ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಚಿನ್ನದ ಮಾಸ್ಕ್‌‌ನಿಂದ ಆತ್ಮರಕ್ಷಣೆಗೆ ತೊಡಕು

Last Updated 6 ಜುಲೈ 2020, 19:45 IST
ಅಕ್ಷರ ಗಾತ್ರ

ಮುಂಬೈನ ಉದ್ಯಮಿಯೊಬ್ಬರು ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಚಿನ್ನದ ಮಾಸ್ಕ್‌ ಧರಿಸುವ ಸುದ್ದಿ (ಪ್ರ.ವಾ., ಜುಲೈ 5) ಓದಿ ಗಾಬರಿಯಾಯಿತು. ಮೂರು ರೂಪಾಯಿಯದೋ ಮೂರು ಲಕ್ಷ ರೂಪಾಯಿಯದೋ ಎಂದು ಕೊರೊನಾಗೆ ಗೊತ್ತಾಗುವುದಿಲ್ಲ. ರಂಧ್ರ ಇರುವಲ್ಲೆಲ್ಲ ನುಸುಳುವುದಷ್ಟೇ ಅದರ ಗುರಿ. ಲೋಹದ ಹಾಳೆಯ ಮುಖಗವಸುಗಳನ್ನು ಗುಡಿ-ವೃತ್ತದಲ್ಲಿ ನಿಲ್ಲಿಸಿರುವ ಪ್ರತಿಮೆಗಳಿಗೆ ತೊಡಿಸಬಹುದೇ ವಿನಾ ಮನುಷ್ಯರಿಗೆ ಅದರಿಂದ ಉಪಯೋಗವಿಲ್ಲ. ಇನ್ನಾದರೂ ಭಾರತೀಯರು ತಮ್ಮ ಅವೈಜ್ಞಾನಿಕ ತಿಳಿವಳಿಕೆ, ಪ್ರಚಾರಪ್ರಿಯತೆ, ಸಿರಿವಂತಿಕೆಯ ಪ್ರದರ್ಶನ ಮತ್ತು ಆಭರಣಪ್ರಿಯತೆಯನ್ನು ಕಡಿಮೆ ಮಾಡಿಕೊಳ್ಳಬೇಕು.

ನಾವು ಆಮ್ಲಜನಕ ಪೂರೈಕೆಗೆ ಶುದ್ಧಗಾಳಿ ಉಸಿರಾಡಬೇಕು, ಇಂಗಾಲ ಹೊರಬಿಡಬೇಕು. ಆದರೆ ಕೊರೊನಾ ವೈರಸ್ ಮೂಗು-ಬಾಯಿಯ ಮೂಲಕ ಒಳಹೊರ ಹೋಗಬಾರದು- ಇದು ಮುಖಗವಸು ತೊಡುವುದರ ಹಿಂದಿನ ಉದ್ದೇಶ. ಮೂರು ಪದರದ ಬಟ್ಟೆಯ ಮುಖಗವಸು ಅಥವಾ ಎನ್-95 ಬಳಸಿ ಬಿಸಾಡುವ ಮುಖಗವಸು ತೊಟ್ಟರಷ್ಟೇ ಕೋವಿಡ್- 19ನಿಂದ ಕಾಪಾಡಿಕೊಳ್ಳಲು ಸಾಧ್ಯ. ಹೊರಹೋಗುವಾಗ ತೊಟ್ಟ ಮುಖಗವಸನ್ನು ಮನೆಯೊಳಗೆ ಬಂದದ್ದೇ ಎಲ್ಲೆಂದರಲ್ಲಿ ಬಿಸಾಡುವುದು, ಸಿಕ್ಕಸಿಕ್ಕ ಬಟ್ಟೆತುಂಡಿನಿಂದ ಮುಖ ಮುಚ್ಚಿಕೊಂಡು ನಂತರ ಕೈಚೀಲ-ಕಿಸೆಗೆ ತುರುಕಿಕೊಳ್ಳುವುದು, ಉಸಿರಾಡಲು ರಂಧ್ರ ಬಿಟ್ಟು ತೊಟ್ಟುಕೊಳ್ಳುವ ಲೋಹ-ಎಲೆ-ಪ್ಲಾಸ್ಟಿಕ್‍ನ ಗಡಸು ಕವಚಗಳನ್ನು ತೊಡುವುದರಿಂದ ಆತ್ಮರಕ್ಷಣೆಗೆ ಏನನ್ನೋ ಮಾಡಿದ ಸಮಾಧಾನ ಸಿಗಬಹುದೇ ಹೊರತು ಕೋವಿಡ್‍ನಿಂದ ನಮ್ಮನ್ನೂ ಸಮಾಜವನ್ನೂ ಕಾಪಾಡಲಾರೆವು. ಬರಬರುತ್ತ ಉಲ್ಬಣವಾಗುತ್ತಿರುವ ಕೊರೊನಾ ಸೋಂಕುಂಟಾಗದಂತೆ ಮುಖಗವಸಿನ ಬಳಕೆಯ ಬಗೆಗೆ ಸೂಕ್ತ ತಿಳಿವಳಿಕೆ ಹೊಂದಿ ವಿವೇಕಯುತವಾಗಿ ವರ್ತಿಸುವುದು ಈಗ ಅವಶ್ಯವಾಗಿದೆ.

-ಡಾ. ಎಚ್.ಎಸ್.ಅನುಪಮಾ,ಕವಲಕ್ಕಿ, ಹೊನ್ನಾವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT