ಗುರುವಾರ , ಮೇ 26, 2022
23 °C

ಶುದ್ಧ ಭಾಷೆ: ವಾದವಿವಾದ ಬೇಡವೆಂದರೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಅವರ ‘ಶುದ್ಧ ಕನ್ನಡ’ ಕುರಿತ ಅಭಿಪ್ರಾಯಕ್ಕೆ ಅನೇಕ ಪ್ರತಿಕ್ರಿಯೆಗಳು ಬಂದಿವೆ. ಭಾಷೆಯ ಶುದ್ಧತೆಯ ಬಗ್ಗೆ ಹಿಂದಿನಿಂದಲೂ ಅನೇಕರು ಹೇಳುತ್ತಲೇ ಬಂದಿದ್ದಾರೆ. ಪ್ರೊ. ಅಬ್ದುಲ್ ರೆಹಮಾನ್ ಪಾಷ ಅವರು ಹೇಳಿದಂತೆ (ಸಂಗತ, ಡಿ. 10) ಒಂದು ಭಾಷೆ ಹರಿಯುವ ನದಿಯಿದ್ದಂತೆ ಎಂಬ ಮಾತು ನಿಜ. ಹೀಗೆಯೇ ಕನ್ನಡವೂ ಬೆಳೆದಿದೆ. ಪ್ರಾದೇಶಿಕ ವ್ಯತ್ಯಾಸದಿಂದ ಹಲವು ಬಗೆಯ ಕನ್ನಡಗಳು ಬಂದಿರುವುದೂ ಉಂಟು. ಹಾಗೆಯೇ ಪ್ರತೀ ಕುಟುಂಬದಲ್ಲಿ ಒಬ್ಬೊಬ್ಬರಿಗೂ ಅವರದ್ದೇ ಆದ ಶಬ್ದಕೋಶ,ಉಚ್ಚಾರಣೆಯಲ್ಲಿ ವ್ಯತ್ಯಾಸವಿರುತ್ತದೆ. ಹಾಗೆಂದೇ ಯಾವುದನ್ನೂ ‘ಶುದ್ಧ’ ಅಥವಾ ‘ಅಶುದ್ಧ’ ಎನ್ನಲಾಗುವುದಿಲ್ಲ ಎಂಬುದು ಒಂದು ದೃಷ್ಟಿಯಿಂದ ನಿಜ. ಆದರೆ, ಒಟ್ಟಾರೆ ಎಲ್ಲ ಪ್ರದೇಶಗಳ ಕನ್ನಡಿಗರಿಗೂ ಅರ್ಥವಾಗುವ ಒಂದು ರೂಪ ಇರುತ್ತದೆ ಮತ್ತು ಅದು ಬೇಕೂ ಆಗುತ್ತದೆ. ಅದು ಪತ್ರಿಕಾಭಾಷೆಯ ರೀತಿಯದೂ ಇರಬಹುದು ಇಲ್ಲವೆ ಅಕಡೆಮಿಕ್ ರೀತಿಯದೂ ಇರಬಹುದು.

ಧಾರವಾಡದ ವ್ಯಕ್ತಿಯೋ ಕಲಬುರಗಿಯ ವ್ಯಕ್ತಿಯೋ ಬೆಂಗಳೂರಿನಲ್ಲಿ ಮಾತನಾಡುವಾಗ, ಉಪನ್ಯಾಸ ಕೊಡುವಾಗ ತನ್ನ ಮಾತು ಎಲ್ಲರಿಗೂ ಅರ್ಥವಾಗಲಿ ಎಂದು ಪ್ರಾದೇಶಿಕ ವೈಲಕ್ಷಣ ಬದಿಗಿಟ್ಟು ಒಂದು ಏಕರೂಪದ ಭಾಷೆಯಲ್ಲಿ ಮಾತನಾಡಬೇಕಾಗುತ್ತದೆ. ಹಾಗೆಯೇ ಪ್ರಾದೇಶಿಕ ಭಿನ್ನತೆಯ ಜನ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋದಾಗ, ಅವರ ಕಡೆಯ ಭಾಷೆ ಅಲ್ಲಿಯವರಿಗೆ ಅರ್ಥವಾಗಲು ಕಷ್ಟವಾಗಬಹುದು. ಇದೆಲ್ಲವೂ ಸಹಜವೇ. ಜೊತೆಗೆ ಬೇರೆ ಭಾಷೆಯ ಶಬ್ದಗಳು ಕನ್ನಡಕ್ಕೆ ಬಂದಾಗ ಅವು ತಮ್ಮ ಮೂಲ ರೂಪದಲ್ಲೋ ಅಥವಾ ತದ್ಭವ ರೂಪದಲ್ಲೋ ಬರುವುದು ಸಹಜ. ಅಂಥ ರೂಪಗಳು ಎಲ್ಲರಿಂದಲೂ ಒಪ್ಪಿತವಾಗಿರುತ್ತವೆ. ಅವನ್ನು ಅದೇ ರೂಪದಲ್ಲಿ ಬರೆಯುವುದಾಗಲೀ ಉಚ್ಚರಿಸುವುದಾಗಲೀ ಮಾಡಿದರೆ ಅವಕ್ಕೆ ನ್ಯಾಯ ಸಲ್ಲಿಸಿದಂತಾಗುತ್ತದೆ. ಉಚ್ಚಾರಣೆಯ ವ್ಯತ್ಯಾಸ ಶಬ್ದರೂಪವನ್ನು ಕೆಡಿಸುತ್ತದೆ. ಉಚ್ಚಾರಣೆಯನ್ನೇ ಬರಹವು ಅನುಸರಿಸಿದರೆ, ಅರ್ಥವು ಅನರ್ಥವಾಗುತ್ತದೆ.

ಧನ ಎಂಬುದನ್ನು ದನ ಎಂದು ಉಚ್ಚರಿಸಿದಂತೆಯೇ ಬರೆದರೆ ಆಗುವ ಅನರ್ಥದ ಬಗ್ಗೆ ಹೇಳಬೇಕಾಗಿಲ್ಲ. ಹಾಗೆಯೇ ಆಸನವನ್ನು ಹಾಸನವೆಂದೂ ಅಥವಾ ಹಾಸನವನ್ನು ಆಸನವೆಂದೂ, ಭಾಷೆ ಎನ್ನುವುದನ್ನು ಬಾಸೆ ಎಂದೂ, ಬಡವ ಎಂಬುದನ್ನು ಭಡವ ಎಂದೂ ಬರೆದರೆ ಅಥವಾ ಉಚ್ಚರಿಸಿದರೆ ಏನೇನು ವೈಪರೀತ್ಯಗಳಾಗಬಹುದು ಎಂಬುದನ್ನು ವಿವರಿಸಬೇಕಾಗಿಲ್ಲ. ಆ ಕಾರಣದಿಂದಲೇ ಭಾಷೆಯ ವಿಚಾರದಲ್ಲಿ ಮಹೇಶ್ ಜೋಶಿಯವರು ಹೇಳಿರುವುದರಲ್ಲಿ ಅಸಂಗತವೇನೂ ಇಲ್ಲ.

‘ಅ’ಕಾರ ‘ಹ’ಕಾರಗಳ ವ್ಯತ್ಯಾಸವಿಲ್ಲದೆ ಬರೆದರೆ ಉತ್ತರಪತ್ರಿಕೆಗಳ ಮೌಲ್ಯಮಾಪನ ಮಾಡುವುದು ಹೇಗೆ? ಇಂದಿನ ದಿನಗಳಲ್ಲಿ ಇಂಗ್ಲಿಷ್ ಮಾಧ್ಯಮ ಪ್ರಧಾನವಾಗಿ, ಅದರ ಕ್ಲಿಷ್ಟ ಶಬ್ದಗಳನ್ನು ಉಚ್ಚರಿಸುವುದು ಕಷ್ಟವೆನಿಸದಿರುವಾಗ, ಕನ್ನಡದ ‘ಅ’ಕಾರ ‘ಹ’ಕಾರಗಳ ಉಚ್ಚಾರಣೆ ಕಷ್ಟವಾಗುವುದು ಹೇಗೆ? ಕನ್ನಡ ಶಬ್ದಗಳ ಉಚ್ಚಾರಣೆ ಕಷ್ಟ ಎನ್ನುವವರು ಇದನ್ನೆಲ್ಲ ಯೋಚಿಸಬೇಕಲ್ಲವೇ? ಪ್ರಾಥಮಿಕ ತರಗತಿಯಲ್ಲಿಯೇ ಉಚ್ಚಾರಣಾ ವ್ಯತ್ಯಾಸಗಳ ಬಗ್ಗೆ ತಿಳಿಸಿ ತಿದ್ದಬೇಕಲ್ಲವೇ? ವರ್ಣಮಾಲೆಯನ್ನಂತೂ ಬದಲಿಸಲಾಗದಷ್ಟೆ? ಅತಿಮುಖ್ಯ ವಿಚಾರವೆಂದರೆ, ಕನ್ನಡ ಭಾಷೆಯಲ್ಲಿಯ ಉಚ್ಚಾರಣೆಯ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ತಿಳಿದುಕೊಂಡು ಪ್ರಾರಂಭದಲ್ಲೇ ಮನಸ್ಸಿಟ್ಟು ತಿದ್ದಿದರೆ, ತಿದ್ದಿಕೊಂಡರೆ ಆಗ ಉಚ್ಚಾರಣೆಯೂ ಸರಿಯಾಗಿರುತ್ತದೆ, ಉಚ್ಚಾರಣೆಯನ್ನು ಅನುಸರಿಸುವ ಬರವಣಿಗೆಯೂ ಸರಿಯಾಗಿರುತ್ತದೆ. ಆಗ, ಈಗಿನಂಥ ವಾದವಿವಾದಗಳಿಗೆ ಆಸ್ಪದವೇ ಇರುವುದಿಲ್ಲ.

–ಡಾ. ಬಿ.ರಾಜಶೇಖರಪ್ಪ, ಡಾ. ಪಿ.ಯಶೋದಾ, ಚಿತ್ರದುರ್ಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು