ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು– ಜೂನ್ 25, 2025

ವಾಚಕರ ವಾಣಿ
Published 24 ಜೂನ್ 2024, 19:19 IST
Last Updated 24 ಜೂನ್ 2024, 19:19 IST
ಅಕ್ಷರ ಗಾತ್ರ

ರೇಣುಕಸ್ವಾಮಿ ಪ್ರಕರಣ: ಜಾತಿಯ ಸೋಂಕು ಸಲ್ಲ

ಸಿನಿಮಾ ನಟ ದರ್ಶನ್ ತಂಡ ಕಾರಣ ಎಂದು ಆರೋಪಿಸಲಾಗಿರುವ ರೇಣುಕಸ್ವಾಮಿ ಕೊಲೆ ಪ್ರಕರಣವನ್ನು ಖಂಡಿಸಿ ಚಿತ್ರದುರ್ಗ, ದಾವಣಗೆರೆ ಮತ್ತಿತರೆಡೆ ವೀರಶೈವ ಲಿಂಗಾಯತರು ಅದರಲ್ಲೂ ವೀರಶೈವ ಜಂಗಮರು
ಪ್ರತಿಭಟಿಸುತ್ತಿರುವುದನ್ನು ಗಮನಿಸಿದ್ದೇವೆ. ಆದರೆ ರೇಣುಕಸ್ವಾಮಿ ವೀರಶೈವ ಲಿಂಗಾಯತ ಮಾತ್ರ ಅಲ್ಲ. ಆತ ಮೊದಲು ಮನುಷ್ಯ. ನಂತರ ಬಂದವು ಈ ಜಾತಿ, ಕುಲ, ಧರ್ಮ, ಗೋತ್ರ ಎಲ್ಲವೂ. ಮನುಷ್ಯರಾದ ನಾವು ಮೊದಲು ಬಸವಣ್ಣನ ‘ಇವ ನಮ್ಮವ, ಇವ ನಮ್ಮವ’ ಎಂಬ ಸರ್ವಸಮಾನತೆಯ ಮಾನವೀಯ ಮೌಲ್ಯಗಳನ್ನು ಇಟ್ಟುಕೊಳ್ಳಬೇಕು.

ಬಲಿಯಾದವನು ಯಾವ ಜಾತಿಯವನಾದರೇನು? ಮಾನವರಾದ ಪ್ರತಿಯೊಬ್ಬರೂ ಈ ಸಂದರ್ಭದಲ್ಲಿ ಸತ್ಯ, ನ್ಯಾಯ, ಜೀವಪರವಾಗಿ ನಿಲ್ಲಬೇಕು. ರೇಣುಕಸ್ವಾಮಿಯ ಕೊಲೆಯನ್ನು ಎಲ್ಲರೂ ಖಂಡಿಸಬೇಕು. ಮಣ್ಣಿಗೇ ಇಲ್ಲದ ಭೇದಭಾವ, ಮಣ್ಣಾಗಿ ಹೋಗುವ ಮನುಷ್ಯನಿಗೆ ಏಕೆ?⇒ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ

ದೇವದಾರಿಯಲ್ಲಿ ದಾನವ ಹೆಜ್ಜೆ ಯಾಕೆ?

‘ದೇವದಾರಿ ಗಣಿಗಾರಿಕೆ ನಡೆಯುವ ಪ್ರದೇಶದಲ್ಲಿ ದಟ್ಟ ಅರಣ್ಯವಿಲ್ಲ, ದೊಡ್ಡ ಮರಗಳಿಲ್ಲ; ಅಲ್ಲಿರುವುದು ಕುರುಚಲು ಕಾಡು ಅಷ್ಟೆ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ (ಪ್ರ.ವಾ., ಜೂನ್‌ 23). ದೊಡ್ಡ ಅರಣ್ಯಗಳಿಗಿಂತ ಕುರುಚಲು ಕಾಡಿನಲ್ಲೇ ಹೆಚ್ಚಿನ ಸಂಖ್ಯೆಯ, ವೈವಿಧ್ಯಮಯ ಜೀವಿಗಳು ಮತ್ತು ವನೌಷಧ ಸಸ್ಯಗಳು ಇರುತ್ತವೆ. ಅಲ್ಲಿ ಜಿಂಕೆ, ಮುಳ್ಳುಹಂದಿ, ಮೊಲ, ಉಡ, ಕಾಡುಹಂದಿ, ನರಿ, ಕರಡಿ, ಇರುವೆ ಭಕ್ಷಕ, ನಕ್ಷತ್ರ ಆಮೆ, ಚಿರತೆ ಮತ್ತು ಬೂದುಕೌಜುಗದಂಥ ನಾನಾ ಪಕ್ಷಿಗಳು ಇವೆ ಎಂಬುದು ಅರಣ್ಯತಜ್ಞರ ಸಮೀಕ್ಷೆಗಳಲ್ಲಿ ದಾಖಲಾಗಿದೆ.

ನೆಲದೊಳಗಿನ ನಿಧಿಯ ಮೇಲೆ ಕಣ್ಣಿಟ್ಟವರೆಲ್ಲ ನೆಲದ ಮೇಲಿನ ಅಕ್ಷಯ ನಿಧಿ ನಗಣ್ಯವೆಂದೇ ಸದಾ ವಾದಿಸುತ್ತಾರೆ. ಸದ್ಯಕ್ಕಂತೂ ಭಾರತದ ಉಕ್ಕು ಉದ್ಯಮಕ್ಕೆ ಕಬ್ಬಿಣದ ಅದಿರಿನ ಅಭಾವ ಇಲ್ಲವೇ ಇಲ್ಲ. ದೇಶದಾದ್ಯಂತ ಬೇಕಾದಷ್ಟು ಗಣಿಗಳು ಬಾಯ್ತೆರೆದು ಅದಿರನ್ನು ಮೇಲೆತ್ತುತ್ತಿವೆ. ದೇವದಾರಿಗೆ ಈಗ ರಕ್ಷಣೆ ಬೇಕಾಗಿದೆ, ಡೈನಮೈಟ್‌ ಅಲ್ಲ.

⇒ನಾಗೇಶ ಹೆಗಡೆ, ಕೆಂಗೇರಿ 

ಫಲಿತಾಂಶ ಕುಸಿತಕ್ಕೆ ಡಿಡಿಪಿಐ ಮಾತ್ರ ಹೊಣೆಯಲ್ಲ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ವಿಜಯನಗರ ಜಿಲ್ಲೆಯು ಕುಸಿತ ಕಂಡಿರುವುದಕ್ಕೆ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಯುವರಾಜ ನಾಯ್ಕ್‌ ಅವರನ್ನು ಅಮಾನತು ಮಾಡಿರುವುದು ಸರಿಯಾದ ನಿರ್ಧಾರವಲ್ಲ. ಈ ಸಾರಿಯ ಪರೀಕ್ಷೆಯನ್ನು ಸಿ.ಸಿ. ಟಿ.ವಿ. ಕ್ಯಾಮೆರಾ ಮೂಲಕ ವೆಬ್‌ಕಾಸ್ಟಿಂಗ್ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ನಡೆಸಲಾಗಿತ್ತು. ಪರೀಕ್ಷೆಗಳು ಕ್ರಮಬದ್ಧವಾಗಿ ನಡೆದಾಗಲೆಲ್ಲಾ ಫಲಿತಾಂಶದಲ್ಲಿ ಏರುಪೇರಾಗುವುದು ಸಹಜ.

ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸಿದರೆ ಇಂತಹ ದುರವಸ್ಥೆಗಳು ಇಲ್ಲವಾಗುತ್ತವೆ. ಕಳಪೆ ಫಲಿತಾಂಶಕ್ಕೆ ಡಿಡಿಪಿಐ ಒಬ್ಬರನ್ನೇ ಹೊಣೆ ಮಾಡುವುದರ ಬದಲು, ಅದಕ್ಕಿಂತಲೂ ಮುಖ್ಯವಾಗಿ ಶಾಲೆಗಳಲ್ಲಿ ಕೊಠಡಿಗಳ ಕೊರತೆ, ನೈರ್ಮಲ್ಯ ಸಮಸ್ಯೆ, ಪೀಠೋಪಕರಣ ಕೊರತೆಯಂತಹವನ್ನು ಕ್ಷಿಪ್ರವಾಗಿ ಬಗೆಹರಿಸಬೇಕಾಗಿದೆ.

ಶಾಲೆಗೆ ಪ್ರತಿನಿತ್ಯವೂ ತಡವಾಗಿ ಬರುವ ಶಿಕ್ಷಕ ಮತ್ತು ಮುಖ್ಯ ಗುರುಗಳು, ಬಂದರೂ ಸರಿಯಾಗಿ ಪಾಠ ಮಾಡದೆ ಕೈಯಲ್ಲಿ ಫೋನ್ ಹಿಡಿದುಕೊಂಡು ಅಲೆಯುವ ಮೇಷ್ಟ್ರುಗಳು, ಬಿಇಒ ಜೊತೆಯಲ್ಲಿ ಸದಾ ತಾಲ್ಲೂಕಿನಾದ್ಯಂತ ಅಲೆಯುತ್ತಾ ಶಾಲೆಯನ್ನೇ ಮರೆಯುವ ಶಿಕ್ಷಕರು, ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸಿದ್ಧರಾಗುವ ಸಲುವಾಗಿ ಇಲ್ಲಿಗೆ ಬರುವ ಪ್ರತಿಭಾವಂತ ಶಿಕ್ಷಕರು... ಹೀಗೆ ಫಲಿತಾಂಶದ ಮೇಲೆ ಹಲವು ವಿಚಾರಗಳು ಪ್ರಭಾವ ಬೀರುತ್ತವೆ (ಶಿಸ್ತಿನಿಂದ ಪಾಠ ಪ್ರವಚನ ಮಾಡುವ ಸಾವಿರಾರು ಶಿಕ್ಷಕರು ನಮ್ಮಲ್ಲಿ ಇದ್ದಾರೆ. ಅವರನ್ನು ಹೊರತುಪಡಿಸಿ). ಇವೆಲ್ಲಾ ಸಮಸ್ಯೆ
ಗಳನ್ನು ಪರಿಹರಿಸದೆ ಬರೀ ಇಲಾಖಾ ಅಧಿಕಾರಿಗಳನ್ನು ಶಿಕ್ಷಿಸುವುದು ವಿವೇಕದ ನಡೆಯಾಗುವುದಿಲ್ಲ. ಶಿಕ್ಷಣ ಇಲಾಖೆ ಈಗಾಗಲೇ ತನ್ನ ಒಡಲಲ್ಲಿ ನೂರಾರು ಸಮಸ್ಯೆಗಳನ್ನು ಗಂಟುಹಾಕಿಕೊಂಡಿದೆ. ಆದ್ದರಿಂದ ಬರೀ ಹುತ್ತವನ್ನು ಬಡಿದರೆ ಹಾವು ಸಾಯುವುದಿಲ್ಲ. ಶಿಕ್ಷಣ ವ್ಯವಸ್ಥೆಯ ಸಮಗ್ರ ಬದಲಾವಣೆಯೊಂದೇ ಇದಕ್ಕೆ ಪರಿಹಾರ.⇒

⇒ಮೋದೂರು ಮಹೇಶಾರಾಧ್ಯ, ಹುಣಸೂರು

ತುರ್ತು ಪರಿಸ್ಥಿತಿ: ಅಂದು, ಇಂದು!

ಇಂದಿನ ತಲೆಮಾರಿನ ಅದೆಷ್ಟು ಜನರಿಗೆ ನೆನಪಿದೆಯೋ ಗೊತ್ತಿಲ್ಲ. ಆಗಿನ್ನೂ ನನಗೆ 11 ವರ್ಷ. 1975ರ  ಜೂನ್ 25ರ ಮಧ್ಯರಾತ್ರಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಕರಾಳ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು (ನೆನಪಿರಲಿ, ನಮಗೆ ಸ್ವಾತಂತ್ರ್ಯ ಬಂದದ್ದು ಮಧ್ಯರಾತ್ರಿಯಲ್ಲೇ. ನಮ್ಮ ಮೇಲೆ ಜಿಎಸ್‌ಟಿ ಸವಾರಿ ಆರಂಭವಾಗಿದ್ದು ಕೂಡ ಮಧ್ಯರಾತ್ರಿಯಲ್ಲೇ. ಆದರೆ ನೋಟು ರದ್ದತಿ ಆರಂಭವಾದದ್ದು ಮಾತ್ರ ರಾತ್ರಿ 8 ಗಂಟೆಗೆ). ಮೊದಲಿನ ಎರಡಕ್ಕೂ ತಮಗೂ ಸಂಬಂಧವಿಲ್ಲ ಎಂದು ನಿದ್ದೆ ಹೋದವರಿದ್ದರೂ, ಮೂರನೆಯದು ಮಾತ್ರ ಮಧ್ಯರಾತ್ರಿ ಕಳೆದರೂ ಯಾರೂ ಮಲಗದಂತೆ ಮಾಡಿತ್ತು.

ಅಂದು ಇಂದಿನಂತೆ ಟಿ.ವಿ., ಮೊಬೈಲ್, ಇಂಟರ್ನೆಟ್, ಗೂಗಲ್ ಯಾವುದೂ ಇರಲಿಲ್ಲ. ತಕ್ಷಣದ ಸುದ್ದಿ ತಿಳಿಯಲು ಸರ್ಕಾರಿ ನಿಯಂತ್ರಿತ ಆಕಾಶವಾಣಿ ಹಾಗೂ ನಿಖರ ಸುದ್ದಿಗಾಗಿ ಅಂದಿನ ದಿನಪತ್ರಿಕೆಗಳನ್ನೇ ಅವಲಂಬಿಸಬೇಕಾಗಿತ್ತು. ಬೆಳಿಗ್ಗೆ 7.35ಕ್ಕೆ ದೆಹಲಿ ಕೇಂದ್ರದಿಂದ ಪ್ರಸಾರವಾಗುತ್ತಿದ್ದ ಕನ್ನಡ ವಾರ್ತೆಗಳನ್ನು ಬೆಂಗಳೂರು ಆಕಾಶವಾಣಿ ಬಿತ್ತರಿಸಿದಾಗಲೇ ತಿಳಿದದ್ದು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ ಎಂದು! ಜಯಪ್ರಕಾಶ ನಾರಾಯಣ,
ಎಲ್.ಕೆ.ಅಡ್ವಾಣಿ ಸೇರಿದಂತೆ ಸಾಲು ಸಾಲು ವಿರೋಧಿ ನಾಯಕರ ಬಂಧನ, ಪತ್ರಿಕಾ ಸೆನ್ಸಾರ್ ಅತ್ತ ರಾಜಕೀಯ ವಲಯದಲ್ಲಿ ನಡೆದರೆ, ಇತ್ತ ಜಮೀನುದಾರರ ಮನೆಗಳಲ್ಲಿ ಕೆಲಸಕ್ಕಿದ್ದ ಜೀತದಾಳುಗಳೆಲ್ಲ ಊರಿಂದಲೇ ನಾಪತ್ತೆಯಾದರು. ಇದರಿಂದ ಕೆಲಸಗಾರರು ಇಲ್ಲದೆ ಮನೆ ಯಜಮಾನರೇ ಕೊಟ್ಟಿಗೆ ಕಸ ಗುಡಿಸುವಂತೆ ಆಗಿತ್ತು. ಅಂಗಡಿಗಳಲ್ಲಿ ಗಿರವಿ ಇಟ್ಟಿದ್ದ ಒಡವೆಗಳನ್ನು ಪೊಲೀಸರೇ ಮುಂದೆ ನಿಂತು ಬಿಡಿಸಿಕೊಟ್ಟಿದ್ದರು. ಆದರೆ 1977ರ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದ ಜನರು ಅಂತಹ ಮಹಾನ್ ನಾಯಕಿ ಇಂದಿರಾ ಗಾಂಧಿಯವರನ್ನೇ ಹೀನಾಯವಾಗಿ ಸೋಲಿಸಿ, ದೇಶದ ಪ್ರಥಮ ಕಾಂಗ್ರೆಸ್ಸೇತರ ಅಂದರೆ ಜನತಾ ಪಕ್ಷದ ಸರ್ಕಾರವನ್ನು ಅಧಿಕಾರಕ್ಕೆ ತಂದದ್ದು ಮತ್ತೊಂದು ಇತಿಹಾಸ. ಅದು ದೇಶದ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮವೇ ಸರಿ. ಯಾರು ಏನೇ ಹೇಳಲಿ, ಇದೀಗ ನಡೆದ ಲೋಕಸಭಾ ಚುನಾವಣೆಯ ಫಲಿತಾಂಶ ಕೂಡ ಅದಕ್ಕೆ ತೀರಾ ಹತ್ತಿರವಾಗಿದೆ.

⇒ಮುಳ್ಳೂರು ಪ್ರಕಾಶ್, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT