ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 11 ಆಗಸ್ಟ್ 2024, 23:52 IST
Last Updated 11 ಆಗಸ್ಟ್ 2024, 23:52 IST
ಅಕ್ಷರ ಗಾತ್ರ

ಕಿವಿ ಹಿಂಡುವವರು ಬೇಕಿದೆ...

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬ್ಯಾಂಕುಗಳ ಕಿವಿ ಹಿಂಡಿದ ಬಗ್ಗೆ ವರದಿಯಾಗಿದೆ (ಪ್ರ.ವಾ., ಆ. 11). ಆರ್‌ಬಿಐನ ಆಡಳಿತ ಮಂಡಳಿ ಸಭೆಯಲ್ಲಿ ಸಚಿವೆ ಸಣ್ಣ ಉಳಿತಾಯ ಠೇವಣಿಗೆ ಒತ್ತು ನೀಡಲು ಕಿವಿಮಾತು ಹೇಳಿದ್ದಾರೆ. ಈ ಕಿವಿ ಹಿಂಡುವ ಪ್ರಕ್ರಿಯೆ ಆರ್‌ಬಿಐನಿಂದ ಬ್ಯಾಂಕುಗಳ ಚೇರ್ಮನ್‌ಗಳಿಗೂ, ಅವರಿಂದ ಉನ್ನತ ಅಧಿಕಾರಿಗಳಿಗೂ ಶಾಖೆಗಳ ಮ್ಯಾನೇಜರ್‌ಗಳಿಗೂ, ಅಲ್ಲಿಂದ ಸಿಬ್ಬಂದಿವರೆಗೂ ಸಾಗುತ್ತದೆ. ಆದರೆ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಅಗತ್ಯವಾದ ಸಿಬ್ಬಂದಿ ಕೊರತೆಯನ್ನು ನೀಗಲು ಸಂಬಂಧಿಸಿದವರ ಕಿವಿ ಹಿಂಡುವವರು ಅಗತ್ಯವಾಗಿ ಬೇಕಾಗಿದೆ! ಈ ಕೊರತೆ ನೀಗಿದರೆ ಕಿವಿ ಹಿಂಡಿದ್ದು ಫಲಪ್ರದವಾಗುತ್ತದೆ!

⇒ನಗರ ಗುರುದೇವ್ ಭಂಡಾರ್ಕರ್, ಹೊಸನಗರ, ಶಿವಮೊಗ್ಗ

ಪುರಸ್ಕಾರ ನಿರಾಕರಣೆ: ಅಭಿಮಾನದ ನಡೆ

ಕನ್ನಡ ಚಲನಚಿತ್ರ ನಟ ಸುದೀಪ್ ಅವರು ತುಮಕೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಯನ್ನು ಇತ್ತೀಚೆಗೆ ನಯವಾಗಿ ನಿರಾಕರಿಸಿದ್ದರು. ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯನ್ನು ನಟ ಪ್ರಕಾಶ್ ರಾಜ್ ಸಹ ನಿರಾಕರಿಸಿದ್ದಾರೆ. ಈ ಎರಡೂ ಸನ್ನಿವೇಶಗಳಲ್ಲಿ ಇಬ್ಬರೂ ನಟರು ನಡೆದುಕೊಂಡ ರೀತಿ ಪ್ರಶಂಸಾರ್ಹವಾಗಿದೆ. ಈಗಿನ ಬಹುತೇಕ ಪ್ರಶಸ್ತಿಗಳು ಮತ್ತು ಸರ್ಕಾರದ ಮಾನ ಸಮ್ಮಾನಗಳು ರಾಜಕೀಯಪ್ರೇರಿತವಾಗಿರುತ್ತವೆ. ಅದೆಷ್ಟೋ ಹಿರಿಯ ನಟರು ಇಂಥ ಯಾವುದೇ ಪ್ರಶಸ್ತಿ ಪಡೆಯದೆ ನಾಡಿನ ಸೇವೆ ಮಾಡಿರುವುದನ್ನು ಗಮನಿಸಿದರೆ, ಈ ನಟರ ನಡವಳಿಕೆ ಬಗ್ಗೆ ಅಭಿಮಾನ ಮೂಡುತ್ತದೆ.

⇒ಬಸಪ್ಪ ಯ. ಬಂಗಾರಿ, ಬೆಂಗಳೂರು

ನಮ್ಮ ನಾಯಕರಿವರು, ಪ್ರಬುದ್ಧ ನೇತಾರರು!

ಬೆಂಗಳೂರಿನಿಂದ ಮೈಸೂರಿನವರೆಗೆ ನಡೆದ ಪಾದಯಾತ್ರೆ, ಸಮಾವೇಶಗಳ ಪರ್ವ ಅಂತೂ ಮುಗಿಯಿತು. ಪಾದಯಾತ್ರೆ, ಅದಕ್ಕೆ ಪ್ರತಿಯಾಗಿ ನಡೆದ ಸಮಾವೇಶಗಳ ಪ್ರಹಸನವನ್ನು ನೋಡುತ್ತಾ ಜನರಿಗೆ ನೇತ್ರಾನಂದವಾಯಿತು. ಪಾದಯಾತ್ರೆಯ ಕಾಲಕ್ಕೆ ಕೇಳಿಬಂದ ನಾಯಕರ ಮಾತುಗಳು ಹಾಗೂ ಸವಾಲು, ಜವಾಬುಗಳು ನಮಗೆ ಕರ್ಣಾನಂದವನ್ನು ಉಂಟು ಮಾಡಿದವು. ಗೌರವಾನ್ವಿತ ನೇತಾರರು ಲಭ್ಯವಿರುವ ಶಬ್ದ ಸಂಪತ್ತನ್ನೆಲ್ಲ ಬಳಸಿ ಎದುರಾಳಿಗಳನ್ನು ಬೆತ್ತಲೆ ಮಾಡಿದುದಲ್ಲದೆ ತಾವೂ ಬೆತ್ತಲಾದುದನ್ನು ನೋಡಿ ನಾಡಿನ ಜನರಿಗೆ ಮಹದಾನಂದವಾಯಿತು.

ಅವರ ಈ ಎಲ್ಲ ಪ್ರವರಗಳು ಕರ್ನಾಟಕದ ಜನತೆಗೆ ಗೊತ್ತಿಲ್ಲ ಎಂದಲ್ಲ. ಇತ್ತೀಚೆಗೆ ದಿನಾಲು ಮಾಮೂಲಿ ಎನ್ನುವಂತೆ ಜನರು ಇದನ್ನು ನೋಡುತ್ತಿದ್ದಾರೆ ಮತ್ತು ಕೇಳುತ್ತಿದ್ದಾರೆ. ಪಾದಯಾತ್ರೆಯಿಂದಾಗಿ ಅದಕ್ಕೆ ಮತ್ತೊಂದಿಷ್ಟು ಕಳೆ ಬಂದಂತಾಯಿತು. ರಾಜಕೀಯ ಶಬ್ದಕೋಶಕ್ಕೆ ಒಂದಿಷ್ಟು ಹೊಸ ಶಬ್ದಗಳು ಸೇರ್ಪಡೆಯಾದವು. ನಶಿಸುತ್ತಿರುವ ರಾಜಕೀಯ ಮೌಲ್ಯಗಳಿಗೆ ಮತ್ತೊಂದಿಷ್ಟು ಬೆಲೆ ಬಂದಂತಾಯಿತು. ತಮ್ಮ ಆಸ್ತಿ, ಅಂತಸ್ತು, ಪುರುಷತ್ವ ಕುರಿತು ನಾಡ ಜನರಿಗೆ ಯಾವ ಸಂಶಯವೂ ಇಲ್ಲ. ತಾವೆಲ್ಲರೂ ಶೂರರು, ಧೀರರು, ಪೌರುಷವುಳ್ಳವರು, ಸತ್ಯಸಂದರೂ ಆಗಿದ್ದೀರಿ. ಅಂತೆಯೇ ತಾವು ಈ ನಾಡನ್ನು ಆಳುತ್ತಿದ್ದೀರಿ. ತಮ್ಮನ್ನು ಒಮ್ಮೆ ನಾವು ಚುನಾಯಿಸಿ ಕಳುಹಿಸಿದ ಮೇಲೆ ತಾವು ಆಡಿದ್ದೇ ಆಟ. ಆನಂತರ ನಾಡ ಪ್ರಜೆಗಳು ಏನು ಮಾಡುವುದಕ್ಕೂ ಆಗದೆ ಸುಮ್ಮನಿರಬೇಕಾಗುತ್ತದೆ.

⇒ವೆಂಕಟೇಶ ಮಾಚಕನೂರ, ಧಾರವಾಡ

ಉರಗಗಳ ರಕ್ಷಣೆಗೆ ಆದ್ಯತೆ ಇರಲಿ

ನಾಗರಪಂಚಮಿ ಬಂತೆಂದರೆ ಊರಿನ ತುಂಬೆಲ್ಲಾ ಹಬ್ಬದ ವಾತಾವರಣ. ಇದನ್ನು ಹಿಂದಿನಿಂದಲೂ ಸಾಂಪ್ರದಾಯಿಕವಾಗಿ ಆಚರಣೆ ಮಾಡುತ್ತಿರುವುದು ಸಂತೋಷದ ಸಂಗತಿ. ಆದರೆ, ಕೆಲವರು ಅಲ್ಲಲ್ಲಿ ಸರ್ಪಗಳಿಗೆ ಹೂವು ಹಾಕಿ, ಊದುಬತ್ತಿ ಬೆಳಗಿ, ಹಾಲುಣಿಸಿ ಪೂಜಿಸುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವಾಸ್ತವವಾಗಿ ಹಾವುಗಳು ಹಾಲನ್ನು ಕುಡಿಯುವುದಿಲ್ಲ ಎಂಬ ಅಂಶವನ್ನು ಉರಗ ತಜ್ಞರು ತಿಳಿಸಿದ್ದಾರೆ. ಇಲಿ, ಹೆಗ್ಗಣದಂಥ ಪುಟ್ಟ ಸ್ತನಿಗಳು, ಪಕ್ಷಿಗಳು, ಸರೀಸೃಪಗಳು, ಕಪ್ಪೆ, ಮೀನುಗಳು, ಕೀಟಗಳಂತಹವೇ ಹಾವಿನ ಆಹಾರ. ಕೆಲವು ಹಾವುಗಳು ವಿವಿಧ ಪ್ರಾಣಿ, ಪಕ್ಷಿಗಳ ಮೊಟ್ಟೆಗಳನ್ನು ತಿನ್ನುತ್ತವೆ. ಹೀಗಿರುವಾಗ, ಹಾವುಗಳನ್ನು ಹಿಡಿದು ಹಿಂಸಿಸುವುದು ಸಮಂಜಸವಲ್ಲ. ಉರಗಗಳ ರಕ್ಷಣೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

⇒ಪೂಜಾ ಎಸ್., ಕಲಬುರಗಿ

ರಾಯಣ್ಣನ ನೆನೆಯೋಣ...

ಸಂಗೊಳ್ಳಿ ರಾಯಣ್ಣ ಈ ದೇಶ ಕಂಡ ಅಪ್ರತಿಮ ದೇಶಭಕ್ತ ಮತ್ತು ಸ್ವಾತಂತ್ರ್ಯಯೋಧ. ಕಿತ್ತೂರು ಸಂಸ್ಥಾನದಲ್ಲಿ ಬ್ರಿಟಿಷ್ ಸೈನ್ಯದ ವಿರುದ್ಧ  ಹೋರಾಡಿದ ಕ್ರಾಂತಿಪುರುಷ. ಗೆರಿಲ್ಲಾ ಮಾದರಿ ಯುದ್ಧ ಮಾಡಿ ಬ್ರಿಟಿಷರಿಗೆ ನಡುಕ ಹುಟ್ಟಿಸಿದ್ದ ರಾಯಣ್ಣ ಬದುಕಿದ್ದು 33 ವರ್ಷಗಳು ಮಾತ್ರ. ಸಂಗೊಳ್ಳಿ ರಾಯಣ್ಣ ಹುಟ್ಟಿದ ದಿನ ಆಗಸ್ಟ್ 15. ಅಂದು ದೇಶಕ್ಕೆ ಸ್ವಾತಂತ್ರ್ಯ ದಿನೋತ್ಸವ.

ಸಂಗೊಳ್ಳಿ ರಾಯಣ್ಣ ಗಲ್ಲಿಗೇರಿದ ದಿನ ದೇಶಕ್ಕೆ ಗಣರಾಜ್ಯೋತ್ಸವ. ಇಂತಹ ಸೌಭಾಗ್ಯಶಾಲಿಯಾದ ರಾಯಣ್ಣನನ್ನು ಸ್ಮರಿಸುವ ಕಾರ್ಯ ಅವರ ಜನ್ಮದಿನವಾದ ಆಗಸ್ಟ್ 15ರಂದು ನಡೆಯಬೇಕಿದೆ. ಕರ್ನಾಟಕ ಸರ್ಕಾರವು ರಾಯಣ್ಣನಿಗೆ ಗೌರವ ಸಲ್ಲಿಸುವ ದಿಸೆಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು.

⇒ಸಿ.ಪುಟ್ಟಯ್ಯ, ಹಂದನಕೆರೆ, ತುಮಕೂರು ಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT