ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ@75: ‘ಪ್ರಜಾವಾಣಿ’ಯೆಂಬ ಅವ್ಯಕ್ತ ಆನಂದ

Last Updated 22 ನವೆಂಬರ್ 2022, 9:55 IST
ಅಕ್ಷರ ಗಾತ್ರ

ನಮ್ಮ ಊರು ಶಿವಮೊಗ್ಗ ಜಿಲ್ಲೆಯ ತಲವಾಟ. ಈ ಹಳ್ಳಿಯಲ್ಲಿ 1970ರ ಹೊತ್ತಿಗೆ 16-18 ಮನೆಗಳಿದ್ದವು. ನಾನು ಪ್ರಾಥಮಿಕ ಶಾಲೆಯಲ್ಲಿ
ಓದುತ್ತಿದ್ದೆ. 6 ಕಿಲೋ ಮೀಟರ್ ದೂರದ ತಾಳಗುಪ್ಪದಲ್ಲಿ ಮಹಾಬಲಗಿರಿರಾವ್ ಎಂಬುವವರು ಪ್ರಜಾವಾಣಿ ಏಜೆಂಟರಾಗಿದ್ದರು. ಅಲ್ಲಿಗೆ ಬೆಳಿಗ್ಗೆ 9:00 ಗಂಟೆ ಬಸ್ಸಿಗೆ ಪೇಪರ್ ಬಂಡಲ್ ಬರುತ್ತಿತ್ತು. ಅಲ್ಲಿರುವ ಪ್ರೌಢಶಾಲೆಗೆ ಹೋಗುತ್ತಿದ್ದ ನಮ್ಮ ಊರಿನ
ಹುಡುಗರು ಸಂಜೆ ಬರುವಾಗ ಪ್ರಜಾವಾಣಿ ತರುತ್ತಿದ್ದರು. ಊರಿನ 8-10 ಮನೆಗಳಿಗೆ ಪ್ರಜಾವಾಣಿ ಬರುತ್ತಿತ್ತು. ಮನೆಯಲ್ಲಿ
ಹಿರಿಯರು ಪೇಪರ್ ಓದಿದ ಮೇಲೆ ನಮಗೆ ಓದಲು ಸಿಗುತ್ತಿತ್ತು. ಒಮ್ಮೊಮ್ಮೆ ನಾವು ಮಕ್ಕಳೆಲ್ಲಾ ಕುತೂಹಲದಿಂದ ಅವರು
ಓದುತ್ತಿದ್ದಾಗ ದೊಡ್ಡ ಅಕ್ಷರಗಳನ್ನು ಬಗ್ಗಿ ನೋಡುತ್ತಿದ್ದೆವು. ಪತ್ರಿಕೆಯ ಚಿನಕುರಳಿಯನ್ನು ನೋಡಿ ತುಂಬಾ ಖುಷಿ ಪಡುತ್ತಿದ್ದೆವು.

ಕೆಲವು ಬಾರಿ ಕರೆಂಟ್ ಇಲ್ಲದೆ ರಾತ್ರಿ ಪತ್ರಿಕೆ ಓದಲು ಸಾಧ್ಯವಾಗದೆ ಬೇಸರವಾಗುತ್ತಿತ್ತು. ಬೆಳಗ್ಗೆ ಬೇಗ ಎದ್ದು ಓದುತ್ತಿದ್ದವು.
ಶಾಲೆಯಲ್ಲಿ ಪ್ರಾರ್ಥನೆಯ ನಂತರ ಪ್ರತಿದಿನವೂ ಒಬ್ಬರು ಹಿಂದಿನ ದಿನದ ಪ್ರಜಾವಾಣಿಯ ಮುಖ್ಯಾಂಶಗಳನ್ನು,
ಕೊನೆಯಲ್ಲಿ ಸುಭಾಷಿತವನ್ನು ಓದಬೇಕಾಗಿತ್ತು.ಈ ಸುಭಾಷಿತವನ್ನು ಶಾಲೆಯ ಸೂಚನಾ ಫಲಕ (ಕಪ್ಪುಹಲಗೆ) ದಲ್ಲಿ ಮೇಷ್ಟ್ರು
ಪ್ರತಿನಿತ್ಯ ಬರೆಸುತ್ತಿದ್ದರು.

ಇಂದು ಪ್ರಜಾವಾಣಿ ಚುಮುಚುಮು ಬೆಳಗಿಗೆ ಮನೆಗೆ ಬರುತ್ತಿದೆ. ನಮ್ಮ ರಾಜ್ಯದ ರಾಜಕೀಯ, ಸಾಮಾಜಿಕ, ಸಾಹಿತ್ಯಿಕ
ಸ್ಥಿತ್ಯಂತರಗಳಲ್ಲಿ ಎತ್ತರದ ಧ್ವನಿಯಾಗಿ ನಿಂತಿದೆ. ಸಮಾಜಮುಖಿ ಧ್ಯೇಯೋದ್ದೇಶಗಳೊಂದಿಗೆ ಜವಾಬ್ದಾರಿಯುತವಾಗಿ ನಡೆದು
ಸಾಗಿದೆ. ಜಗತ್ತಿನ ಕೆಲವೇ ಶ್ರೇಷ್ಠ ಪತ್ರಿಕೆಗಳಲ್ಲಿ ನಮ್ಮ ಪ್ರಜಾವಾಣಿಯು ಒಂದು. ಎಲ್ಲಾ ಅಂಕಣಗಳು ಪುರವಣಿಗಳು ಓದಲು
ಪ್ರೇರೇಪಿಸುವ ಜೊತೆಗೆ, ಬರೆಯುವಂತೆಯೂ ಹುರಿದುಂಬಿಸುವುದು ಪತ್ರಿಕೆಯ ಶಕ್ತಿ.

ಪ್ರಜಾವಾಣಿ ಕೈಯಲ್ಲಿ ಹಿಡಿದು ಹೊರಟಾಗ ಅದೇನೋ ಅವ್ಯಕ್ತ ಆನಂದ, ಹೆಮ್ಮೆ, ಧೈರ್ಯ ಜೊತೆಗೆ ಗರ್ವ! ಪತ್ರಿಕೆ
ಬೆಳೆಯುತ್ತಲೇ ಹೋಗಲಿ ಎಂದು ಆಶಿಸುತ್ತೇನೆ.

ಜಯಪ್ರಕಾಶ ತಲವಾಟ, ಸಾಗರ

--

ನಮ್ಮೆಲ್ಲರ ನೆಚ್ಚಿನ ಪ್ರಜಾವಾಣಿ:

ಕನ್ನಡ ನಾಡಿನ ನಾಡಿಮಿಡಿತ, ನಮ್ಮೆಲ್ಲರ ನೆಚ್ಚಿನ ಪ್ರಜಾವಾಣಿ. ಆಡು ಮುಟ್ಟದ ಸೊಪ್ಪಿರಬಹುದು, ಆದರೆ ಪ್ರಜಾವಾಣಿ ಮುಟ್ಟದ ಕ್ಷೇತ್ರವಿಲ್ಲ. ಇದರಲ್ಲಿ ಮೂಡಿ ಬರುವ ವಿದ್ವತ್ಪೂರ್ಣ ಲೇಖನಗಳು ಕನ್ನಡಿಗರ ಜ್ಞಾನ ಭಂಡಾರದ ಪರಿಧಿಯನ್ನು ಅಗಾಧವಾಗಿ ವಿಸ್ತರಿಸುವಂತೆ ಮಾಡುತ್ತಾ ಬಂದಿದೆ. ಇಂಟರ್ನೆಟ್ ಇಲ್ಲದ ದಿನಗಳಲ್ಲಿ ಖಚಿತ, ಆಳವಾದ, ನಂಬಲರ್ಹವಾದ ಮಾಹಿತಿಗಿದ್ದ ಒಂದೇ ಮೂಲ ಪ್ರಜಾವಾಣಿ. ನಾನು ಪ್ರತಿದಿನ ಲೈಬ್ರರಿಯಲ್ಲಿ ಪ್ರಜಾವಾಣಿಗಾಗಿ ಕಾಯುತ್ತಿದ್ದ ದಿನಗಳು ನೆನಪಾಗುತ್ತವೆ. ಆಗ ಪ್ರಜಾವಾಣಿಯನ್ನೋದಲು ಸ್ಪರ್ದೆಯೇ ಇರುತ್ತಿತ್ತು! ಆ ಜನಪ್ರಿಯತೆಯನ್ನು ಇಂದಿಗೂ ಕಾಯ್ದುಕೊಂಡು ಬಂದಿರುವುದು ಮಹತ್ಸಾಧನೆಯೇ ಸರಿ. UPSC ಯಲ್ಲಿ ಸಫಲತೆ ಪಡೆಯಲು ಪ್ರಜಾವಾಣಿ ನೀಡಿದ ಕೊಡುಗೆಯನ್ನಂತೂ ಮರೆಯುವಂತಿಲ್ಲ. ನಾಡಿನ ಹೊರಗಿದ್ದರೂ, ನಮ್ಮೂರಿನ ಸುದ್ದಿಯನ್ನು ಅಷ್ಟೇ ಪಕ್ವತೆಯಿಂದ ನಿತ್ಯವೂ ಉಣಬಡಿಸುತ್ತಿರುವ ಪ್ರಜಾವಾಣಿ ನನಗೆ ತುಂಬಾ ಅಚ್ಚು ಮೆಚ್ಚು. ಅಮೃತ ಮಹೋತ್ಸವದ ಹೊಸ್ತಿಲ್ಲಲ್ಲಿರುವ ನಮ್ಮೆಲ್ಲರ ನೆಚ್ಚಿನ ಪ್ರಜಾವಾಣಿ ಇನ್ನೂ ಉನ್ನತ ಸ್ಥಾನಕ್ಕೆ ಏರಲಿ ಎಂದು ಹಾರೈಸುವೆ.

ಸುಧೀರ್ ಕೀಳಂಬಿ, ನವದೆಹಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT