ಪಂದ ಮಾಡಿಕೊಳ್ಳಲಿವೆ ಎಂದು ಹೇಳಿದರು.

ಸ್ಪೀಕರ್‌ ಸ್ಥಾನಕ್ಕೆ ತೃತೀಯ ರಂಗದ ಅಭ್ಯರ್ಥಿ ಸಂಗ್ಮಾ

ನವದೆಹಲಿ, ಮೇ 19 (ಯುಎನ್‌ಐ)– ಲೋಕಸಭಾ ಅಧ್ಯಕ್ಷ ಸ್ಥಾನಕ್ಕೆ ತೃತೀಯ ರಂಗ ಹಾಗೂ ಕಾಂಗ್ರೆಸ್‌ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿ ಕೇಂದ್ರದ ಮಾಜಿ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪಿ.ಎ.ಸಂಗ್ಮಾ ಅವರು ಆಯ್ಕೆಯಾಗಿದ್ದಾರೆ.

ಲೋಕಸಭಾ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಸೂಚಿಸಿದ ಸಂಗ್ಮಾ ಅವರ ಹೆಸರನ್ನು ಇಂದು ಇಲ್ಲಿ ನಡೆದ ತೃತೀಯ ರಂಗದ ಸಮನ್ವಯ ಸಮಿತಿ ಸಭೆಯಲ್ಲಿ ಅನೌಪಚಾರಿಕವಾಗಿ ಒಪ್ಪಿಕೊಳ್ಳಲಾಯಿತೆಂದು ರಂಗದ ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು