ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ಕೊಳ್ಳುವ ರೈತರ ಅವಕಾಶ ಕಸಿಯದಿರಿ

Last Updated 2 ಜುಲೈ 2020, 19:30 IST
ಅಕ್ಷರ ಗಾತ್ರ

ಭೂ ಸುಧಾರಣಾ ಕಾಯ್ದೆಯ ಉದ್ದೇಶಿತ ತಿದ್ದುಪಡಿಯ ಸುತ್ತ ನಡೆಯುತ್ತಿರುವ ಚರ್ಚೆಗಳಲ್ಲಿ, ರೈತರ ಜಮೀನಿನ ಮಾರಾಟದ ವಿಚಾರವೇ ಪ್ರಧಾನವಾಗಿದೆ. ಆದರೆ ಈ ತಿದ್ದುಪಡಿಯಿಂದ ರೈತರು ಜಮೀನು ಕೊಳ್ಳುವ ಅವಕಾಶವನ್ನು ಕಳೆದುಕೊಳ್ಳುವ ಬಗ್ಗೆ ಎಲ್ಲೂ ಪ್ರಸ್ತಾಪವಾಗುತ್ತಿಲ್ಲ. ಇಂದು ರೈತರು ಕೃಷಿ ಭೂಮಿ ಮಾರಾಟ ಮಾಡುವ ತುರ್ತಿಗಿಂತ ಕೊಳ್ಳುವ ಉಮೇದಿನಲ್ಲಿದ್ದು, ಈ ತಿದ್ದುಪಡಿಯು ಅಂತಹ ಅವಕಾಶವನ್ನು ಕಸಿದುಕೊಳ್ಳುತ್ತದೆ.

ಕೂಡು ಕುಟುಂಬಗಳು ವಿಭಜನೆಯಾಗಿವೆ, ಕೃಷಿ ಭೂಮಿ ತುಂಡಾಗಿದೆ. ಈ ಕುಟುಂಬಗಳಲ್ಲಿ ಕೆಲವು ತಮ್ಮ ಭೂಮಿಯ ಜೊತೆ ಇನ್ನೊಂದಷ್ಟು ಜಮೀನನ್ನು ಗುತ್ತಿಗೆಗೆ ಹಾಕಿಕೊಂಡು ಬೇಸಾಯ ಮಾಡುತ್ತಿವೆ. ಮುಂದೆ ಒಂದಷ್ಟು ಜಮೀನು ಖರೀದಿಸಿ ತಮ್ಮ ಬೇಸಾಯವನ್ನು ಸುಧಾರಣೆ ಮಾಡಿಕೊಳ್ಳುವ ಹಂಬಲ ಇರುವುದು ಸಾಮಾನ್ಯ. ಹೊಟ್ಟೆಬಟ್ಟೆ ಕಟ್ಟಿ ಹಣ ಜೋಡಿಸಿ ಜಮೀನು ಕೊಳ್ಳುವ ಉಮೇದಿನಲ್ಲಿರುವ ಇಂತಹ ರೈತರ ಕಣ್ಣೆದುರೇ ದುಡ್ಡಿರುವ ಯಾರೋ ಒಬ್ಬ ದುಪ್ಪಟ್ಟು ಹಣ ಕೊಟ್ಟು ಆ ಜಮೀನನ್ನು ಕೊಂಡುಬಿಟ್ಟಾಗ ರೈತ ಅನುಭವಿಸುವ ಸಂಕಟ ಊಹಿಸಲು ಅಸಾಧ್ಯ.

ಭೂ ಹಿಡುವಳಿ ಮತ್ತು ಭೂ ಸಂಬಂಧದಲ್ಲಿ ಬದಲಾವಣೆಗಳಾಗಿವೆ. ಹಿಂದೆ ಜಮೀನ್ದಾರರ ಮನೆಗಳಲ್ಲಿ ಕೂಲಿಕಾರರಾಗಿದ್ದವರು, ತುಂಡು ಭೂಮಿ ಹೊಂದಿದ್ದವರು ಇಂದು ಜಮೀನು ಕೊಂಡು, ಬೇಸಾಯ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದ ಕೆಲಕಡೆ ಈ ಬೆಳವಣಿಗೆ ವ್ಯಾಪಕವಾಗಿ ಕಂಡುಬರುತ್ತದೆ. ಇವರಂತಹ ಲಕ್ಷಾಂತರ ಮಂದಿ ಸ್ವಂತ ಬೇಸಾಯ ಮಾಡಿ ಬದುಕಬೇಕೆನ್ನುವ ಹಂಬಲದಲ್ಲಿದ್ದಾರೆ. ಜಮೀನು ಕೊಳ್ಳುವ ಇವರ ಕನಸನ್ನು ಈ ತಿದ್ದುಪಡಿ ಕಮರಿಸಲಿದೆ.

ರೈತರ ಭೂಮಿ ಕೊಳ್ಳುವ ಹಂಬಲವನ್ನು ಸರ್ಕಾರ ಅರ್ಥಮಾಡಿಕೊಂಡು, ಅವರು ಇನ್ನಷ್ಟು ಭೂಮಿ ಕೊಳ್ಳಲು ಅನುವಾಗುವಂಥ ಕ್ರಮ ಜರುಗಿಸಬೇಕಾಗಿತ್ತು. ಅದು ಬಿಟ್ಟು, ‘ನಿಮಗೆ ಕೃಷಿ ಮಾಡುವುದು ಕಷ್ಟವಾದರೆ ಭೂಮಿ ಮಾರಿಕೊಳ್ಳಿ, ಹೆಚ್ಚು ದುಡ್ಡು ಕೊಡುವವರನ್ನು ಕರೆತರುತ್ತೇವೆ’ ಎನ್ನುತ್ತಿದೆ. ಭೂಮಿ ಎಂಬ ಸರಕನ್ನು ದುಡ್ಡಿನಿಂದ ಕೊಳ್ಳುವ ಮತ್ತು ಭೂಮಿಯನ್ನು ಬದುಕಿಗಾಗಿ ಆಶ್ರಯಿಸುವ ಎರಡು ವಿಭಿನ್ನ ಆರ್ಥಿಕತೆಗಳ ನಡುವಿನ ತಿಕ್ಕಾಟ ಇದು. ಸರ್ಕಾರ ಮೊದಲನೆಯದಕ್ಕೆ ಕುಮ್ಮಕ್ಕು ಕೊಡುತ್ತಿರುವುದು ವಿಷಾದನೀಯ.

–ವಿ.ಗಾಯತ್ರಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT