ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯುವಪೀಳಿಗೆಗೆ ಸ್ಫೂರ್ತಿ ಮಾಧ್ಯಮ ಲೋಕದ ದಿಗ್ಗಜ 'ರಾಮೋಜಿ ರಾವ್‌'

Published 8 ಜೂನ್ 2024, 10:40 IST
Last Updated 8 ಜೂನ್ 2024, 10:40 IST
ಅಕ್ಷರ ಗಾತ್ರ
ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಮೋಜಿ ರಾವ್ ಶನಿವಾರ ಮುಂಜಾನೆ ವಿಧಿವಶರಾಗಿದ್ದಾರೆ. 87 ವರ್ಷಗಳ ತಮ್ಮ ಜೀವಿತಾವಧಿಯಲ್ಲಿ ವಿವಿಧ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ ಅವರು ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ.

ಆರಂಭಿಕ ಜೀವನ: 1936 ನವೆಂಬರ್ 16 ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಪರುಪುಡಿಯಲ್ಲಿ ಜನಿಸಿದ್ದರು. 'ಮಾಧ್ಯಮ ವ್ಯಾಪಾರವಲ್ಲ, ಸಮಾಜವನ್ನು ಜಾಗೃತಗೊಳಿಸುವ ವೇದಿಕೆ' ಎಂದು ನಂಬಿದ್ದ ಇವರು 1969ರಲ್ಲಿ 'ಅನ್ನದಾತ' ಎಂಬ ಮಾಸ ಪತ್ರಿಕೆ ಆರಂಭಿಸುವ ಮೂಲಕ ಮಾಧ್ಯಮ ಕ್ಷೇತ್ರಕ್ಕೆ ದಾಪುಗಾಲಿಟ್ಟರು.

ಬಳಿಕ 'ಈನಾಡು' ದಿನಪತ್ರಿಕೆ ಮೂಲಕ ತೆಲುಗು ಪತ್ರಿಕಾ ಲೋಕದಲ್ಲಿ ಕ್ರಾಂತಿಯನ್ನೇ ಹುಟ್ಟು ಹಾಕಿದರು. ತೆಲುಗು ಪತ್ರಿಕೋದ್ಯಮದಲ್ಲಿ 'ಈನಾಡು' ಹೊಸ ಯುಗಕ್ಕೆ ನಾಂದಿ ಹಾಡಿತು. ಪ್ರಾರಂಭವಾದ 4 ವರ್ಷಗಳಲ್ಲಿ ಓದುಗರ ನೆಚ್ಚಿನ ಪತ್ರಿಕೆಯಾಗಿ ಹೊರಹೊಮ್ಮಿತು. ಜೊತೆಗೆ 'ಸಿತಾರಾ' ಸಿನಿ ಪತ್ರಿಕೆಯೂ ರಾಮೋಜಿ ಅವರ ಪ್ರಮುಖ ಮೈಲಿಗಲ್ಲು. 'ನಿತ್ಯ ಬೆಳಗಾಗುವ ಮುನ್ನ ಸತ್ಯ ಬಯಲಾಗಲಿ' ಎಂಬುವುದು ರಾಮೋಜಿ ಅವರ ಸಿದ್ಧಾಂತ. ಆ ಸಿದ್ಧಾಂತ ತೆಲುಗು ಪತ್ರಿಕೆಗಳ ದಿಕ್ಕನ್ನೇ ಬದಲಿಸಿತು.

ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ಇವರು ಕೃಷಿ ಲೋಕಕ್ಕೆ ನೀಡಿದ ಕೊಡುಗೆಯೂ ಅಪಾರ. 'ಕರದೀಪಿಕೆ' ಎಂಬ ಪುಸ್ತಕವನ್ನೂ ಬಿಡುಗಡೆ ಮಾಡಿದ್ದರು. ಈ ಮೂಲಕ ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ರೈತರ ನಡುವೆ ಸೇತುವಾದರು.

ರಾಮೋಜಿ ಫಿಲ್ಮ್‌ ಸಿಟಿಯ ನಿರ್ಮಾತೃ:

ಯಶಸ್ವಿ ಉದ್ಯಮಿಯಾಗಿ, ಮಾಧ್ಯಮ ಸಾಮ್ರಾಜ್ಯವನ್ನೇ ಕಟ್ಟಿ ಬೆಳೆಸಿದ ಇವರು 'ಈಟಿವಿ' ಸುದ್ದಿ ವಾಹಿನಿ ಮೂಲಕ ಮಾಧ್ಯಮ ಜಗತ್ತಿನಲ್ಲಿ ಪ್ರಖ್ಯಾತರಾದರು. ರಾಮೋಜಿ ಫಿಲ್ಮ್ ಸಿಟಿ (RFC) ನಿರ್ಮಾಣ ಇವರ ಜೀವನದ ಹೆಗ್ಗುರುತು. ಇದು ವಿಶ್ವದ ಅತಿ ದೊಡ್ಡ ಫಿಲ್ಮ್ ಸಿಟಿ ಎಂಬ ಗಿನ್ನೆಸ್ ದಾಖಲೆ ನಿರ್ಮಿಸಿದೆ. ಫಿಲ್ಮ್‌ಸಿಟಿಯು ದೇಶದ ಜನಪ್ರಿಯ ಪ್ರವಾಸಿ ತಾಣವಾಗಿ ಪ್ರವರ್ಧಮಾನಕ್ಕೆ ಬರುತ್ತಿದೆ. ವಿಶ್ವದ ಅತಿ ದೊಡ್ಡ ಥೀಮ್ ಪಾರ್ಕ್‌ ಹಾಗೂ ಸಿನಿಮಾ ಸ್ಟುಡಿಯೋ ಎಂಬ ಹೆಗ್ಗಳಿಕೆ ರಾಮೋಜಿ ಫಿಲ್ಮ್‌ ಸಿಟಿಗೆ ಇದೆ.

ರಾಮೋಜಿ ಫಿಲ್ಮ್‌ ಸಿಟಿಯಲ್ಲಿನ ಉದ್ಯಾನವನ

ರಾಮೋಜಿ ಫಿಲ್ಮ್‌ ಸಿಟಿಯಲ್ಲಿನ ಉದ್ಯಾನವನ

ಮಾರ್ಗದರ್ಶಿ ಚಿಟ್ ಫಂಡ್, ಈನಾಡು ಪತ್ರಿಕೆ, ಈಟಿವಿ ನೆಟ್‌ವರ್ಕ್, ರಮಾದೇವಿ ಪಬ್ಲಿಕ್ ಸ್ಕೂಲ್, ಪ್ರಿಯಾ ಫುಡ್ಸ್, ಕಲಾಂಜಲಿ, ಉಷಾಕಿರಣ್ ಮೂವೀಸ್, ಮಯೂರಿ ಫಿಲ್ಮ್ ಡಿಸ್ಟ್ರಿಬ್ಯೂಟರ್ಸ್ ಮತ್ತು ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್‌ಗಳು ರಾಮೋಜಿ ಒಡೆತನದ ಕಂಪನಿಗಳಾಗಿವೆ.

ಮಾರ್ಗದರ್ಶಿ ಚಿಟ್ ಫಂಡ್:

ರಾಮೋಜಿ ಅವರು 1962ರಲ್ಲಿ ಮಾರ್ಗದರ್ಶಿ ಚಿಟ್‌ಫಂಡ್‌ ಸ್ಥಾಪಿಸಿದ್ದಾರೆ. ದೇಶದ ಅಗ್ರ ಚಿಟ್‌ಫಂಡ್‌ಗಳ ಕಂಪನಿಯಾಗಿ ಮಾರ್ಗದರ್ಶಿಯೂ ಒಂದು. ಇದರ ಮೂಲಕ ಸಾವಿರಾರು ಜನರಿಗೆ ಉದ್ಯೋಗದಾತರಾಗಿದ್ದಾರೆ. ಈವರೆಗೆ 113ಕ್ಕೂ ಅಧಿಕ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ.

ಸಂತ್ರಸ್ತರಿಗೆ ನೆರವು: ರಾಮೋಜಿ ಅವರು ಪೃಕೃತಿ ವಿಕೋಪಗಳಾದ ಸಂದರ್ಭದಲ್ಲಿ ನೆರವು ನೀಡುವಲ್ಲಿ ಮುಂಚೂಣಿಯಲ್ಲಿದ್ದರು. ಚಂಡಮಾರುತ, ಮಳೆ ಸೇರಿದಂತೆ ಇತರ ಹಾನಿ ಸಂಭವಿಸಿದಾಗ ಸಂತ್ರಸ್ತರಿಗೆ ಮನೆಗಳ ನಿರ್ಮಾಣ ಸೇರಿದಂತೆ ನಾನಾ ರೀತಿಯ ನೆರವು ನೀಡಿರುವ ಹೆಗ್ಗಳಿಕೆ ರಾಮೋಜಿ ಅವರದ್ದು.

ಎಲೆಕ್ಟ್ರಾನಿಕ್ ಮಾಧ್ಯಮದಲ್ಲೂ ಸಂಚಲನ

ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ರಾಮೋಜಿ ಅವರು ಆರಂಭಿಸಿದ 'ಈಟಿವಿ ತೆಲುಗು' ತೆಲುಗು ರಾಜ್ಯದಲ್ಲೇ ಸಂಚಲನ ಮೂಡಿಸಿತ್ತು. 24 ಗಂಟೆಗಳ ಚಾನೆಲ್ ಆಗಿ 1995ರ ಆಗಸ್ಟ್ 27ರಂದು ಪ್ರಾರಂಭವಾದ 'ಈಟಿವಿ ತೆಲುಗು' ಜನರ ಮನೆ ಮಾತಾಗಿದೆ.

  • ಈಟಿವಿ ಜಾಲ ವಿಸ್ತರಣೆ: ರಾಮೋಜಿ ಅವರು ಕಾಲಕಾಲಕ್ಕೆ ತಕ್ಕಂತೆ, ಈಟಿವಿ ಜಾಲವನ್ನು ವಿಸ್ತರಿಸುತ್ತಾ ಬಂದರು. ಈಟಿವಿ ಪ್ಲಸ್, ಈಟಿವಿ ಸಿನಿಮಾ, ಈಟಿವಿ ಆಧ್ಯಾತ್ಮಿಕ ವಾಹಿನಿಗಳು ವಿವಿಧ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿವೆ.

  • ಈಟಿವಿ ಭಾರತ: 13 ಭಾಷೆಗಳಲ್ಲಿ ಸುದ್ದಿ ನೀಡುವ ಅತಿದೊಡ್ಡ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿ ಈಟಿವಿ ಭಾರತ ಹೊರಹೊಮ್ಮಿದೆ.

  • ಬಾಲ ಭಾರತ: ಮಕ್ಕಳಿಗೆ ಮನರಂಜನೆ ನೀಡುವ ಆಲೋಚನೆಯೊಂದಿಗೆ ಹುಟ್ಟಿಕೊಂಡಿದ್ದು, 'ಈಟಿವಿ ಬಾಲ ಭಾರತ' 12 ಭಾಷೆಗಳಲ್ಲಿ ಕಾರ್ಟೂನ್ ಕಾರ್ಯಕ್ರಮಗಳನ್ನು ನೀಡುತ್ತಿದೆ.

ಪ್ರಶಸ್ತಿಗಳು ಮತ್ತು ಗೌರವಗಳು

ಪದ್ಮವಿಭೂಷಣ ಪ್ರಶಸ್ತಿ ( 2016): ಪತ್ರಿಕೋದ್ಯಮ, ಸಾಹಿತ್ಯ, ಸಿನಿಮಾ ಹಾಗೂ ಶಿಕ್ಷಣ ರಂಗದಲ್ಲಿ ರಾಮೋಜಿ ಅವರು ನೀಡಿದ ಕೊಡುಗೆಗಳನ್ನು ಪರಿಣಿಸಿ ಅವರಿಗೆ ಈ ಪುರಸ್ಕಾರ ನೀಡಲಾಗಿತ್ತು. ಅಲ್ಲದೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಹಾಗೂ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT