ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಕನ್ನಡದ ತಳ ಗಟ್ಟಿಗೊಳ್ಳಲಿ

Last Updated 31 ಅಕ್ಟೋಬರ್ 2021, 21:25 IST
ಅಕ್ಷರ ಗಾತ್ರ

ಮತ್ತೆ ರಾಜ್ಯೋತ್ಸವದ ಸಂಭ್ರಮ ಮೊಳಗುತ್ತಿದೆ. ನಾಡುನುಡಿ ಕುರಿತು ಪ್ರೀತಿ, ಅಭಿಮಾನ ಉಕ್ಕಿ ಹರಿಯತೊಡಗಿದೆ. ಸರ್ಕಾರವೇ ಮುಂದಾಗಿ ದೊಡ್ಡ ಪ್ರಮಾಣದಲ್ಲಿ ನುಡಿಯ ನಾದೋಪಾಸನೆ ಮಾಡತೊಡಗಿದೆ. ನಾಡುನುಡಿ ಕುರಿತು ಯುವಪೀಳಿಗೆಯಲ್ಲಿ ಪ್ರೀತಿ, ಅಭಿಮಾನ ಮೂಡಿಸಲು ಇದೆಲ್ಲ ಸರಿಯೆ. ನೂತನ ಶಿಕ್ಷಣ ನೀತಿಯ ಅಂಗವಾಗಿ ಕೆಲವು ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಕನ್ನಡದಲ್ಲಿ ಬೋಧನೆ ಮಾಡಲು ಸರ್ಕಾರ ಮುಂದಾಗಿದೆ. ಮುಂದಿನ ವರ್ಷದಿಂದ ಪ್ರಾಥಮಿಕ ಹಂತದಲ್ಲಿ ಕೂಡಾ ಹೊಸ ಶಿಕ್ಷಣ ನೀತಿಯನ್ನು ಅಳವಡಿಸಲು ಕ್ರಮ ಜರುಗಿಸಲಾಗುವುದು ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ. ಆದರೆ ನಾಡುನುಡಿಯ ಉಳಿವಿನ ದೃಷ್ಟಿಯಿಂದ ಮುಖ್ಯವಾಗಿ ಆಗಬೇಕಾದುದು ಪ್ರಾಥಮಿಕ ಹಂತದಲ್ಲಿ ಕಡ್ಡಾಯ ಕನ್ನಡದ ಕಲಿಕೆ.

ನೂತನ ಶಿಕ್ಷಣ ನೀತಿ ಅಡಿ ಪ್ರಾಥಮಿಕ ಮತ್ತು ನಂತರದ ಹಂತದಲ್ಲಿ ಮಾತೃಭಾಷೆ ಅಥವಾ ಪರಿಸರದ ಭಾಷೆಯಲ್ಲಿ ಕಲಿಕೆಗೆ ಒತ್ತು ನೀಡಲಾಗಿದ್ದರೂ ಅದಕ್ಕೆ ಕಾನೂನು ಅಥವಾ ಸಾಂವಿಧಾನಿಕ ಬೆಂಬಲವನ್ನು ಒದಗಿಸಿಲ್ಲ. ಕಲಿಕೆ ಮಾಧ್ಯಮ ಕುರಿತು 2015ರ ಸುಪ್ರೀಂ ಕೋರ್ಟ್ ತೀರ್ಪು ನಂತರ ಸಂವಿಧಾನಕ್ಕೆ ತಿದ್ದುಪಡಿ ತಂದು ಕಲಿಕೆಯಲ್ಲಿ ದೇಶಿಭಾಷೆಗಳಿಗೆ ಬಲ ತುಂಬುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕಿತ್ತು. ಎಲ್ಲ ರಾಜ್ಯ ಸರ್ಕಾರಗಳು ಅದಕ್ಕಾಗಿ ಒತ್ತಾಯಿಸಬೇಕಿತ್ತು. ಇದಕ್ಕೆ ಸಾಕಷ್ಟು ಕಾಲಾವಕಾಶವೂ ಇತ್ತು. ಸರ್ಕಾರಗಳಲ್ಲಿ ಭಾಷೆ ಕುರಿತು ಬದ್ಧತೆಯ ಕೊರತೆಯಿಂದ ಈಗಲೂ ಭಾಷೆ ಕುರಿತು ದ್ವಂದ್ವಗಳು ಮುಂದುವರಿದು, ನಾಡುನುಡಿ ಕುರಿತು ಅನಾದರ ಉಳ್ಳ ಹಿತಾಸಕ್ತಿಗಳು ಕೋರ್ಟ್ ಮೆಟ್ಟಿಲುಗಳನ್ನು ಹತ್ತುತ್ತಲೇ ಇವೆ. ಕೋರ್ಟ್ ಮುಂದೆ ಸರ್ಕಾರ ಬಾಗುತ್ತಲೇ ಇದೆ. ಇಂಥದರ ಮಧ್ಯ ನೂತನ ಶಿಕ್ಷಣ ನೀತಿಗೆ ಸರ್ಕಾರ ಮುಂದಾಗುತ್ತಿದೆ.

ಅದು ಒಂದು ಕಡೆಯಾದರೆ, ಸರ್ಕಾರವೇ ಮುಂದಾಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ತೆರೆಯುತ್ತಿರುವುದಕ್ಕೆ ಏನನ್ನುವುದು? ಅದು ಕನ್ನಡ ಮಾಧ್ಯಮ ಶಾಲೆಗಳಿಗೆ ಕೊಡುತ್ತಿರುವ ಪೆಟ್ಟು ಮತ್ತು ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವುದರ ಅರಿವು ಸರ್ಕಾರಕ್ಕೆ ಇಲ್ಲದಿಲ್ಲ. ಶಾಲೆಗಳಲ್ಲಿ ಕನ್ನಡ ಉಳಿಯದಿದ್ದರೆ ಕನ್ನಡ ಇನ್ನೆಲ್ಲಿ ಉಳಿದೀತು! ಆಡುಭಾಷೆಯಾಗಿಯೇ? ಕನ್ನಡದ ತಳ ಗಟ್ಟಿಗೊಳಿಸುವ ಕ್ರಮಗಳಾಗದೇ ಕೇವಲ ಹಾಡುಹಸೆಗಳ ಅಬ್ಬರದಲ್ಲಿ ಕನ್ನಡ ಗೊಬ್ಬರವಾಗಿ ಹೋಗಬಾರದಲ್ಲವೆ. ಇದಕ್ಕಾಗಿ ಭಾಷೆ ಉಳಿವಿನ ಕುರಿತು ದೀರ್ಘಾಲೋಚನೆ, ಕಾನೂನಿನ, ಸಾಂವಿಧಾನಿಕ ಬೆಂಬಲ ನೀಡುವ ಕ್ರಮಕ್ಕೆ ಸರ್ಕಾರ ಮೊದಲು ಮುಂದಾಗಬೇಕು. ಆಗ ನಮ್ಮ ಆಚರಣೆಗಳಿಗೆ ಅರ್ಥ ಬಂದೀತು.

-ವೆಂಕಟೇಶ ಮಾಚಕನೂರ,ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT