ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ರಾಜಕೀಯ ಪ್ರವೇಶ; ಇನ್ನೂ ಗೊಂದಲದಲ್ಲಿರುವೆ: ಡಾ. ಸಿ.ಎನ್‌. ಮಂಜುನಾಥ್‌

Published 3 ಫೆಬ್ರುವರಿ 2024, 23:30 IST
Last Updated 3 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ
ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವವರೆ ಅಧಿಕ. ಇದಕ್ಕೆ ಕಾರಣ ಅಲ್ಲಿನ ವ್ಯವಸ್ಥೆ ಹಾಗೂ ವೈದ್ಯಕೀಯ ಸೌಲಭ್ಯಗಳ ಕೊರತೆ. ಆದರೆ, ಇದಕ್ಕೆ ಅಪವಾದ ಎನ್ನುವಂತೆ ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಹೆಸರಾಗಿದೆ. ಸಂಸ್ಥೆಯ ಬೆಳವಣಿಗೆಗೆ ಕಾರಣರಾದವರು ನಿರ್ದೇಶಕರಾಗಿದ್ದ ಡಾ.ಸಿ.ಎನ್. ಮಂಜುನಾಥ್. ಅವರ ಸರ್ಕಾರಿ ಸೇವಾ ಅವಧಿ ಜ.31ರಂದು ಮುಕ್ತಾಯಗೊಂಡಿದೆ. ಈ ಸಂದರ್ಭದಲ್ಲಿ ‘ಭಾನುವಾರದ ಪುರವಣಿ’ಯೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ.
ಪ್ರ

ಜಯದೇವ ಹೃದ್ರೋಗ ಸಂಸ್ಥೆ ಈಗ ಜಾಗತಿಕ ಮಟ್ಟದಲ್ಲಿ ಹೆಸರು ಪಡೆದಿದೆ. ಸರ್ಕಾರಿ ಸಂಸ್ಥೆಯೊಂದರ ಈ ಬೆಳವಣಿಗೆಯನ್ನು ಹೇಗೆ ವಿಶ್ಲೇಷಿಸುವಿರಿ? 

ನಾನು ವೈದ್ಯಕೀಯ ಕ್ಷೇತ್ರ ಪ್ರವೇಶಿಸುವ ವೇಳೆ ಜಯದೇವ ಆಸ್ಪತ್ರೆ ಮತ್ತು ಹೃದ್ರೋಗ ಚಿಕಿತ್ಸೆ ಎರಡೂ ಪ್ರಾರಂಭಿಕ ಹಂತದಲ್ಲಿದ್ದವು. 1988ರಲ್ಲಿ ಜಯದೇವ ಸಂಸ್ಥೆಗೆ ಉಪನ್ಯಾಸಕನಾಗಿ ಸೇರಿದೆ. ಈ ಸಂಸ್ಥೆಯ ಜವಾಬ್ದಾರಿ ಸಿಕ್ಕರೆ ಪಂಚತಾರಾ ಖಾಸಗಿ ಆಸ್ಪತ್ರೆಯ ಮಟ್ಟಕ್ಕೆ ಕೊಂಡೊಯ್ಯಬೇಕೆಂಬ ಕನಸನ್ನು ಆ ವೇಳೆಗೇ ಹೊಂದಿದ್ದೆ. 2006-07ರಲ್ಲಿ ಸಂಸ್ಥೆಯ ನಿರ್ದೇಶಕನಾಗಿ ಅಧಿಕಾರ ವಹಿಸಿಕೊಂಡೆ. 17 ವರ್ಷಗಳಲ್ಲಿ ಸಂಸ್ಥೆ ಶೇ 500ರಷ್ಟು ಪ್ರಗತಿ ಹೊಂದಿದೆ. ನಾನು ನಿರ್ದೇಶಕನಾಗಿ ಅಧಿಕಾರ ವಹಿಸಿಕೊಂಡಾಗ ಸಂಸ್ಥೆ 300 ಹಾಸಿಗೆಗಳನ್ನು ಒಳಗೊಂಡಿತ್ತು. ಈಗ ಆ ಸಂಖ್ಯೆ ಎರಡು ಸಾವಿರಕ್ಕೆ ಏರಿಕೆಯಾಗಿದೆ. ಇಡೀ ದಕ್ಷಿಣ ಏಷ್ಯಾದಲ್ಲಿ ಅತೀ ದೊಡ್ಡ ಹೃದ್ರೋಗ ಸಂಸ್ಥೆಯಾಗಿ ಹೊರಹೊಮ್ಮಿದೆ.

ಪ್ರ

ಸಂಸ್ಥೆಯ ನಿರ್ದೇಶಕರಾದಾಗ ತಮ್ಮ ಮುಂದೆ ಏನೆಲ್ಲ ಸವಾಲುಗಳಿದ್ದವು? ಅದನ್ನು ಹೇಗೆ ನಿಭಾಯಿಸಿ ಯಶಸ್ಸು ಸಾಧಿಸಿದಿರಿ?

ನಿರ್ದೇಶಕನಾಗಿ ಅಧಿಕಾರ ವಹಿಸಿಕೊಂಡಾಗ ಬ್ಯಾಂಕಿನಲ್ಲಿ ಸಂಸ್ಥೆಯ ಹೆಸರಿನಲ್ಲಿ ₹ 5 ಕೋಟಿ ನಿಧಿ ಇದ್ದರೆ, ₹ 6 ಕೋಟಿ ಸಾಲವಿತ್ತು. ಆ ವೇಳೆ ಸಂಸ್ಥೆಯು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿತ್ತು. ಇದರಿಂದಾಗಿ ಒಂದು ದಿನದ ವೇತನವನ್ನು ಬಿಟ್ಟುಕೊಡುವಂತೆ ಸಿಬ್ಬಂದಿಯ ಮನವೊಲಿಸಿದೆ. ನಂತರದಲ್ಲಿ ತಾನಾಗಿಯೇ ಸಂಘ–ಸಂಸ್ಥೆಗಳಿಂದ ದೇಣಿಗೆ ಹರಿದು ಬರಲಾರಂಭಿಸಿತು. ಈಗ ದಾನಿಗಳು ನೀಡಿದ ನಿಧಿ ₹ 50 ಕೋಟಿ ಇದ್ದರೆ, ಬಡ ರೋಗಿಗಳ ಆರೋಗ್ಯ ನಿಧಿ ₹ 150 ಕೋಟಿಗೆ ಏರಿಕೆಯಾಗಿದೆ. ಈ ನಿಧಿಯಿಂದ ಬರುವ ಬಡ್ಡಿ ಹಣದಲ್ಲಿ ಬಡರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ‘ಚಿಕಿತ್ಸೆ ಮೊದಲು ಹಣ ಪಾವತಿ ನಂತರ’, ‘ಮಾನವೀಯತೆಗೆ ಮೊದಲ ಆದ್ಯತೆ’ ಎಂಬ ಪರಿಕಲ್ಪನೆಯನ್ನು ಹೊಂದಲಾಗಿದೆ.

ಪ್ರ

ನಿಮ್ಮ ಯೋಜನೆಗಳು ಹಾಗೂ ರೋಗಿಗಳ ಪರವಾದ ಕಾರ್ಯಕ್ರಮಗಳಿಗೆ ಸರ್ಕಾರ ಹಾಗೂ ಸಂಸ್ಥೆಯ ಸಿಬ್ಬಂದಿಯಿಂದ ಯಾವ ರೀತಿ ಬೆಂಬಲ ಸಿಕ್ಕಿತು?

ಎಲ್ಲ ಮುಖ್ಯಮಂತ್ರಿಗಳು ಅಗತ್ಯ ಸಹಕಾರ ಹಾಗೂ ಪ್ರೋತ್ಸಾಹ ನೀಡಿದ್ದಾರೆ. ಸಂಸ್ಥೆಯಲ್ಲಿನ ಗುಣಮಟ್ಟದ ಚಿಕಿತ್ಸೆ ಹಾಗೂ ಬೆಳವಣಿಗೆಯಿಂದ ದಾನಿಗಳೂ ಮುಂದೆ ಬಂದು ನೆರವು ನೀಡಿದ್ದಾರೆ. ಇನ್ಫೊಸಿಸ್ ಪ್ರತಿಷ್ಠಾನದ ನೆರವಿನಿಂದ 350 ಹಾಸಿಗೆಗಳ ಆಸ್ಪತ್ರೆ ನಿರ್ಮಾಣವೂ ಸಾಧ್ಯವಾಗಿದೆ. ಸಂಸ್ಥೆಯ ಸಿಬ್ಬಂದಿಗೂ ಮೊದಲು ಗುತ್ತಿಗೆ ಆಧಾರದ‌ಲ್ಲಿ ಕಡಿಮೆ ವೇತನ ಸಿಗುತ್ತಿತ್ತು. ನಾನು ನಿರ್ದೇಶಕನಾದ ಬಳಿಕ ವೇತನ ಪರಿಷ್ಕರಣೆ, ಪ್ರೋತ್ಸಾಹಧನ ನೀಡುವಿಕೆಯಂತಹ ಕ್ರಮಗಳನ್ನು ಕೈಗೊಂಡೆ. ಇದರಿಂದ ವೈದ್ಯರು ಹಾಗೂ ಸಿಬ್ಬಂದಿ ರೋಗಿಗಳನ್ನು ಕಾಳಜಿಯಿಂದ ಕಂಡು, ಆರೈಕೆ ಮಾಡಿದರು.

ಪ್ರ

ಸಂಸ್ಥೆಯನ್ನು ಕಾರ್ಪೋರೆಟ್ ಆಸ್ಪತ್ರೆಯ ಮಾದರಿಯಲ್ಲಿ ಬೆಳೆಸಲು ಹಾಗೂ ಎಲ್ಲರಿಗೂ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಒದಗಿಸಲು ಸಾಧ್ಯವಾದದ್ದು ಹೇಗೆ?

ಸಂಸ್ಥೆಯ ನಿರ್ದೇಶಕನಾದ ಬಳಿಕ ಪ್ರತಿ ದಿನ ಹೊಸತನ್ನು ಮಾಡಲು ಪ್ರಯತ್ನಿಸಿದ್ದೆ. ಸರ್ಕಾರಿ ಆಸ್ಪತ್ರೆಯೆಂದರೆ ಕೇವಲ ಬಡವರಿಗೆ ಎಂಬ ಮನೋಭಾವವಿದೆ. ನಾನು ಇದನ್ನು ಬದಲಾಯಿಸಿ, ಬಡವರಿಗೂ ಶ್ರೀಮಂತರಿಗೆ ಸಿಗುವ ಸೌಲಭ್ಯವನ್ನು ಕೈಗೆಟಕುವ ದರದಲ್ಲಿ ಒದಗಿಸಿದೆ. ಇದರಿಂದಾಗಿ ಶ್ರೀಮಂತರೂ ಬರುತ್ತಿದ್ದಾರೆ. ಖಾಸಗಿ ತಾರಾ ಆಸ್ಪತ್ರೆಗಳಲ್ಲಿರುವ ಎಲ್ಲ ಸೌಲಭ್ಯವನ್ನು ಪ್ರಾರಂಭಿಸಿದೆ. ಸಂಸ್ಥೆಗೆ ಈಗ ವಿಶ್ವಮಾನ್ಯತೆ ಕೂಡ ಸಿಕ್ಕಿದ್ದು, ಅಮೆರಿಕದ ಅಂದಿನ ಅಧ್ಯಕ್ಷ ಬರಾಕ್ ಒಬಾಮಾ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಪ್ರ

ಸರ್ಕಾರಿ ವ್ಯವಸ್ಥೆಯಡಿ ವೈದ್ಯಕೀಯ ಸಂಸ್ಥೆಯೊಂದರ ಆಮೂಲಾಗ್ರ ಬದಲಾವಣೆ ಮಾಡಲು ತಮಗೆ ಪ್ರೇರಣೆ ಯಾರು?

ಬಡರೋಗಿಗಳೇ ಪ್ರೇರಣೆ. ರೋಗಿಗಳ ನೋವು, ಅಸಹಾಯಕತೆಯನ್ನು ಹತ್ತಿರದಿಂದ ಕಂಡಾಗ ಅದನ್ನು ಹೋಗಲಾಡಿಸಬೇಕು ಅಂದುಕೊಂಡೆ. ಅದೇ ರೀತಿ, ಕಾರ್ಯಪ್ರವೃತ್ತನಾಗಿ ಶ್ರಮಿಸಿದೆ.

ಪ್ರ

ನಿಮಗೆ ಯಾವಾಗಲಾದರೂ ವೈದ್ಯಕೀಯ ವೃತ್ತಿ ಬೇಸರ ತರಿಸಿತ್ತೆ?

ಸುಳ್ಳು ಆರೋಪ, ಅನಾಮಧೇಯ ಪತ್ರಗಳು ಬಂದಾಗ ವೈದ್ಯಕೀಯ ವೃತ್ತಿ ಬಗ್ಗೆ ಬೇಸರವಾಗಿತ್ತು. ಸಾಧನೆ ಹೆಚ್ಚಾದರೂ ಭಾರವಾಗುತ್ತದೆ. ಈ ವೃತ್ತಿಯಲ್ಲಿ ಇರುವವರನ್ನು ಜನರು ಗೌರವಿಸುತ್ತಾರೆ. ರೋಗಿಗಳು ಪೂಜಿಸುತ್ತಾರೆ. ಇದನ್ನು ನೋಡಿದಾಗ ಸಾರ್ಥಕ ಭಾವ ಮೂಡುತ್ತದೆ. 

ಪ್ರ

ರಾಜಕೀಯ ಕುಟುಂಬದ ಜತೆಗೆ ನಂಟು ಹೊಂದಿದ್ದೀರಿ. ಇದು ನಿಮ್ಮ ವೃತ್ತಿ ಮೇಲೆ ಎಂದಾದರೂ ಪರಿಣಾಮ ಬೀರಿತ್ತೇ?

ರಾಜಕೀಯ ಕುಟುಂಬದ ಜತೆಗಿನ ನಂಟಿನಿಂದಾಗಿ ಪ್ರಾರಂಭದಲ್ಲಿ ನನ್ನ ಸಾಧನೆಗೆ ಮಾನ್ಯತೆ ನೀಡಲು ಕೆಲವರು ಹಿಂದು ಮುಂದು ನೋಡುತ್ತಿದ್ದರು. ಆ ನೆರಳಿನಿಂದ ಹೊರಬರಲು ಬಹಳ ಕಾಲ ಹಿಡಿಯಿತು. ಆ ಮೇಲೆ ನನ್ನದೇ ‘ಐಡೆಂಟಿಟಿ’ ಸಿಕ್ಕಿತು. ನನ್ನ ರಾಜಕೀಯ ನಂಟನ್ನು ವೃತ್ತಿಗೆ ಎಂದೂ ಬಳಸಿಕೊಂಡಿಲ್ಲ. ಪ್ರತಿಯೊಬ್ಬರನ್ನು ಸಮಾನವಾಗಿ ನೋಡಿದ್ದೇನೆ. ತಾಳ್ಮೆ, ಸಹನೆ ಮತ್ತು ಮಾನವೀಯತೆಯೇ ನನ್ನ ಶಕ್ತಿ.

ಪ್ರ

ರಾಜ್ಯದಲ್ಲಿ ಹಲವು ಸರ್ಕಾರಿ ಸ್ವಾಯತ್ತ ಸಂಸ್ಥೆಗಳಿವೆ. ಆದರೆ, ಅವುಗಳು ಜಯದೇವ ರೀತಿ ಬೆಳೆದಿಲ್ಲ. ಇದಕ್ಕೆ ಏನು ಕಾರಣ?

ಕಟ್ಟಡ, ಉಪಕರಣಗಳಿಂದ ಮಾತ್ರ ಗುಣಮಟ್ಟದ ಚಿಕಿತ್ಸೆ ಸಾಧ್ಯವಿಲ್ಲ. ವೈದ್ಯರು ಹಾಗೂ ಸಿಬ್ಬಂದಿಗೆ ಸೇವಾ ಮನೋಭಾವ ಮತ್ತು ಬದ್ಧತೆ ಇರಬೇಕು. ವೈದ್ಯರ ನೇಮಕ ಮಾಡುವಾಗ ಪ್ರತಿಭೆ, ಸಾಧನೆ ಹಾಗೂ ನಾಯಕತ್ವದ ಗುಣಗಳಿಗೆ ಮಾನ್ಯತೆ ನೀಡಬೇಕು. ನಾಯಕತ್ವ ಗುಣ ಎಲ್ಲರಿಗೂ ಇರುವುದಿಲ್ಲ. ಸಂಸ್ಥೆಯಲ್ಲಿ ರಾಜಕೀಯ ಪ್ರಭಾವ ಇರಬಾರದು. ಅಧಿಕಾರ ವಿಕೇಂದ್ರೀಕರಣವೂ ಆಗಬೇಕು. ಎಲ್ಲದಕ್ಕೂ ಇಲಾಖೆಗಳ ಅನುಮತಿ ಪಡೆಯಬೇಕೆಂದರೆ ಸಂಸ್ಥೆ ಮುನ್ನಡೆಸುವುದು ಕಷ್ಟಸಾಧ್ಯ. 

ಪ್ರ

ಸರ್ಕಾರಿ ಸೇವಾ ಅವಧಿ ಮುಕ್ತಾಯವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಜನರಿಗೆ ನಿಮ್ಮ ವೈದ್ಯಕೀಯ ಸೇವೆ ಸಿಗುತ್ತದೆಯೇ?

ವೈದ್ಯರಿಗೆ ನಿವೃತ್ತಿ ಎನ್ನುವುದಿಲ್ಲ. ಎರಡು ವಾರದಲ್ಲಿ ವೈದ್ಯಕೀಯ ಸೇವೆ ಪ್ರಾರಂಭಿಸುತ್ತೇನೆ. ಅಲ್ಲಿಯೂ ಮಧ್ಯಮ ವರ್ಗದ ರೋಗಿಗಳ ಜತೆಗೆ ಸಂಪರ್ಕದಲ್ಲಿ ಇರುತ್ತೇನೆ. ಅಲ್ಲಿ ಕೂಡ ಚಿಕಿತ್ಸೆಗಳಿಗೆ ರಿಯಾಯಿತಿ ನೀಡುವ ವ್ಯವಸ್ಥೆ ಮಾಡುತ್ತೇನೆ. 

ಪ್ರ

lರಾಜಕೀಯಕ್ಕೆ ಬರುತ್ತೀರಿ ಎಂಬ ವದಂತಿ ಇದೆ. ಇದು ಎಷ್ಟು ಸತ್ಯ?

ಸದ್ಯ ರಾಜಕೀಯಕ್ಕೆ ಬರುವ ಆಲೋಚನೆ ಇಲ್ಲ. ರಾಜಕೀಯ ಪ್ರವೇಶದ ಬಗ್ಗೆ ಕೆಲ ಹಿತೈಷಿಗಳು ವಿವಿಧ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿಮ್ಮ ಸೇವೆ ರಾಷ್ಟ್ರಕ್ಕೆ ಬೇಕು, ಹೀಗಾಗಿ ರಾಜಕೀಯಕ್ಕೆ ಬನ್ನಿ ಎಂದು ಹೇಳುತ್ತಿದ್ದಾರೆ. ನಾನು ಈ ಬಗ್ಗೆ ಗೊಂದಲದಲ್ಲಿ ಇದ್ದೇನೆ.

ವೈದ್ಯಕೀಯ ವೃತ್ತಿ ಜೀವನದಲ್ಲಿ ಮರೆಯಲಾಗದಂತಹ ಘಟನೆ...
ಬೆಂಗಳೂರಿನ ಕಡಲೆಕಾಯಿ ವ್ಯಾಪಾರಿಯೊಬ್ಬರಿಗೆ ಹೃದಯದ ಕವಾಟ ಚಿಕ್ಕದಾಗಿ, ಸಂಕೀರ್ಣ ಸಮಸ್ಯೆಗೆ ಒಳಗಾಗಿದ್ದರು. ಸಂಸ್ಥೆಗೆ ಬಂದಾಗ ಅವರಿಗೆ ಸರಿಯಾಗಿ ಪ್ರಜ್ಞೆಯೂ ಇರಲಿಲ್ಲ. ಬದುಕುಳಿಯುವ ಸಾಧ್ಯತೆ ಕಡಿಮೆ ಇತ್ತು. ಅವರಿಗೆ ಬಲೂನ್ ವಾಲ್ವುಲೋಪ್ಲಾಸ್ಟಿ ಮಾಡಿದೆವು. ಇದರಿಂದ ಅವರು ಚೇತರಿಸಿಕೊಂಡರು. ಅವರ ಬಳಿ ಹಣ ಇರಲಿಲ್ಲ. ನಂತರ ಅವರು 25 ವರ್ಷ ಬದುಕುಳಿದಿದ್ದರು. ಅವರು ಪ್ರತಿ ವರ್ಷ ಶಸ್ತ್ರಚಿಕಿತ್ಸೆ ಮಾಡಿದ ದಿನದಂದು ಸಂಸ್ಥೆಗೆ ಬಂದು, ಕಡಲೆಕಾಯಿ ಕೊಡುತ್ತಿದ್ದರು. ಅವರ ಪ್ರೀತಿ ವಿಶ್ವಾಸ ಮರೆಯಲು ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT