ಭಾನುವಾರ, ಜುಲೈ 3, 2022
22 °C

ವಾಚಕರ ವಾಣಿ | ಸೂತ್ರಧಾರರು ಮರೆಯಲ್ಲಿದ್ದಾರೆ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿಯು ಬ್ರಾಹ್ಮಣರ ಪಕ್ಷ ಎಂಬ ಆರೋಪಗಳು ಅನೂಚಾನವಾಗಿ ಕೇಳಿಬರುತ್ತಿವೆ. ಈ ಆಕ್ಷೇಪಗಳಿಗೆ ಹುರುಳಿಲ್ಲ ಎಂಬುದನ್ನು ದೃಢೀಕರಿಸುವಂತೆ, ಚುನಾವಣೆಗಳಿಗೆ ಅಭ್ಯರ್ಥಿಗಳನ್ನು ಆರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಬಿ.ಎಲ್‌.ಸಂತೋಷ್ ಅವರ ವೈಖರಿ, ಮಾನದಂಡ, ಆಶ್ಚರ್ಯದ ಜೊತೆಗೆ ಮೆಚ್ಚುಗೆ ಪಡೆಯುತ್ತಿವೆ. ಸಂತೋಷ್ ಅವರು ಪಕ್ಷಪಾತಕ್ಕೆ ಗುರಿಯಾಗದೆ ಸಮಾಜದ ಎಲ್ಲ ವರ್ಗಗಳು ಹಾಗೂ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಆ ಬಳಿಕ ಒಂದು ನಿಲುವು ತೆಗೆದುಕೊಳ್ಳುತ್ತಿದ್ದಾರೆ. ಮೇಲ್ವಿಚಾರಕರಾಗಿ ಸಂತೋಷ್ ಅವರು ಸಂಘದ ಪ್ರತಿನಿಧಿಯಾಗಿದ್ದಾರೆ.

ಇಲ್ಲಿ, ಶಾಲಾ ಮಕ್ಕಳ ಪಠ್ಯಪುಸ್ತಕಗಳ ಬಗ್ಗೆ ಕೂಡ ಅದೇ ಜಾತಿ ಪಕ್ಷಪಾತದ ಆರೋಪಗಳು ಕೇಳಿಬರುತ್ತಿವೆ. ಆಗುತ್ತಿರುವ ಚರ್ಚೆಗಳಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರನ್ನು ದೂಷಿಸಲಾಗುತ್ತಿದೆ. ದಶಕಗಳ ಅನುಭವದಿಂದ ಹೇಳುವುದಾದರೆ, ಇವರೆಲ್ಲರೂ ಬಲಿಪಶುಗಳು, ಆಟದಲ್ಲಿ ದಾಳಗಳಷ್ಟೇ. ಈ ಸಮಿತಿಯ ನೇಮಕಾತಿಯಿಂದ ಶುರುವಾಗಿ ಪಠ್ಯ, ಲೇಖಕರು ಎಲ್ಲವನ್ನೂ ನಿರ್ಣಯಿಸುವುದು ‘ಕೇಶವನ ಕೃಪೆ’ಯಡಿಯಲ್ಲಿ. ವಿವರಿಸಿ ಹೇಳುವುದಾದರೆ ‘ಸಂಘ ವಿನಾ ತೃಣಮಪಿ ನ ಚಲತಿ’. ಚುನಾವಣೆಗೆ ಅಭ್ಯರ್ಥಿಗಳು ಮಾತ್ರವಲ್ಲದೆ ಸಂಘದ ಒಪ್ಪಿಗೆ ಪಡೆಯದೆ ಅಥವಾ ಗಮನಕ್ಕೆ ಬಾರದೆ ಒಂದು ತೃಣವೂ ಚಲಿಸುವುದಿಲ್ಲ. ಅವರ ನಿರ್ಧಾರದಂತೆಯೇ ಸಮಿತಿಯ ಪ್ರತಿಯೊಬ್ಬರೂ ಸಹಿ ಹಾಕಿ ಅದಕ್ಕೆ ಅಧಿಕೃತವೆಂಬ ಮುದ್ರೆ ಹಾಕಲಾಗುತ್ತದೆ. ಈ ಹಿನ್ನೆಲೆಯಲ್ಲಿ, ತಮ್ಮ ಅಜೆಂಡಾ ಸುಸೂತ್ರವಾಗಿ ಕಾರ್ಯರೂಪಕ್ಕೆ ಬರಲು, ಬೇಕಾದವರನ್ನು ಆರಿಸಿರುವುದು ಕಣ್ಣಿಗೆ ಗೋಚರವಾಗುವುದಿಲ್ಲವೇ? ಈ ವಸ್ತುಸ್ಥಿತಿಯಲ್ಲಿ ಇವರೆಲ್ಲರೂ ಪಾತ್ರಧಾರಿಗಳಷ್ಟೇ, ಸೂತ್ರಧಾರರು ಮರೆಯಲ್ಲಿದ್ದಾರೆ.
–ಕೆ.ಎನ್.ಭಗವಾನ್, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.