ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ನುಂಗಣ್ಣರ ಕಬಂಧಬಾಹು

Last Updated 6 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

‘ಆಸ್ತಿ ಕೊಳ್ಳೆಗೆ ಅಪ್ಪನೇ ಬದಲು!’ ಸುದ್ದಿ (ಪ್ರ.ವಾ., ಏ. 6) ಬೆಚ್ಚಿಬೀಳಿಸುವಂತಹುದು. ಬೆಂಗಳೂರು ನಗರ ಜಿಲ್ಲೆ ಹೆಸರಘಟ್ಟ ಹೋಬಳಿಯ ಮಾದಪ್ಪನಹಳ್ಳಿಯಲ್ಲಿ ₹ 200 ಕೋಟಿ ಮೌಲ್ಯದ 32.4 ಎಕರೆ ಸರ್ಕಾರಿ ಜಮೀನು ನಕಲಿ ದಾಖಲೆಗಳ ಮೂಲಕ ‘ಗುಳುಂ’ ಆಗಿದೆಯೆಂಬ ಪ್ರಕರಣವನ್ನು ಪತ್ತೆ ಹಚ್ಚಿರುವ ವಿಶೇಷ ಜಿಲ್ಲಾಧಿಕಾರಿ ಎಂ.ಕೆ.ಜಗದೀಶ್ ಅವರ ಕೆಲಸಕ್ಕೆ ಭಲೆ ಎನ್ನಲೇಬೇಕು.

‘ಭೂಮಿ ನುಂಗಣ್ಣ’ರ ಕಬಂಧಬಾಹು ಇಂದು ಎಲ್ಲೆಲ್ಲೂ ಹೇಗೆ ಅಟ್ಟಹಾಸದಿಂದ ಚಾಚಿದೆಯೆಂಬುದು ಗಾಬರಿ ಮೂಡಿಸುವಂತಹುದು. ಅದರಲ್ಲೂ ರಾಜಧಾನಿಯ ಹೊರವಲಯದಲ್ಲೇ ಹೀಗಾಗಿದೆಯೆಂದರೆ, ಇನ್ನು ಇತರ ಜಿಲ್ಲೆಗಳಲ್ಲಿ ಏನೇನಾಗಿರಬಹುದು ಎಂಬುದನ್ನು ಊಹಿಸುವುದು ಕಷ್ಟವೇನಲ್ಲ. ಖಾಲಿ ಇರುವ ಪಕ್ಕದ ನಿವೇಶನವನ್ನೇ ಒತ್ತರಿಸುವ ಅಥವಾ ಸದ್ದಿಲ್ಲದೆ ಗುಳುಂ ಮಾಡುವಂಥ ನುಂಗಣ್ಣರು ಇರುವಾಗ, ಬೀಳು ಬಿದ್ದಿರುವ ಸರ್ಕಾರಿ ಜಾಗವನ್ನು ಸುಮ್ಮನೆ ಬಿಟ್ಟಾರೆಯೇ?

ಹಳ್ಳಿ-ಹಳ್ಳಿಗಳಲ್ಲೂ ಕೆರೆ-ಕಟ್ಟೆ, ರಾಜಕಾಲುವೆ, ಸರ್ಕಾರಿ ಶಾಲಾ– ಕಾಲೇಜು ಜಾಗ, ರಸ್ತೆ- ಉದ್ಯಾನ ಹಾಗೂ ಸರ್ಕಾರಕ್ಕೆ ಸೇರಿದ ಇತರ ಖಾಲಿ ಜಾಗಗಳನ್ನು ಎಗ್ಗಿಲ್ಲದೆ ಒತ್ತುವರಿ ಮಾಡಿರುವ ಪ್ರಕರಣಗಳಿಗೇನೂ ಕೊರತೆಯಿಲ್ಲ. ಇಂಥದ್ದರ ವಿರುದ್ಧ ದನಿಯೆತ್ತುವವರನ್ನೇ ಮಟ್ಟ ಹಾಕುವ ಮಟ್ಟಕ್ಕೆ ‘ಭೂಮಿ ನುಂಗಣ್ಣ’ರ ದುಷ್ಟಕೂಟ ಪ್ರಬಲವಾಗಿದೆ. ಇಂಥ ವಿಷಮ ಸನ್ನಿವೇಶದಲ್ಲೂ ದಿಟ್ಟ ಕ್ರಮ ಕೈಗೊಂಡಿರುವುದು ಅಭಿನಂದನೀಯ. ಪ್ರತೀ ಜಿಲ್ಲೆ-ತಾಲ್ಲೂಕಿನಲ್ಲೂ ಸರ್ಕಾರಿ ಅಧಿಕಾರಿಗಳು ಹೀಗೆ ದಿಟ್ಟ ಕ್ರಮ ಜರುಗಿಸಿದರೆ, ಅದೆಷ್ಟು ಕೋಟಿ ಮೌಲ್ಯದ ಸರ್ಕಾರಿ ಜಮೀನು ಪತ್ತೆ ಆದೀತೋ?!

–ಆರ್.ಎಸ್.ಅಯ್ಯರ್, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT