ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
Published 8 ಜನವರಿ 2024, 19:20 IST
Last Updated 8 ಜನವರಿ 2024, 19:20 IST
ಅಕ್ಷರ ಗಾತ್ರ

ಅಭಿಮಾನ ಇರಲಿ, ಅಂಧಾಭಿಮಾನ ಸಲ್ಲದು

ಚಿತ್ರನಟ ಯಶ್ ಅವರ ಜನ್ಮದಿನಾಚರಣೆಗಾಗಿ ಕಟೌಟ್ ಕಟ್ಟುವ ವೇಳೆ ಸಂಭವಿಸಿದ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಮೂವರು ಯುವಕರು ಹಾಗೂ ಗಾಯಗೊಂಡವರೆಲ್ಲರೂ ಕೂಲಿಕಾರ್ಮಿಕರು, ತಮ್ಮ ಕುಟುಂಬದ ನಿರ್ವಹಣೆ ಹೊಣೆ ಹೊತ್ತವರೇ ಆಗಿದ್ದುದು ಅತ್ಯಂತ ನೋವಿನ ಸಂಗತಿ. ಇಂದು ಅನೇಕ ಜನಪ್ರಿಯ ನಟರ ಅಭಿಮಾನಿ ಬಳಗಗಳು ಹುಟ್ಟಿಕೊಂಡಿದ್ದು, ಅವರವರ ಚಿತ್ರಗಳ ಬಿಡುಗಡೆ ಸಮಯದಲ್ಲಿ, ಅವರ ಜನ್ಮದಿನ
ಗಳಂದು ಮುಗಿಲೆತ್ತರದ ಕಟೌಟ್‌ಗಳನ್ನು ನಿಲ್ಲಿಸಿ ಹಾಲಿನ ಅಭಿಷೇಕ ಮಾಡುವುದು, ಹೂಹಣ್ಣುಗಳ ಬೃಹತ್‌ ಹಾರಗಳಿಂದ ಅಲಂಕರಿಸಿ ಅಭಿಮಾನ ಮೆರೆಯುವುದು ಸಾಮಾನ್ಯವಾಗಿದೆ. ಹಲವು ಬಾರಿ ಅಭಿಮಾನಿ ಸಂಘಗಳ ಮಧ್ಯೆ ಗಲಾಟೆಗಳೂ ಸಂಭವಿಸಿವೆ.

ಅಭಿಮಾನಿಗಳು ವಿಶೇಷ ಸಂದರ್ಭಗಳಲ್ಲಿ ಹೀಗೆ ಅಂಧಾಭಿಮಾನ ಮೆರೆಯದೆ, ಸಮಾಜಕ್ಕೆ ಉಪಯೋಗ ಎನಿಸುವ ರಕ್ತದಾನದಂತಹ ಕಾರ್ಯಕ್ರಮಗಳನ್ನು ಆಯೋಜಿಸಲಿ. ಅಭಿಮಾನಿಗಳಿಗೆ ಆಯಾ ನಟರೇ ತಿಳಿಹೇಳಬೇಕು. ಅತಿರೇಕ ಬೇಡ ಎಂದು ಅಭಿಮಾನಿಗಳ ಮನವೊಲಿಸಬೇಕು.

⇒ಸಮೀರ ಹಾದಿಮನಿ, ಆಲಮೇಲ

ಕಬ್ಬಿನ ಗದ್ದೆಗೆ ಬೆಂಕಿ: ಸಲ್ಲದ ಕ್ರಮ

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬಸರಕೋಡು ಗ್ರಾಮದಲ್ಲಿ ಕಬ್ಬಿನ ಗದ್ದೆಗೆ ಆಕಸ್ಮಿಕವಾಗಿ ಬಿದ್ದ ಬೆಂಕಿಯಲ್ಲಿ ಸಿಲುಕಿದ್ದ ತೋಳದ ಮರಿಗಳನ್ನು ಗ್ರಾಮದ ಯುವಕರು ರಕ್ಷಿಸಿರುವುದಾಗಿ ವರದಿಯಾಗಿದೆ. ಕಬ್ಬಿನ ಗದ್ದೆಯ ಕಟಾವಾದ ನಂತರ ಬಹಳಷ್ಟು ಕಡೆಗಳಲ್ಲಿ ರೈತರೇ ಒಣಗಿದ ಕಬ್ಬಿನ ಗರಿಗೆ (ವಗಡು) ಬೆಂಕಿ ಹಾಕುತ್ತಾರೆ. ಬಹುಶಃ ಆಗ ಈ ತೋಳದ ಮರಿಗಳು ಪತ್ತೆಯಾಗಿರಬಹುದು. ಇದು ಏನೇ ಇರಲಿ, ಕಬ್ಬಿನ ಗರಿಗೆ ಬೆಂಕಿ ಹಾಕುವುದು ಸರಿಯಲ್ಲ. ಏಕೆಂದರೆ, ಅಲ್ಲಿ ಅಪರೂಪದ ತೋಳದ ಮರಿಗಳಷ್ಟೇ ಸಾಯುವುದಿಲ್ಲ, ಆ ವಗಡನ್ನು ತಿನ್ನಲೆಂದೇ ಮೇಲೆ ಬಂದು, ತಿಂದಾದ ಮೇಲೆ ಸಾವಯವ ಗೊಬ್ಬರವನ್ನು ನೀಡುವ, ರೈತರ ಮಿತ್ರನೆಂದೇ ಪರಿಗಣಿಸಲಾಗಿರುವ ಎರೆಹುಳುಗಳು ಸಹ ಸಾಯುತ್ತವೆ. ಈ ರೀತಿಯ ಪರಿಸರಸ್ನೇಹಿ ಸಂಬಂಧಗಳನ್ನು ಅರ್ಥ ಮಾಡಿಕೊಂಡು ರೈತರು ಕಬ್ಬಿನ ಗದ್ದೆಗೆ ಬೆಂಕಿ ಹಾಕುವುದನ್ನು ನಿಲ್ಲಿಸಬೇಕು. ಅಂದಹಾಗೆ, ಈ ತೋಳದ ಮರಿಗಳನ್ನು ರಕ್ಷಿಸಿದ ರೈತರು ಮತ್ತು ಪರಿಸರಪ್ರೇಮಿಗಳನ್ನು ಶ್ಲಾಘಿಸಲೇಬೇಕು.

⇒ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ಕಣದಲ್ಲಿ ನಡೆಯಲಿ ಒಕ್ಕಣೆ

ಚಳಿಗಾಲದಲ್ಲಿ ಕೆಲ ರೈತರು ತಮ್ಮ ಜಮೀನಿನಲ್ಲಿ ಕಣ ಸಿದ್ಧಮಾಡಿ ಅಲ್ಲಿ ದವಸ ಧಾನ್ಯಗಳನ್ನು ಸಂಗ್ರಹಿಸಿ, ಶುದ್ಧ ಮಾಡಿಕೊಂಡು ಮನೆಗೆ ತರುವುದು ಸಾಮಾನ್ಯ ಸಂಗತಿ. ಇದರಿಂದ ಯಾವುದೇ ತರಹದ ಹಾನಿ ಯಾರಿಗೂ ಉಂಟಾಗುವುದಿಲ್ಲ. ಆದರೆ ಕೆಲವರು ರಸ್ತೆಯಲ್ಲಿಯೇ ಒಕ್ಕಣೆ ಮಾಡುತ್ತಾರೆ. ಇದರಿಂದ, ರಸ್ತೆಯಲ್ಲಿ ಓಡಾಡುವ ಜನರಿಗೆ, ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತದೆ. ಜೊತೆಗೆ ಇದರಿಂದ ದುರ್ಘಟನೆಗಳು ಸಂಭವಿಸಿರುವ ಉದಾಹರಣೆಗಳಿವೆ. ಇನ್ನು ಮುಂದಾದರೂ ರೈತರು ಎಚ್ಚೆತ್ತುಕೊಂಡು, ಹೀಗಾಗದಂತೆ ನೋಡಿಕೊಳ್ಳಬೇಕಾಗಿದೆ.

⇒ಎ.ಎಸ್.ಗೋವಿಂದೇಗೌಡ, ಮೈಸೂರು

ಬಿಲ್‌ ಪಾವತಿಸದೆ ಸೇವೆ ನಿರೀಕ್ಷಿಸುವುದು ಹೇಗೆ?

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಬಿಎಸ್ಎನ್ಎಲ್‌ಗೆ ₹ 36.29 ಕೋಟಿ ಮೊತ್ತದ ಬಿಲ್ ಪಾವತಿಸದೆ ಬಾಕಿ ಉಳಿಸಿಕೊಂಡಿವೆ ಎಂದು ವರದಿಯಾಗಿದೆ. ಹೀಗಿರುವಾಗ, ಬಿಎಸ್ಎನ್ಎಲ್‌ನಿಂದ ವೇಗದ ಇಂಟರ್ನೆಟ್ ಸೌಲಭ್ಯವನ್ನು ಬಯಸುವುದು ಹೇಗೆ? ಜನರು ಹಲವು ಸೇವೆಗಳಿಗೆ ಸರ್ಕಾರಿ ಕಚೇರಿಗಳಿಗೆ ಹೋದಾಗ ಅಧಿಕಾರಿಗಳು ನೆಟ್‌ವರ್ಕ್ ಇಲ್ಲ, ಸರ್ವರ್ ಸರಿಯಿಲ್ಲ ಎಂಬಂತಹ ಹತ್ತಾರು ಸಮಸ್ಯೆಗಳನ್ನು ಮುಂದಿಡುತ್ತಾರೆ, ರಿಪೇರಿ ಮಾಡಲು ಬಿಎಸ್ಎನ್ಎಲ್ ಸಿಬ್ಬಂದಿ ಬಂದಿಲ್ಲ ಎನ್ನುತ್ತಾರೆ. ಸರ್ಕಾರಿ ಇಲಾಖೆಗಳೇ ಬಿಲ್ ಪಾವತಿ ಮಾಡದಿದ್ದರೆ, ಸರ್ಕಾರಿ ಸಂಸ್ಥೆಯಾದ ಬಿಎಸ್ಎನ್ಎಲ್ ಹೇಗೆ ತಾನೇ ಉತ್ತಮ ಸೇವೆ ನೀಡುತ್ತದೆ ಮತ್ತು ಖಾಸಗಿಯವರಿಗೆ ಪೈಪೋಟಿ ಒಡ್ಡುತ್ತದೆ?

⇒ಸುನಿಲ್ ಟಿ.ಪಿ., ತಳಗವಾದಿ, ಮಳವಳ್ಳಿ

ಪದವಿ ಶಿಕ್ಷಣ: ಶುಲ್ಕ ಏರಿಕೆ ಅನುಚಿತ

ಪದವಿ ಕಾಲೇಜುಗಳ ಶೈಕ್ಷಣಿಕ ಶುಲ್ಕ ಹೆಚ್ಚಿಸುವ ವಿಶ್ವವಿದ್ಯಾಲಯಗಳ ಪ್ರಸ್ತಾವಕ್ಕೆ ಉನ್ನತ ಶಿಕ್ಷಣ ಇಲಾಖೆ ಸಮ್ಮತಿ ನೀಡುವ ಮೂಲಕ, ವಿದ್ಯಾರ್ಥಿಗಳಿಗೆ ಆಘಾತ ನೀಡಿದೆ. ಯಾವುದೇ ರಾಜ್ಯ ಅಭಿವೃದ್ಧಿ ಆಗಬೇಕಾದರೆ ಅಲ್ಲಿನ ಜನರಿಗೆ ಶಿಕ್ಷಣ, ಆರೋಗ್ಯ ಮತ್ತು ಕಾನೂನು ಸೇವೆಯು ಉಚಿತವಾಗಿ ಇಲ್ಲವೇ ಕೈಗೆಟಕುವ ದರದಲ್ಲಿ ಸಿಗಬೇಕು. ಆದರೆ ಸರ್ಕಾರ ಬೇರೆ ಬೇರೆ ಭಾಗ್ಯಗಳನ್ನು ಉಚಿತವಾಗಿ ನೀಡಿ, ಶೈಕ್ಷಣಿಕ ಶುಲ್ಕ ಏರಿಸಿ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುವುದು ಸರಿಯಲ್ಲ. ಇಲಾಖೆಯು ಈ ಕೂಡಲೇ ಆದೇಶವನ್ನು ಹಿಂಪಡೆದು, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ನೆಮ್ಮದಿ ನೀಡಬೇಕು.⇒ಬಿ.ನಾಗರಾಜು, ಬೆಂಗಳೂರು

ಶೋಭೆ ತಾರದ ಹೇಳಿಕೆ

ಆರ್‌ಎಸ್ಎಸ್, ವಿಎಚ್‌ಪಿ, ಬಜರಂಗದಳ ಮತ್ತು ಶಿವಸೇನೆಯಂಥ ಕೋಮು ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಆಗ್ರಹಿಸಿರುವ 25 ವರ್ಷಗಳ ಹಿಂದಿನ ಸುದ್ದಿ (ಪ್ರ.ವಾ., ಜ. 8) ಓದಿ ಅಚ್ಚರಿಯಾಯಿತು. ಆಗ ಹೀಗೆ ಮಾತನಾಡಿದ್ದ ದೇವೇಗೌಡರು ಈಗ ಅವೇ ಸಂಘಟನೆಗಳ ಜತೆ ಸಹಯೋಗ ಹೊಂದಿರುವ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು, ತಾವು ಪ್ರಧಾನಿಯಾಗಲು ಕಾರಣವಾಗಿದ್ದ ಕಾಂಗ್ರೆಸ್ಸನ್ನು ‘ಶೀಘ್ರದಲ್ಲೇ ಸಂಪೂರ್ಣ ನಿರ್ನಾಮವಾಗಲಿದೆ’ ಎಂದು ಹೇಳಿರುವುದು ವಿಷಾದಕರ. ಒಬ್ಬ ಮುತ್ಸದ್ದಿ ರಾಜಕಾರಣಿಗೆ ಪ್ರಜಾತಂತ್ರದಲ್ಲಿ ಹಾಗೆಲ್ಲಾ ವಿರೋಧಪಕ್ಷವಿಲ್ಲದೆ ಒಂದೇ ಪಕ್ಷದ ಆಡಳಿತ ಇರಲು ಸಾಧ್ಯವಿಲ್ಲ ಎಂಬುದು ಗೊತ್ತಿಲ್ಲದ ಸಂಗತಿಯೇನೂ ಆಗಿರಲಾರದು. ದೇವೇಗೌಡರಂಥ ಮೇರು ವ್ಯಕ್ತಿತ್ವದವರಿಗೆ ಇಂತಹ ಹೇಳಿಕೆ ಶೋಭೆ ತರುವುದಿಲ್ಲ.⇒ರವಿಕಿರಣ್ ಶೇಖರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT