ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
Published 5 ಸೆಪ್ಟೆಂಬರ್ 2024, 19:26 IST
Last Updated 5 ಸೆಪ್ಟೆಂಬರ್ 2024, 19:26 IST
ಅಕ್ಷರ ಗಾತ್ರ

ಸಾಹಿತ್ಯ ಸಮ್ಮೇಳನ: ಸಾಹಿತ್ಯಲೋಕದವರೇ ಅಧ್ಯಕ್ಷರಾಗಲಿ

ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯೇತರರ ಕಡೆ ಒಲವು ತೋರಿ, ಕೆಲವರ ಹೆಸರನ್ನು ಪ್ರಸ್ತಾಪಿಸಿದೆ. ಈ ವ್ಯಕ್ತಿಗಳು ಅವರವರ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಯ ಬಗ್ಗೆ ನಾಡಿಗೆ ಹೆಮ್ಮೆ ಮತ್ತು ಗೌರವ ಇದೆ. ಆದರೆ ಸಾಹಿತ್ಯ ಸಮ್ಮೇಳನ ಸಂಪೂರ್ಣವಾಗಿ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಸಾಹಿತ್ಯದ ಚರ್ಚೆಗೆ ಮೀಸಲಾದ ನುಡಿ ಸಂಭ್ರಮ ಎಂಬುದನ್ನು ಕಸಾಪ ಮರೆಯಬಾರದು. ಹೊಸತನಕ್ಕೆ ನಾಂದಿ ಹಾಡುವ ಭರದಲ್ಲಿ ಅಕ್ಷರ ಜಾತ್ರೆಯ ಘನತೆಗೆ ಧಕ್ಕೆ ತರಬಾರದು. ಸಾಹಿತ್ಯ ಕ್ಷೇತ್ರದವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವುದು ಎಲ್ಲ ದೃಷ್ಟಿಯಿಂದಲೂ ಹೆಚ್ಚು ಔಚಿತ್ಯ ಮತ್ತು ಅರ್ಥಪೂರ್ಣ. ಇದನ್ನು ಕಸಾಪ ಮನದಟ್ಟು ಮಾಡಿಕೊಳ್ಳಬೇಕು.

ಲೋಕೇಶ ಬೆಕ್ಕಳಲೆ, ಮಂಡ್ಯ

ಪ್ರಶಸ್ತಿ ನೀಡಿಕೆ: ಬೇಡ ಎಡಬಿಡಂಗಿತನ

ಪ್ರಶಸ್ತಿಗಳನ್ನು ನೀಡುವ ಮೊದಲು ಕೂಲಂಕಷವಾಗಿ ಪರಿಶೀಲಿಸಬೇಕು. ಕೊಡದಿದ್ದರೆ ನಡೆಯುತ್ತದೆ. ಆದರೆ ಪ್ರಕಟಿಸಿ ನಂತರ ಹಿಂಪಡೆಯುವ ಸರ್ಕಾರದ ನಿರ್ಧಾರ ಸರಿಯಲ್ಲ (ಪ್ರ.ವಾ., ಸೆ. 5). ಹೀಗೆ ಮಾಡಿದರೆ, ಒಂದು ರೀತಿಯಲ್ಲಿ ಸರ್ಕಾರ ತನ್ನ ಮೇಲೆ ತಾನೇ ಅವಿಶ್ವಾಸ ಮಂಡಿಸಿದಂತೆ. ಹೆಸರು ಘೋಷಣೆಯಾಗಿದ್ದವರ ಮಾನಸಿಕ ತೊಳಲಾಟವು ಅವರಿಗೆ ನೀಡುವ ಹಿಂಸೆಯೇ ಸರಿ. ಸರ್ಕಾರದಿಂದ ಈ ತೆರನಾದ ಎಡಬಿಡಂಗಿತನ ಬೇಡ.

ಅನಿಲಕುಮಾರ ಮುಗಳಿ, ಧಾರವಾಡ

ಗಣೇಶೋತ್ಸವದಲ್ಲಿ ಮಕ್ಕಳು ತೊಡಗಲಿ

ಸಾರ್ವಜನಿಕ ಗಣೇಶೋತ್ಸವದಲ್ಲಿ ಮಕ್ಕಳು ಭಾಗವಹಿಸುವಂತೆ ಪೋಷಕರು ಪ್ರೋತ್ಸಾಹಿಸುವುದು ಒಳಿತು. ಮಕ್ಕಳು ತಮ್ಮ ಬಡಾವಣೆಯ ಸಾರ್ವಜನಿಕ ಗಣೇಶೋತ್ಸವದ ಉಸ್ತುವಾರಿ ವಹಿಸಿಕೊಳ್ಳಲು ಹೋದರೆ ಪೋಷಕರು ತಡೆಯಬಾರದು. ಏಕೆಂದರೆ, ಈ ಹಬ್ಬ ಬರೀ ಸಂಪ್ರದಾಯ ಪಾಲನೆಯನ್ನಲ್ಲ,
ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್, ಟೀಮ್‌ವರ್ಕ್ ಮತ್ತು ಸಮಸ್ಯೆ ಪರಿಹರಿಸು
ವಂತಹ ಅಮೂಲ್ಯವಾದ ಜೀವನ ಕೌಶಲಗಳನ್ನೂ ಕಲಿಸುತ್ತದೆ.

ಗಣೇಶೋತ್ಸವದ ತಯಾರಿಯಲ್ಲಿ ನಿರತರಾದ ಮಕ್ಕಳು ಅಥವಾ ಯುವಕರ ಗುಂಪು ನಿಜಕ್ಕೂ ಸಂಘಟನೆಯ ರೂಪದಲ್ಲಿ ಕಾರ್ಯೋನ್ಮುಖವಾಗುತ್ತದೆ. ಮಂಟಪಕ್ಕೆ ಸರಿಯಾದ ಸ್ಥಳವನ್ನು ಆಯ್ಕೆ ಮಾಡುವುದರಿಂದ ಮೊದಲಾಗಿ, ನಿಧಿ ಸಂಗ್ರಹಿಸುವುದು, ಸೂಕ್ತ ಕಾನೂನು ನಿಯಮ ಪಾಲಿಸಲು ಅನುಮತಿ ಪಡೆಯುವುದು, ವಿವಿಧ  ವೆಚ್ಚಗಳ ಬಜೆಟ್ ತಯಾರಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯ ನೀಲನಕ್ಷೆ... ಹೀಗೆ ಈ ಎಲ್ಲಾ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಪ್ರಾಯೋಗಿಕ ಅನುಭವವನ್ನು ಪಡೆಯುತ್ತದೆ. ಬಹುಶಃ ಯಾವುದೇ ಶಾಲೆ ಅಥವಾ ವಿಶ್ವವಿದ್ಯಾಲಯವೂ ಕಲಿಸದ ಜೀವನ
ಕೌಶಲಗಳನ್ನು ಮಕ್ಕಳು ಇಲ್ಲಿ ಕಲಿಯುತ್ತಾರೆ.

ಮಕ್ಕಳು ಸಮುದಾಯದಲ್ಲಿ ಬೆರೆತು, ಜನರೊಂದಿಗೆ ಮಾತನಾಡುತ್ತಾ ಹಬ್ಬಕ್ಕೆ ಚಂದಾ ಮತ್ತು ಕೊಡುಗೆಗಳನ್ನು ಕೇಳುವುದರಿಂದ ಒಂದು ರೀತಿಯ ಹಣಕಾಸಿನ ನಿರ್ವಹಣೆ ಮತ್ತು ನಿಧಿ ಸಂಗ್ರಹಿಸುವಲ್ಲಿನ ನೈಜ ಪ್ರಪಂಚದ ಅರಿವು ಅವರಿಗಾಗುತ್ತದೆ. ಮಾತುಕತೆಯ ಕಲೆಯನ್ನೂ ಕಲಿಸುತ್ತದೆ. ಇದುವೇ ಕಾಲೇಜು ಮತ್ತು ಶಾಲೆಗಳು ಬೋಧಿಸುವ ಮಾರ್ಕೆಟಿಂಗ್ ಕೌಶಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅವಶ್ಯವಾಗಿರುವ ಪ್ರಮುಖ ಜೀವನಕೌಶಲವೆಂದರೆ ಅದು ನಾಯಕತ್ವ. ಅಲಂಕಾರ, ಪ್ರಸಾದ ತಯಾರಿ, ಗಣ್ಯರನ್ನು ಆಹ್ವಾನಿಸುವಂತಹ ಚಟುವಟಿಕೆಗಳಿಂದ ಮಕ್ಕಳು ತಂಡವನ್ನು ಹೇಗೆ ಮುನ್ನಡೆಸಬೇಕು, ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹಾಗೂ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ
ನಿರ್ವಹಿಸುವುದು ಹೇಗೆ ಎಂಬುದನ್ನು ಕಲಿಯುತ್ತಾರೆ. ಈ ಸಂದರ್ಭದಲ್ಲಿ ಯಾವುದೇ ಬಗೆಯ ಅಹಿತಕರ ಘಟನೆ ನಡೆಯದಂತೆ ಪೋಷಕರಿಂದ ಸೂಕ್ತ ಮುನ್ನೆಚ್ಚರಿಕೆ ಮತ್ತು ಮಾರ್ಗದರ್ಶನ ಅವಶ್ಯ. 

ಉದಯ ಆರಾಧ್ಯ ಟಿ.ಎಸ್., ತೂಬಗೆರೆ, ದೊಡ್ಡಬಳ್ಳಾಪುರ

ಈಡುಗಾಯಿ!
ಹಗರಣಗಳಿಂದ
ಹಣ್ಣುಗಾಯಿ
ನೀರುಗಾಯಿ!
ವಿಚಾರವಂತರೂ
ಕುಂಕುಮ ಹಚ್ಚಿ
ಒಡೆಯುವರು
ಚಾಮುಂಡಿಗೆ
ಈಡುಗಾಯಿ!
ಎಲ್.ಎನ್.ಪ್ರಸಾದ್
ತುರುವೇಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT