ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳ ಬಗ್ಗೆ ಇರಲಿ ವೈಜ್ಞಾನಿಕ ಕಾಳಜಿ

ಅಕ್ಷರ ಗಾತ್ರ

‘ಕೆರೆ ತುಂಬಿಸಿ ಬರ ಓಡಿಸಿ’ ಯೋಜನೆಯಲ್ಲಿ ನಿರೀಕ್ಷಿತ ಯಶಸ್ಸು ಸಿಗದಿರುವುದಕ್ಕೆ (ಪ್ರ.ವಾ., ಜ. 10) ಕೇವಲ ವ್ಯವಸ್ಥೆಯನ್ನು ದೂರುವುದು ಸರಿಯಲ್ಲ. ‌ಇಲ್ಲಿ ಸಾರ್ವಜನಿಕರ ಪಾತ್ರವೂ ಮಹತ್ವದ್ದಾಗಿರುತ್ತದೆ. ಹಳ್ಳಿಗಳಲ್ಲಿ ಕೆರೆಗಳ ಆರೋಗ್ಯದ ಬಗ್ಗೆ ಗಂಭೀರ ತಿಳಿವಳಿಕೆ ಮೂಡಿಸಲು ಇದು ಸಕಾಲ. ಕೆಲವೇ ವರ್ಷಗಳ ಹಿಂದೆ ಪ್ರತೀ ಹಳ್ಳಿಯಲ್ಲೂ ಕೆರೆ- ಗೋಮಾಳಗಳು ಇದ್ದವು. ಆದರೆ ಈಗ ಅವುಗಳಲ್ಲಿ ಬಹುತೇಕವು ಅಕ್ರಮ ಒತ್ತುವರಿಯಾಗಿ ವ್ಯಾಪ್ತಿಕುಗ್ಗಿಸಿಕೊಂಡಿದ್ದರೆ, ಉಳಿದವು ಹೂಳು, ತ್ಯಾಜ್ಯ, ಕಳೆ-ಮುಳ್ಳಿನ ಗಿಡಗಳಿಂದ ತುಂಬಿಹೋಗಿವೆ. ಇನ್ನು ಕೆಲವು, ಮರಳು ಗಣಿಗಾರಿಕೆಯ ಗುಂಡಿಗಳಿಗೆ ಬಲಿಯಾಗಿ ಒಡಲು ಮತ್ತು ಒಡ್ಡು ಕಳೆದುಕೊಂಡಿವೆ.

ಮಳೆಗಾಲದಲ್ಲಿ ಅಷ್ಟೋ ಇಷ್ಟೋ ಕೆರೆಗಳು ತುಂಬುತ್ತವೆ. ಈ ಸಮಯದಲ್ಲಿ ಸ್ಥಳೀಯರು ವಾಹನ ತೊಳೆಯಲು, ಜಾನುವಾರು ಮತ್ತು ಬಟ್ಟೆ ತೊಳೆಯಲು ಕೆರೆಗಳಿಗೆ ತೆರಳುತ್ತಾರೆ. ಇದರಿಂದ ಉತ್ಪತ್ತಿಯಾದ ಹೇರಳ ಪ್ರಮಾಣದ ಡಿಟರ್ಜೆಂಟ್ ಮತ್ತು ಕೆರೆಯ ಏರಿಗೆ ಹೊಂದಿಕೊಂಡ ಹೊಲಗಳಲ್ಲಿ ರೈತರು ಬಳಸುವ ರಾಸಾಯನಿಕ ಗೊಬ್ಬರಗಳು ನೀರಿನಲ್ಲಿ ಶೀಘ್ರವಾಗಿ ಕರಗಿ, ಅಲ್ಲಿನ ಕಳೆಗಿಡಗಳು ಸೊಂಪಾಗಿ ಬೆಳೆಯಲು ಸಹಾಯ ಮಾಡುತ್ತವೆ. ಈ ಕಳೆಗಿಡಗಳು ಕಡಿಮೆ ಅವಧಿಯಲ್ಲಿ ಪ್ರಚಂಡವಾಗಿ ಬೆಳೆದು ಇಡೀ ಕೆರೆಯನ್ನು ಆವರಿಸಿಕೊಳ್ಳುತ್ತವೆ‌. ಇನ್ನು ಬೇಸಿಗೆಯಲ್ಲಿ ಕೆರೆಗಳ ಒಡಲನ್ನು ಮರಳು ಗಣಿಗಾರಿಕೆ ಬಗೆಯುತ್ತದೆ. ಇದರಿಂದ ನೀರನ್ನು ಹಿಡಿದಿಟ್ಟುಕೊಳ್ಳುವ ಕೆರೆಗಳ ಸಾಮರ್ಥ್ಯ ಕುಗ್ಗುತ್ತದೆ. ಒಟ್ಟಿನಲ್ಲಿ ಯಾರಿಗೂ ಕೆರೆಗಳ ಬಗ್ಗೆ ಕಾಳಜಿಯಿಲ್ಲ, ಅವು ನಮ್ಮ ಜೀವನಾಡಿಗಳು ಎಂಬ ಪರಿಕಲ್ಪನೆ ಇಲ್ಲ. ಹಬ್ಬ ಹರಿದಿನಗಳಲ್ಲಿ ಕೆರೆಗಳಿಗೆ ಪೂಜೆ ಮಾಡಿದರೆ, ತುಂಬಿದಾಗ ಬಾಗಿನ ಅರ್ಪಿಸಿದರಷ್ಟೇ ಸಾಲದು. ಅವುಗಳ ಕುರಿತು ವೈಜ್ಞಾನಿಕ ಕಾಳಜಿಯೂ ಇರಬೇಕು. ಕೆರೆಗಳ ಏರಿಯ ಮೇಲೆ ಸ್ವಚ್ಛತೆ ಕಾಪಾಡುವುದು, ಕಳೆ-ಮುಳ್ಳುಗಿಡಗಳನ್ನು ತೆಗೆಸುವುದು, ಅಕ್ರಮ ಮರಳು ಗಣಿಗಾರಿಕೆ ತಡೆಯುವಂತಹ ಕ್ರಮಗಳಿಗೆ ಮುಂದಾದರೆ ಕೆರೆಗಳನ್ನು ಆರೋಗ್ಯಪೂರ್ಣವಾಗಿ
ಇಟ್ಟುಕೊಳ್ಳಬಹುದು.

– ಮಹೇಶ್ವರ ಹುರುಕಡ್ಲಿ,ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT