ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಮಾಧ್ಯಮ: ಹಿನ್ನೆಲೆ ಅರಿಯಿರಿ

Last Updated 28 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಶಿಕ್ಷಣವನ್ನು ಜಾರಿಮಾಡುವ ಸರ್ಕಾರದ ತೀರ್ಮಾನವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧಿಸಿರುವುದು ಸ್ವಾಗತಾರ್ಹ ನಡೆ.

ನಮ್ಮ ದೇಶದಲ್ಲಿ ಆಧುನಿಕ ಶಿಕ್ಷಣ ಪದ್ಧತಿ ಜಾರಿಗೊಂಡ ಆರಂಭದ ದಿನಗಳಲ್ಲಿ ಇಂಗ್ಲಿಷ್ ಶಿಕ್ಷಣಕ್ಕೆ ಮಹತ್ವವಿತ್ತಾದರೂ ಕ್ರಮೇಣ ಆ ಒಲವು ಭಾರತೀಯ ಭಾಷೆಗಳತ್ತ ತಿರುಗಿತು. ಲಾರ್ಡ್ ಮೆಕಾಲೆ 1835ರಲ್ಲಿ ಭಾರತದಲ್ಲಿ ಇಂಗ್ಲಿಷ್ ಶಿಕ್ಷಣವನ್ನು ಜಾರಿಗೊಳಿಸಿದಾಗ, ವಿದ್ಯಾರ್ಥಿಗಳು ತಮ್ಮದಲ್ಲದ ಭಾಷೆಯಲ್ಲಿ ಆಧುನಿಕ ಶಿಕ್ಷಣ ಪಡೆಯಲು ಇನ್ನಿಲ್ಲದ ಪಡಿಪಾಟಲು ಪಟ್ಟಿರಬೇಕೆಂದು ತೋರುತ್ತದೆ. ಆದುದರಿಂದಲೇ 1854ರ ವುಡ್ ಪತ್ರದಲ್ಲಿ (Wood's Despatch), ‘ಆಧುನಿಕ ಕಲೆ, ವಿಜ್ಞಾನ, ಸಿದ್ಧಾಂತ, ಸಾಹಿತ್ಯಗಳನ್ನು ಅಂದರೆ, ಐರೋಪ್ಯ ಜ್ಞಾನವನ್ನು ಭಾರತೀಯ ಭಾಷೆಗಳಲ್ಲೂ ಒದಗಿಸಬಹುದು. ದೇಶಿ ಭಾಷೆಯ ಸ್ಥಾನವನ್ನು ಇಂಗ್ಲಿಷ್ ಆಕ್ರಮಿಸಬೇಕೆಂಬುದು ನಮ್ಮ ಬಯಕೆಯಲ್ಲ. ಜನರ ಭಾಷೆ ಪ್ರಾಮುಖ್ಯ ಪಡೆಯಬೇಕೆಂಬುದೇ ನಮ್ಮ ಅಭಿಲಾಷೆ’ ಎಂದು ಹೇಳಲಾಗಿದೆ. ಇದೇ ಅಭಿಪ್ರಾಯವನ್ನು1862ರಲ್ಲಿ ಮುಂಬೈ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಬರ್ಟಲ್‌ ಫ್ರೆರ್‌ ತಳೆದಿದ್ದ. ಆತ ವಿಶ್ವವಿದ್ಯಾಲಯದ ಅಂದಿನ ಪರೀಕ್ಷಾ ಫಲಿತಾಂಶವನ್ನು ಗಮನಿಸಿ (ಮೊದಲ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ 132 ವಿದ್ಯಾರ್ಥಿಗಳಲ್ಲಿ 100 ಮಂದಿ ಅನುತ್ತೀರ್ಣರಾಗಿದ್ದರು) ‘ಬಹುತೇಕ ಭಾರತೀಯರು ಬಾಲ್ಯದಿಂದಲೂ ಕಲಿತ ಭಾಷೆಯಲ್ಲಿ ಚೆನ್ನಾಗಿ ಅಭ್ಯಾಸ ಮಾಡಬಲ್ಲರು. ಆದ್ದರಿಂದ ಪಾಶ್ಚಾತ್ಯ ಕಲೆ, ವಿಜ್ಞಾನ, ಸಂಸ್ಕೃತಿಗಳನ್ನು ಮಾತೃಭಾಷೆಯಲ್ಲೇ ಬೋಧಿಸಬೇಕು’ ಎಂದು ಹೇಳಿದ್ದ.

ಮಾತೃಭಾಷಾ ಶಿಕ್ಷಣದ ವಿಷಯದಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದ ಆಯೋಗವೊಂದರ ವರದಿಯೂ ಗಮನಾರ್ಹವಾದುದು. ಆಯೋಗವು ಕ್ರಿ.ಶ. 1854ರ ‘ವುಡ್ಸ್ ಡಿಸ್‍ಪ್ಯಾಚ್’ ಉಲ್ಲೇಖಿಸಿ, ‘ಶಿಕ್ಷಣದ ಒಂದು ಹಂತವನ್ನು ಮುಗಿಸಿದ ನಂತರವೂ ವಿದ್ಯಾರ್ಥಿಗಳು ಮಾತೃ ಭಾಷೆಯಲ್ಲಿ ಸುಲಲಿತವಾಗಿ ಮಾತನಾಡಲು, ಬರೆಯಲು ವಿಫಲರಾದಲ್ಲಿ ಆ ಶಿಕ್ಷಣ ಕ್ರಮದಲ್ಲಿ ದೋಷವಿದೆ ಎಂದು ತೀರ್ಮಾನಿಸಬಹುದು’ ಎಂಬ ಅಭಿಪ್ರಾಯವನ್ನು ತಳೆದಿದೆ. ಈ ಆಯೋಗವು ಮಾತೃಭಾಷಾ ಶಿಕ್ಷಣದ ಅಗತ್ಯದ ಬಗ್ಗೆ ನೀಡಿರುವ ಎರಡು ಕಾರಣಗಳು ಗಮನಾರ್ಹ. ಮೊದಲನೆಯದು, ‘ಮಾತೃಭಾಷೆಗಳು ಶಿಕ್ಷಣದ ಸರ್ವ ಹಂತಗಳಲ್ಲೂ ಮಾಧ್ಯಮವಾಗಲು ಸ್ವಾಭಾವಿಕವಾಗಿಯೇ ಯೋಗ್ಯವಾದವುಗಳು’. ಎರಡನೆಯದೆಂದರೆ, ‘ಸೃಷ್ಟ್ಯಾತ್ಮಕವಾದ ಮತ್ತು ಸ್ವಂತಿಕೆಯಿಂದ ಕೂಡಿದ ಬರವಣಿಗೆಯು ಅನ್ಯಭಾಷೆಯಲ್ಲಿ ಸಾಧ್ಯವಾಗದು. ಪರಕೀಯ ಭಾಷೆಯನ್ನು ಹೇರಿದಲ್ಲಿ ವ್ಯಕ್ತಿಯ ಬೌದ್ಧಿಕ ಶಕ್ತಿ ಕುಗ್ಗಿ, ಕುಸಿದು ನಿರ್ನಾಮವಾಗಿಹೋಗಬಹುದು’ ಎಂಬುದು.

ಈ ಐತಿಹಾಸಿಕ ಹಿನ್ನೆಲೆಯಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಮಾತೃಭಾಷಾ ಮಾಧ್ಯಮ ಅನುಷ್ಠಾನದ ಬಗ್ಗೆ ಸಕಾರಾತ್ಮಕ ಹೆಜ್ಜೆಯನ್ನಿಡುವುದು ಇಂದಿನ ಸರ್ಕಾರದ ಕರ್ತವ್ಯವಾಗಿದೆ.

-ಹೊರೆಯಾಲ ದೊರೆಸ್ವಾಮಿ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT