ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ– 06 ಮೇ 2023

Published 6 ಜೂನ್ 2023, 0:38 IST
Last Updated 6 ಜೂನ್ 2023, 0:38 IST
ಅಕ್ಷರ ಗಾತ್ರ

ಸೆಲ್ಫಿ ಆಯಿತು, ಮುಂದೆ...?

ವಿಶ್ವ ಪರಿಸರ ದಿನದಂದು (ಜೂನ್ 5)
ಸೆಲ್ಫಿಯೊಂದಿಗೆ ಗಿಡ ನೆಟ್ಟಿದ್ದು
ಅದನ್ನು ವಾಟ್ಸ್‌ಆ್ಯಪ್ ಸ್ಟೇಟಸ್‌ಗೆ ಹಾಕಿದ್ದು
ಲೈಕು, ಕಮೆಂಟು ಎಂಜಾಯ್ ಮಾಡಿದ್ದೆಲ್ಲ
ಆಯಿತು, ಇನ್ನು ನೆಟ್ಟ ಗಿಡಗಳಿಗೆ

ಒಂದಷ್ಟು ತಿಂಗಳಾದರೂ

ನೀರೆರೆದು ಪೋಷಿಸಿ, ಆ ಮೂಲಕ 
ಪರಿಸರ ದಿನವನ್ನು ಸಾರ್ಥಕವಾಗಿಸಿ!
ಹರಳಹಳ್ಳಿಪುಟ್ಟರಾಜು, ಪಾಂಡವಪುರ

ನಾವು ಹೇಳಬಯಸುವುದೇನೆಂದರೆ...

ಕಾಂಗ್ರೆಸ್ ನೇತೃತ್ವದ ಸರ್ಕಾರ ರಾಜ್ಯದ ಜನತೆಗೆ ನೀಡಿರುವ ಐದು ಗ್ಯಾರಂಟಿಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಲೇ ನಾವು ಹೇಳಬಯಸುವುದೇನೆಂದರೆ: ನಮಗೆ ಅನ್ವಯವಾಗುವ ‘ಗೃಹಜ್ಯೋತಿ’ ಹಾಗೂ ‘ಗೃಹಲಕ್ಷ್ಮಿ’ ಯೋಜನೆಗಳ ಅಡಿಯಲ್ಲಿ ಸರ್ಕಾರ ನೀಡಲಿರುವ 200 ಯೂನಿಟ್ ಉಚಿತ ವಿದ್ಯುತ್ ಅನ್ನಾಗಲೀ, ಪ್ರತಿ ಮನೆಯ ಯಜಮಾನಿಗೆ ನೀಡುವ ₹ 2000ವನ್ನಾಗಲೀ, ಒಳ್ಳೆಯ ವರಮಾನ ಹೊಂದಿದ್ದು, ನಾವು ಬಳಸುವ ವಿದ್ಯುಚ್ಛಕ್ತಿಯ ಬಿಲ್ಲನ್ನು ಪಾವತಿಸುವ ಸಾಮರ್ಥ್ಯವಿರುವ ನಮ್ಮಂತಹವರು ಸ್ವೀಕರಿಸುವುದು ಉಚಿತವಲ್ಲವೆಂದು ತೆಗೆದುಕೊಳ್ಳದಿರಲು ನಿರ್ಧರಿಸಿದ್ದೇವೆ. ಬದಲಾಗಿ ಅದು ಅರ್ಹ ಫಲಾನುಭವಿಗಳನ್ನು ತಲುಪಬೇಕೆಂಬುದು ನಮ್ಮ ಆಶಯ.

ಲಕ್ಷ್ಮೀ ಚಂದ್ರಶೇಖರ್, ಪ್ರೊ. ಬಿ.ಕೆ.ಚಂದ್ರಶೇಖರ್ 

ತಮ್ಮದೇ ಆದೇಶದ ವಿರುದ್ಧ ಪ್ರತಿಭಟನೆ?

ಬಿಜೆಪಿ ಮಹನೀಯರೇ, ಯೂನಿಟ್‌ಗೆ ₹ 70 ಪೈಸೆಯಂತೆ ವಿದ್ಯುತ್‌ ಬಿಲ್ ಏಪ್ರಿಲ್ 1ರಿಂದ ಪೂರ್ವಾನ್ವಯ ಆಗುವಂತೆ ಆದೇಶ ಮಾಡಿ, ಚುನಾವಣೆ ಮುಗಿದ ಮಾರನೇ ದಿನವೇ ಕರ್ನಾಟಕದ ಜನತೆಗೆ ಕರೆಂಟ್ ಶಾಕ್ ಕೊಟ್ಟವರು ನೀವು. ಈಗ ಆ ಆದೇಶದ ವಿರುದ್ಧವೇ ರಾಜ್ಯದಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳುತ್ತಿರುವಿರಲ್ಲಾ, ಚುನಾವಣಾ ಫಲಿತಾಂಶದ ನಂತರ ಸಾಮಾನ್ಯ ಜ್ಞಾನವೂ ನಿಮ್ಮಲ್ಲಿ ನಶಿಸಿತೇ?

ಜನಸಾಮಾನ್ಯರ ಬಗ್ಗೆ ಕಿಂಚಿತ್ ಕಾಳಜಿಯಾದರೂ ನಿಮ್ಮಲ್ಲಿ ಇದ್ದಿದ್ದರೆ ಆ ಆದೇಶವನ್ನು ನೀವು ತಡೆಯಬಹುದಿತ್ತಲ್ಲಾ. ನೀವೇ ಬೌಲಿಂಗ್ ಮಾಡಿದ ಬಾಲಿಗೆ ನೀವೇ ಬ್ಯಾಟಿಂಗೂ ಮಾಡುವ ಆಸೆಯೇ? 

ಪಾಂಡುರಂಗ, ಬೆಂಗಳೂರು

ಮೈತ್ರಿ ಸಾಧ್ಯತೆ: ಜೆಡಿಎಸ್‌ ಪರ್ಯಾಲೋಚಿಸಲಿ

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಯೋಚಿಸುತ್ತಿದೆ ಎಂಬ ಸುದ್ದಿಯನ್ನು (ಪ್ರ.ವಾ., ಜೂನ್ 5) ಓದಿದಾಗ, ಪ್ರವಾಹದಲ್ಲಿ ಮುಳುಗುವ ವ್ಯಕ್ತಿ ಒಂದು ಹುಲ್ಲುಕಡ್ಡಿಯ ಆಸರೆಗೂ ಕೈ ಚಾಚುವ ರೂಪಕ ನೆನಪಾಯಿತು. ತೀರಾ ಈಚೆಗೆ ಕರ್ನಾಟಕದಲ್ಲಿ ಸ್ವಯಂಕೃತ ತಪ್ಪಿನಿಂದಾಗಿ ಸೋತು ಹೋಗಿರುವ ಬಿಜೆಪಿ ಈಗ ಜೆಡಿಎಸ್ ಜೊತೆ ಮೈತ್ರಿಗೆ ಮುಂದಾಗಿರುವುದು ಬರೀ ತಂತ್ರಗಾರಿಕೆಯಷ್ಟೇ ಅಲ್ಲ, ನಂತರ ಜೆಡಿಎಸ್‌ನಂಥ ಸಣ್ಣ ಪಕ್ಷವನ್ನು ಆಪೋಶನ ತೆಗೆದುಕೊಳ್ಳುವ ಹುನ್ನಾರವೂ ಇದರ ಹಿಂದೆ ಅಡಗಿದೆ.

ಬಿಜೆಪಿಯ ಅಂಥ ಹುನ್ನಾರದ ವಾಸನೆ ಹಿಡಿದ ಬಿಹಾರದ ನಿತೀಶ್ ಕುಮಾರ್, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರು ಕಂಡುಕೊಂಡ ಎಚ್ಚರ, ಜೆಡಿಎಸ್‌ನ ಕಣ್ತೆರೆಸಬೇಕಿದೆ. ಜೆಡಿಎಸ್‌ಗೆ ಕರ್ನಾಟಕ ಬಿಟ್ಟರೆ ಬೇರೆ ರಾಜ್ಯದಲ್ಲಿ ನೆಲೆಯಿಲ್ಲ. ಈಚೆಗೆ ನೆಲ ಕಚ್ಚಿರುವ ಜೆಡಿಎಸ್ ಜನಪರ ಹೋರಾಟದಲ್ಲಿ ತೊಡಗಿದರೆ ಮತ್ತೆ ಪುಟಿದೇಳುವ ಅವಕಾಶ ಖಂಡಿತವಾಗಿ ಇದ್ದೇ ಇದೆ. ನಮ್ಮ ಸಂವಿಧಾನದ ಜಾತ್ಯತೀತ ಮೌಲ್ಯವನ್ನು ಪಕ್ಷದ ಹೆಸರಿನಲ್ಲೇ ಸ್ಥಾಪಿಸಿಕೊಂಡಿರುವ ಜೆಡಿಎಸ್, ಸ್ವತಂತ್ರವಾಗಿ ಉಳಿದು ಬೆಳೆಯಬೇಕೆಂದು ಸಾಮಾಜಿಕ ಸೌಹಾರ್ದ ಬಯಸುವ ಜನ ಆಶಿಸುತ್ತಾರೆ. ಆದ್ದರಿಂದ ಪಕ್ಷವು ಪರ್ಯಾಲೋಚಿಸಲಿ.

ಹುರುಕಡ್ಲಿಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ಜೀವಂತ ಪಠ್ಯಗಳಿಂದ ಮಾತ್ರ ಲವಲವಿಕೆ

ಪಠ್ಯಪುಸ್ತಕಗಳ ಪುನರ್‌ರಚನೆ ಕುರಿತು ಪತ್ರಿಕೆ ನೀಡಿರುವ (ಸಂಪಾದಕೀಯ ಜೂನ್‌ 5) ಸಕಾಲಿಕ ಸಲಹೆ, ಮಾರ್ಗದರ್ಶನಕ್ಕೆ ಧನ್ಯವಾದ. ಈ ವರ್ಷದ ತರಗತಿಗಳು ಈಗಾಗಲೇ ಆರಂಭವಾಗಿರುವುದರಿಂದ ವಿವಾದಿತ ಪಠ್ಯಗಳನ್ನು ಈ ಸಲದ ಅಧ್ಯಯನಕ್ಕೆ ಬಳಸಿಕೊಳ್ಳದಿರುವಂತೆ ಸುತ್ತೋಲೆ ಹೊರಡಿಸಿದರೆ ಸಾಕಾಗುತ್ತದೆ. ಕೆಲವು ಪಾಠಗಳನ್ನು ಬಳಸದಿರುವ ಕಾರಣದಿಂದಾಗಿ ಮಿಗುವ ತರಗತಿಯ ಗಂಟೆಗಳನ್ನು ಮಕ್ಕಳ ಭಾಷಾ ಕಲಿಕೆಯ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು.

ಇನ್ನು ಮುಂದೆ ಪಠ್ಯಗಳ ಪರಿಷ್ಕರಣ ಕಾರ್ಯಕ್ಕಾಗಿ ತಾತ್ಕಾಲಿಕ ಸಮಿತಿಗಳನ್ನು ನೇಮಿಸದೆ, ಆಯಾ ಕ್ಷೇತ್ರಗಳಲ್ಲಿ ಉನ್ನತ ಅಧ್ಯಯನ ಮಾಡಿರುವ ಉತ್ತಮ ಶಿಕ್ಷಣ ತಜ್ಞರ ಸಮಿತಿಯೊಂದನ್ನು ನಿರ್ದಿಷ್ಟ ಅವಧಿಗೆ ರೂಪಿಸಬೇಕು. ಈ ಸಮಿತಿಗೆ ಹಾಗೂ ಉಪಸಮಿತಿಗಳಿಗೆ ಪಠ್ಯಪುಸ್ತಕಗಳಿಗೆ ತಕ್ಕ ವಿಷಯಗಳನ್ನು ಆಯ್ಕೆ ಮಾಡಿ, ಚರ್ಚಿಸಿ ಸಿದ್ಧ ಮಾಡುವಷ್ಟು ಕಾಲಾವಕಾಶ ಇರಬೇಕು. ಯಾವುದೇ ಪಠ್ಯಪುಸ್ತಕದಲ್ಲಿ ತಾವು ಗಮನಿಸಿದ ಅಸಂಗತ, ಅಪ್ರಸ್ತುತ ವಿಚಾರಗಳನ್ನು ಜವಾಬ್ದಾರಿಯುಳ್ಳ ಓದುಗರು, ಬೋಧಕ, ಬೋಧಕಿಯರು, ಪೋಷಕರು, ತಜ್ಞರು ಈ ಸಮಿತಿಗೆ ಬರೆದು ತಿಳಿಸುವಂತೆ ಇರಬೇಕು. ಈ ಸಮಿತಿ ಪಠ್ಯಪುಸ್ತಕಗಳನ್ನು ಕುರಿತ ಸಕಾರಣವಾದ ಪ್ರಶ್ನೆಗಳನ್ನು, ಸಮಸ್ಯೆಗಳನ್ನು ವಸ್ತುನಿಷ್ಠವಾಗಿ ಪರಿಶೀಲಿಸಿ, ಅಗತ್ಯವಿದ್ದೆಡೆ ಮಾತ್ರ ಸೂಕ್ತ ಕ್ರಮಗಳನ್ನು ಶಿಫಾರಸು ಮಾಡುವಂತೆ ಇರಬೇಕು. ಹಿಂದಿನ ಕೆಲವು ದಶಕಗಳಲ್ಲಿ ಉತ್ತಮ ಸಂವೇದನೆ ರೂಪಿಸಿವೆಯೆಂದು ಸಾಬೀತಾಗಿರುವ ಉತ್ತಮ ಪಠ್ಯಗಳ ಬಗ್ಗೆ ಮಕ್ಕಳಿಂದ, ಶಿಕ್ಷಕ, ಶಿಕ್ಷಕಿಯರಿಂದ ಫೀಡ್‌ಬ್ಯಾಕ್ ಪಡೆದು ಹಳೆಯ ಪಾಠಗಳನ್ನು ಕೂಡ ಮತ್ತೆ ಇಡಬಹುದು. ಜೊತೆಗೆ, ಮಕ್ಕಳ ಮನಸ್ಸನ್ನು ತಿದ್ದುವ, ಉತ್ತಮ ಅಭಿರುಚಿ ಬೆಳೆಸುವ ಈ ಕಾಲದ ಹೊಸ ಹೊಸ ಪಠ್ಯಗಳನ್ನೂ ಸೇರಿಸಲು ಸಮಿತಿ ವ್ಯಾಪಕ ಚರ್ಚೆ ನಡೆಸುವಂತೆ ಇರಬೇಕು. ಮಕ್ಕಳಲ್ಲಿ ಸದಭಿರುಚಿ, ಜಾತ್ಯತೀತ ಮನೋಭಾವ, ವೈಚಾರಿಕತೆ ಹಾಗೂ ಸೃಜನಶೀಲತೆ ಬೆಳೆಸುವ ಜೀವಂತ ಪಠ್ಯಗಳು ಮಾತ್ರ ತರಗತಿಗಳಲ್ಲಿ ಲವಲವಿಕೆ ಸೃಷ್ಟಿಸಬಲ್ಲವು.

ಡಾ. ನಟರಾಜ್ ಹುಳಿಯಾರ್, ಬೆಂಗಳೂರು

ಬೋಳು ಗುಡ್ಡದಲ್ಲಿ ಕೈಗಾರಿಕೆ...!


‘ಗಿಡ ನೆಡಲು ಇರಲಿ ವೈಜ್ಞಾನಿಕ ತಳಹದಿ’ ಎಂಬ ನಾಗರಾಜ ಕೂವೆ ಅವರ ಲೇಖನವನ್ನು (ಸಂಗತ, ಜೂನ್ 5) ಓದಿದಾಗ, ಸುಮಾರು 20 ವರ್ಷಗಳ ಹಿಂದೆ ನಾನು ಸಾಕ್ಷಿಯಾಗಿದ್ದ ಘಟನೆಯೊಂದು ನೆನಪಾಗಿ, ನಗೆ ಚಿಮ್ಮಿತು. ಆಗ ತುಮಕೂರು ಸಮೀಪದ ದೇವರಾಯನದುರ್ಗ ಅರಣ್ಯ ಜಾಗದಲ್ಲಿ ತುಮಕೂರು ವಿಶ್ವವಿದ್ಯಾಲಯ ಸ್ಥಾಪನೆಗೆ ಜಾಗ ನೀಡುವ ವಿಷಯ ವಿವಾದಕ್ಕೆ ಎಡೆಮಾಡಿತ್ತು. ಜಾಗದ ಪರ, ವಿರುದ್ಧದ ಹೋರಾಟ ನಡೆದಿತ್ತು. ವಿಶ್ವವಿದ್ಯಾಲಯದ ಹೋರಾಟಗಾರರು ಅಲ್ಲೇ ಆಗಲೆಂದು ಹೇಳುತ್ತಿದ್ದರು. ಪರಿಸರಾಸಕ್ತರು ವಿರೋಧಿಸುತ್ತಿದ್ದರು. ಅದೊಂದು ದಿನ ವಿಶ್ವವಿದ್ಯಾಲಯವು ಅಲ್ಲೇ ಆಗಬೇಕೆಂದು ಗಣ್ಯರ ತಂಡವೊಂದು ಸ್ಥಳಕ್ಕೆ ತೆರಳಿತ್ತು. ಆ ಜಾಗ ನೋಡುತ್ತ ಗಣ್ಯರೊಬ್ಬರು ‘ನೋಡಿ, ಇದೇನು ದಟ್ಟ ಅರಣ್ಯವೇ? ಬರೀ ಹುಲ್ಲುಗಾವಲು ಇದೆ. ಸಣ್ಣಪುಟ್ಟ ಗಿಡಗಳಿವೆ ಅಷ್ಟೇ. ವಿಶ್ವವಿದ್ಯಾಲಯಕ್ಕೆ ಈ ಜಾಗ ಬಳಸಿದರೆ ಏನಾದೀತು?’ ಎಂದು ಉದ್ಗರಿಸಿದ್ದರು! ಅಷ್ಟಕ್ಕೇ ನಿಲ್ಲಲಿಲ್ಲ. ‘ಅಗೋ ಅಲ್ಲಿ ನೋಡಿ. ಈ ಸುತ್ತಲಿನ ಬೆಟ್ಟಗುಡ್ಡಗಳು ಎಷ್ಟೊಂದು ಬೋಳು ಬೋಳಾಗಿವೆ. ಎಷ್ಟೊಂದು ಜಾಗ ವೇಸ್ಟ್ ಆಗುತ್ತಿದೆ. ಇಲ್ಲೆಲ್ಲ ಕೈಗಾರಿಕೆಗಳನ್ನು ಸ್ಥಾಪಿಸಿದರೆ, ತುಮಕೂರು ಅಭಿವೃದ್ಧಿ ಆಗುತ್ತದೆ’ ಎಂದೂ ಅಣಿಮುತ್ತು ಉದುರಿಸಿದ್ದರು!

ಹುಲ್ಲುಗಾವಲು, ಕುರುಚಲು ಗಿಡಗಳು ಸಹಾ ಒಂದು ಬಗೆಯ ಕಾಡು ಎಂಬುದಾಗಲಿ, ಬೋಳು ಬೆಟ್ಟಗುಡ್ಡಗಳು ಸಹಾ ಪರಿಸರ ವೈವಿಧ್ಯದಲ್ಲಿ ಸೇರಿವೆ ಎಂಬುದಾಗಲಿ ಅವರಿಗೆ ಅರಿವಿರಲಿಲ್ಲ. ದಟ್ಟವಾದ ಭಾರಿ ಗಿಡಮರಗಳಿದ್ದರೆ ಅದು ಅರಣ್ಯ ಎಂಬುದಷ್ಟೇ ಅವರ ಕಲ್ಪನೆಯಾಗಿತ್ತು. ಅದೇನೇ ಇರಲಿ, ಪರಿಸರಾಸಕ್ತರ ಪ್ರಬಲ ಹೋರಾಟದಿಂದ ಆ ಅರಣ್ಯಭೂಮಿ ಉಳಿಯಿತೆಂಬುದು ಬೇರೆ ವಿಚಾರ.


ಆರ್.ಎಸ್.ಅಯ್ಯರ್, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT