ಶುಕ್ರವಾರ, ಮೇ 20, 2022
21 °C

ವಾಚಕರ ವಾಣಿ: ದತ್ತಿದಾನಿಗಳ ಆಶಯಕ್ಕೆ ತಣ್ಣೀರೆರಚದಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅದರ ಚುನಾವಣೆಯ ಬಗ್ಗೆ ಡಾ. ಆರ್.ಲಕ್ಷ್ಮೀನಾರಾಯಣ ಅವರು ಪ್ರಸ್ತಾಪಿಸಿ ದ್ದಾರೆ (ಪ್ರ.ವಾ., ನ. 1). ಹಿಂದೆಲ್ಲಾ ಪರಿಷತ್ತಿನ ರಾಜ್ಯ ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷ ಗಾದಿಗೆ ಅಭ್ಯರ್ಥಿಗಳನ್ನು ಬಲವಂತವಾಗಿ ಎಳೆದುಕೊಂಡು ಬಂದು ಕೂರಿಸಬೇಕಿತ್ತು. ಆದರೆ, ಬರಬರುತ್ತಾ ಸಮ್ಮೇಳನಕ್ಕೆ ಸರ್ಕಾರದಿಂದ ಕೋಟಿಗಟ್ಟಲೆ ಹಣ ಬರುತ್ತಿರುವ ಕಾರಣಕ್ಕೋ ಅಥವಾ ಇನ್ನಾವ ಕಾರಣಕ್ಕೋ ಆ ಸ್ಥಾನಗಳಿಗೆ ಭರ್ಜರಿಯಾಗಿ ಚುನಾವಣೆಗಳು ನಡೆಯುವಂಥ ಸ್ಥಿತಿ ನಿರ್ಮಾಣವಾಗಿದೆ. ಅದಕ್ಕೆ ಸರಿಯಾಗಿ ಅಧ್ಯಕ್ಷರ ಅವಧಿ ಮೂರು ವರ್ಷಗಳಿಗೆ ಬದಲಾಗಿ ಐದು ವರ್ಷ ಆದದ್ದು ಕೂಡ ಪರಿಷತ್ತು ರಾಜಕೀಯ ಸಂಸ್ಥೆಯ ರೂಪ ಪಡೆಯಲು ಸಹಕಾರಿಯಾಯಿತೇನೋ ಎಂಬ ಆತಂಕ ಹಲವರಲ್ಲಿದೆ.

ಪರಿಷತ್ತಿನಲ್ಲಿ ಸಾರ್ವಜನಿಕರಿಂದ ದತ್ತಿ ಸ್ವೀಕರಿಸುವ ಒಂದು ಯೋಜನೆ ಇದೆ. ಒಂದು ಕುಟುಂಬದಲ್ಲಿ ನಿಧನರಾದವರು ಅಥವಾ ಇನ್ನಾವುದೋ ವ್ಯಕ್ತಿಯ ಸ್ಮರಣಾರ್ಥವಾಗಿ ಒಂದಷ್ಟು ಹಣವನ್ನು ಇಡುಗಂಟಾಗಿ ಇಟ್ಟುಕೊಂಡು ಅದರಿಂದ ಬರುವ ಬಡ್ಡಿ ಹಣದಲ್ಲಿ ಪ್ರತೀ ವರ್ಷ ಆ ವ್ಯಕ್ತಿಯ ಹೆಸರಿನಲ್ಲಿ ದತ್ತಿದಾನಿಗಳ ಆಶಯದಂತೆ ದತ್ತಿ ಉಪನ್ಯಾಸ ನಡೆಸಬೇಕಾಗುತ್ತದೆ. ಆ ಇಡುಗಂಟಿನ ಹಣ ನೇರವಾಗಿ ಕೇಂದ್ರ ಸಾಹಿತ್ಯ ಪರಿಷತ್ತಿನ ಖಾತೆಗೆ ಜಮೆಯಾಗಿರುತ್ತದೆ. ಆದರೆ ಕಾರ್ಯಕ್ರಮ ನಡೆಸುವ ಹೊಣೆ ಹೊರುವ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳು ಆ ಕಾರ್ಯಕ್ರಮಗಳನ್ನು ನಡೆಸದೇ ದತ್ತಿದಾನಿಗಳ ಆಶಯಕ್ಕೆ ತಣ್ಣೀರೆರಚಿರುವ ಆರೋಪ ಹಲವೆಡೆ ಕೇಳಿಬರುತ್ತಿದೆ. ಇದಕ್ಕೆ ಉತ್ತರದಾಯಿತ್ವ ಪರಿಷತ್ತಿನ ಕೇಂದ್ರ ಘಟಕದ್ದೇ ಆಗಿರುತ್ತದೆ. ಹೀಗಾದರೆ ಪರಿಷತ್ತಿನ ವಿಶ್ವಾಸಾರ್ಹತೆಗೆ ಧಕ್ಕೆಯಾಗಿ, ಯಾರು ಈ ಯೋಜನೆಗೆ ಹಣ ಕೊಡಲು ಮುಂದೆ ಬರುತ್ತಾರೆ?

ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮತ್ತೂರು, ಕೊಪ್ಪ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು