ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಪಾಲಿಗೆ ಕಹಿಯಾದ ‘ಸೇವೆ’

ಅಕ್ಷರ ಗಾತ್ರ

ಮಂಡ್ಯ ಜಿಲ್ಲೆಯಲ್ಲಿ ವ್ಯವಹಾರಕ್ಕಾಗಿ ಬ್ಯಾಂಕಿಗೆ ಹೋದ ರೈತರೊಬ್ಬರಿಗೆ ಕನ್ನಡ ಬಾರದ ಮೇಲಧಿಕಾರಿಯು ಇಂಗ್ಲಿಷ್‌ ಅಥವಾ ಮರಾಠಿ ಭಾಷೆಯಲ್ಲಿ ಮಾತನಾಡುವಂತೆ ತಾಕೀತು ಮಾಡಿದ್ದನ್ನು ವಿವೇಕ್ ಶಂಕರ್ ಅವರು ಆಕ್ಷೇಪಿಸಿರುವುದು (ವಾ.ವಾ., ಮೇ 18) ಸರಿಯಾಗಿದೆ. 80-90ರ ದಶಕಗಳಲ್ಲಿ ಬ್ಯಾಂಕ್ ಅಧಿಕಾರಿಗಳಾಗಿ ಬಡ್ತಿ ಹೊಂದಿದವರನ್ನು ಉತ್ತರ ಭಾರತದಲ್ಲಿರುವ ಬ್ಯಾಂಕ್ ಶಾಖೆಗಳಿಗೆ ಕಡ್ಡಾಯವಾಗಿ ವರ್ಗಾವಣೆ ಮಾಡುವ ಪದ್ಧತಿ ಇತ್ತು. ಅದರಂತೆ 90ರ ದಶಕದಲ್ಲಿ ನನಗೆ ಪಂಜಾಬಿನ ಪಟಿಯಾಲ ನಗರದ ಕೆನರಾ ಬ್ಯಾಂಕ್ ಶಾಖೆಗೆ ವರ್ಗವಾಯಿತು. ಅಲ್ಲಿನ ಗ್ರಾಹಕರಿಗೆ ನನ್ನ ಮಾತೃಭಾಷೆ ಕನ್ನಡ ಕಿಂಚಿತ್ತೂ ಗೊತ್ತಿರಲಿಲ್ಲ. ಪಂಜಾಬಿ ಭಾಷೆಯ ಗಂಧ ನನಗೂ ಇರಲಿಲ್ಲ.

ಆಗ ನಾನು ಖಾತೆಯಿಂದ ಖಾತೆಗೆ ಹಣ ವರ್ಗಾವಣೆ ಮಾಡುವ ವಿಭಾಗದಲ್ಲಿದ್ದೆ. ಬ್ಯಾಂಕಿನ ಚೆಕ್ಕುಗಳಲ್ಲಿನ ಪ್ರಕಾರ, ಯಾರ ಹೆಸರಿನ ಖಾತೆಗೆ ಹಣ ಸಂದಾಯ ಆಗಬೇಕೋ ಅವರಿಗೇ ಸರಿಯಾಗಿ ಆಗುತ್ತಿದೆಯೇ ಎಂದು ಗಮನಿಸಬೇಕಾಗಿತ್ತು. ಆದರೆ ಆ ಮಾಹಿತಿ ಪಂಜಾಬಿ ಭಾಷೆಯಲ್ಲಿ ಇರುತ್ತಿದ್ದುದರಿಂದ ಈ ಜವಾಬ್ದಾರಿಯು ನನಗೆ ಕಷ್ಟವಾದ ಕೆಲಸವಾಗಿತ್ತು.

ಹೀಗಾಗಿ, ಒಂದೆರಡು ತಿಂಗಳುಗಳಲ್ಲಿಯೇ ‘30 ದಿನಗಳಲ್ಲಿ ಪಂಜಾಬಿ ಕಲಿಯಿರಿ’ ಪುಸ್ತಕ ಖರೀದಿಸಿ ಪಂಜಾಬಿ ಭಾಷೆಯನ್ನು ನಾನು ಕಲಿಯಲೇಬೇಕಾಯಿತು. ಅಲ್ಲಿನ ಬ್ಯಾಂಕ್ ಸಹೋದ್ಯೋಗಿಗಳಿಗೆ ಪಂಜಾಬಿ ಕಲಿಯುವಲ್ಲಿನ ನನ್ನ ಆಸಕ್ತಿ ನೋಡಿ ಆಶ್ಚರ್ಯವಾಗಿತ್ತು. ನನ್ನ ಕ್ರಿಯಾಶೀಲತೆ ಕಂಡು ನನಗೆ ಸಹಕರಿಸಿದ ಅವರೆಲ್ಲ ನನ್ನನ್ನು ಪ್ರೀತಿಯಿಂದ, ರಾವ್ ಸಾಬ್ (ಆಗ ರಾಷ್ಟ್ರಮಟ್ಟದಲ್ಲಿ ಎನ್.ಟಿ.ರಾಮರಾವ್, ನರಸಿಂಹ ರಾವ್ ಹೆಸರಾಗಿದ್ದರು) ಎಂದು ಕರೆಯುತ್ತಿದ್ದರು.

ಕಂಪ್ಯೂಟರ್ ಇಲ್ಲದ ದಿನಗಳಲ್ಲಿ ಮಾಡಿದ ಸೇವೆಯ ಬಗ್ಗೆ ಬ್ಯಾಂಕಿನ ನಿವೃತ್ತ ನೌಕರನಾಗಿ ಈಗಲೂ ನಾನು ಎದೆ ತಟ್ಟಿ ಹೇಳಿಕೊಳ್ಳುವೆ. ಆದರೆ, ಇಂದು ಬ್ಯಾಂಕಿನಲ್ಲಿ ಸೇವೆ ಸಲ್ಲಿಸುವವರ ಮನೋಭಾವ ಜನಸಾಮಾನ್ಯರ ಪಾಲಿಗೆ ಕಹಿಯೇ ಕಹಿ. ಬೇರೆ ದಾರಿ ಇಲ್ಲದೆ ಸಹಿಸಿಕೊಂಡು ಹೋಗಬೇಕಾಗಿದೆ.

- ರಘುನಾಥರಾವ್ ತಾಪ್ಸೆ,ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT