ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಜ ಬಿತ್ತುವವರು ಎಲ್ಲಿದ್ದಾರೆ?

ಅಕ್ಷರ ಗಾತ್ರ

‘ಇದೆಂಥಾ ಪ್ರಜಾಪ್ರಭುತ್ವ ಸ್ವಾಮಿ?’ ಎಂಬ ಲೇಖನದಲ್ಲಿರವೀಂದ್ರ ಭಟ್ಟ ಅವರು, ‘ರಾಜಕಾರಣಿಗಳ ಬಗ್ಗೆಯೇ ಜನರಿಗೆ ಭ್ರಮನಿರಸನವಾಗಿದೆ. ಭರವಸೆಯ ನಾಯಕನೊಬ್ಬ ಈಗ ಹುಟ್ಟಿಬರಬೇಕಿದೆ. ಅದಕ್ಕೆ ಅಖಾಡ ಸಿದ್ಧವಾಗಿದೆ. ಆದರೆ ಆಶಾಕಿರಣ ಗೋಚರಿಸುತ್ತಿಲ್ಲ. ನೆಲ ಹದವಾಗಿದೆ. ಬೀಜ ಬಿತ್ತುವವರಿಲ್ಲ’ ಎಂದು ಹೇಳಿದ್ದಾರೆ.

ನಮ್ಮ ರಾಜ್ಯದಲ್ಲಷ್ಟೇ ಅಲ್ಲ, ಎಲ್ಲ ರಾಜ್ಯಗಳವರೂ ತಮ್ಮತಮ್ಮ ಪಕ್ಷದ ವರಿಷ್ಠ ಮಂಡಳಿ ಎಂಬ ಒಂದು ಅನಿಷ್ಟದ ಆದೇಶಗಳಿಗೆ ಬದ್ಧವಾಗಿದ್ದಾರೆ. ಹೀಗಾಗಿಯೇ ನಮ್ಮ ರಾಜ್ಯದಲ್ಲಿ ಇರುವಂತೆಯೇ ಬೇರೆಲ್ಲಾ ರಾಜ್ಯಗಳಲ್ಲೂ ವರಿಷ್ಠರೇ ಮೂಗುತೂರಿಸುವವರು. ಈ ಅನಿಷ್ಟ ಪದ್ಧತಿಯನ್ನು ತೊಡೆದುಹಾಕುವವರೆಗೆ ನಮ್ಮಲ್ಲಿ ನೈಜ ಪ್ರಜಾಪ್ರಭುತ್ವ ಬರಲಾರದು. ಆಯ್ಕೆಯಾದ ಜನಪ್ರತಿನಿಧಿಗಳು ತಮ್ಮ ಪಕ್ಷದ ನಾಯಕನನ್ನು ಆಯ್ಕೆ ಮಾಡಬೇಕು. ಇಲ್ಲಿ ತಲೆಕೆಳಗು. ಆಯ್ಕೆಗೊಂಡವರು ಹೌದಪ್ಪಗಳು ಮಾತ್ರ. ಆ ವರಿಷ್ಠರು ಆಯ್ಕೆಗೊಂಡ ಮಂದಿಯೇ? ಯಾರಿಂದ? ಈ ದೇಶದ ಯಾವ ಪಕ್ಷಗಳಲ್ಲಿಯೂ ನಾಯಕಸ್ಥಾನ ಸ್ಪರ್ಧಾತ್ಮಕವಾಗಿ ಗಳಿಸಿದುದಾಗಿಲ್ಲ.

ಎಲ್ಲ ಪಕ್ಷಗಳವರೂ ಒಮ್ಮತದ ಆಯ್ಕೆ ಎನ್ನುವ ನೆಪ ಹೇಳುತ್ತಾರೆ. ಈ ಒಮ್ಮತಕ್ಕೆ ಮುನ್ನವಾದರೂ ಕನಿಷ್ಠ ಇಬ್ಬರು ಸ್ಪರ್ಧಿಗಳು ಇರಬೇಕಲ್ಲ; ಇರುತ್ತಾರೆ. ಒಬ್ಬನನ್ನು ಹೇಗೋ ಏನೋ ಆಮಿಷವೊಡ್ಡಿ ಪುಸಲಾಯಿಸಿ ಹಿಂದೆಗೆಯುವಂತೆ ಮಾಡಿ, ಒಮ್ಮತ ಸಾಧನೆ ಎಂದು ಬೀಗುವ ಪರಿಪಾಟ ಎಲ್ಲ ಪಕ್ಷಗಳಲ್ಲೂ ಇದೆ. ಜಾತಿ, ಮಠ, ವೋಟ್‌ ಬ್ಯಾಂಕ್, ಹಣ, ಹೆಂಡ, ಇನ್ನೂ ಏನೇನೋ ಯಾವ್ಯಾವುದೋ ಅಪಸವ್ಯಗಳ ಪ್ರಭಾವ ಬೇರೆ. ಈ ಉಪಕರಣಗಳಿಲ್ಲದೆ ಚುನಾವಣೆಗಳು ಈ ದೇಶದಲ್ಲಿ ಅಸಾಧ್ಯ.

‘ಪ್ರಜಾಪ್ರಭುತ್ವ ಎಲ್ಲಿದೆ ಸ್ವಾಮೀ?’ ಎಂದು ಕಲ್ಪನೆಯ ಆದರ್ಶದ ನೆಲೆಯಲ್ಲಿ ಸುಮ್ಮನೆ ತೊಳಲುವುದಕ್ಕಿಂತ, ಆಯ್ಕೆ ಮಾಡುವುದಷ್ಟೇ ನಮಗೆ, ಅಂದರೆ ಪ್ರಜೆಗಳಿಗೆ ಇರುವ ಅವಕಾಶ. ಐದು ವರ್ಷಗಳವರೆಗೆ ಕಮ್ ಕಿಮ್ ಎನ್ನದೇ ಸುಮ್ಮಗಿರುತ್ತ ಮತ್ತೊಮ್ಮೆ ಆಯ್ಕೆಯ ಅವಕಾಶಕ್ಕಾಗಿ ಕಾಯುವುದೇ ನಮ್ಮಲ್ಲಿನ ಪ್ರಜಾಪ್ರಭುತ್ವ. ಪ್ರಜೆಗಳೂ ಈಗಾಗಲೇ ಈ ದುರವಸ್ಥೆಯ ಪದ್ಧತಿಗೆ ಅನಿವಾರ್ಯವಾಗಿ ತಮ್ಮನ್ನು ಹೊಂದಿಸಿಕೊಂಡಿದ್ದಾರೆ. ಹೀಗಿರುವಾಗ ಎಲ್ಲಿಯ ನೆಲ, ಏನು ಹದ, ಯಾವುದು ಬೀಜ? ಬಿತ್ತುವವರು ಎಲ್ಲಿದ್ದಾರೆ?

-ಸಾಮಗ ದತ್ತಾತ್ರಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT