ಮಂಗಳವಾರ, ಸೆಪ್ಟೆಂಬರ್ 29, 2020
21 °C

ವಾಚಕರ ವಾಣಿ | ಸಂವಿಧಾನದ ಆಶಯಕ್ಕೆ ವಿರುದ್ಧವಾದ ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದ ಯಾವುದೇ ದೇವಸ್ಥಾನದ ಭೂಮಿಪೂಜೆಯು ಅಯೋಧ್ಯೆಯ ಉದ್ದೇಶಿತ ರಾಮಮಂದಿರದಷ್ಟು ವ್ಯಾಪಕ ಪ್ರಚಾರ ಮತ್ತು ವೈಭವವನ್ನು ಬಹುಶಃ ಇದುವರೆಗೂ ಕಂಡಿರಲಿಕ್ಕಿಲ್ಲ. ರಾಮನ ಜನ್ಮಸ್ಥಾನವೆಂಬ ನಂಬಿಕೆಯ ಆಧಾರದ ಮೇಲೆ ಇದು ಕಾನೂನಾತ್ಮಕ ಒಪ್ಪಿಗೆಯನ್ನೂ ಪಡೆದುಕೊಂಡಿದೆ. ರಾಮಮಂದಿರದ ಇಡೀ ‘ಆಂದೋಲನ’ವೇ ಧರ್ಮಕ್ಕಿಂತ ಹೆಚ್ಚು ರಾಜಕೀಯ ಪ್ರೇರಿತವಾಗಿದ್ದದ್ದು ಇದಕ್ಕೆ ಕಾರಣ. ಇವೆಲ್ಲ ಏನೇ ಇದ್ದರೂ ರಾಮಮಂದಿರ ನಿರ್ಮಾಣಕ್ಕೆ ತಕರಾರು ಎತ್ತುವ ಪ್ರಶ್ನೆ ಈಗ ಇಲ್ಲ. ಯಾರಾದರೂ ಇದಕ್ಕೆ ಇದುವರೆಗೆ ವಿರೋಧಿಸಿದ್ದರೆ ಅದಕ್ಕೆ ಕಾರಣ, ‘ಇನ್ನೊಂದನ್ನು’ ಹತ್ತಿಕ್ಕಿ ‘ಇದನ್ನು’ ನಿರ್ಮಾಣ ಮಾಡುವುದಕ್ಕೆ ಮಾತ್ರವಾಗಿತ್ತು.

ಭಾರತದ ಸಂವಿಧಾನವು ಜಾತ್ಯತೀತತೆಯನ್ನು ಪ್ರತಿಪಾದಿಸುತ್ತದೆ. ಇದರ ಅರ್ಥವನ್ನು ಸರಳವಾಗಿ ಹೇಳುವುದಾದರೆ, ‘ಪ್ರಭುತ್ವಕ್ಕೆ ಧರ್ಮವಿಲ್ಲ’. ಪ್ರಜೆಗಳು ಯಾವುದೇ ಧರ್ಮವನ್ನಾದರೂ ಅನ್ಯರಿಗೆ ತೊಂದರೆ ಆಗದಂತೆ ಅನುಸರಿಸಿ ಪಾಲಿಸಿಕೊಂಡು ಹೋಗಬಹುದು. ದೇಶದ ಪ್ರಧಾನಿಯು ಪ್ರಭುತ್ವದ ಪ್ರತಿನಿಧಿ. ಹಾಗೆಂದ ಮೇಲೆ ನಮ್ಮ ಸಂವಿಧಾನದ ಆಶಯದ ಆಧಾರದ ಮೇಲೆ ಪ್ರಧಾನಿ ಇಂಥ ಯಾವುದೇ ‘ಧಾರ್ಮಿಕ’ ಕಾರ್ಯಕ್ರಮಕ್ಕೆ ‘ಪ್ರಧಾನ’ವಾಗಿ ಹೋಗುವಂತಿಲ್ಲ. ಅತಿಥಿ ಆಗುವುದು ಬೇರೆ, ಅಧ್ವರ್ಯು ಆಗುವುದು ಬೇರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅತಿಥಿ ಆಗಿರಲಿಲ್ಲ. ಇಡೀ ಕಾರ್ಯಕ್ರಮವು ಪ್ರಭುತ್ವದ ಕಾರ್ಯಕ್ರಮವೆಂಬಂತೆ ಬಿಂಬಿತವಾಯಿತು. ಅಂದರೆ, ಪ್ರಧಾನಿಯವರು ರಾಮಮಂದಿರಕ್ಕೆ ಸ್ವತಃ ಭೂಮಿಪೂಜೆಯನ್ನು ನೆರವೇರಿಸಿದ್ದು, ನಮ್ಮ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಯಾಕೆಂದರೆ, ಇದು ಒಂದು ಖಾಸಗಿ ಟ್ರಸ್ಟ್‌ನ ಕಾರ್ಯಕ್ರಮ. ಹಾಗಿದ್ದರೆ ಮೋದಿಯವರು ‘ಅನ್ಯ’ ಧರ್ಮೀಯರ ಇಂತಹ ಕಾರ್ಯಕ್ರಮಗಳನ್ನೂ ನೆರವೇರಿಸುವರೇ? ನಮ್ಮ ಪ್ರಭುತ್ವವು ಬಹುಮತದ ಬಲದ ಮೇಲಿದೆ. ಈಗ ಬಹುಮತದ ‘ಬಲ’ವಿದೆ. ಅಂದಮೇಲೆ ಏನು ಮಾಡಿದರೂ ನಡೆಯುತ್ತದೆ ಎಂದು ತಿಳಿಯಬೇಕೇ?

-ಅ.ರಾ.ಶ್ರೀನಿವಾಸ, ಸಾಗರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು