ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಮಕಾತಿ ಪ್ರಕ್ರಿಯೆ ಸರಳವಾಗಲಿ

Last Updated 5 ಜುಲೈ 2021, 19:31 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರದ ವಿವಿಧ ವೃಂದಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟವಾದ ತಕ್ಷಣ ಆಕಾಂಕ್ಷಿಗಳಲ್ಲಿ ಉತ್ಸಾಹ ಗರಿಗೆದರುವುದು ಸಹಜ. ಆದರೆ ಈ ನೇಮಕಾತಿ ಪ್ರಕ್ರಿಯೆ ನಿಗದಿತ ಅವಧಿಯಲ್ಲಿ ಮುಗಿಯದೆ ಕಾರಣಾಂತರ ಗಳಿಂದ ವರ್ಷಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ. ಇದಕ್ಕೆ ಕಾರಣ ನೇಮಕಾತಿ ಪ್ರಕ್ರಿಯೆ ಸರಳವಾಗಿಲ್ಲದಿರುವುದೇ ಆಗಿದೆ. ಆಯ್ಕೆ ಪ್ರಾಧಿಕಾರಗಳು ಆಯ್ಕೆ ಪ್ರಕ್ರಿಯೆ ಮುಗಿಸಿದ ನಂತರ ಅಂತಿಮ ಆಯ್ಕೆ ಪಟ್ಟಿಯನ್ನು ಸಂಬಂಧಿಸಿದ ನೇಮಕಾತಿ ಪ್ರಾಧಿಕಾರಗಳಿಗೆ ಕಳಿಸಿಕೊಡುತ್ತವೆ. ಈ ಹಂತದಲ್ಲಿ ಅಭ್ಯರ್ಥಿಗಳಿಗೆ ಹಲವು ಗೊಂದಲಗಳು ಏರ್ಪಡುತ್ತ ವಲ್ಲದೆ ಅನಗತ್ಯ ಕಿರಿಕಿರಿ ಎದುರಾಗುತ್ತದೆ.

ಜಾತಿ ಸಿಂಧುತ್ವ ಪ್ರಮಾಣಪತ್ರ ಪಡೆಯುವುದು, ಗ್ರಾಮೀಣ ಮತ್ತು ಕನ್ನಡ ಮಾಧ್ಯಮ ಅಭ್ಯರ್ಥಿ ಹಾಗೂ ವಿದ್ಯಾರ್ಹತೆಗಳ ಅಂಕಪಟ್ಟಿ ನೈಜತೆ ಪರಿಶೀಲನೆ, ಅಭ್ಯರ್ಥಿಗಳ ಗುಣ, ನಡತೆಯ ಬಗೆಗೆ ಪೊಲೀಸ್‌ ಪರಿಶೀಲನೆ, ವೈದ್ಯಕೀಯ ಅರ್ಹತೆಯ ಪ್ರಮಾಣಪತ್ರ ಇತ್ಯಾದಿಗಳನ್ನು ಪೂರ್ಣಗೊಳಿಸಲು ತಿಳಿಸಲಾಗುತ್ತದೆ. ತಲೆನೋವಿನ ಸಂಗತಿಯೆಂದರೆ, ಈಗಾಗಲೇ ಅನ್ಯ ಇಲಾಖೆಯಲ್ಲಿ ಸರ್ಕಾರಿ ಸೇವೆ ಸಲ್ಲಿಸುತ್ತಿದ್ದು ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವವರೂ ಎಲ್ಲ ದಾಖಲಾತಿಗಳ ಪರಿಶೀಲನೆಗೆ ಮತ್ತೊಮ್ಮೆ ಸಿದ್ಧರಾಗಬೇಕಾಗುತ್ತದೆ. ಇನ್ನು ಸಿಂಧುತ್ವ ಪ್ರಮಾಣಪತ್ರ ಪಡೆಯುವುದು ದೀರ್ಘ ಪ್ರಕ್ರಿಯೆಯಾಗಿದ್ದು ಸೇವಾ ಸಿಂಧು ಪೋರ್ಟಲ್ ಮುಖಾಂತರ ದಾಖಲಾತಿ
ಗಳನ್ನು ಸಲ್ಲಿಸಿದ್ದರೂ ಅನೇಕ ಕಡೆ ಅಧಿಕಾರಿಗಳು ಪದೇಪದೇ ದಾಖಲಾತಿಗಳನ್ನು ಕೇಳುವುದಲ್ಲದೆ ಅನಗತ್ಯ ವಿಳಂಬ ಮಾಡುತ್ತಿದ್ದಾರೆ. ಅಂಕಪಟ್ಟಿ ನೈಜತೆ ಪರಿಶೀಲನೆ ಮಾಡಿಸಿಕೊಳ್ಳುವುದು ವಾಸ್ತವವಾಗಿ ನೇಮಕಾತಿ ಪ್ರಾಧಿಕಾರಗಳ ಕೆಲಸವಾಗಬೇಕು. ಆದರೆ ಅನೇಕ ಇಲಾಖಾ ಮುಖ್ಯಸ್ಥರು ಒಂದು ಪತ್ರ ಬರೆದು ಸುಮ್ಮನಾಗುತ್ತಾರೆ. ವಿದ್ಯಾರ್ಥಿಗಳು ಸ್ವತಃ ಇನ್ನೊಮ್ಮೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಬೇಕು. ಇವೆಲ್ಲವೂ ಅನಗತ್ಯ ವಿಳಂಬಕ್ಕೆ ದಾರಿಯಾಗುತ್ತವೆ.

ಇದನ್ನೆಲ್ಲಾ ತಪ್ಪಿಸಬೇಕಾದರೆ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾದ ನಂತರ ಅದನ್ನು ಪರಿಶೀಲಿಸಲು ಒಂದು ಕೇಂದ್ರೀಕೃತ ಘಟಕಕ್ಕೆ ವರ್ಗಾಯಿಸಬೇಕು. ಸಾಧ್ಯವಾದರೆ ಸರ್ಕಾರವೇ ಘಟಕದ ಮೂಲಕ ದಾಖಲಾತಿಗಳನ್ನು ಆನ್‌ಲೈನ್‌ ಮುಖಾಂತರ ರಹಸ್ಯವಾಗಿ ಪರಿಶೀಲಿಸಿಕೊಂಡು ಖಚಿತಪಡಿಸಿಕೊಳ್ಳಬೇಕು. ಇದನ್ನು ಒಂದು ನಿರ್ದಿಷ್ಟ ಕಾಲಮಿತಿಯಲ್ಲಿ ಮುಗಿಸಿ ಆನಂತರ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿಗೊಳಿಸಿ ನೇಮಕಾತಿ ಆದೇಶ ನೀಡಬೇಕು. ನೇಮಕಾತಿ ಪ್ರಾಧಿಕಾರಗಳು ನೇಮಕಾತಿ ಪ್ರಕ್ರಿಯೆಗಾಗಿ ಒಮ್ಮೆ ಹಣಕಾಸು ಇಲಾಖೆಯ ಒಪ್ಪಿಗೆ ಪಡೆದ ನಂತರ ಮತ್ತೆ ಮತ್ತೆ ಒಪ್ಪಿಗೆ ಪಡೆಯುವ ವಿಧಾನದ ಬಗ್ಗೆ ಪರಿಶೀಲನೆ ಅಗತ್ಯ. ಹುದ್ದೆಯೊಂದಕ್ಕೆ ಆಯ್ಕೆಯಾದ ಅಭ್ಯರ್ಥಿ ನೇಮಕಾತಿ ಆದೇಶದ ನಿರೀಕ್ಷೆಯಲ್ಲಿ ವರ್ಷಗಟ್ಟಲೆ ಮನೆಯಲ್ಲಿ ಕೂರುವಂತಾದರೆ ಅದಕ್ಕಿಂತ ಬೇಸರದ ಸಂಗತಿ ಮತ್ತೊಂದಿಲ್ಲ.

–ಮಧುಕುಮಾರ ಸಿ.ಎಚ್., ಚಾಮನಹಳ್ಳಿ, ಮದ್ದೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT