ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಕೋವಿಡ್‌ ಪರಿಹಾರ: ತರತಮ ಸಲ್ಲ

Last Updated 15 ಜೂನ್ 2021, 19:31 IST
ಅಕ್ಷರ ಗಾತ್ರ

ಕುಟುಂಬವನ್ನು ಆರ್ಥಿಕವಾಗಿ ಸಲಹುತ್ತಿದ್ದ ವ್ಯಕ್ತಿ ಕೋವಿಡ್‌ನಿಂದ ಮೃತಪಟ್ಟಿದ್ದರೆ ಅವಲಂಬಿತರಿಗೆ ತಲಾ
₹ 1 ಲಕ್ಷ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ (ಪ್ರ.ವಾ., ಜೂನ್‌ 15). ಇದು ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಮಾತ್ರ ಅನ್ವಯವಾಗಲಿದ್ದು, ಇದಕ್ಕೆ ಅಂದಾಜು ₹ 300 ಕೋಟಿ ಬೇಕಾಗಬಹುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಇದು ಅತ್ಯಂತ ಶ್ಲಾಘನೀಯ ಕಾರ್ಯ.

ಆರೋಗ್ಯ ಇಲಾಖೆ ಲೆಕ್ಕದ ಪ್ರಕಾರ, ಜೂನ್‌ 14ರವರೆಗೆ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 33,033. ಇವರಲ್ಲಿ ಎಷ್ಟು ಜನ ಬಿಪಿಎಲ್ ಕಾರ್ಡ್ ಹೊಂದಿದ್ದರು? ಒಂದೇ ಕುಟುಂಬದಲ್ಲಿ ಮೂರ್ನಾಲ್ಕು ಜನ ಮರಣ ಹೊಂದಿದವರು ಇದ್ದಾರಲ್ಲವೇ? ಈ ಮೃತರಲ್ಲಿ ಪರಿಹಾರ ಪಡೆಯಲು ಆಗದಂತಹ ಬಹಳಷ್ಟು ಮಕ್ಕಳು, ವಯೋವೃದ್ಧರು, ನಿರುದ್ಯೋಗಿ ಯುವಕರು ಕೂಡಾ ಇದ್ದರಲ್ಲವೇ? ಇವರಾರಿಗೂ ಈ ಪರಿಹಾರ ಸಿಗಲಾರದು. ಆದ್ದರಿಂದ ಈ ಯೋಜನೆಗೆ ₹ 300 ಕೋಟಿಯಷ್ಟು ಹಣದ ಅವಶ್ಯಕತೆ ಇಲ್ಲ. ₹ 150 ಕೋಟಿಯಿಂದ 200 ಕೋಟಿ ಆಗಬಹುದು.

ಆದರೆ, ನಿಜವಾಗಿಯೂ ಕೋವಿಡ್ ಉತ್ತುಂಗದ ಸ್ಥಿತಿಯಲ್ಲಿ ಇದ್ದಾಗ ಬೆಡ್ ಮತ್ತು ಆಮ್ಲಜನಕ ಸಿಗದೆ ಬಹಳಷ್ಟು ಜನರು ಮನೆಯಲ್ಲಿ, ಆಸ್ಪತ್ರೆಯ ಕಾರಿಡಾರ್‌ಗಳಲ್ಲಿ, ಆಂಬುಲೆನ್ಸ್‌ಗಳಲ್ಲಿ, ರಸ್ತೆಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಾವುಗಳು ಕೋವಿಡ್‌ನಿಂದ ಆದವು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಯಾಕೆಂದರೆ ಇವರೆಲ್ಲಾ ಕೋವಿಡ್ ಪರೀಕ್ಷೆ ಮಾಡುವ ಮೊದಲೇ ಅಥವಾ ಫಲಿತಾಂಶ ಬರುವ ಮೊದಲೇ ಹಾಗೂ ಫಲಿತಾಂಶ ನೆಗೆಟಿವ್ ಬಂದು, ಉಸಿರಾಟದ ತೊಂದರೆಯಿಂದ ಜೀವ ತೆತ್ತಿದ್ದಾರೆ. ಇಂತಹವರಿಗೆ ಈ ಪರಿಹಾರ ಸಿಗಲಾರದು. ಕೋವಿಡ್‌ನಿಂದ ಸತ್ತವರ ಅಧಿಕೃತ ಲೆಕ್ಕಕ್ಕಿಂತ ದುಪ್ಪಟ್ಟು ಜನ ಈ ಮಹಾಮಾರಿಯಿಂದ ಸತ್ತಿದ್ದಾರೆ. ಅಂತಹ ಎಲ್ಲಾ ಬಡ ಕುಟುಂಬಗಳಿಗೆ ಪರಿಹಾರ ಸಿಗಬೇಕು. ಈ ದಿಸೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಆಸಕ್ತಿ ವಹಿಸಬೇಕು. ಸರ್ಕಾರ ಈ ಕುರಿತು ಮತ್ತೊಮ್ಮೆ ಪರಾಮರ್ಶೆ ನಡೆಸಲಿ.

- ವಿ.ತಿಪ್ಪೇಸ್ವಾಮಿ,ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT