ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಯಾವ ನ್ಯಾಯ ಸ್ವಾಮಿ?

Last Updated 2 ಜೂನ್ 2019, 18:22 IST
ಅಕ್ಷರ ಗಾತ್ರ

ಸನ್ಮಾನ್ಯ ಮುಖ್ಯಮಂತ್ರಿಗಳೇ,

ನಿಮ್ಮ ಸಾಲಮನ್ನಾ ಯೋಜನೆಯಿಂದ ನಮಗಾದ ಉಪಕಾರವೇನು ಗೊತ್ತೇ... ‘ಕಳೆದ ವರ್ಷ ಸಾಲ ಕಟ್ಟಿಲ್ಲ, ಬೇಗ ಕಟ್ಟಿ’ ಎನ್ನುವ ಬ್ಯಾಂಕ್‌ನವರ ಪತ್ರ ಮತ್ತು ಅದಕ್ಕಾಗಿ ಹಾಕಿರುವ ದಂಡ.

ನಾವು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನಲ್ಲಿ ಕೃಷಿ ಮಾಡುತ್ತಿದ್ದೇವೆ. ಪ್ರತಿವರ್ಷ ಹೇಗೋ ಮಾಡಿ ಕೃಷಿ ಸಾಲವನ್ನು ಸರಿಯಾದ ಸಮಯಕ್ಕೆ ರಿನ್ಯೂವಲ್ ಮಾಡಿಟ್ಟುಕೊಂಡು ಬಂದಿದ್ದೆವು. 2018ರ ಮಾರ್ಚ್‌ನಲ್ಲಿ ಸಾಲಮನ್ನಾದ ಸುದ್ದಿ ಹುಟ್ಟಿತು. ಆಗ ನಮಗೆ ಸರ್ಕಾರದಿಂದ, ಬ್ಯಾಂಕ್‌ನಿಂದ ನಿರ್ದಿಷ್ಟ ಮಾಹಿತಿ ಸಿಗದೇ ರಿನ್ಯೂವಲ್ ಮಾಡದೇ ಸುಮ್ಮನಾದೆವು.ಈಗ, ಬ್ಯಾಂಕ್‌ನವರು ಸಾಲ ಕಟ್ಟಿಲ್ಲ ಎಂಬ ಕಾರಣಕ್ಕೆ ನೋಟಿಸ್ ಕಳಿಸಿದ್ದಾರೆ.

ಪ್ರತಿವರ್ಷ ಸರಿಯಾದ ಸಮಯಕ್ಕೆ ರಿನ್ಯೂವಲ್ ಮಾಡಿದರೆ 7% ಬಡ್ಡಿಯಲ್ಲಿ 3% ಕೇಂದ್ರ ಸರ್ಕಾರದಿಂದ ವಾಪಸ್ ಬರುತ್ತಿತ್ತು. ಅಂದರೆ ನಮಗೆ ಬೀಳುತ್ತಿದ್ದ ಬಡ್ಡಿ 4% ಆಗಿರುತ್ತಿತ್ತು. ಆದರೆ ಈಗ ನಾವು ದಂಡದ ಕಾರಣದಿಂದ 11% ಬಡ್ಡಿ ಕಟ್ಟಬೇಕಾಗಿ ಬಂದಿದೆ. ಇದು ಯಾವ ನ್ಯಾಯ ಸ್ವಾಮಿ? ಇದರ ಜೊತೆಗೆ, 5 ವರ್ಷಕ್ಕೆ ಒಂದು ಸಲ ಸಂಪೂರ್ಣ ಸಾಲ ತೀರಿಸಿ ಹೊಸ ಅಕೌಂಟ್ ಮಾಡಬೇಕು. ಈಗ ನಾವು ಹೊಸ ಅಕೌಂಟ್ ಮಾಡಿದರೆ, ಇಷ್ಟು ವರ್ಷ ಸರಿಯಾಗಿ ರಿನ್ಯೂವಲ್ ಮಾಡಿದ್ದಕ್ಕಾಗಿ ಸಿಗುವ 25 ಸಾವಿರ ರೂಪಾಯಿ (ಸಿಗುವಂಥದ್ದೇನಾದರೂ ಇದ್ದರೆ) ಹಳೆಯ ಅಕೌಂಟ್‌ಗೇ ಬರುವುದಂತೆ. ಆಗ ಹಳೆಯ ಅಕೌಂಟ್ ಕ್ಲೋಸ್ ಆಗಿದ್ದರೆ ಆ ಹಣ ಬರುವುದಿಲ್ಲ.

ನಾವು ಸಾಲಮನ್ನಾ ಮಾಡಿ ಅಂತ ಎಂದಾದರೂ ಕೇಳಿದ್ದೆವಾ? ಕಷ್ಟವೋ ಸುಖವೋ ಪ್ರತಿವರ್ಷ ಸಾಲ ರಿನ್ಯೂವಲ್ ಮಾಡಿಕೊಂಡು ಬಡ್ಡಿ ಕಡಿಮೆ ಮಾಡಿಕೊಂಡಿದ್ದೆವು. ನಿಮ್ಮ ರಾಜಕೀಯಕ್ಕಾಗಿ ಯಾಕೆ ಕೃಷಿಕರಿಗೆ ತೊಂದರೆ ಕೊಡುತ್ತೀರಿ? ನಿಮ್ಮ ಸಾಲ ಮನ್ನಾದ ಹೆಸರಲ್ಲಿ ದಂಡ ಕಟ್ಟಬೇಕಾಗಿ ಬಂದಿರುವ ನಮ್ಮ ಪರಿಸ್ಥಿತಿಗೆ ಯಾರು ಕಾರಣ? ಇದರ ನಡುವೆ ‘ನೀವು ಸಾಲಮನ್ನಾದ ಫಲಾನುಭವಿಗಳು’ ಎನ್ನುವ ನಿಮ್ಮ ಚುನಾವಣಾ ಗಿಮಿಕ್‌ನ ಪತ್ರ. ಈಗ ಇಲ್ಲಿನಾವೇನು ಮಾಡಬೇಕು? ನಮಗಾಗಿರುವ ಅನ್ಯಾಯಕ್ಕೆ, ನಷ್ಟಕ್ಕೆ ಹೊಣೆ ಯಾರು? ಉತ್ತರ ನೀಡುವಸೌಜನ್ಯ ತೋರಿ.

ವಾಣಿ ಶ್ರೀಹರ್ಷ,ಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT