ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಅನಗತ್ಯ ಶುಲ್ಕ ಪಾವತಿಸಬೇಕೇಕೆ?

Last Updated 19 ಜೂನ್ 2022, 19:31 IST
ಅಕ್ಷರ ಗಾತ್ರ

ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (ಕೆಇಆರ್‌ಸಿ) ಕಳೆದ ಏಪ್ರಿಲ್ 1ರಿಂದಲೇ ಜಾರಿಗೆ ಬರುವಂತೆ ಯುನಿಟ್‌ಗೆ ಸರಾಸರಿ 35 ಪೈಸೆ ಏರಿಕೆ ಮಾಡಿದೆ. ಆದರೆ ಇದರ ಜೊತೆಗೆ, ವಿದ್ಯುತ್ ಬಳಸದಿದ್ದರೂ ಪ್ರತೀ ತಿಂಗಳು ಪಾವತಿಸಬೇಕಾದ ನಿಗದಿತ ಶುಲ್ಕವನ್ನೂ ಏರಿಸಿದೆ. ಇದರಿಂದಾಗಿ 3 ಅಥವಾ 4 ಕಿಲೊವ್ಯಾಟ್‌ ಹೊಂದಿರುವ ಮನೆಯ ನಿಗದಿತ ವಿದ್ಯುತ್ ಶುಲ್ಕವೇ ಬಳಸುವ ವಿದ್ಯುತ್ ದರಕ್ಕಿಂತ ಅಧಿಕವಾಗಿ, ಮೂಗಿಗಿಂತ ಮೂಗುತಿಯೇ ಭಾರ ಎನ್ನುವಂತಾಗಿದೆ. ನಾವು ಬಳಸುವ ವಿದ್ಯುತ್‌ಗೆ ದರ ಪಾವತಿಸಬೇಕಾದದ್ದು ಧರ್ಮ. ಆದರೆ ಇದರ ಜೊತೆಗೆ ಅನಗತ್ಯವಾಗಿರುವ ನಿಗದಿತ ಶುಲ್ಕವನ್ನೇಕೆ ಕೊಡಬೇಕು? ಇದರ ಜೊತೆಗೆ ನಾವು ವಿದ್ಯುತ್ ಸಂಪರ್ಕ ಪಡೆಯುವ ಸಂದರ್ಭದಲ್ಲಿ ಕಟ್ಟಿರುವ ವಿದ್ಯುತ್ ಡೆಪಾಸಿಟ್ ಮೊತ್ತವನ್ನೂ ಏರಿಕೆ ಮಾಡಿದ್ದು, ಅದನ್ನೂ ಪಾವತಿಸುವಂತೆ ಬಿಲ್ಲಿನ ಕೆಳಭಾಗದಲ್ಲಿ ನಮೂದಿಸಿ ಒತ್ತಡ ಹಾಕುತ್ತಿದ್ದಾರೆ. ನಾವು ವಿದ್ಯುತ್ ಸಂಪರ್ಕ ಪಡೆಯಲು ನಮ್ಮದೇ ಹಣವನ್ನು ವಿದ್ಯುತ್ ಮೀಟರ್‌ಗಾಗಿ ಪಾವತಿಸಿರುತ್ತೇವೆ ಹಾಗೂ ಇದೇ ಸಂದರ್ಭದಲ್ಲಿ ಮೀಟರ್ ಡೆಪಾಸಿಟ್ ಅನ್ನೂ ಕಟ್ಟಿಸಿಕೊಂಡಿ ರುತ್ತಾರೆ. ನಾವೇ ದುಡ್ಡು ಕೊಟ್ಟು ಮೀಟರ್ ಕೊಂಡ ಮೇಲೆ ಇದಕ್ಕೆ ಡೆಪಾಸಿಟ್ ಬೇರೆ ಏಕೆ ಕಟ್ಟಬೇಕು?

ನಾವು ಮನೆ ನಿರ್ಮಿಸುವ ಸಂದರ್ಭದಲ್ಲಿ ಮನೆ ನಿರ್ಮಾಣದ ಒತ್ತಡದಲ್ಲಿ ಈ ಬಗ್ಗೆ ಗಮನಹರಿಸಿರುವುದಿಲ್ಲ. ಗಮನಿಸಿದ್ದರೂ ಕೆಪಿಟಿಸಿಎಲ್‌ನವರು ವಿದ್ಯುತ್ ಸಂಪರ್ಕ ನೀಡುವುದಿಲ್ಲವಾದ್ದರಿಂದ ಅನಿವಾರ್ಯವಾಗಿ ಪಾವತಿಸಬೇಕಾಗುತ್ತದೆ. ಇಷ್ಟಾದ ಮೇಲೂ ವಿದ್ಯುತ್ ನಿಗದಿತ ಶುಲ್ಕ ಮತ್ತು ಮೀಟರ್ ಡೆಪಾಸಿಟ್ ಅನ್ನು ವರ್ಷ ವರ್ಷವೂ ಏರಿಕೆ ಮಾಡುವುದೇಕೆ? ಇದು ಗ್ರಾಹಕರಿಗೆ ಹೊರೆಯಾಗುತ್ತದೆ. ಆದ್ದರಿಂದ ಸರ್ಕಾರವು ಪ್ರತೀ ಕಿಲೊವ್ಯಾಟ್‌ಗೆ ವಿಧಿಸುವ ನಿಗದಿತ ಶುಲ್ಕವನ್ನು ರದ್ದುಪಡಿಸಲಿ ಹಾಗೂ ಗ್ರಾಹಕರಿಂದ ಪಡೆದಿರುವ ಮೀಟರ್ ಡೆಪಾಸಿಟ್ ಅನ್ನು ಗ್ರಾಹಕರಿಗೆ ಹಿಂದಿರುಗಿಸುವ ಆದೇಶ ನೀಡಲಿ. ವಿದ್ಯುತ್ ದರ ಪಾವತಿಸುವುದಷ್ಟೇ ಗ್ರಾಹಕರ ಬದ್ಧತೆ, ಅನಗತ್ಯ ದರಗಳನ್ನಲ್ಲ.

- ಮುಳ್ಳೂರು ಪ್ರಕಾಶ್,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT