ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ನಮನ | ಶ್ರಮಿಕರ ನೋವಿಗೆ ಮಿಡಿದ ಪ್ರಾಣಮಿತ್ರ

Published 21 ಏಪ್ರಿಲ್ 2023, 22:08 IST
Last Updated 21 ಏಪ್ರಿಲ್ 2023, 22:08 IST
ಅಕ್ಷರ ಗಾತ್ರ

ಬೆಂಗಳೂರು: ಶ್ರಮಿಕರ ನೋವಿಗೆ ಮಿಡಿದ ಪ್ರಾಣಮಿತ್ರ ಎಂದೇ ಹೆಸರಾಗಿದ್ದ ಕೆ.ಸುಬ್ಬರಾವ್‌ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಮಣಿಲ ಗ್ರಾಮದಲ್ಲಿ 1931ರ ಜೂನ್ 15ರಂದು ಜನಿಸಿದರು.

ತಂದೆ ಕಡಂದೇಲು ಗಣೇಶ್‌ರಾವ್ ಮತ್ತು ತಾಯಿ ಕಡಂದೇಲು ಸರಸ್ವತಿ. ಸ್ವಗ್ರಾಮದ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಗಡಿಯಲ್ಲಿರುವ ನಿಲೇಶ್ವರದಲ್ಲಿ ಪ್ರೌಢಶಾಲೆ ನಂತರ ಮಂಗಳೂರು, ಮದ್ರಾಸ್‌ನಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪೂರೈಸಿ ಪೂನಾದಲ್ಲಿ ಕಾನೂನು ಪದವಿ ಪ‍ಡೆದರು.

1975ರಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟವನ್ನು ನಡೆಸಿದ್ದ ಅವರು ಆ ಸಮಯದಲ್ಲಿ ಬಂಧನಕ್ಕೊಳಗಾಗಿದ್ದ ಹೋರಾಟಗಾರರ ಹೇಬಿಯಸ್ ಕಾರ್ಪಸ್ ಅರ್ಜಿಗಳನ್ನು ನ್ಯಾಯಾಲಯದಲ್ಲಿ ಸಲ್ಲಿಸುವ ಮೂಲಕ ಕ್ರಿಯಾಶೀಲ ವಕೀಲರಾಗಿ ಹೋರಾಟಗಾರರ ಪ್ರಾಣಮಿತ್ರ ಎನಿಸಿದ್ದರು.

ಕಾರ್ಮಿಕ ಮತ್ತು ಸೇವಾ ವಲಯದಲ್ಲಿಯೇ ಹೆಚ್ಚಿನ ಪ್ರಕರಣಗಳನ್ನು ಕೈಗೆತ್ತಿಕೊಂಡು ಬದುಕಿನುದ್ದಕ್ಕೂ ಕಾರ್ಮಿಕರ ಹಿತಕ್ಕೆ ಬದ್ಧರಾಗಿ ಲಕ್ಷಾಂತರ ಕಾರ್ಮಿಕರ ಹಕ್ಕುಗಳನ್ನು, ಬದುಕನ್ನು ನ್ಯಾಯಾಲಯದ ಒಳಗೂ, ಹೊರಗೂ ಸಂರಕ್ಷಿಸಲು ಹೋರಾಡಿದ ಜನಪರ ವಕೀಲರಾಗಿದ್ದರು. ತಮ್ಮ 60ಕ್ಕೂ ಹೆಚ್ಚು ವರ್ಷಗಳ ಸುದೀರ್ಘ ವಕೀಲಿಕೆಯಲ್ಲಿ ಒಂದೇ ಒಂದು ಪ್ರಕರಣದಲ್ಲೂ ಮಾಲೀಕರ ಪರವಾದ ಕೇಸುಗಳನ್ನು ಪ್ರತಿನಿಧಿಸದೆ ಕಾರ್ಮಿಕ ಪರ ಪ್ರಕರಣಗಳಿಗೆ ಮಾತ್ರವೇ ವಕಾಲತ್ತು ವಹಿಸಿ ವಾದ ಮಂಡಿಸಿದ್ದ ಕಟ್ಟರ್ ಮಾರ್ಕ್ಸ್‌ವಾದಿ ನಾಯಕರು ಎಂಬ ಹೆಗ್ಗಳಿಕೆ ಹೊಂದಿದ್ದರು.

1964ರಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಕಾರ್ಮಿಕರ ಸಂಘದ ಕಾನೂನು ಸಲಹೆಗಾರರಾಗಿ, ನಂತರ ಎಚ್.ಎಂ.ಟಿ, ಬಿ.ಇ.ಎಲ್, ಎಚ್.ಎ.ಎಲ್, ಐ.ಟಿ.ಐನಂತಹ ಬೃಹತ್ ಸಾರ್ವಜನಿಕ ಉದ್ದಿಮೆಗಳ ಕಾರ್ಮಿಕರ ಪರವಾಗಿ ದುಡಿದಿದ್ದರು. ಇಂಡಿಯನ್ ಕಾಫಿ ವರ್ಕರ್ಸ್ ಕೋ-ಆಪರೇಟಿವ್ ಯೂನಿಯನ್, ಮೈಸೂರು ಕಮರ್ಷಿಯಲ್ ಎಂಪ್ಲಾಯಿಸ್ ಯೂನಿಯನ್, ಬಿನ್ನಿ ಮಿಲ್ ಕಾರ್ಮಿಕರ ಸಂಘ, ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ ಅಸೋಸಿಯೇಶನ್ ಅಧ್ಯಕ್ಷರಾಗಿದ್ದರು.

ಅಮೆರಿಕ, ಚೀನಾ, ಜಪಾನ್, ಹಾಗೂ ದೇಶದ ವಿವಿಧೆಡೆ ಪ್ರವಾಸ ಮಾಡಿದ್ದ ಅವರು, 1986ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದಿದ್ದ ಅಂತರಾಷ್ಟ್ರೀಯ ಕಾನೂನು ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಕಾಸರಗೋಡಿನ ಗ್ರಾಮವೊಂದರಲ್ಲಿ ಕನ್ನಡ ಶಾಲೆ ಸ್ಥಾಪಿಸಿ ಕನ್ನಡ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಿದ್ದರು. ಅಲ್ಲಿ ಸಾಮಾಜಿಕ ಬದಲಾವಣೆಯ ಕೇಂದ್ರವೊಂದನ್ನು ಸ್ಥಾಪಿಸಿ ಅದಕ್ಕಾಗಿ ತಮ್ಮ 2.3 ಎಕರೆ ಜಮೀನು ದಾನ ಮಾಡಿ, ಟ್ರಸ್ಟ್ ಸ್ಥಾಪಿಸಿದ್ದರು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಸೇರಿದಂತೆ ಅನೇಕ ನ್ಯಾಯಮೂರ್ತಿಗಳು ಹಾಗೂ ಅಪಾರ ಸಂಖ್ಯೆಯ ವಕೀಲರು ಇವರ ಗರಡಿಯಲ್ಲಿ ಪಳಗಿದ ವಕೀಲ ವೃಂದವಾಗಿದೆ.

ಹಿರಿಯ ವಕೀಲ ಕೆ.ಸುಬ್ಬರಾವ್‌ ಇನ್ನಿಲ್ಲ

ಬೆಂಗಳೂರು: ಹೈಕೋರ್ಟ್‌ನ ಹಿರಿಯ ವಕೀಲರು ಮತ್ತು ಕಾರ್ಮಿಕ ಮುಖಂಡರೂ ಆಗಿದ್ದ ಕೆ.ಸುಬ್ಬರಾವ್ (92) ಶುಕ್ರವಾರ ಬೆಳಗ್ಗೆ 6.30ಕ್ಕೆ ಸ್ಯಾಂಕಿ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ವಯೋಸಹಜ ಕಾರಣದಿಂದ ನಿಧನರಾದರು. ಅವರಿಗೆ ಪತ್ನಿ ಸುಶೀಲಾರಾವ್‌ ಮತ್ತು ಅಮೆರಿಕದಲ್ಲಿರುವ ಪುತ್ರಿ ಮಾಯಾರಾವ್‌ ಇದ್ದಾರೆ. ಅಂತ್ಯಕ್ರಿಯೆ ಸಂಜೆ ಹೆಬ್ಬಾಳದ ಚಿತಾಗಾರದಲ್ಲಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT