ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನ ಪುಸ್ತಕ ಮಳಿಗೆ: ವೃತ್ತಿಪರತೆ ಇರಲಿ

Last Updated 19 ಜನವರಿ 2020, 20:00 IST
ಅಕ್ಷರ ಗಾತ್ರ

ಕಲಬುರ್ಗಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹತ್ತಿರ ಬರುತ್ತಿದೆ. ಈ ಹೊತ್ತಿನಲ್ಲಿ, ಪುಸ್ತಕ ಪ್ರಕಾಶಕ ಹಾಗೂ ಮಾರಾಟಗಾರನಾದ ನನಗೆ ಸಂಭ್ರಮಕ್ಕಿಂತಲೂ ಹೆಚ್ಚಾಗಿ ಆತಂಕ ಕಾಡುತ್ತಿದೆ. ಕಳೆದ ವರ್ಷ ಧಾರವಾಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳ ಅವ್ಯವಸ್ಥೆಯನ್ನು ನೆನೆಸಿಕೊಂಡರೆ ಮೈಯಲ್ಲಿ ನಡುಕ ಮೂಡುತ್ತದೆ.

ಆ ದೂಳು, ಗದ್ದಲ, ನೂಕುನುಗ್ಗಲು... ಅಬ್ಬಬ್ಬಾ! ಎಷ್ಟೋ ದೇವಸ್ಥಾನದ ಜಾತ್ರೆಗಳಲ್ಲಿ ಹಾಕುವ ಮಳಿಗೆಗಳೂ ಅದಕ್ಕಿಂತ ಹೆಚ್ಚು ವ್ಯವಸ್ಥಿತವಾಗಿರುತ್ತವೆ. ಮೂತ್ರಕ್ಕೆ ಹೋಗುವುದಕ್ಕೂ ಆಸ್ಪದವಿಲ್ಲದಂತೆ ಮೂರು ದಿನದ ನರಕ ದರ್ಶನವನ್ನು ಸಮ್ಮೇಳನದ ಉಸ್ತುವಾರಿ ಸಮಿತಿಯವರು ನಮಗೆ ಮಾಡಿಸಿದ್ದರು. ದೇವರ ದಯೆಯಿಂದ ಯಾವ ಅನಾಹುತವೂ ನಡೆಯಲಿಲ್ಲ. ಏನಾದರೂ ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಆ ನೂಕುನುಗ್ಗಲಿಗೆ ನೂರಾರು ಜನ ಬಲಿಯಾಗುವಂತಹ ಅವ್ಯವಸ್ಥೆ ಅಲ್ಲಿತ್ತು. ಈ ಬಾರಿ ಕಲಬುರ್ಗಿಯಲ್ಲಿ ಯಾವ ಅನಾಹುತ ಕಾದಿದೆಯೋ ಎಂಬ ಆತಂಕ ಎಲ್ಲ ಪುಸ್ತಕ ಮಾರಾಟಗಾರರದೂ ಆಗಿದೆ.

ಈ ಹಿಂದಿನ ಬಹುತೇಕ ಸಾಹಿತ್ಯ ಸಮ್ಮೇಳನಗಳು ಸೊಗಸಾದ ಮಳಿಗೆಗಳನ್ನು ಹಾಕಿಕೊಡಲು ಪ್ರಯತ್ನಿಸಿದ್ದವು. ಸಾಹಿತ್ಯ ಸಮ್ಮೇಳನವೆಂದರೆ ಪುಸ್ತಕ ಸಂಸ್ಕೃತಿಯೇ ಮುಖ್ಯ ಸಂಗತಿಯಾಗಬೇಕು. ಮುಖ್ಯ ವೇದಿಕೆಯ ಥಳುಕು-ಬಳುಕಿನ ಆರ್ಭಟ ತುಸು ತಗ್ಗಿದರೂ ತೊಂದರೆಯಿಲ್ಲ. ಆದರೆ ಪುಸ್ತಕ ಮಳಿಗೆಗಳ ವ್ಯವಸ್ಥೆಯನ್ನು ಕಡೆಗಣಿಸಬಾರದು. ಪುಸ್ತಕ ಮಾರಾಟಗಾರರ ಸಮಸ್ಯೆಗಳನ್ನು ಸಾಮಾನ್ಯವಾಗಿ ಯಾರೂ ಹಚ್ಚಿಕೊಳ್ಳುವುದಿಲ್ಲ.

ಕಳೆದ ವರ್ಷ ಸಮ್ಮೇಳನದ ಅಂಗವಾಗಿ, ಸುಮಂಗಲಿಯರಿಂದ ಕುಂಭ ಮೆರವಣಿಗೆ ನಡೆಸುವುದಕ್ಕೆ ಹಲವಾರು ಸಾಹಿತಿಗಳು ವಿರೋಧ ವ್ಯಕ್ತಪಡಿಸಿ, ಗೌರವಧನ ತಿರಸ್ಕರಿಸಿದ್ದರು. ಇಂತಹ ಮೆರವಣಿಗೆಯಿಂದ ಸುಮಂಗಲಿಯರು, ಅಮಂಗಲಿಯರು ಎಂಬ ತಾರತಮ್ಯ ಎಣಿಸಿದಂತಾಗುತ್ತದೆ ಎಂಬುದು ಅವರ ಆರೋಪವಾಗಿತ್ತು. ಆದರೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ಹಲವು ಪ್ರಾಣಗಳೇ ಹೋಗಬಹುದಾಗಿದ್ದ ಪುಸ್ತಕ ಮಳಿಗೆಗಳ ಅವ್ಯವಸ್ಥೆಯಂತಹ ಗಂಭೀರ ಸಂಗತಿಯ ಕುರಿತು ಯಾವೊಬ್ಬ ಸಾಹಿತಿಯೂ ವಿರೋಧ ವ್ಯಕ್ತಪಡಿಸುವ ಗೋಜಿಗೆ ಹೋಗಿರಲಿಲ್ಲ.

ಮಾರಾಟಗಾರರ ಸಮಸ್ಯೆಯು ಯಾವ ಪಂಥದ ಅಜೆಂಡಾಗಳಿಗೂ ಸರಿಹೋಗುವುದಿಲ್ಲವಾದ ಕಾರಣ, ಅದೆಷ್ಟೇ ಗಂಭೀರವಾಗಿದ್ದರೂ ಅದಕ್ಕೆ ವಿರೋಧ ವ್ಯಕ್ತವಾಗುವುದು ಅಪರೂಪ. ಈ ಬಾರಿ ಹಾಗಾಗದೆ, ಕಲಬುರ್ಗಿ ಸಮ್ಮೇಳನದ ಕಾರ್ಯಕರ್ತರು ನಮಗೆ ಒಳ್ಳೆಯ ಅನುಭವವನ್ನು ನೀಡುತ್ತಾರೆ ಮತ್ತು ಅಂತರರಾಷ್ಟ್ರೀಯ ಮಟ್ಟದ ಮಳಿಗೆಗಳನ್ನು ವೃತ್ತಿಪರರಿಂದ ಮಾಡಿಸುತ್ತಾರೆ ಎನ್ನುವ ಆಶಾಭಾವನೆ ನನಗಿದೆ.

-ವಸುಧೇಂದ್ರ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT