ಗುರುವಾರ , ಮೇ 6, 2021
23 °C

ಭಯ, ಸಂಶಯಕ್ಕೆ ಬೇಕು ಮಾಹಿತಿ ಮದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋವಿಡ್‌ ಕಾಲದ ನೂರೊಂದು ಅಭಾವಗಳಲ್ಲಿ ಮಾಹಿತಿ ಅಭಾವವೇ ಅತ್ಯಂತ ದುರ್ಭರವಾಗಿದೆ. ಭಯಗ್ರಸ್ತರಿಗೆ ನೂರೊಂದು ಬಗೆಯ ಮಾಹಿತಿ, ಮಾರ್ಗಸೂಚಿ ಬೇಕಾಗಿದೆ. ಉದಾಹರಣೆಗೆ, ಅಂಗಡಿಯಲ್ಲಿ ಸಿಗುವ ಸ್ಟೀರಾಯ್ಡ್‌ ಔಷಧವನ್ನು ಬಳಸಬಹುದೇ? ಅದರ ಅಡ್ಡ ಪರಿಣಾಮ ಏನು? ಮನೆಯಲ್ಲಿ ವೆಂಟಿಲೇಟರ್‌ ಇಲ್ಲದೆಯೂ ಉಸಿರೆಳೆತದ ಪ್ರಮಾಣವನ್ನು ಹೆಚ್ಚಿಸುವ ಸರಳ ಉಪಾಯ ಏನು? ಆಕ್ಸಿಮೀಟರ್‌ ಇಲ್ಲದಾಗ ರಕ್ತದಲ್ಲಿ ಆಮ್ಲಜನಕದ ಕೊರತೆಯನ್ನು ಹೇಗೆ ಗುರುತಿಸಬಹುದು? ಜೊತೆಗೆ ತೀರ ಸರಳ ಪ್ರಶ್ನೆಗಳಾದ (1) ಮನೆಯ ನಾಯಿಗೂ ಅಥವಾ ನಾಯಿಯ ಮೂಲಕವೂ ಕೊರೊನಾ ಬಂದೀತೆ? (2) ಲಸಿಕೆ ಹಾಕಿಸಿಕೊಂಡರೂ ಮುಖವಾಡ ಬೇಕೇಕೆ? (3) ಬೀದಿ ಬದಿಯಲ್ಲಿ ಕಲ್ಲಂಗಡಿ ತಿನ್ನಬಹುದೇ? (4) ಹಬೆಸ್ನಾನ ಎಂದರೇನು? ಇತ್ಯಾದಿಗಳಿಗೂ ಉತ್ತರ ಬೇಕಾಗಿದೆ. ಪತ್ರಿಕೆ
ಗಳಲ್ಲಿ, ಆಕಾಶವಾಣಿಯಲ್ಲಿ ಎಂದೋ ಉತ್ತರ ಬಂದಿರುತ್ತ ದಾದರೂ ಬೇಕೆಂದಾಗ ಸಿಗುವುದಿಲ್ಲ. ವಾಹಿನಿಗಳ ಚೀರಾಟದಲ್ಲಿ ಜನಕ್ಕೆ ಬೇಕಿದ್ದ ಮಾಹಿತಿಗಳು ಮಾತ್ರ ಸಿಗುವುದಿಲ್ಲ.

ದೂರದರ್ಶನದವರು ಈ ತುರ್ತುಸ್ಥಿತಿಯಲ್ಲಿ ತಮ್ಮ ಹಾಡು-ಕುಣಿತ, ಥಟ್ಟಂತಗಳನ್ನೆಲ್ಲ ಲಾಕ್‌ಡೌನ್‌ ಮಾಡಿ, ಸಹಾಯವಾಣಿ ತೆರೆದಿಟ್ಟು ಇಂಥ ನೂರಾರು ಸರಳ ಪ್ರಶ್ನೆಗಳನ್ನು ತಾವೇ ಕೇಳುತ್ತ, ಉತ್ತರ ಹೇಳುತ್ತ, ತಪ್ಪು ಕಲ್ಪನೆಯನ್ನು ನಿವಾರಿಸುತ್ತ (ಹೇಳಿದ್ದನ್ನೇ ಬೇಕಿದ್ದರೆ ಮತ್ತೆ ಮತ್ತೆ ಹೇಳುತ್ತ) ಹೋಗಬೇಕು. ಯಾವ ಹೊತ್ತಿನಲ್ಲಿ ಸ್ವಿಚಾನ್‌ ಮಾಡಿದರೂ ಒಂದಿಷ್ಟು ಮಾಹಿತಿ ಸಿಗುವ ವ್ಯವಸ್ಥೆ ಮಾಡಬೇಕು.

- ನಾಗೇಶ ಹೆಗಡೆ, ಕೆಂಗೇರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.