ಮಂಗಳವಾರ, ಜನವರಿ 21, 2020
25 °C

ಶಾಲೆಗಳಲ್ಲಿ ಮೊಬೈಲ್‌ ಬಳಕೆ ಅನಿವಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪಕ್ಕೆಲುಬು’ ಎಂಬ ಪದವನ್ನು ಸರಿಯಾಗಿ ಉಚ್ಚರಿಸದ ಬಾಲಕನ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ ಶಿಕ್ಷಕರೊಬ್ಬರನ್ನು ಅಮಾನತು ಮಾಡಲಾಗಿದೆ. ಈ ಪ್ರಕರಣ ಶಿಕ್ಷಕರ ವಲಯಕ್ಕೆ ಒಂದು ಕಪ್ಪುಚುಕ್ಕೆ ಹೌದು. ಆದರೆ ಇದೊಂದೇ ಆಧಾರದ ಮೇಲೆ ಶಾಲೆಗಳಲ್ಲಿ ಕಟ್ಟುನಿಟ್ಟಾಗಿ ಮೊಬೈಲ್ ನಿಷೇಧಿಸುವ ಬಗ್ಗೆ ಮಾತುಕತೆ ನಡೆಯುತ್ತಿರುವುದು (ಈಗಾಗಲೇ ಶಿಕ್ಷಣ ಇಲಾಖೆಯ ಆದೇಶ ಇದ್ದರೂ ಅದು ಪಾಲನೆಯಾಗುತ್ತಿಲ್ಲ ಅಷ್ಟೆ) ಸರಿಯಲ್ಲ. ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯಲು ಹೊಸ ಯೋಜನೆಗಳೊಂದಿಗೆ ಹಳ್ಳಿ ಹಳ್ಳಿಗಳಲ್ಲೂ ಸ್ಮಾರ್ಟ್ ಕ್ಲಾಸ್‌ಗಳು ಆರಂಭವಾಗುತ್ತಿವೆ. ಟಿ.ವಿ, ಪ್ರೊಜೆಕ್ಟರ್‌, ಲ್ಯಾಪ್‌ಟಾಪ್‌ ನಂತಹ ಆಧುನಿಕ ಕಲಿಕೋಪಕರಣಗಳ ಜೊತೆಗೆ ಕಲಿಕೆ ಸಾಗುತ್ತಿದೆ.

ಸಾವಿರಾರು ಶಿಕ್ಷಕರು ವಾಟ್ಸ್‌ ಆ್ಯಪ್, ಫೇಸ್‌ಬುಕ್‌ ಗ್ರೂಪ್‌ಗಳನ್ನು ಮಾಡಿಕೊಂಡು ಶೈಕ್ಷಣಿಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಪಾಠದ ಟಿಪ್ಪಣಿ, ಕಾರ್ಯ ಯೋಜನೆ, ಅಕ್ಷರ ದಾಸೋಹ, ಸಭೆಗಳ ಬಗ್ಗೆ ಮಾಹಿತಿ ತಿಳಿಸಲು, ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ತಿಳಿಸಲು, ಪ್ರಗತಿದಾಯಕ ವಿಷಯಗಳನ್ನು ಹಂಚಿಕೊಳ್ಳಲು... ಹೀಗೆ ಹತ್ತು ಹಲವು ಪ್ರಕಾರದ ಕೆಲಸಗಳು ಮೊಬೈಲ್ ಮೂಲಕ ಸಾಗುತ್ತಿವೆ. ಇಂತಹ ಚಟುವಟಿಕೆಗಳಿ
ಗಾದರೂ ಶಾಲೆಗಳಲ್ಲಿ ಮೊಬೈಲ್ ಬಳಕೆ ಅತ್ಯಗತ್ಯ. ಹೀಗಾಗಿ, ಕೆಲವು ಶಿಕ್ಷಕರು ಮಾಡುವ ತ‍‌ಪ್ಪಿನಿಂದ ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ’ ಆಗಬಾರದು. ಶಿಕ್ಷಕರು ಮೊಬೈಲ್‌ ಬಳಕೆಯನ್ನು ದುರುಪಯೋಗ ಮಾಡಿಕೊಳ್ಳದೆ, ಅದರ ಮೂಲಕ ಶಾಲಾ ವೇಳೆಯಲ್ಲಿ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಲು ಸರ್ಕಾರ ಅನುವು ಮಾಡಿಕೊಡಬೇಕು. ಶಿಕ್ಷಕರೂ ಈ ವಿಚಾರದಲ್ಲಿ ತಮ್ಮ ಹೊಣೆಯರಿತು ನಡೆಯಬೇಕು.

ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು
 

ಪ್ರತಿಕ್ರಿಯಿಸಿ (+)