ಸೋಮವಾರ, ಸೆಪ್ಟೆಂಬರ್ 20, 2021
29 °C

ಸಂಕೀರ್ಣ ಜವಾಬ್ದಾರಿಗೆ ಬೇಡವೇ ಕನಿಷ್ಠ ವಿದ್ಯಾರ್ಹತೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಗ ಎಲ್ಲ ವೃತ್ತಿ ಕ್ಷೇತ್ರಗಳಿಗೂ ನಿಗದಿತ ಅಥವಾ ಅಗತ್ಯಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಉಳ್ಳವರು ಪ್ರವೇಶಿಸುವಷ್ಟು
ನಿರುದ್ಯೋಗ ಸಮಸ್ಯೆ ನಮ್ಮ ಯುವಜನರನ್ನು ಕಾಡುತ್ತಿದ್ದರೆ, ರಾಜಕೀಯ ಕ್ಷೇತ್ರದಲ್ಲಿ ಉದ್ಯೋಗಕ್ಕಾಗಿ ಕನಿಷ್ಠ ವಿದ್ಯಾರ್ಹತೆ ಇರಬೇಕೆಂಬ ಈ ಸಮಸ್ಯೆಯೇ ಇಲ್ಲವೆಂದು ಕಾಣುತ್ತದೆ! ಬಸವರಾಜ ಬೊಮ್ಮಾಯಿಯವರ ಮಂತ್ರಿಮಂಡಲ ಬಹುಶಃ ಈವರೆಗೆ ಕರ್ನಾಟಕ ಕಂಡ ಸರಾಸರಿ ಕನಿಷ್ಠ ವಿದ್ಯಾರ್ಹತೆಯ ಸಚಿವ ಸಂಪುಟವೆಂದು ಕಾಣುತ್ತದೆ. ಇಂದು ಒಂದು ಕನಿಷ್ಠ ದರ್ಜೆಯ ಸರ್ಕಾರಿ ಹುದ್ದೆಗೆ ಅಭ್ಯರ್ಥಿಗಳಾಗಿ ಪದವೀಧರರಿರಲಿ, ಸ್ನಾತಕೋತ್ತರ ಪದವೀಧರರ ನೂಕುನುಗ್ಗಲನ್ನು ಕಾಣುವಷ್ಟು ಸಮಾಜದಲ್ಲಿ ಜನರ ಶೈಕ್ಷಣಿಕ ಅರ್ಹತೆ ಹೆಚ್ಚಿರುವಾಗ, ಆ ಸಮಾಜವನ್ನು ಆಳಲು ಬೇಕಾದ ಜ್ಞಾನ, ಕೌಶಲ ಮತ್ತು ದಕ್ಷತೆಗಳನ್ನು ಬೇಡುವ ನಮ್ಮ ಸಚಿವರಿಗೆ ಯಾವ ಕನಿಷ್ಠ ಶೈಕ್ಷಣಿಕ ಅರ್ಹತೆಯೂ ಬೇಡವೆ? ಸದ್ಯದ ಬೊಮ್ಮಾಯಿಯವರ ಸಚಿವ ಸಂಪುಟದ 29 ಜನರಲ್ಲಿ ಕೇವಲ ಏಳನೇ ತರಗತಿಯವರೆಗೆ ಓದಿರುವವರೂ ಸೇರಿದಂತೆ ಎಸ್‌ಎಸ್‌ಎಲ್‌ಸಿ ಅಥವಾ ಪಿಯು ಪಾಸೋ ಫೇಲೋ ಆಗಿ ಸ್ಥಗಿತಗೊಂಡು ಪದವಿ ಮಟ್ಟವನ್ನೂ ಮುಟ್ಟದವರು ಬರೋಬ್ಬರಿ 12 ಜನ!

ಸಚಿವರೆಂದರೆ ರಾಜ್ಯದ ಕ್ಷೇಮಾಭಿವೃದ್ಧಿಯನ್ನು ನೋಡಿಕೊಳ್ಳುವ ಹೊಣೆ ಹೊತ್ತವರು, ಈ ಸಂಬಂಧ ಹಲವು ಜ್ಞಾನಶಿಸ್ತುಗಳ ವಿಷಯ- ವಿವರಗಳನ್ನೊಳಗೊಂಡ ಯೋಜನೆಗಳನ್ನು ಪರಿಶೀಲಿಸಿ ಅನುಮೋದನೆ ಮಾಡಬೇಕಾದವರು. ಅದಕ್ಕಾಗಿ ವಿಷಯ ಪರಿಣತರೊಂದಿಗೆ, ಅಧಿಕಾರಿ ವೃಂದದವರೊಂದಿಗೆ ಚರ್ಚಿಸಿ ಕಡತಗಳಲ್ಲಿ ಷರಾ ಬರೆಯಬೇಕಾದವರು ಆಥವಾ ಅದೇಶ ನೀಡಬೇಕಾದವರು. ಪದವಿ ಪಡೆದವರೆಲ್ಲ ಈ ಜವಾಬ್ದಾರಿಗಳನ್ನು
ಯಶಸ್ವಿಯಾಗಿ ನಿರ್ವಹಿಸಬಲ್ಲರು ಎದು ಹೇಳಲಾಗದಾದರೂ, ಒಂದು ಜವಾಬ್ದಾರಿಗೆ ಒಂದು ಕನಿಷ್ಠ ಅರ್ಹತೆ ಎಂಬುದು ಬೇಡವೆ? ಹಾಗಾದರೆ ಸರ್ಕಾರಿ ಹುದ್ದೆಗಳಿಗಾದರೂ ಕನಿಷ್ಠ ವಿದ್ಯಾರ್ಹತೆ ಏಕೆ ಬೇಕು? ಸಚಿವರು ಎಲ್ಲಕ್ಕೂ ಅಧಿಕಾರಿಗಳ ಸಲಹೆ-ಸೂಚನೆಗಳನ್ನೇ ಅವಲಂಬಿಸುವಂತಾದರೆ ಆಡಳಿತ ಎಂದರೆ ಅಧಿಕಾರಶಾಹಿಯದ್ದೇ ಆಟ ಎಂದಾಗುವುದಿಲ್ಲವೆ? ಆಗ ಸಚಿವರಾದರೂ ಏಕೆ ಬೇಕು?

ಈ ಹಿಂದೆ ಶಿಕ್ಷಣ ವ್ಯಾಪಕವಾಗಿಲ್ಲದಿದ್ದಾಗ, ಸಾರ್ವಜನಿಕ ಜೀವನದಲ್ಲಿನ ಅನುಭವ ಮತ್ತು ಸಾಮಾನ್ಯ ಜ್ಞಾನವನ್ನೇ ನೆಚ್ಚುವುದು ಅನಿವಾರ್ಯವಾಗಿತ್ತು. ಅಲ್ಲದೆ, ಆಗ ಸಮಾಜಕ್ಕೆ ಒಂದು ಮೌಲ್ಯ ವ್ಯವಸ್ಥೆಯ, ಬದ್ಧತೆಯ ರಕ್ಷಣೆಯೂ ಇತ್ತು, ಜೊತೆಗೆ ಆಗ ಆಡಳಿತ ಈಗಿನಷ್ಟು ಆಳದ ತಿಳಿವಳಿಕೆ ಬೇಡುವ ವಿಷಯಗಳನ್ನಾಧರಿಸಿದ ಅಭಿವೃದ್ಧಿ ಯೋಜನೆಗಳನ್ನೊಳಗೊಂಡ ಒಂದು ಸಂಕೀರ್ಣ ಜವಾಬ್ದಾರಿಯಾಗಿರಲಿಲ್ಲ. ಆದರೆ ಜಾಗತೀಕರಣದ ಈ ದಿನಗಳಲ್ಲಿ? ಹಾಗಾಗಿ, ಒಂದು ಪದವಿ ಗಳಿಸುವುದು ಒಂದು ಸಾಮಾನ್ಯ ಸಾಧನೆ ಎನಿಸಿರುವ ದಿನಗಳಲ್ಲಿಯೂ- ಅದಕ್ಕೀಗ ಹಲವು ಮುಕ್ತ ಅವಕಾಶಗಳು ಇರುವಾಗಲೂ- ಆ ಮಟ್ಟವನ್ನೂ ಮುಟ್ಟಲಾಗದವರಿಗೆ, ಆ ಮನೋವೃತ್ತಿ ಅಥವಾ ಆಕಾಂಕ್ಷೆಯೇ ಇಲ್ಲದವರಿಗೆ ಸಚಿವತನದ ಜವಾಬ್ದಾರಿ ನೀಡುವ ಅನಿವಾರ್ಯ ಏಕೆ? ಜನರಿಂದ ಆರಿಸಿಬಂದವರು ಎಂಬುದೊಂದೇ ಅರ್ಹತೆ ಸಾಕೆ? ಈಗ ಜನರಿಂದ ಆರಿಸಿ ಬರಲು ಯಾವ ಯಾವ ಅರ್ಹತೆಗಳು ಅವಶ್ಯಕ ಎಂಬುದು
ಜಗಜ್ಜಾಹೀರಾಗಿರುವಾಗ? ಬಲ್ಲವರು ಯೋಚಿಸಿ ತೀರ್ಮಾನಿಸಬೇಕು.

-ಡಿ.ಎಸ್.ನಾಗಭೂಷಣ, ಶಿವಮೊಗ್ಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.