ರಾಜಕೀಯ ಸಮಾವೇಶ ಊರ ಹೊರಗಿರಲಿ
ಮೈಸೂರಿನಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಸಮಾವೇಶಗಳು, ಜನರನ್ನು ಒಟ್ಟುಗೂಡಿಸುವ ಸಮಾವೇಶ
ಗಳಾದವೇ ವಿನಾ ಅದರಿಂದ ಸಾರ್ವಜನಿಕರಿಗೆ ಆದ ಲಾಭವೇನು ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿಯಿತು. ರಾಜಕೀಯ ಪಕ್ಷಗಳ ಈ ಕಾರ್ಯಕ್ರಮ ನಡೆದದ್ದು, ಮೈಸೂರಿನ ಹೃದಯಭಾಗದಲ್ಲಿರುವ ಮಹಾರಾಜ ಕಾಲೇಜು ಮೈದಾನದಲ್ಲಿ. ಬೃಹತ್ ಸಂಖ್ಯೆಯಲ್ಲಿ ಜನ ಸೇರಿದ್ದ ಈ ಸಮಾವೇಶಗಳಿಂದ, ಆ ಎರಡು ದಿನ ನಗರದ ಸಾರ್ವಜನಿಕರು, ಶಾಲಾ– ಕಾಲೇಜು ವಿದ್ಯಾರ್ಥಿಗಳು ಮತ್ತು ಸರ್ಕಾರಿ ನೌಕರರಿಗೆ ಬಹಳಷ್ಟು ತೊಂದರೆಯಾಯಿತು. ರಾಜಕೀಯ ಪಕ್ಷಗಳ ಇಂತಹ ಬೃಹತ್ ಸಮಾವೇಶಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಇನ್ನು ಮುಂದಾದರೂ ನಗರದ ಹೊರಭಾಗದಲ್ಲಿ ಆಯೋಜಿಸುವುದು ಒಳ್ಳೆಯದು.
⇒ಬೂಕನಕೆರೆ ವಿಜೇಂದ್ರ, ಮೈಸೂರು
ಒತ್ತುವರಿ ತೆರವು: ಬೇಕು ಸಂಪುಟದ ಸಹಕಾರ
ಕರ್ನಾಟಕವೂ ಸೇರಿದಂತೆ ದೇಶದ ಹಲವಾರು ರಾಜ್ಯಗಳಲ್ಲಿ ಭೂಕುಸಿತ, ಕಾನೂನಿನ ಭಯ-ಭೀತಿ ಇಲ್ಲದ ರೀತಿಯಲ್ಲಿ ಕಾಡುಗಳ ಒತ್ತುವರಿ ಎಲ್ಲವೂ ಆಘಾತಕಾರಿಯಾಗಿ ಮುಂದುವರಿದಿವೆ. ಕೇರಳದ ವಯನಾಡ್ ಹಾಗೂ ನಮ್ಮ ರಾಜ್ಯದ ವಿವಿಧೆಡೆ ಇತ್ತೀಚೆಗೆ ಸಂಭವಿಸಿದ ಭೂಕುಸಿತಗಳಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಪಶ್ಚಿಮಘಟ್ಟ ಪ್ರದೇಶದಲ್ಲಿ ಅರಣ್ಯ ಒತ್ತುವರಿ, ಅಕ್ರಮ ತೋಟಗಳು, ಅನಧಿಕೃತ ರೆಸಾರ್ಟ್‌ಗಳ ವಿರುದ್ಧ ತಕ್ಷಣದಿಂದಲೇ ಕ್ರಮ ಜರುಗಿಸಲು ಅನುವಾಗುವಂತೆ ಕಾರ್ಯಪಡೆ ರಚಿಸಿರುವುದು ಸ್ವಾಗತಾರ್ಹ ಬೆಳವಣಿಗೆ. ಇಂತಹ ಯಾವ ಒತ್ತುವರಿಯನ್ನೂ ತೆರವು ಮಾಡದೇ ಇರುವುದಿಲ್ಲ ಎಂಬ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಹೇಳಿಕೆ ಪರಿಸರಪ್ರಿಯರಲ್ಲಿ ಆಶಾಭಾವನೆ ಮೂಡಿಸಿದೆ. ಆದರೆ ಈ ಕಾರ್ಯ ಆರಂಭಿಸುವಾಗ ಇದ್ದ ತೀವ್ರತೆಯನ್ನು ಕೊನೆಯವರೆಗೂ ಕಾಯ್ದುಕೊಳ್ಳಬೇಕೆಂದರೆ, ಅರಣ್ಯ ಸಚಿವರಿಗೆ ಇಡೀ ಸಚಿವ ಸಂಪುಟ ಸಹಕಾರ ನೀಡಬೇಕು. ತಾರತಮ್ಯರಹಿತವಾಗಿ ನಡೆಯಬೇಕಾದ ಪರಿಸರ ಸಂರಕ್ಷಣೆಯ ಕಾರ್ಯಕ್ಕೆ ಒತ್ತಾಸೆಯಾಗಿ ನಿಲ್ಲಬೇಕು. ಹೀಗೆ ತೆರವು ಕಾರ್ಯ ತೀವ್ರಗತಿಯಲ್ಲಿ ನಡೆದಿದ್ದೇ ಆದರೆ, ಈಗ ಉಂಟಾಗುತ್ತಿರುವ, ಮುಂದೆ ನಿಸ್ಸಂದೇಹವಾಗಿ ಆಗಬಹುದಾದ ಅವಘಡಗಳನ್ನು ತಪ್ಪಿಸಲು ಸಾಧ್ಯ.
ಪ್ರೊ. ಬಿ.ಕೆ.ಚಂದ್ರಶೇಖರ್, ಬೆಂಗಳೂರು
ಪಾವಿತ್ರ್ಯ ಹಾಳುಗೆಡಹುವ ಪ್ಲಾಸ್ಟಿಕ್ ಧ್ವಜ
ಸ್ವಾತಂತ್ರ್ಯ ದಿನಾಚರಣೆಯಾದ ಆಗಸ್ಟ್ 15ರ ಸಂದರ್ಭದಲ್ಲಿ ದೆಹಲಿಯ ಕೆಂಪುಕೋಟೆ ಸೇರಿದಂತೆ ದೇಶದಾದ್ಯಂತ ಶಾಲೆ–ಕಾಲೇಜು, ಸರ್ಕಾರಿ ಕಚೇರಿ ಹಾಗೂ ಸಂಘ– ಸಂಸ್ಥೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ. ರಾಷ್ಟ್ರಧ್ವಜವು ದೇಶದ ಜನರ ಭರವಸೆ ಮತ್ತು ಆಶಯವನ್ನು ಪ್ರತಿನಿಧಿಸುವಂತಹದ್ದು. ಹಾಗಾಗಿ, ಅದನ್ನು ಗೌರವಿಸಬೇಕಾದದ್ದು ಮುಖ್ಯ. ಆದರೆ ಪ್ಲಾಸ್ಟಿಕ್ ಧ್ವಜಗಳು ಸ್ಥಳೀಯ ಅಂಗಡಿಗಳಲ್ಲಿ ಸುಲಭವಾಗಿ ದೊರೆಯುವುದರಿಂದ ಕೆಲ ಮಕ್ಕಳು ಹಾಗೂ ಪೋಷಕರು ಸೇರಿದಂತೆ ಹಲವರು ಅವುಗಳನ್ನು ಕೊಂಡು, ಬಳಸಿದ ನಂತರ ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಇದರಿಂದ ಧ್ವಜದ ಪಾವಿತ್ರ್ಯ ಹಾಳಾಗುತ್ತದೆ ಹಾಗೂ ಧ್ವಜದ ಘನತೆಯನ್ನು ಅಗೌರವಿಸಿದಂತೆಯೂ ಆಗುತ್ತದೆ. ಇದು ತಪ್ಪು.
ಪ್ಲಾಸ್ಟಿಕ್ ಧ್ವಜ ಬಳಸಬಾರದು ಎಂಬುದನ್ನು ಪುಟ್ಟ ಮಕ್ಕಳಿಗೂ ಸೇರಿದಂತೆ ಎಲ್ಲರಿಗೂ ಮನದಟ್ಟು ಮಾಡಿಸುವುದರ ಜೊತೆಗೆ, ಇಂತಹ ಧ್ವಜಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕಿದೆ. ಅದನ್ನು ಮೀರಿಯೂ ಮಾರಾಟ ಮಾಡಿದರೆ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ಮೀಸಲಾತಿ: ಸರ್ವರಿಗೂ ಸಿಗಲಿ ನ್ಯಾಯ
‘ಅಸ್ಪೃಶ್ಯತೆ ಆಚರಣೆ ಇರುವವರೆಗೂ ಮೀಸಲಾತಿ ಇರಬೇಕು’ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗೆ ಹೇಳಿದ್ದಾರೆ. ಸ್ವಾತಂತ್ರ್ಯ ಬಂದು ಹಲವು ದಿನಗಳು ಕಳೆದರೂ ರಾಜಕೀಯ ವ್ಯಕ್ತಿಗಳು ಅಸ್ಪೃಶ್ಯತೆಯ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆಯೇ ವಿನಾ ಈ ಪದ್ಧತಿಯನ್ನು ಕೊನೆಗಾಣಿಸಲು ಅವರು ಪಡುತ್ತಿರುವ ಪ್ರಯತ್ನ ಮಾತ್ರ ಶೂನ್ಯ. ಸುಪ್ರೀಂ ಕೋರ್ಟ್ ಹೇಳಿದಂತೆ ಐಎಎಸ್, ಐಎಫ್ಎಸ್ ಅಧಿಕಾರಿಗಳ ಮಕ್ಕಳಂತಹವರೂ ಮೀಸಲಾತಿ ಲಾಭವನ್ನು ಪಡೆದುಕೊಂಡರೆ, ಅವಕಾಶಕ್ಕಾಗಿ ಹಾತೊರೆಯುತ್ತಿರುವ ಅನೇಕರು ಮೀಸಲಾತಿಯಿಂದ ವಂಚಿತರಾಗುತ್ತಾರೆ. ಮೀಸಲಾತಿಯ ಉದ್ದೇಶ ಅವಕಾಶ ವಂಚಿತರನ್ನು ಸಮಾಜದ ಮುಖ್ಯವಾಹಿನಿಗೆ ತರುವುದಾಗಿರಬೇಕೇ ವಿನಾ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ದಾಳವಾಗಬಾರದು. ಮೀಸಲಾತಿಯ ಲಾಭವನ್ನು ಪಡೆದವರು ಮೀಸಲಾತಿ ಅತ್ಯಂತ ಅಗತ್ಯವಿರುವವರಿಗೆ ಸ್ವಇಚ್ಛೆಯಿಂದ ಅವಕಾಶ ಮಾಡಿಕೊಡುವ ಔದಾರ್ಯ ಪ್ರಸ್ತುತ ದಿನಗಳಲ್ಲಿ ಬೇಕಾಗಿದೆ. ರಾಜಕೀಯ ಪಕ್ಷಗಳು ತಮ್ಮ ವಿವೇಚನೆಗೆ ತಕ್ಕಂತೆ ಚಿಂತಿಸದೆ ರಾಷ್ಟ್ರದ ಸರ್ವರಿಗೂ ನ್ಯಾಯ ಒದಗಿಸುವುದರ ಬಗ್ಗೆ ಒಲವು ತೋರಿಸಬೇಕಿದೆ.
ಮಹೇಶ್ ಸಿ.ಎಚ್., ಶಿವಮೊಗ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.