ಸೋಮವಾರ, ಅಕ್ಟೋಬರ್ 19, 2020
24 °C

ನಕಾರಾತ್ಮಕ ನೆಲೆಯಲ್ಲಿ ಸ್ತ್ರೀವಾದ

ವಾಚಕರವಾಣಿ Updated:

ಅಕ್ಷರ ಗಾತ್ರ : | |

ಮಹಿಳೆಯರ ಮೇಲಿನ ಶೋಷಣೆಯ ವಿರುದ್ಧ ಸೆಣಸುವುದು ಸ್ತ್ರೀವಾದದ ಮುಖ್ಯ ಗುರಿ. ಲಿಂಗಭೇದವನ್ನು ಸರಿಪಡಿಸಲು ಪ್ರಯತ್ನಿಸುವುದು ಅದರ ಮುಖ್ಯವಾದ ಸದುದ್ದೇಶಗಳಲ್ಲಿ ಒಂದು. ವಿಶ್ವದಲ್ಲಿ ಹಿಂದಿನಿಂದಲೂ ಸ್ತ್ರೀಕುಲಕ್ಕಾದ ಅನ್ಯಾಯವು ಒಂದು ಚಾರಿತ್ರಿಕ ದುರಂತ ಎನ್ನುವ ನೆಲೆಯಲ್ಲಿಯೇ ಸ್ತ್ರೀವಾದದ ಧ್ವನಿ ಹೊರಹೊಮ್ಮುತ್ತದೆ. ಈ ಬಗ್ಗೆ ಅನೇಕ ಸ್ತ್ರೀವಾದಿ ಚಿಂತಕರು ತಮ್ಮದೇ ಆದ ಅನುಭವ ಮತ್ತು ಆಯಾ ಕಾಲಘಟ್ಟದ ಕೆಲವು ವಿದ್ಯಮಾನಗಳನ್ನು ಆಧರಿಸಿ ವಿಶ್ಲೇಷಿಸಿದ್ದಾರೆ. ಆದರೆ ಸ್ತ್ರೀವಾದದ ನೆಲೆಯ ಪ್ರಮುಖ ಆಯಾಮಗಳು ಇತ್ತೀಚಿನ ದಿನಗಳಲ್ಲಿ ಬೇರೆಯದೇ ಸ್ವರೂಪ ಪಡೆಯುತ್ತಿವೆ. ನಕಾರಾತ್ಮಕ ನೆಲೆಯಲ್ಲಿ ಸ್ತ್ರೀವಾದದ ಆಶಯಗಳು ಹೇಗೆ ನಲುಗುತ್ತವೆ ಮತ್ತು ಅದರ ಅಡ್ಡ ಪರಿಣಾಮಗಳೇನು ಎಂಬುದನ್ನು ಚರ್ಚಿಸಬೇಕಾದ ಅಗತ್ಯ ಇಂದಿನ ತುರ್ತುಗಳಲ್ಲೊಂದು.

ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ಪ್ರಮುಖ ಆರೋಪಿ ರಿಯಾ ಚಕ್ರವರ್ತಿ ವಿಚಾರಣೆಗೆ ಹಾಜರಾದಾಗ ಧರಿಸಿದ್ದ ಟಿ– ಷರ್ಟ್ ಮೇಲೆ ಬರೆದಿದ್ದ ‘ನಾನು ಮತ್ತು ನೀವು ಪಿತೃಪ್ರಭುತ್ವವನ್ನು ಒಡೆಯೋಣ’ ಎಂಬ ಸಾಲುಗಳು ಸ್ತ್ರೀಪರ ಚಿಂತನೆಗೆ ಮರುಜೀವ ತುಂಬಿವೆ ಎಂದು ರೇಣುಕಾ ನಿಡಗುಂದಿ ಬರೆದಿದ್ದಾರೆ! (ಸಂಗತ, ಸೆ. 23). ಸ್ತ್ರೀಪರ ಕಾಳಜಿಯ ಪ್ರೇರಣೆಯನ್ನು ಕೆಲವರು ಇಂತಹ ಬರಹದಲ್ಲಿ ಕಂಡುಕೊಳ್ಳುವುದು ಅಪಾಯಕಾರಿ ಮನಃಸ್ಥಿತಿ.

ವಿಶ್ವದ ಮಹಿಳೆಯರಲ್ಲಿ ಶೇ 60ರಷ್ಟು ಮಂದಿಯ ಸ್ಥಿತಿಗತಿಯು ಕೋವಿಡ್‌ ಸಂದರ್ಭದಲ್ಲಿ ಆತಂಕಕಾರಿ ಆಗಿರುವ ಬಗ್ಗೆ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‍ ಕಳವಳ ವ್ಯಕ್ತಪಡಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಗರ್ಭ ಧರಿಸುವವರ ಸಂಖ್ಯೆ ಹೆಚ್ಚುತ್ತಿರುವುದು, ಆರ್ಥಿಕ ಕುಸಿತದಿಂದ ಲಕ್ಷಾಂತರ ಮಹಿಳೆಯರು ಉದ್ಯೋಗ ಕಳೆದುಕೊಂಡಿರುವುದರತ್ತ ವಿಶ್ವಸಂಸ್ಥೆ ಬೊಟ್ಟು ಮಾಡಿದೆ. ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಉದ್ದೇಶದ ಮಸೂದೆ ನನೆಗುದಿಗೆ ಬಿದ್ದಿದೆ. ಇಂದು ಸ್ತ್ರೀವಾದ ಬಹುಮುಖ್ಯವಾದ ಇಂತಹ ನೆಲೆಗಳನ್ನು ಗುರಿಯಾಗಿ ಇಟ್ಟುಕೊಳ್ಳದೆ, ಸೆಲೆಬ್ರಿಟಿಗಳ ಪ್ರಕರಣಗಳನ್ನು ವಿಶ್ಲೇಷಿಸುತ್ತಾ ಹೋದರೆ, ಇದನ್ನು ಸ್ತ್ರೀಪರ ಕಾಳಜಿ ಎನ್ನಲಾಗದು.

ಉಮೇಶ ಕುಮಾರ ಸೊರಟೂರು, ಶಿವಮೊಗ್ಗ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.