ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 8 ಜೂನ್ 2024, 7:43 IST
Last Updated 8 ಜೂನ್ 2024, 7:43 IST
ಅಕ್ಷರ ಗಾತ್ರ

ಅಯೋಧ್ಯೆ ಮತದಾರರ ಮೇಲೆ‌ ಯಾಕಿಷ್ಟು ಆಕ್ರೋಶ?

ಲೋಕಸಭಾ ಚುನಾವಣೆಯ ಹಲವು ಅಚ್ಚರಿಯ ಫಲಿತಾಂಶಗಳಲ್ಲಿ ಅಯೋಧ್ಯೆಯನ್ನು ಒಳಗೊಂಡ ಫೈಜಾಬಾದ್‌ ಕ್ಷೇತ್ರದ ಫಲಿತಾಂಶವೂ ಒಂದಾಗಿದೆ. ಒಬ್ಬ ದಲಿತ ಅಭ್ಯರ್ಥಿಯಾದ ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್‌, ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಅವರನ್ನು ಸುಮಾರು 50 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಫೇಸ್‌ಬುಕ್‌, ಎಕ್ಸ್‌, ಇನ್‌ಸ್ಟಾಗ್ರಾಂ, ಯೂಟ್ಯೂಬ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಮೂರು ದಿನಗಳಿಂದಲೂ ಸತತವಾಗಿ, ‘ಅಯೋಧ್ಯೆಯ ಜನ ಬೆನ್ನಿಗೆ ಚೂರಿ ಹಾಕಿದ್ದಾರೆ, ಅಲ್ಲಿ ಹೋದರೆ ರಾತ್ರಿ ಉಳಿಯಬೇಡಿ, ಅಲ್ಲಿ ಯಾವುದನ್ನೂ ಖರೀದಿಸಬೇಡಿ, ಬರೀ ರಾಮನ ದರ್ಶನ‌ ಮಾಡಿ ಹಿಂತಿರುಗಿ, ಅವರು ನಂಬಿಕೆಗೆ ಯೋಗ್ಯರಲ್ಲ’ ಎಂಬಂತಹ ಅತ್ಯಂತ ಕೆಳಮಟ್ಟದ ನಿಂದನೆಗಳನ್ನು ಮಾಡುತ್ತಿರುವುದು ಕಂಡುಬರುತ್ತಿದೆ.

ಅಲ್ಲಿನ ಜನರು ಎದುರಿಸುತ್ತಿರುವ ವಾಸ್ತವ ಸಮಸ್ಯೆಗಳ ಬಗ್ಗೆ ಅರಿಯದೆ, ಮಾಧ್ಯಮಗಳು ಆ ಕ್ಷೇತ್ರದ ಬಗ್ಗೆ ಬಿಂಬಿಸಿರುವ ಅತಿಶಯೋಕ್ತಿಯ ಚಿತ್ರಣವನ್ನು ಮಾತ್ರ ಗಮನಿಸಿ ಹೀಗೆ ನಿಂದನೆ ಮಾಡುವುದು ಎಷ್ಟು ಸರಿ?
ಅಯೋಧ್ಯೆಯ ಜನರಿಗೆ ತಮ್ಮಿಷ್ಟದಂತೆ ಮತ ಚಲಾಯಿಸುವ ಸ್ವಾತಂತ್ರ್ಯ ಇಲ್ಲವೇ? ನಾವು ಹೇಳಿದಂತೆಯೇ
ಅವರು ಕೇಳಬೇಕೆಂಬ ಮನೋಧರ್ಮ ಇದ್ದರೆ, ಅವರ ಸಾಂವಿಧಾನಿಕ ಹಕ್ಕುಗಳಿಗೆ ಚ್ಯುತಿ
ತರುವ ಪ್ರಯತ್ನದಂತೆ ಅಲ್ಲವೇ?

ಸುರೇಂದ್ರ ಪೈ, ಭಟ್ಕಳ

ಶಿಕ್ಷಕರಲ್ಲಿ ಮೂಡಬೇಕು ಮತದಾನದ ಅರಿವು

ವಿಧಾನಪರಿಷತ್‌ನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿರುವ ಈ ಹೊತ್ತಿನಲ್ಲಿ ‘ಮತವು ನಿನ್ನದೆ ಮತಿಯೂ ನಿನ್ನದೆ, ಯೋಚಿಸಿ ಮತ ಚಲಾಯಿಸು, ಮತ ಚಲಾಯಿಸಿ
ಯೋಚಿಸಬೇಡ’ ಎಂಬ ಮಾತು ನೆನಪಾಗುತ್ತಿದೆ. ಈ ಕ್ಷೇತ್ರಗಳಲ್ಲಿ ಚಲಾವಣೆಯಾದ ಸಾವಿರಾರು ಮತಗಳು
ಅಸಿಂಧುವಾಗಿರುವುದನ್ನು ನೋಡಿದರೆ ದಿಗಿಲಾಗುತ್ತದೆ. ದೇಶದ ಚುನಾವಣೆಗಳು ಯಶಸ್ವಿಯಾಗಿ
ನಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವ ಎಷ್ಟೋ ಶಿಕ್ಷಕರಿಗೆ ಮತ ಚಲಾಯಿಸುವ ಬಗ್ಗೆ ಅರಿವಿಲ್ಲದಿರುವುದು ನೋವಿನ ಸಂಗತಿ. ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಕ್ಕೆ
ಒಳಗಾಗಬಾರದೆಂಬ ಮತದಾರರ ಪ್ರತಿಜ್ಞಾವಿಧಿಯನ್ನು ಶಾಲಾಕಾಲೇಜುಗಳಲ್ಲಿ ಬೋಧಿಸುವ ಶಿಕ್ಷಕರೇ ಇಂತಹ ದಾಕ್ಷಿಣ್ಯಗಳಿಗೆ ಒಳಗಾಗಿದ್ದಾರೆ ಎಂಬ ಆಪಾದನೆ ಇದೆ. ಇಂತಹ ಹೊತ್ತಿನಲ್ಲಿ, ಇಷ್ಟೊಂದು ಪ್ರಮಾಣದಲ್ಲಿ ಅಸಿಂಧು ಮತಗಳನ್ನು ಚಲಾಯಿಸುವ ಮೂಲಕ ಶಿಕ್ಷಕರು ಅಪಹಾಸ್ಯಕ್ಕೆ ಈಡಾಗಿರುವುದು ದುರಂತವೇ ಸರಿ.

ಚುನಾವಣಾ ಹಕ್ಕು, ಮತದಾನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ, ಗ್ರಾಮೀಣ ಸಮುದಾಯಗಳಿಗೆ ಅರಿವು ಮೂಡಿಸುತ್ತಾ ಬಂದಿರುವ ಚುನಾವಣಾ ಆಯೋಗವು ಈ ಕಾರ್ಯಕ್ರಮದಡಿ ಇನ್ನು ಮುಂದೆ ಶಿಕ್ಷಕರಿಗೂ ಅರಿವು ಮೂಡಿಸುವ ಅನಿವಾರ್ಯ ಇದೆ ಅನ್ನಿಸುತ್ತಿದೆ.

ರೇವಣ್ಣ ಎಂ.ಜಿ., ಕೃಷ್ಣರಾಜಪೇಟೆ

ಇಂಡಿಯಾ’ ಜವಾಬ್ದಾರಿಯುತ ಮೈತ್ರಿಕೂಟವಾಗಲಿ

ಕೇಂದ್ರದಲ್ಲಿ ಸರ್ಕಾರ ರಚನೆಗೆ ಪ್ರಯತ್ನ ನಡೆಸದಿರುವ ‘ಇಂಡಿಯಾ’ ಮೈತ್ರಿಕೂಟದ ನಡೆಯನ್ನು ಸಂಪಾದಕೀಯ ಸಮರ್ಥಿಸಿರುವುದು (ಪ್ರ.ವಾ., ಜೂನ್‌ 6)  ಸಮಯೋಚಿತವಾಗಿದೆ. ಸರ್ಕಾರ ರಚಿಸಲು ಎನ್‌ಡಿಎ ಮೈತ್ರಿಕೂಟಕ್ಕೆ ಅಗತ್ಯವಿರುವ ಬಹುಮತದ ಸಂಖ್ಯೆ ಈಗ ಲಭಿಸಿದೆ. ಆದರೆ ಸುಸೂತ್ರವಾಗಿ ಆಡಳಿತ ನಡೆಸಲು ಬಹುಮತವಷ್ಟೇ ಸಾಲದು. ಮಿತ್ರಪಕ್ಷಗಳೊಂದಿಗೆ ಒಮ್ಮತ ಇರಬೇಕಾಗುತ್ತದೆ. ಅದನ್ನು ಎಲ್ಲ ಪಕ್ಷಗಳು ವಿಶೇಷವಾಗಿ ಬಿಜೆಪಿಯು ತನ್ನ ಪ್ರತಿಷ್ಠೆಯನ್ನು ಬದಿಗಿರಿಸಿ ಸಾಧಿಸಬೇಕು.

ತೆಲುಗುದೇಶಂ ಹಾಗೂ ಜೆಡಿಯು ಪಕ್ಷಗಳು ಬಿಜೆಪಿಯೊಂದಿಗೆ ಚುನಾವಣಾಪೂರ್ವ ಮೈತ್ರಿ
ಮಾಡಿಕೊಂಡಿದ್ದರೂ ಕೆಲವು ಪ್ರಮುಖ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಇರುವುದು ಎಲ್ಲರಿಗೂ ತಿಳಿದಿದೆ. 2020ರಲ್ಲಿಯೇ ಬಿಹಾರದಲ್ಲಿ ಎನ್‌ಆರ್‌ಸಿ ಅನುಷ್ಠಾನವನ್ನು ವಿರೋಧಿಸಿ ನಿತೀಶ್‌ ಕುಮಾರ್
ನೇತೃತ್ವದ ಸರ್ಕಾರ ಸರ್ವಾನುಮತದ ತೀರ್ಮಾನ ತೆಗೆದುಕೊಂಡಿತ್ತು. ಮುಸ್ಲಿಮರಿಗೆ ಮೀಸಲಾತಿ, ಜಾತಿ ಗಣತಿ, ಅಗ್ನಿವೀರ್ ಯೋಜನೆಯಂತಹ ವಿಚಾರಗಳಲ್ಲಿ ಪಕ್ಷಗಳ ನಡುವೆ ಪರಸ್ಪರ ತದ್ವಿರುದ್ಧ ಅಭಿಪ್ರಾಯವಿದೆ. ಆದರೂ ಇದೀಗ ಕೇಂದ್ರ ಸರ್ಕಾರದ ಭಾಗವಾಗುವುದರಿಂದ ನಾಯ್ಡು ಮತ್ತು ನಿತೀಶ್‌ ಅವರಿಗೆ ಹೆಚ್ಚು ಅನುಕೂಲವಿದೆ. 2025ಕ್ಕೆ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿದೆ. ಬಿಹಾರಕ್ಕೆ ವಿಶೇಷ ಪ್ಯಾಕೇಜ್ ಪಡೆದು, ಲೋಕಸಭಾ ಚುನಾವಣೆಯ ಗೆಲುವಿನ ಸದ್ಭಾವನೆ ಮಾಸುವ ಮುನ್ನವೇ ಸ್ವಲ್ಪ ಮುಂಚಿತವಾಗಿ ವಿಧಾನಸಭಾ ಚುನಾವಣೆಯನ್ನು ಎದುರಿಸುವುದು ನಿತೀಶ್‌ ಅವರಿಗೆ ಅನುಕೂಲಕರ. ಇನ್ನು ನಾಯ್ಡು ಅವರಿಗೆ, ಆರ್ಥಿಕವಾಗಿ ಬಸವಳಿದಿರುವ ತಮ್ಮ ರಾಜ್ಯಕ್ಕೆ ಕೇಂದ್ರದಿಂದ ವಿಶೇಷ ಅನುದಾನ ಪಡೆದು, ಅಮರಾವತಿಯನ್ನು ರಾಜಧಾನಿಯಾಗಿ ರೂಪಿಸುವ ತಮ್ಮ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿ ಮಾಡುವ ಗುರಿ ಇದೆ. ಅಲ್ಲದೆ ಬಿಜೆಪಿಯೊಂದಿಗೆ ಮೈತ್ರಿ ಏರ್ಪಡಲು ಮುಖ್ಯ ಕಾರಣಕರ್ತರಾದ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರ ಒಪ್ಪಿಗೆ ಇಲ್ಲದೆ ನಾಯ್ಡು ಸ್ವತಂತ್ರ ತೀರ್ಮಾನ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಈಗ ಇಲ್ಲ. ಈ ಕಾರಣದಿಂದ ಬಿಜೆಪಿಗೆ ಈ ಎರಡೂ ಪಕ್ಷಗಳ ಬೆಂಬಲ ಸದ್ಯಕ್ಕೆ ಅಬಾಧಿತ. ಹೀಗಾಗಿ, ಇಂಡಿಯಾ ಮೈತ್ರಿಕೂಟವು ಸರ್ಕಾರ ರಚನೆಗೆ ವ್ಯರ್ಥ ಪ್ರಯತ್ನ ಮಾಡದೆ, ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಿ ಪ್ರಜಾಪ್ರಭುತ್ವವನ್ನು ಬಲಪಡಿಸಲಿ ಎಂಬ ಸಂಪಾದಕೀಯದ ಆಶಯ ವಿವೇಕಯುತವಾಗಿದೆ.

ಟಿ.ಜಯರಾಂ, ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT