ಪ್ರಜಾಪ್ರಭುತ್ವದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಅಪೇಕ್ಷಣೀಯ. ಈ ದಿಸೆಯಲ್ಲಿ ‘ಪ್ರಜಾಪ್ರಭುತ್ವ ದಿನಾಚರಣೆ’ಯ ಪ್ರಯುಕ್ತ ಸಮಾಜ ಕಲ್ಯಾಣ ಇಲಾಖೆಯು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಭಾನುವಾರ ಬೀದರ್‌ನಿಂದ ಚಾಮರಾಜನಗರದವರೆಗೆ ಹಮ್ಮಿಕೊಂಡಿದ್ದ 2,500 ಕಿಲೊಮೀಟರ್ ಉದ್ದದ ಮಹತ್ವಾಕಾಂಕ್ಷಿ ಮಾನವ ಸರಪಳಿ ಕಾರ್ಯಕ್ರಮವು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್‌ಗೆ ಕಾರಣವಾಗಿ ಸಾರ್ವಜನಿಕರಿಗೆ ಬಹಳ ತೊಂದರೆ ಉಂಟು ಮಾಡಿತು. ಪೂನಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಿಗ್ಗೆ ದಾವಣಗೆರೆಗೆ ಹೋಗುವ ಸಂದರ್ಭದಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಲ್ಲುವಂತೆ ಮಾಡಿದ್ದು, ಸರ್ಕಾರದ ನಡೆ ಹೇಗೆ ಜನವಿರೋಧಿ ಆಗಬಹುದು ಎಂಬುದಕ್ಕೆ ನಿದರ್ಶನ. ಇದರ ಜೊತೆಗೆ ಶಾಲಾ ವಿದ್ಯಾರ್ಥಿಗಳನ್ನು ಬಿಸಿಲಿನಲ್ಲಿ ಗಂಟೆಗಟ್ಟಲೆ ನಿಲ್ಲುವಂತೆ ಮಾಡಿದ್ದೂ ಅಕ್ಷಮ್ಯ.
ಸರ್ಕಾರವು ಸಾಧಕ– ಬಾಧಕಗಳ ಬಗ್ಗೆ ಯೋಚಿಸದೆ ಕಾರ್ಯಕ್ರಮ ರೂಪಿಸಿದ ಪರಿಣಾಮ ಇದು. ನೀತಿನಿರೂಪಕರು ಕಾರ್ಯಕ್ರಮವನ್ನು ಜನಸ್ನೇಹಿಯಾಗಿ ರೂಪಿಸಿದರಷ್ಟೇ ಜನರನ್ನು ಮೆಚ್ಚಿಸಲು ಸಾಧ್ಯ.
- ಶಶಿಧರ ಭಾರಿಘಾಟ್, ಬೆಂಗಳೂರು
ಜಾತಿ ನಿಂದನೆ ಮಾಡಿದ ಮತ್ತು ಘನತ್ಯಾಜ್ಯ ವಿಲೇವಾರಿ ಗುತ್ತಿಗೆಗೆ ಲಂಚದ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಬಂಧಿಸಿರುವುದಾಗಿ ವರದಿಯಾಗಿದೆ (ಪ್ರ.ವಾ., ಸೆ. 15). ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ವಿಧಾನಸಭೆಯನ್ನು ಪ್ರವೇಶಿಸುವ 224 ಸದಸ್ಯರಲ್ಲಿ ಬಹುತೇಕರ ಕೈ ಮತ್ತು ಬಾಯಿ ಹೀಗೆಯೇ ಇವೆ. ಹಿಂದೆ ಕರ್ನಾಟಕದ ಈ ಪ್ರಜಾ ದೇಗುಲಕ್ಕೆ ಕೆಂಗಲ್ ಹನುಮಂತಯ್ಯ, ಶಾಂತವೇರಿ ಗೋಪಾಲಗೌಡ, ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಜೆ.ಎಚ್.ಪಟೇಲ್, ನಿಜಲಿಂಗಪ್ಪ, ಎಂ.ಪಿ.ಪ್ರಕಾಶ್ ಅವರಂತಹ ಅನೇಕ ನಾಯಕರು ಆಯ್ಕೆಯಾಗಿದ್ದರು. ಅಲ್ಲಿಗೆ ಈಗ ಅದೆಂತಹ ವ್ಯಕ್ತಿತ್ವಗಳು ಆಯ್ಕೆಯಾಗುತ್ತಿವೆ ಸ್ವಾಮಿ!
ಮತದಾರರು ಗಂಭೀರವಾಗಿ ಯೋಚಿಸಿ ಮತ ಚಲಾವಣೆ ಮಾಡಬೇಕು. ಆಗಮಾತ್ರ, ವಿಧಾನಸಭೆಗೆ ಶುದ್ಧ ಹಸ್ತ ಮತ್ತು ಸ್ವಚ್ಛ ಬಾಯಿಯ ಮುಖಂಡರು ಆಯ್ಕೆಯಾಗಬಹುದು.
- ತಾ.ಸಿ.ತಿಮ್ಮಯ್ಯ, ಬೆಂಗಳೂರು
ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ (ಸೆ. 17) ಪ್ರಯುಕ್ತ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ. ವಿಶೇಷವಾಗಿ ಕಲಬುರಗಿಯಲ್ಲಿ ಮುಖ್ಯಮಂತ್ರಿ ಧ್ವಜಾರೋಹಣ ನೆರವೇರಿಸಿ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳನ್ನು ಘೋಷಿಸುವುದು ಸಾಮಾನ್ಯ. ಈ ವರ್ಷ ಕಲಬುರಗಿ ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಸಚಿವ ಸಂಪುಟ ಸಭೆಯನ್ನು ನಡೆಸುವ ಕಾರ್ಯಕ್ರಮವಿದೆ. ಕಲ್ಯಾಣ ಕರ್ನಾಟಕವು ಸಮಸ್ಯೆಗಳ ಸರಮಾಲೆಯನ್ನೇ ಹೊದ್ದು ಕೊರಗುತ್ತಿದೆ. ಗ್ರಾಮೀಣ ಭಾಗಗಳ ಸ್ವಚ್ಛತೆಯಂತೂ ಶೋಚನೀಯವಾಗಿದೆ. ಅಲ್ಲಿನ ಬೀದಿಗಳಲ್ಲಿ ಸದಾ ಕೊಳಕು ನೀರು ಹರಿಯುತ್ತಿರುತ್ತದೆ. ಈ ಬಾರಿಯ ಸಚಿವ ಸಂಪುಟ ಸಭೆಯಲ್ಲಿ, ಕಲ್ಯಾಣ ಕರ್ನಾಟಕದ ಗ್ರಾಮೀಣ ಪ್ರದೇಶಗಳ ಕುರಿತು ಅಭಿಯಾನದ ಮಾದರಿಯಲ್ಲಿ ‘ಸ್ವಚ್ಛ ಗ್ರಾಮ’ ಕಾರ್ಯ
ಕ್ರಮಗಳನ್ನು ಹಮ್ಮಿಕೊಳ್ಳಲು ಆದ್ಯತೆ ನೀಡಬೇಕು. ಬಯಲುಸೀಮೆಯಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಂಡ ವರದಿಗಳೂ ಬರುತ್ತಿರುತ್ತವೆ. ಹೀಗಾಗಿ, ಇಲ್ಲಿನ ಗ್ರಾಮೀಣ ಪ್ರದೇಶಗಳ ಸ್ವಚ್ಛತೆಯ ಕಡೆ ಸರ್ಕಾರ ಗಮನ ನೀಡಬೇಕಾ ಗಿರುವುದು ಅತಿ ಜರೂರಾಗಿದೆ.
- ತಿರುಪತಿ ನಾಯಕ್, ಕಲಬುರಗಿ
‘ಭಾರತ ಜಾತ್ಯತೀತ ದೇಶ ಎಂದು ಮಾತಿನಲ್ಲಿ ಹೇಳುತ್ತೇವೆ. ಆದರೆ ಎಲ್ಲ ಕಡೆ ಜಾತಿವಾದವೇ ಕಾಣುತ್ತಿದೆ. ಎಲ್ಲರೂ ಜಾತಿ ಪದ್ಧತಿ ಆಚರಿಸುವಾಗ ನಾವು ಲಿಂಗಾಯತರು ಹಿಂದಕ್ಕೆ ಸರಿಯುವುದರಲ್ಲಿ ಅರ್ಥವಿಲ್ಲ’ ಎಂದು ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರತಿಪಾದಿಸಿರುವುದು (ಪ್ರ.ವಾ., ಸೆ. 15) ಆಘಾತಕಾರಿ. ‘ಲಿಂಗಾಯತ’ ಎನ್ನುವುದು ಜಾತಿಯೆ, ಮತವೆ ಅಥವಾ ಒಂದು ಧರ್ಮವೆ ಎಂದು ನಾವಿಂದು ಪ್ರಶ್ನಿಸಿಕೊಳ್ಳಬೇಕಾಗಿದೆ. ಮೊದಲಿಗೆ ಚಾತುರ್ವರ್ಣಗಳೆಂದು ವಿಭಾಗಿಸಲ್ಪಟ್ಟು ನಂತರ ಅದೇ ಪದ್ಧತಿಯು ಜಾತಿಗಳೆಂಬ ತಾರತಮ್ಯಕ್ಕೆ ಎಡೆಮಾಡಿಕೊಟ್ಟ ವೈದಿಕ ವ್ಯವಸ್ಥೆಯನ್ನು ವಿರೋಧಿಸಿ ಹಾಗೂ ನಿರಾಕರಿಸಿ ಸ್ಥಾಪನೆಗೊಂಡ ಸರ್ವಸಮಾನತೆಯ, ದಯಾಮೂಲವಾದ ಒಂದು ಸಾಮಾಜಿಕ ಸ್ವರೂಪವನ್ನು ಜಾತಿಯ ಮಟ್ಟಕ್ಕೆ ಇಳಿಸುವುದು, ನೂರಾರು ವಿಭೂತಿಪುರುಷರು ಈ ಮಾನವಕೋಟಿಗೆ ನೀಡಿದ ಕಾಣ್ಕೆಗೆ ಮಾಡಿದ ಅಪಚಾರವಲ್ಲವೇ?
ಬಸವಣ್ಣನವರ ವಿಚಾರಗಳ ಕುರಿತು ಗಾಂಧೀಜಿ, ‘800 ವರ್ಷಗಳ ಪೂರ್ವದಲ್ಲಿ ಬಸವೇಶ್ವರರು ಬೋಧಿಸಿದ ಹಾಗೂ ಆಚರಿಸಿದ ತತ್ವಗಳನ್ನು ಅನುಷ್ಠಾನಕ್ಕೆ ತರಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಅದರಲ್ಲೂ ಅಸ್ಪೃಶ್ಯತೆಯ ನಿವಾರಣೆ ಮತ್ತು ಕಾಯಕದ ಮಹಿಮೆ ಅವರ ಬೋಧನೆಗಳ ಪ್ರಮುಖ ಅಂಶಗಳಾಗಿವೆ. ಅವರಲ್ಲಿ ಜಾತಿಯ ಛಾಯೆಯೇ ಕಾಣಸಿಗದು’ ಎಂದು ಪ್ರಶಂಸಿಸಿರುವುದನ್ನು ನಾವು ಮರೆಯಬಾರದು. ಬಸವಣ್ಣನವರ ಮುಂದಾಳತ್ವದಲ್ಲಿ ನೂರಾರು ದಾರ್ಶನಿಕರಿಂದ ರೂಪುಗೊಂಡ ‘ಲಿಂಗಾಯತ’ ಜೀವನಮೌಲ್ಯಗಳು ಜಗತ್ತಿಗೆ ಮಾದರಿ. ಅಂತಹ ಮಾನವೀಯ ಚಿಂತನೆಗಳನ್ನು, ‘ಲಿಂಗಾಯತ’ ದರ್ಶನವನ್ನು ಅಂಧ ಜಾತಿಪ್ರೇಮದ ದುಷ್ಪ್ರಭಾವಕ್ಕೆ ಒಳಗಾಗಿ ಜಾತಿಯ ಮಟ್ಟಕ್ಕೆ ಇಳಿಸಿ, ಮಲಿನಗೊಳಿಸಲು ಕರೆ ಕೊಡುವುದು ಸರಿಯಲ್ಲ.
- ಪು.ಸೂ.ಲಕ್ಷ್ಮೀನಾರಾಯಣ ರಾವ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.