ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ನಮನ: ಜಾತಿ– ಮತ ಮೀರಿದ, ಮರೆಯಲಾಗದ ಗುರು

Published 27 ಮಾರ್ಚ್ 2024, 19:53 IST
Last Updated 27 ಮಾರ್ಚ್ 2024, 19:53 IST
ಅಕ್ಷರ ಗಾತ್ರ

ಸಾಹಿತಿ ಗುರುಲಿಂಗ ಕಾಪಸೆ ಅವರು ಶಿಷ್ಯರು ಮರೆಯಲಾಗದಂಥ ಗುರುವಾಗಿದ್ದರು. ಜಾತಿ, ಮತ ಯಾವುದೇ ತಾರತಮ್ಯ ಮಾಡದೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಬೆಳೆಸಿದ ಶಿಕ್ಷಕರು.

ಮನದಟ್ಟಾಗುವಂತೆ ಬೋಧಿಸುತ್ತಿದ್ದ ಅವರ ತರಗತಿಯನ್ನು ವಿದ್ಯಾರ್ಥಿಗಳು ತಪ್ಪಿಸುತ್ತಿರಲಿಲ್ಲ. ವಿಶೇಷ ತರಗತಿ ತೆಗೆದುಕೊಂಡು ಹಳಗನ್ನಡ, ಛಂದಸ್ಸು ಮೊದಲಾದ ವಿಷಯ ಕಲಿಸುತ್ತಿದ್ದರು.

ತಯಾರಿ ಇಲ್ಲದೆ ತರಗತಿ, ಸಭೆಗೆ ಹೋಗುತ್ತಿರಲಿಲ್ಲ. ಯಾವುದೇ ವಿಷಯ ವ್ಯಾಖ್ಯಾನಿಸುವಾಗ ಅದರ ಬಗ್ಗೆ ಪೂರ್ಣ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಮುತ್ತಿನಂಥ (ಅಂದವಾಗಿ) ಬರವಣಿಗೆ ಅವರದು.

ಎಲ್ಲಿಯೂ ಸಂಘ–ಸಂಸ್ಥೆ ರಾಜಕೀಯ ಮಾಡಲಿಲ್ಲ. ಕರ್ನಾಟಕ ವಿಶ್ವವಿದ್ಯಾಲಯವು ಬೆಳಗಾವಿಯಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಆರಂಭಿಸಿದಾಗ ಕೆಲವರು (ಬೋಧಕರು) ಅಲ್ಲಿಗೆ ಹೋಗಲು ಒಲ್ಲೆ ಎಂದರು. ಆದರೆ, ಗುರುಲಿಂಗ ಕಾಪಸೆ ಒಪ್ಪಿಕೊಂಡು ಅಲ್ಲಿಗೆ ಹೋದರು. ಅಲ್ಲಿ ಕನ್ನಡ ಮತ್ತು ಮರಾಠಿ ಅಧ್ಯಯನ ವಿಭಾಗದ ನಡುವೆ ಬಾಂಧವ್ಯ ಬೆಸೆದರು. ಮರಾಠಿಗರಲ್ಲಿ ಕನ್ನಡ ಪ್ರೀತಿ ಬೆಳೆಸಿದರು.

ಹಟ ತೊಟ್ಟು ಇಂಗ್ಲಿಷ್‌ ಕಲಿತ ಅವರು ಅರವಿಂದರ ಸಾಹಿತ್ಯ ಓದಿದರು. ಅವರಿಗೆ ನೆನಪಿನ ಶಕ್ತಿ ಚೆನ್ನಾಗಿತ್ತು. ಓದಿದ ಕಾವ್ಯಗಳನ್ನು ಮತ್ತೆ ಮತ್ತೆ ಕಲಿಸಿದ್ದರಿಂದ ಆಯಾ ಪ್ರಸಂಗಕ್ಕೆ ತಕ್ಕಂತೆ ಉಲ್ಲೇಖಿಸುತ್ತಿದ್ದರು. ಕಾದಂಬರಿ, ಕಥೆ ಸಾಹಿತ್ಯವನ್ನು ಓದಿದ್ದರು. ಅವರಿಗೆ ವೈಚಾರಿಕ ಸಾಹಿತ್ಯ ಮತ್ತು ತತ್ವಜ್ಞಾನ (ದಾರ್ಶನಿಕ ಸಾಹಿತ್ಯ) ಬಗ್ಗೆ ಅಪಾರ ಪ್ರೀತಿ ಇತ್ತು.

ಮಧುರ ಚೆನ್ನರ ಸಂಪರ್ಕದಿಂದ ಅವರಿಗೆ ಅನುಭಾವ ಕಾವ್ಯದಲ್ಲಿ ಪ್ರೀತಿ ಮೂಡಿತು. ಮಧುರ ಚೆನ್ನರ ಸಂಪರ್ಕ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದು ಅವರ ವಿಶಿಷ್ಟ ಸ್ವಭಾವಕ್ಕೆ ಕಾರಣ. ತಾನು ಶಾಲಾ ಶಿಕ್ಷಕನಾಗಿದ್ದು ಪುಣ್ಯ ಎಂದು ಅವರು ಹೇಳಿಕೊಂಡಿದ್ದರು.

ಗುರುಲಿಂಗ ಕಾಪಸೆ ಅವರಿಗೆ ಚೆನ್ನವೀರ ಕಣವಿ ಬಗ್ಗೆ ಅಪಾರ ಪ್ರೀತಿ ಇತ್ತು. ಕಣವಿ ಅವರಿಗೆ ಬೆಳೆಯಲು ಪ್ರೋತ್ಸಾಹಿಸಿದರು.

ಕಾವ್ಯಗಳನ್ನು ಓದಿ ಅರ್ಥ ವಿವರಿಸುವ ಕಲೆ ಕಾಪಸೆ ಅವರಿಗೆ ಕರಗತವಾಗಿತ್ತು. ಓದುಗರಿಗೆ ಕಾವ್ಯದ ಹೊಳಹುಗಳನ್ನು ಅರ್ಥೈಸುತ್ತಿದ್ದರು. ಕವಿಗಳು, ಕೃತಿಕಾರರು, ಕೃತಿಗಳನ್ನು ಉಳಿಸುವ ಕಾಯಕ ಮಾಡಿದ ವಿರಳ ಅಧ್ಯಾಪಕ ಅವರು.

ಬೇಂದ್ರೆ ಅವರನ್ನು ಚೆನ್ನಾಗಿ ಓದಿಕೊಂಡಿದ್ದರು. ಜಾತಿ, ಮತ ಎಲ್ಲ ಮೀರಿ ಬರಹಗಳನ್ನು ಪ್ರೀತಿ ಮಾಡುತ್ತಿದ್ದದ್ದು ಅವರ ದೊಡ್ಡ ಗುಣ. ಜಾತಿಯನ್ನು ಎಂದೂ ತಲೆಗೆ ಹಾಕಿಕೊಳ್ಳಲಿಲ್ಲ. ಸಮಾಜ ಕಟ್ಟುವ ಕೆಲಸ ಮಾಡಿದರು.

ಬಾಗಲಕೋಟೆ ಜಿಲ್ಲೆಯಲ್ಲಿ ತಮ್ಮ ಹಾಗೆಯೇ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದ ಹಸೀನಾ ಎಂ.ಬೀಳಗಿ ಅವರನ್ನು ಪ್ರೋತ್ಸಾಹಿಸಿ, ಎಂ.ಎ ಕಲಿಯಲು ಮತ್ತು ಕಾಲೇಜು ಅಧ್ಯಾಪಕಿ ಯಾಗಲು ನೆರವಾದರು. ಹಸೀನಾ ಅವರೂ ಕಾಪಸೆ ಅವರಂತೆಯೇ ಯಶಸ್ವಿಯಾಗಿ ಅಧ್ಯಾಪಕಿ, ಲೇಖಕಿಯಾದರು.

ಮಕ್ಕಳ ಸಾಹಿತ್ಯದ ಬಗ್ಗೆಯೂ ಅವರಿಗೆ ಅಪಾರ ಪ್ರೀತಿ ಇತ್ತು. ಸಹೋದರ ಈಶ್ವರ ಕಾಪಸೆ ಅದಕ್ಕೆ ಕಾರಣ. ಈಶ್ವರ ಕಾಪಸೆ ಅವರು ಶಿಕ್ಷಕರಾಗಿದ್ದು, ಮಕ್ಕಳ ಸಾಹಿತ್ಯದ ಪುಸ್ತಕ ಬರೆದಿದ್ದಾರೆ.

ಗುರುಲಿಂಗ ಕಾಪಸೆ ಅವರು ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಆಪ್ತರಾಗಿದ್ದರು. ನವ
ಕಲ್ಯಾಣಮಠದಲ್ಲಿ ಪುಸ್ತಕಗಳ ಪ್ರಕಟಣೆ ಹೊಣೆ ನಿರ್ವಹಿಸಿದರು. ಪ್ರತಿದಿನ ಬೆಳಿಗ್ಗೆ ‘ವಾಕ್‌’ ಮಾಡುವುದನ್ನು ರೂಢಿಸಿಕೊಂಡಿದ್ದರು. ಧಾರವಾಡದಲ್ಲಿ ಅವರಷ್ಟು ವಾಕ್‌ ಮಾಡಿದವರನ್ನು ನಾನು ನೋಡಿಲ್ಲ.

ಸಾಹಿತಿ ಗುರುಲಿಂಗ ಕಾಪಸೆ ನಿಧನ

ಧಾರವಾಡ: ಸಾಹಿತಿ ಗುರುಲಿಂಗ ಕಾಪಸೆ (96) ನಗರದ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ನಿಧನರಾದರು. ಅವರಿಗೆ ಪುತ್ರರಾದ ಚಂದ್ರಶೇಖರ್‌, ರವಿ, ಪುತ್ರಿಯರಾದ ಶಶಿಕಲಾ ಹಾಗೂ ಉಷಾ ಇದ್ದಾರೆ.

ನಗರದ ಸಪ್ತಾಪುರದ ದುರ್ಗಾಕಾಲೊನಿಯ ಸ್ವಗೃಹ ‘ನೋಂಪಿ’ಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬುಧವಾರ ಮಧ್ಯಾಹ್ನದವರೆಗೆ ವ್ಯವಸ್ಥೆ ಮಾಡಲಾಗಿತ್ತು. ಅವರು ಬದುಕಿದ್ದಾಗ ಇಚ್ಛೆಪಟ್ಟಂತೆ ದೇಹವನ್ನು ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟಬಲ್‌ ಟ್ರಸ್ಟ್‌ಗೆ ದಾನ ಮಾಡಲಾಯಿತು.

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇಲೋಣಿ ಗ್ರಾಮದಲ್ಲಿ ಕೃಷಿಕರಾದ ಶಂಕರಪ್ಪ ಮತ್ತು ವೀರಮ್ಮ ದಂಪತಿಗೆ 1928ರ ಏಪ್ರಿಲ್ 2ರಂದು ಗುರುಲಿಂಗ ಜನಿಸಿದರು. ವಿಜಯಪುರ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ಅವರು ನಂತರದ ವರ್ಷಗಳಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬೋಧಕರಾದರು. 

‘ಮಧುರ ಚೆನ್ನರ ಜೀವನ ಹಾಗೂ ಕೃತಿಗಳ ಸಮೀಕ್ಷೆ’, ‘ಸಾಹಿತ್ಯ ಸಂಬಂಧ’, ‘ಅಕ್ಕಮಹಾದೇವಿ’, ಶಾಲ್ಮಲೆಯಿಂದ ಗೋದಾವರಿಯವರೆಗೆ’ (ಪ್ರವಾಸ ಕಥನ) ಸೇರಿದಂತೆ ಹಲವು ಕೃತಿಗಳನ್ನು ರಚಿಸಿರುವ ಅವರು ಹಲವು ಮರಾಠಿ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ‘ವರದರಾಜ ಆದ್ಯ ಪ್ರಶಸ್ತಿ’, ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ’, ‘ಆನಂದಕಂದ ಪ್ರಶಸ್ತಿ’, ‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಮುಂತಾದ ಪ್ರಶಸ್ತಿಗಳು ಸಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ಗೋಕಾಕ್‌ ಚಳವಳಿಯ ಸಂಘಟನಾ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT