ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಭರವಸೆ ಚಿಗುರಿಸಿದ ಉದ್ಯೋಗ ಖಾತರಿ

Last Updated 3 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

‘ಹಮ್ಮು’ ಬಿಟ್ಟು ‘ಕೂಲಿ’ಗಿಳಿದರು ವಿಶೇಷ ವರದಿ (ಪ್ರ.ವಾ., ಆ.2) ಸಕಾಲಿಕವಾಗಿದೆ. ‘ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ– 2005 ಜಾರಿಯಾದ ಮೂರು ವರ್ಷಗಳ ಬಳಿಕ, ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯದ ಕನಸಿನ ಸಾಕಾರಕ್ಕೆ ದೊಡ್ಡ ಕೊಡುಗೆ ಎಂಬಂತೆ ಅಂದಿನ ಪ್ರಧಾನಿ, ಗಾಂಧಿ ಹೆಸರನ್ನು ಈ ಯೋಜನೆಗೆ ಸೇರ್ಪಡೆ ಮಾಡಿದರು. ಬಳಿಕ ಆಯಾ ರಾಜ್ಯಗಳ ಭೌಗೋಳಿಕ ಸ್ಥಿತಿ, ಜೀವನಮಟ್ಟ, ಆಡಳಿತ ವ್ಯವಸ್ಥೆ ಆಧಾರದಲ್ಲಿ ಉದ್ಯೋಗ ಖಾತರಿ ಯೋಜನೆ ಜಾರಿಯಲ್ಲಿದೆ.

ಈ ಕಾಯ್ದೆ ಬರುವ ಮುನ್ನ ಚಾಲ್ತಿಯಲ್ಲಿದ್ದ ‘ಕೂಲಿಗಾಗಿ ಕಾಳು’ ಯೋಜನೆ ಜಾರಿಗೆ ಬಂದಾಗ, ಅದನ್ನು ದೇಶದಲ್ಲಿ ಮೂರು ಹಂತಗಳಲ್ಲಿ ಎಲ್ಲಾ ರಾಜ್ಯಗಳಿಗೆ ವಿಸ್ತರಿಸಲಾಯಿತು. ಆರಂಭದಲ್ಲಿ ಅನುಷ್ಠಾನ ಅಧಿಕಾರಿಗಳಿಗೆ ಕಾಯ್ದೆಯ ಬಗ್ಗೆ ಭಯ ಇತ್ತು. ಸಮುದಾಯಕ್ಕೆ ನಿರ್ಲಕ್ಷ್ಯ, ಅಸಡ್ಡೆ ಇತ್ತು. ಪಟ್ಟಭದ್ರರಿಗೆ ಆತಂಕ ಇತ್ತು. ಆದರೆ, ಉದ್ಯೋಗ ಖಾತರಿ ಯೋಜನೆಯು ಈಗ ವಿಪತ್ತಿನ ಕಾರಣಕ್ಕೋ ಏನೋ ಹಲವು ಅನಿರೀಕ್ಷಿತ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಗ್ರಾಮೀಣ ವಲಸೆಯು ಮರುವಲಸೆಯಾಗಿ ಪರಿವರ್ತನೆಯಾಗಿದೆ.

ಅಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ‘ಕೂಲಿ ಕಾರ್ಮಿಕ’ ಎಂಬ ಪದ ಬಳಕೆಯ ಬಗ್ಗೆಯೇ ದೊಡ್ಡ ಚರ್ಚೆಯಾಗಿತ್ತು. ಕೂಲಿ ಕಾರ್ಮಿಕ ಪದಕ್ಕೆ ಪರ್ಯಾಯ ಪದ ಬಳಸಬೇಕು ಎನ್ನುವ ಕೂಗು ಕೇಳಿಬಂದಿತ್ತು. ನಾವು ಕ್ಷೇತ್ರ ಭೇಟಿಗಾಗಿ ಅಧಿಕಾರಿಗಳನ್ನು ಮೈಸೂರು ಜಿಲ್ಲೆಯ ಹಳ್ಳಿಗಳಿಗೆ ಕರೆದೊಯ್ದಾಗ, ಹಲವು ಹಳ್ಳಿಗರು ‘ಕೂಲಿ‌’ ಎನ್ನುವ ಪದ ಇರುವುದರಿಂದ ಹಳ್ಳಿಯಲ್ಲಿ ಉದ್ಯೋಗ ಖಾತರಿ ಕೆಲಸಕ್ಕೆ ಬರಲು ಹಿಂಜರಿಯುತ್ತಾರೆ ಎಂದು ಹೇಳಿದ್ದು ಈಗಲೂ ಸ್ಪಷ್ಟವಾಗಿ ನೆನಪಿದೆ. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಯೋಜನೆಯು ಎಲ್ಲಾ ಇಲ್ಲಗಳನ್ನೂ ಮೀರಿ ಹೆಮ್ಮೆಯ ಗರಿಗಳನ್ನು ಮೂಡಿಸಿದೆ. ವಿದ್ಯಾವಂತರು, ಉದ್ಯೋಗಿಗಳು, ಜಮೀನ್ದಾರರು, ಮಧ್ಯಮವರ್ಗದವರು ಯೋಜನೆಯಡಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಪರಿಸ್ಥಿತಿಗೆ ತಕ್ಕಂತೆ ಏನು ಬೇಕಾದರೂ ಆಗಬಹುದು ಎಂಬುದು ಸಾಬೀತಾಗಿದೆ.

ಈ ಯೋಜನೆಯಡಿ ದುಡಿಯಲು ಬರುವವರ ಸಂಖ್ಯೆ ಕಡಿಮೆ ಎನ್ನುತ್ತಿದ್ದ ಹಲವು ಪ್ರದೇಶಗಳಲ್ಲಿ ಸ್ವಯಂಪ್ರೇರಿತ ಕೂಲಿ ಬೇಡಿಕೆಗಳು ವೃದ್ಧಿಸಿವೆ. ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಯು ಸಾಂದರ್ಭಿಕವಾಗಿ ತೆಗೆದುಕೊಂಡ ತೀರ್ಮಾನಗಳಿಂದಾಗಿ ವರ್ಷಧಾರೆಗೆ ಮುನ್ನ ಜಲ ಸಂರಕ್ಷಣೆ ಮತ್ತು ಮಣ್ಣು ಸಂರಕ್ಷಣೆಯ ಚಟುವಟಿಕೆಗಳಿಂದ ವಸುಂಧರೆ ಹಸಿರಿನಿಂದ ನಳನಳಿಸುವಂತಾಗಿದೆ. ಉದ್ಯೋಗ ಖಾತರಿ ಯೋಜನೆಯು ಗ್ರಾಮೀಣರ ಬದುಕಿನಲ್ಲಿ ಭದ್ರತೆಯ ಬದುಕಿಗೆ ನಾಂದಿಯಾಗಿದೆ. ಈ ಯೋಜನೆಯು ಜನಪರವಾಗಿ, ಗ್ರಾಮೀಣರ ಧ್ವನಿಯಾಗಿ ಯಶಸ್ಸು ಸಾಧಿಸಲಿ. ಉದ್ಯೋಗ ಖಾತರಿಯಡಿ ದುಡಿಮೆಯು ನಮ್ಮೆಲ್ಲರ ಹೆಮ್ಮೆಯ ಸಂಕೇತವಾಗಲಿ.

-ಸಿ.ವಿಜಯಕುಮಾರ್, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT