ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಓದುಗರ ಪತ್ರಗಳು- 05 ಜೂನ್ 2023

Published 4 ಜೂನ್ 2023, 21:42 IST
Last Updated 4 ಜೂನ್ 2023, 21:42 IST
ಅಕ್ಷರ ಗಾತ್ರ

ಎಲ್ಲ ಅಂಗನವಾಡಿಗಳಿಗೆ ಫ್ರಿಜ್ ವಿತರಣೆಯಾಗಲಿ

ಸಂಡೂರಿನ ಶಾಸಕ ಈ.ತುಕಾರಾಂ ಅವರು ಇತ್ತೀಚೆಗೆ ತಮ್ಮ ಕ್ಷೇತ್ರದ ಧರ್ಮಾಪುರ ಎಂಬ ಹಳ್ಳಿಯ ಅಂಗನವಾಡಿ ಕೇಂದ್ರದ ಉದ್ಘಾಟನೆಗೆ ಹೋದಾಗ, ಸೊಪ್ಪು, ತರಕಾರಿ ನೆಲದ ಮೇಲೆ ಇದ್ದದ್ದನ್ನು ಕಂಡು ವಿಚಾರಿಸಿದ್ದಾರೆ. ತರಕಾರಿ, ಸೊಪ್ಪು, ಮೊಟ್ಟೆಯಂತಹ ಅಗತ್ಯ ಪೌಷ್ಟಿಕ ಆಹಾರವನ್ನು ಮಕ್ಕಳಿಗಾಗಿ ಸಂರಕ್ಷಿಸಿ ಇಡಲು ಫ್ರಿಜ್‌ನ ಅಗತ್ಯವಿದೆ ಎಂದು ಅರಿತಿದ್ದಾರೆ. ಕೂಡಲೇ ಜಿಲ್ಲಾ ಖನಿಜ ನಿಧಿಯಿಂದ (ಡಿಎಂಎಫ್) ₹ 40 ಲಕ್ಷ ವೆಚ್ಚದಲ್ಲಿ ಸಂಡೂರು ಕ್ಷೇತ್ರದ 270 ಅಂಗನವಾಡಿ ಕೇಂದ್ರಗಳಿಗೆ ಫ್ರಿಜ್ ವಿತರಿಸಿದ್ದಾರೆ. ಇದರಿಂದ ಸಂಡೂರು ಭಾಗದ ಅಂಗನವಾಡಿಯ ಮಕ್ಕಳಿಗೆ ಬಹಳ ಅನುಕೂಲವಾಗಿದೆ.

ಇದು ಅಂಗನವಾಡಿಗಳಿಗೆ ಬಹಳ ಮುಖ್ಯವಾದ ಪ್ರಾಥಮಿಕ ಅಗತ್ಯವಾಗಿತ್ತು. ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಂಡೂರು ಕ್ಷೇತ್ರವನ್ನು ಮಾದರಿಯಾಗಿ ಇಟ್ಟುಕೊಂಡು, ಇಡೀ ರಾಜ್ಯದ ಅಂಗನವಾಡಿ ಕೇಂದ್ರಗಳಿಗೆ ಆಹಾರ ಸಂರಕ್ಷಣೆಯ ದೃಷ್ಟಿಯಿಂದ ಫ್ರಿಜ್ ವಿತರಿಸುವ ಅಗತ್ಯವಿದೆ.

- ಡಾ. ಅರುಣ್ ಜೋಳದಕೂಡ್ಲಿಗಿ, ಕಲಬುರಗಿ

ಎಲ್ಲರಿಗೂ ಸೌಲಭ್ಯ: ಸರಳೀಕೃತ ಉಪಶಮನವಷ್ಟೆ

ಗ್ಯಾರಂಟಿಗಳ ಬಗೆಗಿನ ಪತ್ರಿಕಾಗೋಷ್ಠಿ, ಇದಕ್ಕೆ ಬಂದ ಪ್ರತಿಕ್ರಿಯೆಗಳು, ನಂತರದ ಮಾರ್ಗಸೂಚಿ, ನಿಯಮಗಳು ಇವನ್ನೆಲ್ಲ ಪತ್ರಿಕೆಯಲ್ಲಿ ಓದಿ ಗೊಂದಲಗೊಂಡಿದ್ದೇನೆ. ಕಲ್ಯಾಣ ರಾಜ್ಯ (ವೆಲ್‌ಫೇರ್ ಸ್ಟೇಟ್) ಕಲ್ಪನೆ ಎಂಟು ದಶಕಗಳಿಗೂ ಹಿಂದಿನದು. ಪಾಪ್ಯುಲಿಸಂ ಅದಕ್ಕೂ ಐದು ದಶಕ ಹಿಂದಿನದು. ಉಗಮ– ಬ್ರಿಟನ್‌, ಅಮೆರಿಕ ಅನುಕ್ರಮವಾಗಿ. ನಾಗರಿಕರ ಬದುಕಿನಲ್ಲಿ ಸ್ಟೇಟ್‌ನ (ಸರ್ಕಾರದ) ಪಾತ್ರ ಕಡಿಮೆಯಾಗಬೇಕು ಎಂಬ ಹೇಳಿಕೆಗಳ ನಡುವೆ ಗ್ಯಾರಂಟಿಗಳು, ತತ್ಫಲವಾಗಿ ಉಂಟಾಗುವ ತಾರತಮ್ಯ ಅತಾರ್ಕಿಕವಲ್ಲವೇ?

ಪ್ರಣಾಳಿಕೆ, ಪ್ರಚಾರ ಭಾಷಣಗಳಲ್ಲಿ ‘ಷರತ್ತುಗಳು ಅನ್ವಯ’ ಎಂದು ಮೆಲುಸ್ವರದಲ್ಲೂ ಹೇಳದಿರುವುದು ತಂತ್ರಗಾರಿಕೆ. ಈಗ ಸಂಪುಟ ರಚನೆ, ಚರ್ಚೆ, ತೀರ್ಮಾನಗಳ ನಂತರವೂ ಘೋಷಣೆಯಾದ ಕಾರ್ಯಕ್ರಮಗಳಿಗೆ ಹಣಕಾಸಿನ‌ ವ್ಯವಸ್ಥೆ ಹೇಗೆ ಮಾಡಲಾಗಿದೆ‌‌ ಎಂದು‌ ಹೇಳದಿರುವುದು ಸರಿಯಲ್ಲ. ಸರ್ಕಾರವು ಶಾಸನಸಭೆಗೆ ಮಾತ್ರ ಉತ್ತರದಾಯಿಯಲ್ಲ. ಸದನ‌ ಸಮಾವೇಶಗೊಂಡು ಪರಿವರ್ತಿತ ಬಜೆಟ್ ಮಂಡಿಸುವ ಮುನ್ನವೇ ಅಂದಾಜು ವೆಚ್ಚದ ವಿವರವನ್ನು ಸಾರ್ವಜನಿಕರಿಗೆ ಕೋಟಿ ರೂಪಾಯಿಗಳಲ್ಲಿ ಸ್ಕೀಮ್‌ವಾರು ತಿಳಿಸಬೇಕು. ಅಗತ್ಯಬಿದ್ದರೆ ತೆರಿಗೆ ಪಾವತಿದಾರರು ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಿಸಬೇಕು. ಈಗ ಭಾಗಶಃ ಅನುಷ್ಠಾನಗೊಂಡಿರುವ ಯೋಜನೆಗಳ ಬಗೆಗೆ ಈ ಆರ್ಥಿಕ ವರ್ಷದಲ್ಲಿ ಏನು ಮಾಡಲಾಗುವುದು ಎಂಬುದೂ ಮುಖ್ಯ. ನುಡಿದಂತೆ ನಡೆದಿದ್ದೇವೆ ಎಂದು ಮುಂಬರುವ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಹೇಳಿಕೊಳ್ಳುವುದರಷ್ಟೇ ಆ ವೇಳೆಗೆ‌ ರಾಜ್ಯದ‌ ಆರ್ಥಿಕ ಸ್ಥಿತಿ ಏನಾಗಿರುತ್ತದೆ ಎನ್ನುವುದೂ ಮುಖ್ಯವಲ್ಲವೇ? ಗ್ಯಾರಂಟಿಗಳಲ್ಲಿ ಜನರಿಗೆ ಅತ್ಯವಶ್ಯ, ಅನಿವಾರ್ಯವಾದವು ಎಷ್ಟು ಎಂದೂ ವಿಶ್ಲೇಷಿಸಬೇಕಾಗಿದೆ. ಸಮಸ್ಯೆಗಳು ತಾತ್ಕಾಲಿಕವಾಗಿ ಪರಿಹಾರವಾಗಬೇಕಾದರೂ ಪಕ್ಕಾ ಆರ್ಥಿಕ ಬೆನ್ನೆಲುಬು ಅಗತ್ಯ. ಗುರುತಿಸುವುದು ಕಷ್ಟ ಎಂದು‌ ಎಲ್ಲರಿಗೂ ಸೌಲಭ್ಯ ಹಂಚುವುದು ಸರಳೀಕೃತ ಉಪಶಮನವಷ್ಟೆ.

ಎಚ್.ಎಸ್.ಮಂಜುನಾಥ, ಗೌರಿಬಿದನೂರು

ಮಾನವೀಯತೆಯಿಂದ ಮಾದರಿಯಾದ ಸ್ಥಳೀಯರು

ಒಡಿಶಾ ರೈಲು ದುರಂತವು ಅತ್ಯಂತ ನೋವಿನ ಸಂಗತಿ.‌ ಆದರೆ, ದುರಂತಕ್ಕೆ ಸ್ಥಳೀಯರು ಸ್ಪಂದಿಸುತ್ತಿರುವ ರೀತಿ ಸಮಾಧಾನಕರ. ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರ ನೆರವಿಗೆ ಧಾವಿಸಿರುವ 2,000ಕ್ಕೂ ಹೆಚ್ಚು ಮಂದಿ, ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದೆ ಬಂದಿರುವುದು (ಪ್ರ.ವಾ., ಜೂನ್‌ 4) ಅತ್ಯಂತ ಸಮಾಧಾನಕರ ಸಂಗತಿ. ಮಾನವೀಯತೆ ಮೆರೆದಿರುವ ರಕ್ತದಾನಿಗಳು ಅಭಿನಂದನಾರ್ಹರು.

- ಶಾಂತಕುಮಾರ್, ಸರ್ಜಾಪುರ

ಇಂತಹ ಕುತ್ಸಿತ ನಿಲುವು ಬದಲಾಗುವುದೆಂದು?

ಮಂತ್ರಿಮಂಡಲ ರಚನೆಯಾಗಿ ಸುಮಾರು ಹತ್ತು ದಿನಗಳ ಒಳಗೆ, ಚುನಾವಣೆಯ ಸಂದರ್ಭದಲ್ಲಿ ಜನರಿಗೆ ಕೊಟ್ಟ ಐದು ಸವಾಲಿನ ಹಾಗೂ ಜಟಿಲ ಆಶ್ವಾಸನೆಗಳಿಗೆ ಒಂದು ವಾಸ್ತವಿಕ ರೂಪು ಕೊಟ್ಟು, ಅವುಗಳ ಅನುಷ್ಠಾನಕ್ಕೆ ಕಾಲಮಿತಿಯನ್ನೂ ಘೋಷಿಸಿರುವುದು ನನಗೆ (ಹಾಗೂ ನನ್ನಂತಹ ಸಾವಿರಾರು ಜನರಿಗೆ) ಆಶ್ಚರ್ಯವನ್ನುಂಟುಮಾಡಿದೆ, ಸಂತೋಷವನ್ನು ಕೊಟ್ಟಿದೆ. ಅದರಲ್ಲಿಯೂ ಉಚಿತ ವಿದ್ಯುತ್ ಕೊಡುಗೆಗೆ ಹನ್ನೆರಡು ತಿಂಗಳ ಸರಾಸರಿಯನ್ನು ಆಧಾರವಾಗಿ ಇಟ್ಟುಕೊಂಡುದು ತುಂಬಾ ವಿವೇಕದ ತೀರ್ಮಾನ (ಬಹುಶಃ, ನಿರುದ್ಯೋಗಿಗಳನ್ನು ಗುರುತಿಸುವ ಬಗ್ಗೆ ಇನ್ನೂ ಹೆಚ್ಚಿನ ಚಿಂತನೆ ಅವಶ್ಯಕವಾಗಿತ್ತು ಎಂದು ಕಾಣುತ್ತದೆ). ಒಟ್ಟಿನಲ್ಲಿ, ಇದೊಂದು ಎಲ್ಲ ರಾಜ್ಯಗಳಿಗೂ ಮಾದರಿಯಾಗುವ ಸಾಧನೆ.

ಆಶ್ವಾಸನೆಗಳ ಅನುಷ್ಠಾನದ ಸ್ವರೂಪವನ್ನು ವಿರೋಧ ಪಕ್ಷಗಳು ಟೀಕಿಸುತ್ತಿರುವುದು ನಿರೀಕ್ಷಿತವೆ. ಈ ಆಶ್ವಾಸನೆಗಳ ಬಗ್ಗೆ ಪ್ರೇಕ್ಷಕರಿಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶವಿದ್ದ ಚರ್ಚೆಯನ್ನು ಒಂದೆರಡು ಟಿ.ವಿ. ವಾಹಿನಿಗಳಲ್ಲಿ ನಾನು ನೋಡಿದೆ. ಹೆಚ್ಚಿನ ಪ್ರೇಕ್ಷಕರು ಅನುಷ್ಠಾನದ ಸ್ವರೂಪವನ್ನು ತುಂಬಾ ಪ್ರಬುದ್ಧತೆಯಿಂದ ವಿಮರ್ಶಿಸಿದರು. ಆದರೆ ಆ ಚರ್ಚೆಗಳಲ್ಲಿ ಒಂದು ಅಂಶವು ತುಂಬಾ ಕುತೂಹಲಕಾರಿಯಾಗಿ ಕಂಡಿತು. ಚರ್ಚೆಯಲ್ಲಿ ಭಾಗವಹಿಸಿದ್ದವರಲ್ಲಿ ಅನೇಕರು ಎಲ್ಲ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣ ಸೌಕರ್ಯದ ಬಗ್ಗೆ ತುಂಬಾ ಅಸಮಾಧಾನ ವ್ಯಕ್ತಪಡಿಸಿದರು: ‘ಮನೆಯಲ್ಲಿದ್ದು ಕುಟುಂಬವನ್ನು ನೋಡಿಕೊಳ್ಳಬೇಕಾದ ಗೃಹಿಣಿಯರು ಇನ್ನು ಮೇಲೆ ಪ್ರತಿದಿನವೂ ಮನೆಬಿಟ್ಟು ಆ ಊರು ಈ ಊರು ಎಂದು ಅಲೆಯುತ್ತಾರೆ. ಪರಿಣಾಮ, ನೋಡಿಕೊಳ್ಳುವವರಿಲ್ಲದೆ ಮಕ್ಕಳು ಹಾಗೂ ವಯಸ್ಕರು ನರಳುತ್ತಾರೆ. ಗೃಹಲಕ್ಷ್ಮಿ ಯೋಜನೆಯು ಅತ್ತೆ, ಸೊಸೆಯರಲ್ಲಿ ಒಡಕನ್ನುಂಟುಮಾಡಿ, ಮನೆಯನ್ನು ಒಡೆಯುತ್ತದೆ, ಶಿಕ್ಷಣ ವ್ಯವಸ್ಥೆಯನ್ನು ಕುಲಗೆಡಿಸುತ್ತದೆ’ ಎಂಬಂತಹ ಮಾತುಗಳನ್ನು ಆಡಿದರು. ಅಂದರೆ, ಇವರ ದೃಷ್ಟಿಯಲ್ಲಿ ಸ್ತ್ರೀಯರು ಜವಾಬ್ದಾರಿ ಇಲ್ಲದವರು, ಅವಕಾಶ ಸಿಕ್ಕಿದ ಕೂಡಲೇ ಮಕ್ಕಳಂತೆ ಕಂಡಕಂಡಲ್ಲಿ ಅಲೆಯುವವರು, ಹಣಕ್ಕಾಗಿ ಕಿತ್ತಾಡುವವರು ಎಂದೇ? ಸ್ತ್ರೀಯರನ್ನು ಕುರಿತ ಇಂತಹ ಕುತ್ಸಿತ ನಿಲುವು ಎಂದು ಬದಲಾಗುತ್ತದೆ? ಈ ದಿನಗಳಲ್ಲಿ, ಸೇನೆಯಲ್ಲಿ ಅಧಿಕಾರಿಗಳಾಗಿ, ಕೇಂದ್ರ, ರಾಜ್ಯ ಮಂತ್ರಿಮಂಡಲಗಳಲ್ಲಿ ಸಚಿವೆಯರಾಗಿ, ನ್ಯಾಯಮೂರ್ತಿಗಳಾಗಿ, ಉದ್ಯಮಿಗಳಾಗಿ, ವಿದ್ವಾಂಸರಾಗಿ– ಒಟ್ಟಿನಲ್ಲಿ ಸಮಾಜದ ಎಲ್ಲ ಕ್ಷೇತ್ರಗಳಲ್ಲಿಯೂ ಉನ್ನತ ಸ್ಥಾನಗಳಲ್ಲಿ ಮಹಿಳೆಯರಿದ್ದಾರೆ. ಈಗಲೂ ‘ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂದೇ ನಾವು ಜಪ ಮಾಡುತ್ತಿರಬೇಕೆ?

- ಸಿ.ಎನ್.ರಾಮಚಂದ್ರನ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT