ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 14 ಏಪ್ರಿಲ್ 2024, 19:20 IST
Last Updated 14 ಏಪ್ರಿಲ್ 2024, 19:20 IST
ಅಕ್ಷರ ಗಾತ್ರ

ರಂಗಮಂದಿರದ ಸುಸ್ಥಿತಿಗೆ ಆದ್ಯತೆ ಇರಲಿ

ಇದು ಡಿಜಿಟಲ್ ಯುಗ. ಸಂಸ್ಕೃತಿ, ಮಾನವೀಯತೆ ಮತ್ತು ಸಂಬಂಧಗಳ ಬಗ್ಗೆ ಯೋಚಿಸುವುದಕ್ಕೂ ಹೆಚ್ಚಿನವರಿಗೆ ಸಮಯ ಇರುವುದಿಲ್ಲ. ಚಲನಚಿತ್ರಗಳು ಅಭಿರುಚಿಯನ್ನು ಕಳೆದುಕೊಂಡಿವೆ. ಪುಸ್ತಕಗಳನ್ನು ಕೊಂಡರೂ ಓದುವ ತಾಳ್ಮೆ ಇಲ್ಲ. ಟಿ.ವಿ. ಪರದೆಯು ರಂಜನೆಯ ಸೋಗಿನಲ್ಲಿ ನೆಮ್ಮದಿ ಕದಡುವ ಕಾರ್ಯಕ್ರಮಗಳಿಗೆ ಸೀಮಿತವಾಗಿದೆ. ಇಂತಹ ದುರಿತ ಕಾಲದಲ್ಲಿ ಮನುಷ್ಯನ ದುಗುಡದ ಮನಃಸ್ಥಿತಿಯನ್ನು ಸ್ವಲ್ಪಮಟ್ಟಿಗಾದರೂ ಹತೋಟಿಯಲ್ಲಿ ಇಡಲು ಸಾಧ್ಯವಾಗುವುದು ರಂಗಮಂದಿರದ ಚಟುವಟಿಕೆಗಳಿಂದ ಮಾತ್ರ.

ತಮ್ಮ ಎಲ್ಲಾ ಜಂಜಾಟಗಳಿಂದ ಹಾಗೂ ಮೊಬೈಲ್‌ ಫೋನ್‌ ಹಾವಳಿಯಿಂದ ದೂರವಾಗಿ ಒಂದೆರಡು ಗಂಟೆಗಳ ಕಾಲ ನಾಟಕ ವೀಕ್ಷಿಸಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ರಂಗಮಂದಿರದ ವಾತಾವರಣ ಮನುಷ್ಯನ ರೂಕ್ಷ ಸ್ವಭಾವವನ್ನು ಹದ ಮಾಡಿ ಆಮೋದದ ಸ್ಥಿತಿ ಉಂಟುಮಾಡುವುದರಲ್ಲಿ ಸಂದೇಹವಿಲ್ಲ. ರಂಗಮಂದಿರಗಳನ್ನು ಸುಸ್ಥಿತಿಯಲ್ಲಿ ಇಡುವುದು ಸರ್ಕಾರದ ಆದ್ಯತೆಯಾಗಬೇಕು.⇒ಡಾ. ಕೆ.ಎಸ್.ಗಂಗಾಧರ, ಬೆಂಗಳೂರು

ಧ್ವನಿವರ್ಧಕ ಬಳಕೆ: ಓಲೈಕೆ ರಾಜಕಾರಣ ತರವಲ್ಲ

ಧ್ವನಿವರ್ಧಕ‌ದ ಶಬ್ದ ಕಡಿಮೆ‌‌ ಮಾಡಲು ಹೇಳಿದ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರ ಮೇಲೆ‌‌ ಇತ್ತೀಚೆಗೆ ನಡೆದಿದೆ ಎನ್ನಲಾದ ಹಲ್ಲೆ‌ ಖಂಡನೀಯ. ಇಂತಹ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತವೆ. ಧ್ವನಿವರ್ಧಕದ
ಶಬ್ದದ ಕುರಿತ ಜಗಳಗಳು ಕೋಮು ಸಂಘರ್ಷಕ್ಕೆ‌ ಕಾರಣವಾದದ್ದೂ ಇದೆ. ಆದ್ದರಿಂದ ಧ್ವನಿವರ್ಧಕದ ಬಳಕೆಗೆ ಅದರಲ್ಲೂ ಪೂಜಾ ಸ್ಥಳಗಳಲ್ಲಿ ಅವುಗಳ ಬಳಕೆ‌ ಕುರಿತಂತೆ ಸರ್ಕಾರ ಸ್ಪಷ್ಟವಾದ ಮಾರ್ಗದರ್ಶಿ‌ ಸೂತ್ರಗಳನ್ನು ರೂಪಿಸಬೇಕು. ಬಳಿಕ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾದ ಅವಶ್ಯಕತೆಯಿದೆ. ಆದರೆ ಓಲೈಕೆ‌ ರಾಜಕಾರಣದ ದೆಸೆಯಿಂದ‌ ಚುನಾಯಿತ ಸರ್ಕಾರಗಳು ಧ್ವನಿವರ್ಧಕದ ಶಬ್ದದಂತಹ ಸರಳ‌ ಸಮಸ್ಯೆಯನ್ನೂ ಪರಿಹರಿಸಲಾರದಷ್ಟು ದುರ್ಬಲ‌ಗೊಂಡಿರುವುದು ಪ್ರಜಾಪ್ರಭುತ್ವದ ವ್ಯಂಗ್ಯ.⇒ಅನಿಲ್ ಎಂ. ಚಟ್ನಳ್ಳಿ, ಕಲಬುರಗಿ

ಕೆರೆ ತುಂಬಿಸುವ ಯೋಜನೆ ಹೆಚ್ಚು ಸೂಕ್ತ

ಜಗಳೂರಿಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರಾವರಿ ಸೌಲಭ್ಯಕ್ಕಾಗಿ ಈಗ ಹೋರಾಟ ನಡೆಯುತ್ತಿದೆ. ಜಗಳೂರು ಈ ಯೋಜನೆಯ ವ್ಯಾಪ್ತಿಗೆ ಒಳಪಡುವ ಕೊನೆಯ ಭಾಗವಾಗಿದ್ದು, ನೀರು ತಲುಪುವುದು ಅನುಮಾನವಾಗಿದೆ. ಈಗ ದಾವಣಗೆರೆ ಬಲದಂಡೆಯ ನೀರು ಕೊಂಡಜ್ಜಿಯನ್ನು ತಲುಪುತ್ತಿಲ್ಲ. ತೀರ ಅತಿವೃಷ್ಟಿಯ ಸಮಯದಲ್ಲಿ ಮಾತ್ರ ಹರಿಯುತ್ತಿದೆ. ಈಗಿನ ಮಳೆಗಾಲ ಒಂದೇಸಮನೆ ಬಿಟ್ಟೂಬಿಡದೆ ಸುರಿದು ನಂತರ ಕಾಣೆಯಾಗುತ್ತದೆ. ಇದರ ಬದಲು ಕೆರೆ ತುಂಬಿಸುವ ಯೋಜನೆಗಳೇ ಮೇಲು. ಸರ್ಕಾರಗಳು ಜನಪ್ರತಿನಿಧಿಗಳ ಒತ್ತಡದಿಂದ ನೀರಾವರಿ ಯೋಜನೆಗಳಿಗೆ ಮಂಜೂರಾತಿ ನೀಡುತ್ತವೆ. ಆದರೆ ಗುಂಡಿಗಳಿಗೆ ನೀರು ಹರಿಯದೇ ಗಿಡಗಂಟಿ ಬೆಳೆದು ಹೂಳು ತುಂಬಿ ಕೆಲವೇ ದಿನಗಳಲ್ಲಿ ಹಾಳಾಗುತ್ತವೆ. ಸರ್ಕಾರವು ತಜ್ಞರಿಂದ ವರದಿ ತರಿಸಿಕೊಂಡು ಯೋಜನೆಯ ಸಾಧ್ಯಾ
ಸಾಧ್ಯತೆಯನ್ನು ಪರಿಶೀಲಿಸಿ ಮುಂದಡಿ ಇಡಬೇಕು. ಹಾಗೆ ಮಾಡಿದಲ್ಲಿ ಸಾರ್ವಜನಿಕರ ತೆರಿಗೆ ಹಣ ಪೋಲಾಗುವುದನ್ನು
ತಡೆಯಬಹುದಾಗಿದೆ.‌⇒ಗುರು ಜಗಳೂರು, ಹರಿಹರ

ಎತ್ತ ಸಾಗುತ್ತಿದೆ ಜನನಾಯಕರ ಸಂದೇಶ?

ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಕೊಟ್ಟಿದ್ದ ಹಣ ಸರಿಯಾಗಿ ಹಂಚಿಕೆಯಾಗದೆ ಇದ್ದುದೂ ತಾವು ಸೋಲುವುದಕ್ಕೆ ಕಾರಣವಾದ ಅಂಶಗಳಲ್ಲಿ ಒಂದು ಎಂಬ ವಿಧಾನ ಪರಿಷತ್ತಿನ ಸದಸ್ಯ
ಎಂ.ಟಿ.ಬಿ. ನಾಗರಾಜ್‌ ಅವರ (ಪ್ರ.ವಾ. ಏ. 12) ಹೇಳಿಕೆ ಅಚ್ಚರಿ ಉಂಟುಮಾಡುತ್ತದೆ. ಚುನಾವಣೆಯ ಹೊಸ್ತಿಲಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಹಣ, ಮದ್ಯ ಮತ್ತು ಉಡುಗೊರೆಗಳ ಮೂಲಕ ಆಮಿಷವೊಡ್ಡಿ ಮತ ಸೆಳೆಯುವುದು ಸಾಮಾನ್ಯವಾಗಿದೆ. ರಾಜಕಾರಣಿ ತನ್ನ ಕ್ಷೇತ್ರಕ್ಕೆ ತಾನು ಮಾಡಿದ ಸೇವೆಯನ್ನು ಮತದಾರರಿಗೆ ಮನವರಿಕೆ ಮಾಡಿ ಕೊಡುವ ಮೂಲಕ ‍ಪುನರಾಯ್ಕೆ ಬಯಸಬೇಕು. ಅದುಬಿಟ್ಟು ಇಂದಿನ ಬಹುತೇಕ ಜನಪ್ರತಿನಿಧಿಗಳು ತಾವು ಕೊಟ್ಟ ಹಣ ಮತದಾರರಿಗೆ ಸಮರ್ಪಕವಾಗಿ ಹಂಚಿಕೆಯಾಗಿಲ್ಲ ಎಂಬ ನೋವನ್ನು ಬಹಿರಂಗವಾಗಿ ವ್ಯಕ್ತಪಡಿಸಿ, ಹಣದಿಂದ ಮತಗಳನ್ನು ಸೆಳೆಯಬಹುದು ಎಂಬ ಸಂದೇಶವನ್ನು ಸಾರುವುದು ಚುನಾವಣಾ ವ್ಯವಸ್ಥೆಯ ಕಗ್ಗೊಲೆ ಎನ್ನಬಹುದು. 

ಇಂತಹ ಬೆಳವಣಿಗೆಗಳಿಂದ, ಸರ್ಕಾರ ಮತ್ತು ಚುನಾವಣಾ ಆಯೋಗವು ಮತದಾನದ ಹಕ್ಕು ಹಾಗೂ ಮತದಾರರ ಕರ್ತವ್ಯದ ಬಗ್ಗೆ ಬೀದಿ ನಾಟಕಗಳು, ವಾಕಥಾನ್, ಸೈಕಲ್ ಜಾಥಾದಂತಹ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲು ಮುಂದಾಗುವುದು ವ್ಯರ್ಥ ಪ್ರಯತ್ನವೇ ಎಂಬ ಅನುಮಾನ ಕೆಲವೊಮ್ಮೆ ಮೂಡುತ್ತದೆ. ಹಣಬಲದಿಂದ ಮಾತ್ರ ಚುನಾವಣೆ ಎದುರಿಸಬಹುದು ಎಂಬ ಸಂದೇಶವನ್ನು ಜನನಾಯಕರೇ ಸಾರಿದರೆ, ಈಗಿನ ಸುಸ್ಥಿರ ಪ್ರಜಾಪ್ರಭುತ್ವ ವ್ಯವಸ್ಥೆಯು ಶಿಥಿಲಗೊಳ್ಳಬಹುದು ಎಂಬ ಸಂಶಯ ಜನಸಾಮಾನ್ಯರಲ್ಲಿ ಮೂಡಿದರೆ ಅಚ್ಚರಿಯಿಲ್ಲ.

⇒ಮಲ್ಲಿಕಾರ್ಜುನ್, ಬಾಗಲಕೋಟೆ

ಮತದಾನಕ್ಕೆ ಪೂರಕವಾದ ಮಾದರಿ ನಡೆ

ಇದೇ 26ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡಬೇಕೆಂಬ ಉದ್ದೇಶದಿಂದ, 24ರ ಸಂಜೆಯಿಂದ 26ರ ಮಧ್ಯರಾತ್ರಿಯವರೆಗೆ ಹಾಸನ ಜಿಲ್ಲೆಯ ಎಲ್ಲ ರೆಸಾರ್ಟ್‌ಗಳು, ಹೋಂಸ್ಟೇಗಳು ಮತ್ತು ವಸತಿಯುತ ಹೋಟೆಲ್‌ಗಳಲ್ಲಿನ ವಾಸ್ತವ್ಯವನ್ನು ಜಿಲ್ಲಾಧಿಕಾರಿಯು ನಿರ್ಬಂಧಿಸಿರು
ವುದು (ಪ್ರ.ವಾ., ಏ. 14) ಒಳ್ಳೆಯ ಆಲೋಚನೆ ಮತ್ತು ರಾಜ್ಯದ ಇತರ ಎಲ್ಲ ಜಿಲ್ಲೆಗಳಲ್ಲೂ ಇಂತಹ ಆದೇಶವನ್ನು ಜಾರಿಗೊಳಿಸುವುದು ಒಳ್ಳೆಯದು. ಇದರಿಂದಾಗಿ ಜನರು ಚುನಾವಣೆಯ ಸಮಯದಲ್ಲಿ ಮತದಾನ ಮಾಡುವುದನ್ನು ಬಿಟ್ಟು ಪ್ರವಾಸ ಹೋಗುವುದನ್ನು ಬಹಳಷ್ಟು ಮಟ್ಟಿಗೆ ತಡೆಯಬಹುದಾಗಿದೆ. 

ಇದರೊಂದಿಗೆ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಸಹ ತಮ್ಮಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ವೋಟು ಮಾಡುವುದನ್ನು ಕಡ್ಡಾಯ ಮಾಡಬೇಕು. ಇತ್ತೀಚಿನ ಅಧ್ಯಯನದ ಪ್ರಕಾರ, ಮುಖ್ಯವಾಗಿ ಬೆಂಗಳೂರು ನಾಗರಿಕರು ಚುನಾವಣಾ ಸಮಯದಲ್ಲಿ, ವಿಶೇಷವಾಗಿ ವಾರಾಂತ್ಯದಲ್ಲಿ ಚುನಾವಣೆ ಬಂದರೆ ಹಿಂದುಮುಂದಿನ ರಜೆಗಳನ್ನು ಸೇರಿಸಿಕೊಂಡು ಪ್ರಯಾಣಿಸುವ ಪ್ರವೃತ್ತಿ ಹೊಂದಿದ್ದಾರೆ. ಕೆಲವು ಕಟ್ಟುನಿಟ್ಟಿನ ಕ್ರಮಗಳಿಂದ ಮತದಾನದ ಪ್ರಮಾಣವನ್ನು ಹೆಚ್ಚಿಸಬಹುದು.⇒ಕಡೂರು ಫಣಿಶಂಕರ್, ಬೆಂಗಳೂರು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT