ವಿವಾದವನ್ನು ಎಲ್ಲೆಲ್ಲಿಗೋ ಒಯ್ಯುವುದು ಬೇಡ

ಸಾಹಿತಿ ಹಂಪ ನಾಗರಾಜಯ್ಯ ಅವರು ಕನ್ನಡ, ತಮಿಳು ಭಾಷೆಯ ಮೂಲ ಕುರಿತಂತೆ ಬರೆದ ಲೇಖನದಲ್ಲಿ ಸಿ. ರಾಜಗೋಪಾಲಾಚಾರಿ ಅವರು ಕ್ಷಮೆ ಕೇಳಿದ ಪ್ರಸಂಗವನ್ನು ಮೆಲುಕು ಹಾಕಿದ್ದಾರೆ. ಈಗ ನಟ ಕಮಲ್ ಹಾಸನ್ ಕ್ಷಮೆ ಕೇಳುವುದಿಲ್ಲ ಎನ್ನುತ್ತಿದ್ದಾರೆ.

ವಿವಿಧ ಭಾಷೆಗಳ ಉಗಮ ಕುರಿತಂತೆ ಡಿ.ಎನ್. ಶಂಕರ ಬಟ್ ಅವರು ತಮ್ಮ ಕೃತಿಗಳಲ್ಲಿ ಬರೆದಿದ್ದಾರೆ. ‘ಇಗೋ ಕನ್ನಡ’ದಲ್ಲಿ ಪ್ರೊ.ಜಿ. ವೆಂಕಟಸುಬ್ಬಯ್ಯ ಕೂಡ ಕೆಲವೆಡೆ ಪ್ರಸ್ತಾಪಿಸಿದ್ದಾರೆ. ಈಗ ಕನ್ನಡವು ತಮಿಳಿನ ಸೋದರಭಾಷೆ ಎಂದರೂ ತಮಿಳು ‘ದೊಡ್ಡಣ್ಣ’ ಅಲ್ಲ ಎಂದು ಕೆಲವರು ಆಕ್ಷೇಪಿಸಬಹುದು. ಒಟ್ಟಿನಲ್ಲಿ ಎರಡೂ ಕಡೆಯವರು ಇದನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಳ್ಳುವುದು ಸರಿಯಲ್ಲ.

‘ಥಗ್ ಲೈಫ್’ ಎಂಬ ಹೆಸರೇ ಹೋರಾಟದ ಬದುಕನ್ನು ಸೂಚಿಸುತ್ತದೆ. ಕಮಲ್ ನಟನೆಯ ಆ ಶೀರ್ಷಿಕೆಯ ಸಿನಿಮಾವು ಕರ್ನಾಟಕದಲ್ಲಿ ಈಗ ಬಿಡುಗಡೆಯ ಸಮಸ್ಯೆ ಎದುರಿಸುತ್ತಿದೆ. ಅವರು ಒಬ್ಬ ವ್ಯಕ್ತಿಯಾಗಿ ಆಡಿದ ಮಾತೊಂದು ಆ ಚಿತ್ರದ ಪ್ರದರ್ಶನಕ್ಕೆ ಅಡ್ಡಿ ತರದಿರಲಿ. ಎಲ್ಲ ಸಿನಿಮಾಗಳನ್ನೂ ನೋಡುವ ಸಂಸ್ಕೃತಿ ಕರ್ನಾಟಕದ್ದು ಎಂಬುದನ್ನು ಅವರು ಮರೆಯಬಾರದು. ಒಂದು ತಪ್ಪು ಮಾತು ಈ ವಿವಾದವನ್ನು ಎಲ್ಲೆಲ್ಲಿಗೋ ತೆಗೆದುಕೊಂಡು ಹೋಗಬಾರದು. ನಟ ಕಿಶೋರ್ ಹೇಳಿರುವಂತೆ ‘ಭಾವುಕರಾಗುವ ಅಗತ್ಯ ಇಲ್ಲ’.

-ಎಚ್.ಎಸ್.ಮಂಜುನಾಥ, ಗೌರಿಬಿದನೂರು

ಬ್ಯಾಂಕ್ ಉದ್ಯೋಗಿಗಳಿಗೆ ಸ್ಥಳೀಯ ಭಾಷೆ ಕಲಿಕೆ ಅಗತ್ಯ

ಕನ್ನಡ– ತಮಿಳು ಭಾಷೆ ಕುರಿತಂತೆ ಕಮಲ್ ಹಾಸನ್ ನೀಡಿರುವ ಹೇಳಿಕೆ ಬಗ್ಗೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ.ಈ ವಿವಾದದ ಅಬ್ಬರದಲ್ಲಿ ಭಾಷೆ ಕಾರಣದಿಂದ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಕನ್ನಡಿಗರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳು ಮೂಲೆಗೆ ಸರಿದಿವೆ. ಆನ್ಲೈನ್ ವ್ಯವಹಾರ ತಿಳಿಯದ ಬಡವರು, ಬೀದಿಬದಿ ವ್ಯಾಪಾರಿಗಳು, ಕೂಲಿಕಾರ್ಮಿಕರು ಹಾಗೂ ಹಿರಿಯ ನಾಗರಿಕರು ಬ್ಯಾಂಕ್ಗಳಿಗೆ ಹೋಗುತ್ತಾರೆ. ಸ್ಥಳೀಯ ಭಾಷೆ ಮಾತನಾಡಲು ಬಾರದ ಬ್ಯಾಂಕ್ ಸಿಬ್ಬಂದಿ, ಈ ವರ್ಗದ ಗ್ರಾಹಕರ ಅನುಮಾನ ಬಗೆಹರಿಸಿ, ಬ್ಯಾಂಕಿಂಗ್ ಸೌಲಭ್ಯದ ಬಗ್ಗೆ ವಿವರಿಸಲು ಸಾಧ್ಯವೇ? ಗ್ರಾಮೀಣ ಭಾಗದ ಶಾಖೆಗಳಲ್ಲಿ ಇಂತಹ ಸಮಸ್ಯೆ ತೀವ್ರವಾಗಿವೆ.

ಕರ್ನಾಟಕದ ಪ್ರತಿಭಾವಂತ ಯುವಪೀಳಿಗೆಯು ವೈದ್ಯಕೀಯ, ಎಂಜಿನಿಯರಿಂಗ್ ಅಧ್ಯಯನದ ಬಗ್ಗೆ ತೋರುವ ಆಸಕ್ತಿಯನ್ನು ಬ್ಯಾಂಕಿಂಗ್ ವಲಯದ ಉದ್ಯೋಗಗಳ ಬಗ್ಗೆ ತೋರುವುದಿಲ್ಲ. ರಾಷ್ಟ್ರಮಟ್ಟದ ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆ ಬರೆಯುವ ಕನ್ನಡಿಗರ ಸಂಖ್ಯೆ ಕಡಿಮೆ. ಇದನ್ನು ಪರಿಹರಿಸಲು ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆ ಕುರಿತು ತರಬೇತಿ ಕೇಂದ್ರ ತೆರೆಯಬೇಕಿದೆ. ಆ ಮೂಲಕ ರಾಜ್ಯದಿಂದ ಹೆಚ್ಚಿನ ಸಂಖ್ಯೆಯ ಯುವಕ–ಯುವತಿಯರು ಬ್ಯಾಂಕ್ಗಳಿಗೆ ನೇಮಕವಾಗಲು ಪ್ರೋತ್ಸಾಹಿಸಬೇಕು. ರಾಜ್ಯದ ಬ್ಯಾಂಕ್ಗಳಿಗೆ ನೇಮಕವಾಗುವ ಹೊರ ರಾಜ್ಯದವರಿಗೆ ಇಂತಿಷ್ಟು ಅವಧಿಯಲ್ಲಿ ಸ್ಥಳೀಯ ಭಾಷೆ ಕಲಿಕೆಯನ್ನು ಕಡ್ಡಾಯ ಮಾಡಬೇಕು. ಬ್ಯಾಂಕ್ ಉದ್ಯೋಗವು ಸೇವೆ ಎಂಬುದನ್ನು ಪರೀಕ್ಷೆಯಲ್ಲಿ ತೇರ್ಗಡೆ ಆದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿಯೇ ಅರಿವು ಮೂಡಿಸಬೇಕು. ಇಲ್ಲವಾದಲ್ಲಿ ಬ್ಯಾಂಕ್ ಸ್ಥಾಪಿಸಿದ ಮೂಲ ಉದ್ದೇಶವು ಭಾಷೆ ಕಾರಣದಿಂದ ವಿಫಲವಾಗುತ್ತದೆ.

-ಟಿ. ಜಯರಾಂ, ಕೋಲಾರ

’ಲೋಕಾ’ದಾಳಿ: ಹಳೆಯ ಪ್ರಕರಣದ ವಿವರ ಬಹಿರಂಗಪಡಿಸಿ

ಲೋಕಾಯುಕ್ತ ಅಧಿಕಾರಿಗಳು ದಾಳಿ ವೇಳೆ ಭ್ರಷ್ಟರಿಗೆ ಸೇರಿದ ಲಕ್ಷಾಂತರ ನಗದು ಮತ್ತು ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತದೆ. ಆದರೆ, ಅದರ ನಂತರ ಆ ಸಂಪತ್ತು ಮತ್ತು ದಾಳಿಗೆ ಒಳಗಾದ ವ್ಯಕ್ತಿಗಳ ಬಗ್ಗೆ ಮುಂದೇನಾಯಿತು ಎಂಬುದು ತಿಳಿಯುವುದಿಲ್ಲ. ದಾಳಿ ನಡೆದ ನಂತರ ಹಲವಾರು ವರ್ಷಗಳವರೆಗೆ ನ್ಯಾಯಾಲಯದಲ್ಲಿ ಆ ಪ್ರಕರಣದ ವಿಚಾರಣೆ ನಡೆಯುತ್ತದೆ. ಕೊನೆಗೆ ಆ ವ್ಯಕ್ತಿಗಳಿಗೆ ಅವರ ಸ್ವತ್ತು ಹಿಂದಿರುಗಿಸುತ್ತಾರೆ. ಸರ್ಕಾರಿ ಅಧಿಕಾರಿಯಾಗಿದ್ದರೆ ಬಹುಪಾಲು ಸಂದರ್ಭಗಳಲ್ಲಿ ಅವರ ಸೇವೆಯನ್ನೂ ಮುಂದುವರಿಸುತ್ತಾರೆ ಎಂಬ ಮಾತಿದೆ.

ಆದ್ದರಿಂದ ಲೋಕಾಯುಕ್ತ ಅಧಿಕಾರಿಗಳು ಕಳೆದ ಎರಡು– ಮೂರು ವರ್ಷಗಳಿಂದ ನಡೆದ ದಾಳಿ, ಆ ನಂತರ ಆದ ಬೆಳವಣಿಗೆಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವುದು ಒಳ್ಳೆಯದು. ಈ ರೀತಿ ಮಾಡಿದರೆ ಸಾರ್ವಜನಿಕರಿಗೆ ಸಂಸ್ಥೆಯ ಮೇಲೆ ನಂಬಿಕೆ ಹೆಚ್ಚುತ್ತದೆ. ಅಲ್ಲದೆ, ಭ್ರಷ್ಟ ಅಧಿಕಾರಿಗಳಿಗೂ ಎಚ್ಚರಿಕೆ ನೀಡಿದಂತಾಗುತ್ತದೆ.

-ಕಡೂರು ಫಣಿಶಂಕರ್, ಬೆಂಗಳೂರು

ಕಳಪೆ ಫಲಿತಾಂಶಕ್ಕೆ ಶಿಕ್ಷಕರ ಕೊರತೆ ಕಾರಣ

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ 25ರಿಂದ 30 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ ಇರುತ್ತಾರೆ. ಆ ರಾಷ್ಟ್ರಗಳು ಶಿಕ್ಷಣಕ್ಕೆ ಒತ್ತು ಕೊಟ್ಟು ವಿಜ್ಞಾನ, ತಂತ್ರಜ್ಞಾನ ಮತ್ತು ಕ್ರೀಡೆಯಂತಹ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಇರುವುದಕ್ಕೆ ಅಲ್ಲಿ ಶಿಕ್ಷಣಕ್ಕೆ ನೀಡುತ್ತಿರುವ ಆದ್ಯತೆಯೇ ಕಾರಣ.

ಹಾಗಾಗಿ, ನಾವು ಕೂಡ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು
ನೇಮಕ ಮಾಡಿದರೆ ಅವರ ಸರ್ವತೋಮುಖ ಬೆಳವಣಿಗೆ ಆಗುವುದರಲ್ಲಿ ಸಂದೇಹವಿಲ್ಲ. ಅರ್ಹತೆ ಹೊಂದಿದ ಶಿಕ್ಷಕರನ್ನು ಸರ್ಕಾರ ನೇಮಕ ಮಾಡುವುದರಿಂದ ಕೌಶಲಯುತ, ಗುಣಮಟ್ಟದ ಶಿಕ್ಷಣವು ಮಕ್ಕಳಿಗೆ ದೊರೆಯುತ್ತದೆ.

10ನೇ ತರಗತಿಯಾಗಲೀ ಅಥವಾ 12ನೇ ತರಗತಿಯಾಗಲೀ ಅಲ್ಲಿನ ಫಲಿತಾಂಶ ಕುಸಿತಕ್ಕೆ ಮೂಲ
ಕಾರಣ ಶಿಕ್ಷಕರ ಕೊರತೆಯಾಗಿದೆ ಎಂದರೆ ತಪ್ಪಾಗದು. ಈ ಕೊರತೆ ತುಂಬುವ ಇಚ್ಛಾಶಕ್ತಿಯನ್ನು ಸರ್ಕಾರ
ಪ್ರದರ್ಶಿಸಬೇಕು.

-ಶಿವರಾಜ ಕಾಂಬಳೆ, ಮೂಡಲಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.